ಹುಮಾ ಖುರೇಷಿ ನಟನೆಯ ಹಿಂದಿ ಬಯೋಪಿಕ್‌ ಸಿನಿಮಾ ‘ತರ್ಲಾ’ ಟ್ರೈಲರ್‌ ಬಿಡುಗಡೆಯಾಗಿದೆ. ಭಾರತದ ಪ್ರಸಿದ್ಧ ಪಾಕಶಾಸ್ತ್ರ ಪ್ರವೀಣೆ, ಪದ್ಮಶ್ರೀ ಪುರಸ್ಕೃತ ತರ್ಲಾ ದಲಾಲ್‌ ಜೀವನ – ಸಾಧನೆ ಕುರಿತ ಚಿತ್ರವಿದು. ಜುಲೈ 7ರಿಂದ ZEE5ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಪಿಯೂಷ್ ಗುಪ್ತಾ ನಿರ್ದೇಶನದ ಬಯೋಪಿಕ್ ಹಿಂದಿ ಸಿನಿಮಾ ‘ತರ್ಲಾ’ ಟ್ರೈಲರ್ ಬಿಡುಗಡೆಯಾಗಿದೆ. ನಟಿ ಹುಮಾ ಖುರೇಷಿ ಚಿತ್ರದ ಅಧಿಕೃತ ಟ್ರೈಲರ್‌ ಅನ್ನು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವು ಭಾರತದ ಪ್ರಸಿದ್ಧ ಚೆಫ್‌ಗಳಲ್ಲೊಬ್ಬರಾದ ತರ್ಲಾ ದಲಾಲ್ ಅವರ ಸ್ಪೂರ್ತಿದಾಯಕ ಜೀವನದ ಪ್ರಯಾಣವನ್ನು ತೋರಿಸಲಿದೆ. ಹುಮಾ ಖುರೇಷಿ, ತರ್ಲಾ ಪಾತ್ರವನ್ನು ನಿರ್ವಹಿಸಿದ್ದರೆ, ಶರೀಬ್ ಹಶ್ಮಿ ಅವರ ಪತಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್, ಚೆಫ್ ತರ್ಲಾ ಅವರ ಕೌಟುಂಬಿಕ ಹಾಗೂ ವೃತ್ತಿಜೀವನದ ಒಂದು ನೋಟ ನೀಡಿದೆ. ಸೆಲೆಬ್ರಿಟಿ ಚೆಫ್‌ನ ನೈಜ ಕಥೆಯಾಗಿ ಚಿತ್ರ ರೂಪುಗೊಂಡಿದ್ದು, ತರ್ಲಾ ತಮ್ಮ ಜೀವನದಲ್ಲಿ ಏನಾದರೂ ಹೊಸತನ್ನು ಸಾಧಿಸಲು ಬಯಸುತ್ತಾರೆ. ಆದರೆ ಅವರಲ್ಲಿರುವ ಉತ್ಸಾಹ ತಡವಾಗಿ ಬೆಳಕಿಗೆ ಬರುತ್ತದೆ. ಅವರು ಮದುವೆಯಾಗಿ, ತಾಯಿಯಾಗಿ ಒಂದು ದಶಕವಾದ ಮೇಲೆ ಅಡುಗೆಯ ಮೇಲಿನ ಪ್ರೀತಿಯನ್ನು ಅರಿತು ಹವ್ಯಾಸಿ ಚೆಫ್‌ ಆಗಿ ತನ್ನ ಕಾರ್ಯ ಮುಂದುವರೆಸುತ್ತಾರೆ. ನಂತರ TV ಚಾನೆಲ್‌ಗಳಲ್ಲಿ ಕಾರ್ಯಕ್ರಮಗಳನ್ನು ನೀಡುವುದಲ್ಲದೆ ಅಡುಗೆ ತರಗತಿಗಳನ್ನು ಆರಂಭಿಸುತ್ತಾರೆ.

ಪಾಕಶಾಸ್ತ್ರಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ ತರ್ಲಾ. ಅಡುಗೆ ಕಾರ್ಯಕ್ರಮಗಳ ಅತ್ಯುತ್ತಮ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದರು. 1974ರಲ್ಲಿ ಬಿಡುಗಡೆಯಾದ ಅವರ ಚೊಚ್ಚಲ ಪುಸ್ತಕ ‘ದಿ ಫ್ಲೆಶರ್ಸ್‌ ಆಫ್‌ ವೆಜಿಟೇರಿಯನ್‌ ಕುಕಿಂಗ್‌’ ಕೃತಿಯ ದಾಖಲೆಯ ಪ್ರತಿಗಳು ಮಾರಾಟವಾಗಿವೆ. ಅವರು ‘Food and More’ ದ್ವೈಮಾಸಿಕ ನಿಯತಕಾಲಿಕೆ ಪ್ರಾರಂಭಿಸಿದ್ದರು ಮತ್ತು ಭಾರತೀಯ ಪಾಕಪದ್ಧತಿ ಕುರಿತ ವೆಬ್‌ಸೈಟ್ ನಡೆಸುತ್ತಿದ್ದರು. ‘The Tarla Dalal Show’ ಮತ್ತು ‘Cook it up with Tarla Dalal’ ಅವರ ಜನಪ್ರಿಯ ಅಡುಗೆ ಕಾರ್ಯಕ್ರಮಗಳು. ಸುಮಾರು 25 ನಿಯತಕಾಲಿಕೆಗಳು ಆಕೆಯ ಪಾಕವಿಧಾನಗಳನ್ನು ಪ್ರಕಟಿಸಿದ್ದವು. ಅಂದಾಜಿನ ಪ್ರಕಾರ ಇದನ್ನು ಸುಮಾರು 120 ಮಿಲಿಯನ್ ಭಾರತೀಯ ಮನೆಗಳಲ್ಲಿ ಪ್ರಯೋಗಿಸಲಾಗಿತ್ತು. 2007ರಲ್ಲಿ ಭಾರತ ಸರ್ಕಾರದಿಂದ ಅವರಿಗೆ ಪದ್ಮಶ್ರೀ ಪ್ರಶಸ್ತಿನೀಡಿ ಗೌರವಿಸಲಾಯ್ತು. ಪಾಕಶಾಸ್ತ್ರ ಕ್ಷೇತ್ರದಿಂದ ಈ ಬಿರುದು ಪಡೆದ ಏಕೈಕ ಭಾರತೀಯರು ಎಂಬ ಕೀರ್ತಿ ತರ್ಲಾ ದಲಾಲ್‌ಗೆ ಸಲ್ಲುತ್ತದೆ. 2013ರ ನವೆಂಬರ್‌ 6ರಂದು ತಮ್ಮ 77ನೇ ವಯಸ್ಸಿನಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ‘ತರ್ಲಾ’ ಚಿತ್ರವನ್ನು ರೋನಿ ಸ್ಕ್ರ್ಯೂವಾಲಾ, ಅಶ್ವಿನಿ ಅಯ್ಯರ್ ತಿವಾರಿ ಮತ್ತು ನಿತೇಶ್ ತಿವಾರಿ ನಿರ್ಮಿಸಿದ್ದಾರೆ. ಜುಲೈ 7ರಿಂದ ZEE5 ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here