ಯುದ್ಧದ ಹಲವು ಆಯಾಮಗಳು ಮತ್ತು ಅದರ ಸಂಕೀರ್ಣತೆಯನ್ನು ತೆಳುವಾಗಿಸಿದ್ದರೂ, ಯುದ್ಧ ವಿರೋಧಿ ಸಂದೇಶವನ್ನು ಸರಳವಾಗಿ ಮತ್ತು ನೇರವಾಗಿ ಆದರೆ ಮತ್ತಷ್ಚು ಗಟ್ಟಿಯಾಗಿ ಹೇಳುವಲ್ಲಿ ಈ ಸಿನಿಮಾ ಯಶಸ್ವಿಯಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಗಳಿಸಿರುವ ‘ಆಲ್ ಕ್ವೈಟ್ ಆನ್ ದಿ ವೆಸ್ಚರ್ನ್ ಫ್ರಂಟ್’ ಜರ್ಮನ್‌ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಯುದ್ಧದ ಕುರಿತ ಚಿತ್ರಗಳ ಬಗ್ಗೆ ಮಾತನಾಡುವಾಗೆಲ್ಲಾ ಎರಡು ತುಂಬಾ ವಿರುದ್ಧವಾದ ದೃಷ್ಚಿಕೋನಗಳನ್ನು ನಾವು ನೋಡಬಹುದು. ಜನಪ್ರಿಯವಾದ ಮತ್ತು ಬಹಳ ಮಂದಿ ಒಪ್ಪುವ ಒಂದು ದೃಷ್ಚಿಕೋನವೆಂದರೆ – there’s no such thing as an anti-war film ಎನ್ನುವುದು. ಯುದ್ದಕ್ಕೆ ಸಂಬಂಧಪಟ್ಟ ಯಾವುದೇ ಸಿನಿಮಾ ತಾನು ಎಷ್ಟೇ ಯುದ್ಧ ವಿರೋಧಿ ಎಂದು ಹೇಳಿಕೊಂಡರೂ, ಅದು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಯುದ್ಧವನ್ನು ವಿಜೃಂಭಿಸಿ, ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ನೀಡುತ್ತದೆ ಎಂಬುದು ಇದರ ಅರ್ಥ. ನಿರ್ದೇಶಕನ ಪ್ರಕಾರ ಸಿನಿಮಾದ ಮೂಲ ಉದ್ದೇಶ ಯುದ್ಧದ ಭೀಕರತೆ, ನಿರರ್ಥಕತೆಯನ್ನು ತೋರಿಸುವುದೇ ಆಗಿದ್ದರೂ, ಸುರಕ್ಷಿತವಾಗಿ, ಆರಾಮವಾಗಿ ಕುಳಿತು, ಆ್ಯಕ್ಷನ್ ಭರಿತ, ಸಾಹಸಮಯ ದೃಶ್ಯಗಳನ್ನು ನೋಡುವ ಪ್ರೇಕ್ಷಕ ಅದನ್ನು ಥ್ರಿಲ್ಲರ್ ರೀತಿ ಅನುಭವಿಸುವುದನ್ನು ತಡೆಯುವುದು ಅವನಿಂದ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಹಲವರು. ಆದರೆ, ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ “Every war movie – good or bad – is an anti war movie” ಎಂದು ಹೇಳಿದ್ದರು ತನ್ನ ಸೇವಿಂಗ್ ಪ್ರೈವೇಟ್ ರೆಯಾನ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ. ಈ ವಿಷಯದಲ್ಲಿ ಚರ್ಚೆಗಳು ಏನೇ ಇದ್ದರೂ, ಯುದ್ಧ ಚಿತ್ರಗಳನ್ನು ಮಾಡುವಾಗ ಅದು ಯುದ್ಧ ವಿರೋಧಿ ನಿಲುವನ್ನು ಬಲವಾಗಿ ಪ್ರತಿಪಾದಿಸಬೇಕು ಎಂಬುದು ಪಾಶ್ಚಾತ್ಯ ಚಿತ್ರೋದ್ಯಮ ಒಪ್ಪಿಕೊಂಡಿರುವ ಒಂದು ನೈತಿಕ ಹೊಣೆಗಾರಿಕೆ.

ಹಾಗೆ ನೋಡಿದರೆ, ಭಾರತೀಯ ಚಿತ್ರರಂಗ ಈ ರೀತಿಯ ಹೊಣೆಗಾರಿಕೆಯ ಬಗ್ಗೆ ಹೆಚ್ಚು ಯೋಚಿಸಿದಂತೆ ಕಾಣುವುದಿಲ್ಲ, ನಮ್ಮಲ್ಲಿ ಬರುವ ಬಹಳಷ್ಟು ಯುದ್ಧ ಚಿತ್ರಗಳಲ್ಲಿ ದೇಶಭಕ್ತಿಯ ಭಾವ ಅಂತರ್ಗತವಾಗಿ ಸೇರಿ ಹೋಗಿರುವುದರಿಂದ ಇವು, ಸೈನಿಕರ ಹೋರಾಟ, ಧೈರ್ಯ, ತ್ಯಾಗವನ್ನು ವಿಜೃಂಭಿಸುತ್ತವೆ. ದೇಶಕ್ಕಾಗಿ ಹೋರಾಡಿ ಮಡಿಯುವವರನ್ನು ಹುತಾತ್ಮರನ್ನಾಗಿಸುತ್ತದೆ ಮತ್ತು ಮಾನವ ಸಹಜವಾದ ಬದುಕುವ ಆಸೆ, ಜೀವ ಭಯ ಇರುವ ಸೈನಿಕರನ್ನು ಹೇಡಿ ಮತ್ತು ವಂಚಕರಂತೆ ತೋರಿಸುತ್ತವೆ. ಹೀಗಾಗಿ, ಭಾರತದ ಬಹುತೇಕ ಜನಪ್ರಿಯ ಯುದ್ದ ಚಿತ್ರಗಳಿಗೆ ಆ್ಯ೦ಟಿ ವಾರ್ ಕೂಡ ಆಗಬೇಕೆಂಬ ನೈತಿಕ ಗೊಂದಲ ಇಲ್ಲ. ಇತ್ತೀಚೆಗೆ ಇಂತಹ ಫಾರ್ಮ್ಯಾಟನ್ನು ಒಡೆದು ಹೊರಬರುತ್ತಿರುವ ಕೆಲವು ಸಿನಿಮಾಗಳು ಯುದ್ಧ ವಿರೋಧಿಯಾಗುವ ಪ್ರಯತ್ನವನ್ನಾದರೋ ಮಾಡುತ್ತಿವೆಯಾದರೂ, ಬಹುತೇಕ ಚಿತ್ರಗಳು ಹೆಚ್ಚಿನ ಸಂಕೀರ್ಣತೆಯನ್ನೇನೂ ತೋರದೆ, ನೇರವಾಗಿ ದೇಶಭಕ್ತಿ ಮತ್ತು ರಾಷ್ಚ್ರೀಯತೆಯನ್ನು ಎತ್ತಿಹಿಡಿಯುತ್ತವೆ. ಭಾರತೀಯರು ವಾರ್ ಸಿನಿಮಾಗಳನ್ನು ನೋಡುವ, ಗ್ರಹಿಸುವ ದೃಷ್ಟಿಯನ್ನು ಗಮನದಲ್ಲಿಟ್ಚುಕೊಂಡಾಗ, ಇತ್ತೀಚೆಗೆ ಬಿಡುಗಡೆಯಾಗಿ ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ನಾಮಿನೇಷನ್ ಗಳಿಂದಾಗಿ ಸುದ್ದಿಯಲ್ಲಿರುವ ‘ಆಲ್ ಕ್ವೈಟ್ ಆನ್ ದಿ ವೆಸ್ಚರ್ನ್ ಫ್ರಂಟ್’ ಸಿನಿಮಾ ಒಂದು ಮುಖ್ಯ ಮತ್ತು ನೋಡಲೇಬೇಕಾದ ಸಿನಿಮಾವಾಗುತ್ತದೆ.

‘ಆಲ್ ಕ್ವೈಟ್ ಆನ್ ದಿ ವೆಸ್ಚರ್ನ್ ಫ್ರಂಟ್’ ಒಂದು ಜರ್ಮನ್ ಭಾಷೆಯ ಚಿತ್ರ. ಮೊದಲ ವಿಶ್ವಯುದ್ಧದಲ್ಲಿ ಹೋರಾಡಿದ್ದ ಎರಿಕ್ ಮರಿಯಾ ರೆಮಾರ್ಕ್ ರಚಿಸಿದ್ದ ಇದೇ ಹೆಸರಿನ ಕೃತಿಯನ್ನು ಆಧರಿಸಿರುವ ಚಿತ್ರ. 1929ರಲ್ಲಿ ಬಿಡುಗಡೆಯಾದ ಅದು ಯಾವ ಪರಿ ಜನಪ್ರಿಯವಾಯಿತೆಂದರೆ 1930ರಲ್ಲಿ ಹಾಲಿವುಡ್, ಈ ಜರ್ಮನ್ ಕೃತಿಯನ್ನು ತೆರೆಗೆ ಅಳವಡಿಸಿತ್ತು. ನಂತರ 1979ರಲ್ಲಿ ಟಿವಿ ಸೀರೀಸ್ ಆಗಿಯೂ ಮೂಡಿ ಬಂತು. ಈಗ ಜರ್ಮನ್ ಚಿತ್ರವಾಗಿಯೇ ಎಡ್ವರ್ಡ್ ಬರ್ಗರ್ ನಿರ್ದೇಶನದಲ್ಲಿ ಮೂಡಿ ಬಂದಿರುವುದರಿಂದ ಹೆಚ್ಚು ಅಧಿಕೃತನಿಸುತ್ತದೆ.

ಸಿನಿಮಾದ ಕಾಲಮಾನ 1917ರ ಆಸುಪಾಸಿನದ್ದು. ಬಹುತೇಕ ಕತೆ ನಡೆಯುವುದು ಮೊದಲ ವಿಶ್ವಯುದ್ಧದ ದೊಡ್ಡ ಕದನ ಕಣವೆನಿಸಿದ್ದ ವೆಸ್ಚರ್ನ್ ಫ್ರಂಟ್‌ನಲ್ಲಿ. ಚಿತ್ರದ ಪ್ರಮುಖ ಪಾತ್ರವಾಗಿರುವ ಪೌಲ್ ಇನ್ನೂ 17 ವರ್ಷದ ಶಾಲೆಗೆ ಹೋಗುತ್ತಿರುವ ಜರ್ಮನ್ ಹುಡುಗ. ಯುದ್ದಕ್ಕೆ ಹೊರಟು ನಿಂತಿರುವ ತನ್ನ ಸ್ನೇಹಿತರನ್ನು ಬಿಟ್ಟಿರಲಾರದೆ, ದೇಶಭಕ್ತಿ ತುಂಬಿದ ಆವೇಶದ ಮಾತುಗಳನ್ನು ಕೇಳಿ, ಪೌಲ್ ಮನೆಯಲ್ಲಿ ಹೇಳದೆಯೇ ಸೈನ್ಯಕ್ಕೆ ಭರ್ತಿ ಹೊಂದುತ್ತಾನೆ. ತನ್ನ 4 ಶಾಲಾ ಸ್ನೇಹಿತರ ಜೊತೆಗೆ ಭೀಕರ ಯುದ್ಧಭೂಮಿ ವೆಸ್ಟರ್ನ್ ಫ್ರಂಟ್‌ಗೆ ರವಾನೆಯಾಗುತ್ತಾನೆ. ಉಕ್ಕಿ ಹರಿಯುವ ಉತ್ಸಾಹ, ದೇಶ ಪ್ರೇಮ, ಶೌರ್ಯ ಹಾಗು ಯುದ್ಧದ ಕುರಿತು ಏನೇನೋ ರಮ್ಯಕಲ್ಪನೆಗಳನ್ನು ಇಟ್ಟುಕೊಂಡು ಕೆಲವೇ ದಿನದಲ್ಲಿ ಪ್ಯಾರಿಸ್ ಅನ್ನು ವಶಪಡಿಸಿಕೊಳ್ಳುತ್ತೇವೆ ಎಂದುಕೊಂಡು, ಪಿಕ್ನಿಕ್‌ಗೆ ಹೋಗುತ್ತಿರುವ ಭಾವದಲ್ಲಿ ಈ ಎಳೆಯರ ತಂಡ ಯುದ್ದಭೂಮಿ ತಲುಪುತ್ತದೆ. ಅಲ್ಲಿ ಯುದ್ಧದ ನಿಜಸ್ವರೂಪದ ಅರಿವಾಗಲು ಹೆಚ್ಚು ಕಾಯಬೇಕಾಗುವುದಿಲ್ಲ. ಒಂದೇ ದಿನದಲ್ಲಿ ಅವರ ಪೈಕಿ ಒಬ್ಬ ಸ್ನೇಹಿತ ಪ್ರಾಣವನ್ನೂ ಕಳೆದುಕೊಂಡು ಬಿಡುತ್ತಾನೆ. ಅಲ್ಲಿಂದ ನಂತರ ಯುದ್ಧ ಮುಗಿಯುವವರೆಗಿನ ಪೌಲ್‌ನ ಸುಮಾರು 3 ವರ್ಷಗಳ ಹೋರಾಟವನ್ನು ಸಿನಿಮಾ ತೋರಿಸುತ್ತದೆ. ಹಾಗೆ ಪೌಲ್ ಅನ್ನು ಹಿಂಬಾಲಿಸುತ್ತಲೇ ಯುದ್ಧದ ಘೋರ ಸತ್ಯಗಳು, ಕ್ರೂರತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದರ ನಿರರ್ಥಕತೆಯನ್ನು ಈ ಸಿನಿಮಾ ತುಂಬಾ ಸಮರ್ಥವಾಗಿ ತೆರೆದಿಡುತ್ತದೆ.

ಸಿನಿಮಾದ ಆರಂಭದಲ್ಲಿಯೇ ಬರುವ ಯುದ್ಧದ ದೃಶ್ಯದಲ್ಲಿ ದೊಡ್ಡ ಮಟ್ಟದಲ್ಲಿ ಜರ್ಮನಿ ಸೈನಿಕರು ಸಾಯುತ್ತಾರೆ. ಅವರ ಸಮವಸ್ತ್ರಗಳನ್ನು ಬಿಚ್ಚಿ ಅವರನ್ನು ಅಲ್ಲಿಯೇ ಸಾಮೂಹಿಕವಾಗಿ ಹೂಳಲಾಗುತ್ತದೆ. ಈ ಸಮವಸ್ತ್ರಗಳು ಮತ್ತೆಲ್ಲಿಗೋ ರವಾನೆಯಾಗುತ್ತವೆ. ಅದನ್ನು ಚೆನ್ನಾಗಿ ತೊಳೆದು, ರಕ್ತದ ಕಲೆ ನೀಗಿಸಲಾಗುತ್ತದೆ. ಗುಂಡು ಹೊಡೆದು ಆದ ತೂತುಗಳನ್ನು ಹೊಲೆಯಲಾಗುತ್ತದೆ. ಹೀಗೆ, ಸ್ವಚ್ಚಗೊಳಿಸಿ, ರಿಪೇರಿ ಮಾಡಿ ಸಿದ್ಧವಾದ ಸಮವಸ್ತ್ರಗಳು ಪೌಲ್‌ನ ಶಾಲೆಯಲ್ಲಿ ಹೊಸದಾಗಿ ಸೈನ್ಯ ಸೇರಿದ ಎಳೆಯ ಹುಡುಗರ ಮೈ ಏರುತ್ತದೆ. ಚಿತ್ರದ ಆರಂಭದಲ್ಲಿಯೇ ಇರುವ ಈ ದೃಶ್ಯದಲ್ಲಿ ಉಸಿರುಕಟ್ಟಿಸುವಂತಹ ತಣ್ಣನೆಯ ಕ್ರೌರ್ಯ ಎದ್ದು ಕಾಣುತ್ತದೆ. ಆ ಮೂಲಕವೇ ಇಡೀ ಚಿತ್ರದ ಯುದ್ಧ ವಿರೋಧಿ ನಿಲುವಿಗೆ ಒಂದು ಭದ್ರ ಬುನಾದಿ ಸಿಗುತ್ತದೆ.

ಬಹುತೇಕ ಯುದ್ಧ ಸಿನಿಮಾಗಳ ಹೋರಾಟದ ದೃಶ್ಯಗಳು ಪ್ರೇಕ್ಷಕರಲ್ಲಿ ಅರಿವಿಲ್ಲದೆಯೇ ರೋಮಾಂಚನ ಮೂಡಿಸುತ್ತವೆ, ಚಿತ್ರವನ್ನು ರೋಚಕವಾಗಿಸುತ್ತವೆ ಎಂಬ ಆರೋಪವಿದೆ. ಅದೇ ರೀತಿಯ ಉಸಿರು ಬಿಗಿಹಿಡಿಯುವಂತಹ ವಾರ್ ಸೀಕ್ವೇನ್ಸ್‌ಗಳು ಈ ಚಿತ್ರದ ಉದ್ದಕ್ಕೂ ಇದೆ. ಆದರೆ, ಪ್ರತೀ ದೃಶ್ಯದ ಕೊನೆಯಲ್ಲಿ ಎದೆ ನಡುಗಿಸುವ ವಿನಾಶ, ಪ್ರಾಣಹಾನಿ, ಭೀಕರತೆ, ಯುದ್ಧದ ಕುರಿತು ಎಷ್ಟರಮಟ್ಟಿನ ಹೇವರಿಕೆ ಹುಟ್ಟಿಸುತ್ತವೆಂದರೆ ಪ್ರಾಯಶಃ ಯಾರಿಗೂ ಸೈನ್ಯ ಸೇರಬೇಕೆಂಬ ಆಸೆ ಲವಲೇಶವೂ ಉಳಿಯುವುದಿಲ್ಲ. ವರ್ಷಗಟ್ಟಲೆ ಹೋರಾಡಿ, ಸಾವಿರಾರು ಅಮಾಯಕರನ್ನು ಬಲಿ ಕೊಟ್ಟು, ದೇಶವನ್ನು ದುಃಸ್ಥಿತಿಗೆ ತಳ್ಳಿದ ಯುದ್ಧ ಕೊನೆಗೆ ಏನೇನೂ ಸಾಧಿಸುವುದಿಲ್ಲ. ವೆಸ್ಟರ್ನ್ ಫ್ರಂಟ್‌ನ ಎರಡು ಬದಿಯಲ್ಲಿ ಜರ್ಮನಿ ಮತ್ತು ಫ್ರೆಂಚ್ ಸೈನ್ಯಗಳು ಮೊದಲಿಗೆ ಎಲ್ಲಿ ಇದ್ದವೋ ಯುದ್ಧ ಮುಗಿದಾಗಲೂ ಅಲ್ಲಿ ಇರುತ್ತವೆ. ಒಂದಿಂಚು ಹೆಚ್ಚುವರಿ ಭೂಮಿಯೂ ಯಾರ ಕೈಗೂ ದಕ್ಕಿರುವುದಿಲ್ಲ.

ಒಂದೆಡೆ ಗುಂಡು, ಬಾಂಬು, ಟ್ಯಾಂಕರ್, ವಿಷಗಾಳಿ ಬಲಿಯಾಗುತ್ತಾ, ಚಳಿ, ಮಳೆಗೆ, ಕೆಸರಲ್ಲಿ ಒದ್ದಾಡುತ್ತಾ, ಅದದೇ ಒಣ ಬ್ರೆಡ್ ತಿಂದು ಸೈನಿಕರು ಜೀವ ಹಿಡಿದುಕೊಂಡಿರುವಾಗ, ಮತ್ತೊಂದೆಡೆ ವೈಭವೋಪೇತ ಮಹಲುಗಳಲ್ಲಿ ಕುಳಿತು, ಹೊಟ್ಟೆ ಬಿರಿಯ ತಿಂದು ಕುಡಿದು, ತಮ್ಮದ್ಯಾವುದೋ ಕೀರ್ತಿಯ ಅಮಲಿಗೋ, ಸಿದ್ಧಾಂತಗಳ ತೆವಲಿಗೋ ನಾಯಕರುಗಳು ಯುದ್ಧದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಸಿನಿಮಾ ಎದುರು ಬದಿರಾಗಿ ನಿಲ್ಲಿಸುತ್ತದೆ. ಯುದ್ಧವನ್ನು ಅದರ ಹಿಂದಿರುವ ಕಾರಣವನ್ನು, ಸೈನಿಕರಿಗೆ ಅಂಟಿಸಿರುವ ಶೌರತ್ವ, ಗೌರವ, ಘನತೆಯ ಕುರಿತ ಎಲ್ಲಾ ರಮ್ಯ ಕಲ್ಪನೆಗಳನ್ನು ಈ ಮೂಲಕ ಸಿನಿಮಾ ನುಚ್ಚುನೂರು ಮಾಡುತ್ತದೆ. ಇದು ಈ ಚಿತ್ರದ ದೊಡ್ಡ ಗೆಲುವೂ ಹೌದು.

ಸರಿಸುಮಾರು ನೂರು ವರ್ಷಗಳ ಹಿಂದೆ ಬಂದ ಮೊದಲ ಸಿನಿಮಾಗೆ ಹೋಲಿಸಿದರೆ, ಅತ್ಯಾಧುನಿಕ ಸಿನಿಮಾ ತಂತ್ರಜ್ಞಾನಗಳು ಲಭ್ಯವಿರುವ ಈ ಕಾಲದಲ್ಲಿ ಬಂದಿರುವ ಹೊಸ ವರ್ಷನ್ ಖಂಡಿತವಾಗಿಯೂ ಮೇಕಿಂಗ್ ದೃಷ್ಟಿಯಲ್ಲಿ ಅದ್ಭುತವಾಗಿದೆ. ಸಿನಿಮಾಟೋಗ್ರಫಿ, ಸ್ಪೆಷೆಲ್ ಎಫೆಕ್ಟ್ ಮತ್ತು ಮೇಕಪ್ ತುಂಬಾ ಪರಿಣಾಮಕಾರಿಯಾಗಿದೆ. ಸಿನಿಮಾದ ಒಟ್ಟು ಆಶಯಕ್ಕೆ ಧಕ್ಕೆ ಬಾರದಂತೆ ಮತ್ತು ಅದನ್ನು ಸಮರ್ಥಿಸುವ ರೀತಿಯಲ್ಲಿ ಸಿನಿಮಾದ ನಿರೂಪಣೆ ಮಾಡಿರುವುದು ಎಡ್ವರ್ಡ್ ಹೆಗ್ಗಳಿಕೆ. ಮೂಲ ಕೃತಿಗಿಂತ ಸಿನಿಮಾದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದರೂ, ಆ ಮೂಲಕ ಯುದ್ಧದ ಹಲವು ಆಯಾಮಗಳು ಮತ್ತು ಅದರ ಸಂಕೀರ್ಣತೆಯನ್ನು ತೆಳುವಾಗಿಸಿದ್ದರೂ, ಯುದ್ಧ ವಿರೋಧಿ ಸಂದೇಶವನ್ನು ಸರಳವಾಗಿ ಮತ್ತು ನೇರವಾಗಿ ಆದರೆ ಮತ್ತಷ್ಚು ಗಟ್ಟಿಯಾಗಿ ಹೇಳುವಲ್ಲಿ ಯಶಸ್ವಿಯಾಗುತ್ತದೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಗಳಿಸಿರುವ ‘ಆಲ್ ಕ್ವೈಟ್ ಆನ್ ದಿ ವೆಸ್ಚರ್ನ್ ಫ್ರಂಟ್’ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here