ಶಾಸ್ತ್ರೀಯ ನೃತ್ಯ, ನಟನೆ, ಯೋಗ, ಬೈಕ್‌ ರೇಸ್‌, ಫಿಟ್‌ನೆಸ್‌, ಜಾಹೀರಾತು ನಿರ್ಮಾಣ.. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು ಲಾಸ್ಯ ನಾಗರಾಜ್‌. ಕನ್ನಡ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸುತ್ತಲೇ ಇತರೆ ಭಾಷಾ ಸಿನಿಮಾಗಳಲ್ಲೂ ಪಾತ್ರಗಳನ್ನು ಮಾಡಿದ್ದಾರೆ. ಸದಾ ಲವಲವಿಕೆ, ಎನರ್ಜಟಿಕ್‌ ಆಗಿರುವ ಲಾಸ್ಯ ಅವರ ಬದುಕು – ಸಾಧನೆ ಕುರಿತ ಬರಹವಿದು.

ಗೆಜ್ಜೆ ಕಟ್ಟಿ ಹೆಜ್ಜೆ ಹಾಕೋದು ಗೊತ್ತು, ಸ್ಟೈಲಿಶ್‌ ಆಗಿ ಕ್ಯಾಟ್‌ವಾಕ್‌ ಮಾಡೋದು ಸಲೀಸು. ಯೋಗಾಸನ ಕರಗತ. ಬೈಕ್‌ ಏರಿದ್ರೆ ರೇಸ್‌ನಲ್ಲೂ ಮುಂದು. ಕುದುರೆ ಸವಾರಿಗೂ ಸೈ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಬಿಝಿ. ಆದರೆ ಇವರು ಜನರನ್ನು ಹೆಚ್ಚೆಚ್ಚು ತಲುಪಿದ್ದು ಮಾತ್ರ ನಟನೆ ಮೂಲಕ. ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡಿದ್ದ ಶಿವರಾಜ್‌ಕುಮಾರ್‌ ಅವರ 125ನೇ ಸಿನಿಮಾ ‘ವೇದ’ ಚಿತ್ರದ ‘ಗಿಲ್ಲಕ್ಕು ಶಿವ ಗಿಲ್ಲಕ್ಕು…’ ಹಾಡಿಗೆ ಬೋಲ್ಡ್‌ ಸ್ಟೆಪ್‌ ಹಾಕಿ ಕಿಕ್‌ ಮೂಡಿಸಿದ್ದ ನಟಿಯೇ ಲಾಸ್ಯ ನಾಗರಾಜ್‌.

ಇವರು ನಟಿಯಾಗಿ ಹಲವರಿಗೆ ಪರಿಚಿತ. ಜೊತೆಗೆ ಇತರೆ ಕ್ಷೇತ್ರಗಳಲ್ಲಿ ಬಿಝಿಯಾಗಿದ್ದಾರೆ. ಕ್ರೀಡೆ, ನೃತ್ಯ, ಯೋಗ, ಫ್ಯಾಷನ್‌ನಿಂದ ಹಿಡಿದು ನಟನೆ, ನಿರ್ಮಾಣದವರೆಗೂ ತಮ್ಮನ್ನು ತೊಡಗಿಸಿಕೊಂಡಿರುವ ಬಹುಭಾಷಾ ನಟಿ ಲಾಸ್ಯ ಅವರು ಅತುಲ್‌ ಕುಲಕರ್ಣಿ ಅವರ ಓಡಿಯಾ ಸಿನಿಮಾ ‘ಪಟ್ನಾಘರ್‌’ದಲ್ಲೂ ಅಭಿನಯಿಸಿದ್ದಾರೆ. ಕ್ರೈಂ ಥ್ರಿಲ್ಲರ್‌ ಕತೆ ಒಳಗೊಂಡ ಸತ್ಯ ಘಟನೆ ಆಧರಿತ ಸಿನಿಮಾ ಇದು.

ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳ ಮೂಲಕ ಛಾಪು ಮೂಡಿಸಿರುವ ಇವರು ಕನ್ನಡದ ‘ಬಿಗ್‌ ಬಾಸ್‌’ ಸೇರಿದಂತೆ ನಾನಾ ಭಾಷೆಗಳ ರಿಯಾಲಿಟಿ ಶೋ, ಕನ್ನಡದ ‘ಪದ್ಮಾವತಿ’, ತಮಿಳಿನ ‘ವಂದಾಲ್‌ ಶ್ರೀದೇವಿ’ ಸೇರಿದಂತೆ ಕಿರುತೆರೆ ಲೋಕದಲ್ಲಿ ಗಮನ ಸೆಳೆದಿದ್ದಾರೆ. ಇವರ ಕನ್ನಡದ ಮೊದಲ ಸಿನಿಮಾ ರಾಜೇಶ್‌ ವೇಣೂರ್‌ ನಿರ್ದೇಶನದ ‘ಅಸತೋಮ ಸದ್ಗಮಯ’. ದಯಾಳ್‌ ಪದ್ಮನಾಭ್‌ ಅವರ ‘ರಂಗನಾಯಕಿ’ಯಲ್ಲೂ ಮಿಂಚಿದ್ದರು. ‘ದೃಶ್ಯ2’, ‘ಹೋಮ್‌ ಮಿನಿಸ್ಟರ್‌’, ‘ಕಾರ್ಗಲ್‌ ನೈಟ್ಸ್‌’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾಷನ್‌ ಸ್ಪರ್ಧೆಯೊಂದರಲ್ಲಿ ಮಿಸ್ ಕಾನ್ಫಿಡೆಂಟ್‌ ಕಿರೀಟ ಗೆದ್ದಿದ್ದ ಅವರಿಗೆ ಮಾಡೆಲಿಂಗ್‌ ಲೋಕದತ್ತ ವಿಶೇಷ ಸೆಳೆತ. ಬೋಲ್ಡ್‌ ಫೋಟೊಶೂಟ್‌ನಲ್ಲೂ ಇವರು ಮುಂದು.

ಗರ್ಭದಲ್ಲಿರುವಾಗಲೇ ಗೆಜ್ಜೆಯ ಸದ್ದು!
ಯಾವುದೇ ವಿಷಯವಿರಲಿ ಬೋಲ್ಡ್‌ ಸ್ಟೆಪ್‌ ಇಡುವ ಇವರ ಒಂದೊಂದು ಕ್ಷೇತ್ರದ ಜರ್ನಿಯೂ ಕುತೂಹಲಕಾರಿ. ಇತರರಿಗೆ ಸ್ಫೂರ್ತಿಯೂ ಹೌದು. ಅಮ್ಮನ ಗರ್ಭದಲ್ಲಿರುವಾಗಲೇ ನೃತ್ಯವನ್ನು ಉಸಿರಾಡಿದವರು ಇವರು. ಅಮ್ಮ ಸುಧಾ ನಾಗರಾಜ್‌ ಶಾಸ್ತ್ರೀಯ ನೃತ್ಯದಲ್ಲಿ ಹೆಸರಾಂತ ಕಲಾವಿದೆ. ಲಾಸ್ಯ ಗರ್ಭದಲ್ಲಿರುವಾಗಲೂ ತಾಸುಗಳ ಕಾಲ ನೃತ್ಯ ಮಾಡಿದ ಖ್ಯಾತಿ ಇವರದ್ದು. ಹೀಗಾಗಿ ಗರ್ಭದಲ್ಲಿರುವಾಗಲೇ ಲಾಸ್ಯ ಹೆಜ್ಜೆಯ ಸದ್ದು ಕೇಳಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಹುಟ್ಟಿಂದಲೇ ನೃತ್ಯ ಕರಗತ. ಓದಿನ ಜತೆಜತೆಗೆ ಗೆಜ್ಜೆ ಕಟ್ಟಿದ ಇವರು ನಾನಾ ನೃತ್ಯ ಪ್ರಕಾರಗಳಲ್ಲಿ ಆಸಕ್ತಿ ವಹಿಸಿದವರು.

ಪ್ರತಿ ನೃತ್ಯ ಪ್ರಕಾರವು ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ ಎನ್ನುವ ಅವರು ಬೆಲ್ಲಿ ನೃತ್ಯವನ್ನು ಮನೆಯಲ್ಲಿ ಹೇಳದೆಯೇ ಕದ್ದುಮುಚ್ಚಿ ಕಲಿತರಂತೆ. ಅವರು ಅಭಿನಯಿಸಿರುವ ಓಡಿಯಾ ಸಿನಿಮಾದಲ್ಲೂ ಓಡಿಸ್ಸಿ ನೃತ್ಯದ ಮೂಲಕವೇ ಗುರುತಿಸಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್‌ ಕ್ಷ ಣಗಳೇ ಅದ್ಭುತ ಅನುಭವ ಎನ್ನುವ ಅವರು ‘ಪಾರಂಪರಿಕ ಕಟ್ಟಡವೊಂದರಲ್ಲಿ ನೃತ್ಯ ಮಾಡಬೇಕಿತ್ತು. ವಿಪರೀತ ಚಳಿಯಲ್ಲಿ ನಡುಗುತ್ತಿದ್ದೆ. ಕಾಲು ನಡುಗುವಾಗ ಗಟ್ಟಿಯಾಗಿ ಹೆಜ್ಜೆ ಇಡುವುದು ಹೇಗೆ ಅಂದಾಗ ಕೈ ಚಲನೆ, ಮುಖದ ಅಭಿನಯಕ್ಕೆ ಪ್ರಾಮುಖ್ಯತೆ ನೀಡಬೇಕಾಯ್ತು’ ಎನ್ನುತ್ತಾರೆ.

ಬೈಕ್‌ ಕ್ರೇಜ್‌
ಇವರ ವ್ಯಕ್ತಿತ್ವಕ್ಕೆ ಎರಡು ಶೇಡ್‌ ಇದೆ. ಒಂದು ವಿಪರೀತ ನಾಚಿಕೆ ಸ್ವಭಾವ. ಇಲ್ಲಅಂದರೆ ಸಖತ್‌ ಬೋಲ್ಡ್‌. ಆಗ ಟಾಮ್‌ ಬಾಯ್‌ ಆಗಿ ಬದಲಾಗುತ್ತಾರೆ. ಅದೇ ಟಾಮ್‌ ಬಾಯ್‌ ಸ್ವಭಾವದಿಂದಾಗಿಯೇ ಹುಡುಗರು ಆಡುವ ಕ್ರೀಡೆಗಳಲ್ಲಿ ಗುರುತಿಸಿಕೊಳ್ಳುತ್ತಲೇ ಬಂದರು. ಸ್ನೇಹಿತರ ವಲಯ ಕೂಡ ಹುಡುಗರದ್ದೇ ಆಗಿತ್ತು. ‘ಚಿಕ್ಕವಳಿಂದಲೂ ಹೊಸತು ಕಲಿಯಲು ಇಷ್ಟವಾಗಿತ್ತು. ದಿನಾ ಯಾವ ಹೊಸ ಸ್ಕಿಲ್‌ ಕಲಿಯಬಹುದು ಎಂದು ಯೋಚಿಸುತ್ತಿದ್ದೆ. ಹುಡುಗರೊಂದಿಗೆ ಗುರುತಿಸಿಕೊಳ್ಳುತ್ತಿದ್ದ ನಾನು ಬರೀ ಕ್ರಿಕೆಟ್‌ ಆಡುತ್ತಿದ್ದೆ. ಕೆಲವು ಸಂಗತಿಗಳು ಯಾಕೆ ಹುಡುಗರಿಗೆ ಮೀಸಲಾಗಬೇಕು. ಹುಡುಗಿಯರಿಂದಲೂ ಸಾಧ್ಯ ಎಂಬ ಛಲವೂ ಜತೆಗಿತ್ತು’ ಎನ್ನುತ್ತಾರೆ.

ಅವರನ್ನು ವಿಪರೀತ ಸೆಳೆದಿದ್ದು ಹುಡುಗಿಯರು ಅಲ್ಲಾಡಿಸಲೂ ಕಷ್ಟಪಡುವ ಬೃಹತ್‌ ಗಾತ್ರದ ಬೈಕ್‌ಗಳು. ಎಂಟನೇ ತರಗತಿಯಲ್ಲಿರುವಾಗಲೇ ಬೈಕ್‌ ಓಡಿಸಲು ಕಲಿತ ಅವರು ಒಮ್ಮೆ ಸಿಗ್ನಲ್‌ನಲ್ಲಿಅಪ್ಪನ ಬಳಿ ಸಿಕ್ಕಿ ಬಿದ್ದಾಗಲೇ ಮನೆಯಲ್ಲಿಇವರ ಬೈಕ್‌ ಕ್ರೇಜ್‌ ಗೊತ್ತಾಗಿದ್ದು. ಇವರು ಬೈಕ್‌ ಓಡಿಸುವುದು ಮನೆಯಲ್ಲಿ ಇಷ್ಟವಿರಲಿಲ್ಲವಂತೆ. ಒಮ್ಮೆ ಸಿಗ್ನಲ್‌ನಲ್ಲಿ ಬೈಕನ್ನೇರಿ ನಿಂತಿದ್ದರಂತೆ. ಪಕ್ಕದಲ್ಲಿ ಅವರ ತಂದೆಯ ಕಾರು ಇತ್ತು! ತಂದೆ ನೋಡಿ ಬಿಡುತ್ತಾರೆ ಅಂತ ಸಿಗ್ನಲ್‌ ಬಿಟ್ಟಾಕ್ಷಣ ಮೊದಲು ಹೋದದ್ದೇ ಅವರಿಂದಾದ ತಪ್ಪು. ಮೊದಲ ಹೋದ ವ್ಯಕ್ತಿ ಹಿಂದಿದ್ದವರ ಕಣ್ಣಿಗೆ ಬೀಳೋದು ಸಹಜ. ಅದೇ ರೀತಿ ಲಾಸ್ಯ ಅವರ ತಂದೆ ಗುರುತಿಸಿ ಅವರನ್ನು ಫಾಲೋ ಮಾಡಿಕೊಂಡು ಹೋಗಿ ಮನೆಯಲ್ಲಿ ಬೈದಿದ್ದಾರೆ. ಇನ್ನು ಬೈಕ್‌ ಮುಟ್ಟಬೇಡ ಅಂತೆಲ್ಲ ಅಂದರೂ ಬೈಕ್‌ ಕ್ರೇಜ್‌ ಕಮ್ಮಿ ಆಗಲಿಲ್ಲ. ಮನೆಯಲ್ಲಿ ಪದೇ ಪದೇ ಬೇರೆ ಬೇರೆ ಬೈಕ್‌ ತಂದು ನಿಲ್ಲಿಸುತ್ತಿದ್ದ ಲಾಸ್ಯ ಅವರ ಮೋಹಕ್ಕೆ ಮನೆಯವರು ಬೆರಗಾಗಿದ್ದರು. ಹುಡುಗರ ತಂಡವನ್ನೇ ಒಳಗೊಂಡಿದ್ದ ತರಬೇತಿಯಲ್ಲಿ ಇದ್ದ ಇಬ್ಬರೇ ಹುಡುಗಿಯರಲ್ಲಿ ಇವರೊಬ್ಬರಾಗಿ ಕೊಯಿಮುತ್ತೂರ್‌ನಲ್ಲಿ ಟ್ರ್ಯಾಕ್‌ ರೇಸಿಂಗ್‌ ಕಲಿತರಂತೆ. ಡ್ಯೂಕ್‌, ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ಹಲವು ಬಗೆಯ ಭಾರಿ ಗಾತ್ರದ ಬೈಕ್‌ ಓಡಿಸುತ್ತಾರೆ. ಇದೀಗ ಅವರು ಆಗಾಗ ಬೈಕ್‌ ರೇಸ್‌ಗೂ ಹೋಗುತ್ತಾರೆ.

ಫಿಟ್‌ನೆಸ್‌ ಅಂದರೆ ಆರೋಗ್ಯ
ಇವರ ಫಿಟ್‌ನೆಸ್‌ ಜರ್ನಿ ಬಾಲ್ಯದಲ್ಲೇ ಶುರುವಾಗಿತ್ತು. ಅಂದರೆ ಯೋಗ ಕೂಡ ಚಿಕ್ಕವರಿರುವಾಗಲೇ ಗೊತ್ತು ಇವರಿಗೆ. ಆದರೆ ಯೋಗ ತರಬೇತಿಗೆ ಹೋಗಬೇಕು ಅಂದರೆ ಸೋಮಾರಿತನ ಅವರನ್ನು ಆವರಿಸುತ್ತಿತ್ತಂತೆ. ಮೂವತ್ತು ದಿನದಲ್ಲಿ ಹತ್ತು ದಿನ ತರಗತಿಗೆ ಹೋದರೆ ಹೆಚ್ಚು ಅನ್ನುವ ಪರಿಸ್ಥಿತಿ ನಡುವೆ ಯೋಗವನ್ನು ಕಡೆಗಣಿಸಿದ್ದವರು ಕೆಲವು ವರ್ಷಗಳ ನಂತರ ಅವರನ್ನು ಮನೋದೈಹಿಕವಾಗಿ ಗಟ್ಟಿಯಾಗಿಸಿದ್ದು ಅದೇ ಯೋಗ. ಇದೀಗ ಯೋಗದ ನಾನಾ ಭಂಗಿಗಳನ್ನು ವಿಭಿನ್ನವಾಗಿ ಪ್ರಯೋಗಿಸುವ ಲಾಸ್ಯ ಇತರರಿಗೆ ಮಾದರಿ. ‘ಯಾವುದೇ ವಯಸ್ಸಿನಲ್ಲಿ ಕಲಿಯಿರಿ ಸತತ ಆರು ತಿಂಗಳ ಅಭ್ಯಾಸ ನಿಮ್ಮಲ್ಲಿ ಬದಲಾವಣೆ ಉಂಟು ಮಾಡುತ್ತದೆ’ ಎಂದು ಹೇಳುತ್ತಾರೆ.

‘ಎಲ್ಲರೂ ಚಿಕ್ಕವರಿಂದಲೇ ಯೋಗ ಮಾಡಿದರೆ ಮಾತ್ರ ಫ್ಲೆಕ್ಸಿಬಲ್‌ ಎಂದುಕೊಳ್ಳುತ್ತಾರೆ. ಆದರೆ ಅದು ಸುಳ್ಳು. ನಾನು ಚಿಕ್ಕವಳಿಂದ ಯೋಗ ಮಾಡಿದರೂ ಫ್ಲೆಕ್ಸಿಬಲ್‌ ಇರಲೇ ಇಲ್ಲ. ಈಗ ಐದಾರು ವರ್ಷಗಳಿಂದ ನಿಯಮಿತ ಅಭ್ಯಾಸ ಮಾಡುತ್ತಿದ್ದೇನಷ್ಟೆ. ಹೀಗಾಗಿ ನಿಯಮಿತ ಅಭ್ಯಾಸ ದೇಹವನ್ನು ಫ್ಲೆಕ್ಸಿಬಲ್‌ ಆಗಿಸುತ್ತದೆ’ ಎಂಬುದು ಅವರ ಸಲಹೆ. ಡಯಟ್‌ ವಿಷಯಕ್ಕೆ ಬಂದರೆ ಅನಗತ್ಯವಾಗಿ ಇವರು ಹೊಟ್ಟೆ ಕಟ್ಟುವುದಿಲ್ಲ. ಆದರೆ ಆರೋಗ್ಯ ಕೆಡಿಸುವ, ತೂಕ ಹೆಚ್ಚಿಸುವ ಸಂಸ್ಕರಿತ ಆಹಾರ, ಕೊಬ್ಬಿನ ಪದಾರ್ಥ, ಕೃತಕ ಪಾನೀಯಗಳಿಂದ ದೂರ ಇರುತ್ತಾರೆ.

‘ಗ್ಲಾಮರ್‌ ಜಗತ್ತಿನಲ್ಲಿ ಸಪೂರಾದ ದೇಹ ಅಗತ್ಯ. ಸಿನಿಮಾಗೆ ತಕ್ಕಂತೆ ದೇಹದ ಅಳತೆಯೂ ಬದಲಾಗಬೇಕು, ಆದರೆ ಅನಾರೋಗ್ಯಕರ ಮಾರ್ಗ ಅನುಸರಿಸಬೇಡಿ. ಮೊದಲು ಇಂಡಸ್ಟ್ರಿಗೆ ಬಂದಾಗ ಹೀರೋಯಿನ್‌ ಅಂದರೆ ಹೀಗೆ ಇರಬೇಕು ಅಂತೆಲ್ಲ ಅಂದುಕೊಳ್ಳುತ್ತೇವೆ. ಅದೇ ರೀತಿ ಇಂಡಸ್ಟ್ರಿ ಕೂಡ ಸಪೂರ ದೇಹವನ್ನೇ ಬಯಸುತ್ತದೆ. ಆದ್ರೆ ನಟನೆಯ ಟ್ಯಾಲೆಂಟ್‌ ಇದ್ದರೆ ಅವಕಾಶ ತಪ್ಪುವುದಿಲ್ಲ’ ಎನ್ನುವ ಅವರು ‘ಫಿಟ್‌ನೆಸ್‌ ಎನ್ನುವುದು ಜೀವನಪೂರ್ತಿ ಒಂದೇ ರೀತಿಯಾಗಿ ಕಾದುಕೊಂಡು ಹೋಗುವಂಥದ್ದು. ಹೀಗಾಗಿ ಆರೋಗ್ಯಕರ ಮಾರ್ಗ ಅನುಸರಿಸಿ, ಆರೋಗ್ಯಕ್ಕೆ ಮೊದಲ ಆದ್ಯತೆ’ ಎನ್ನುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಯೋಗ ಭಂಗಿಗಳನ್ನು ಪ್ರದರ್ಶಿಸುವ ಇವರು ವರ್ಕೌಟ್‌ ಕುರಿತಂತೆ ಹಲವು ವಿಡಿಯೋಗಳನ್ನು ಸಹ ಶೇರ್‌ ಮಾಡುತ್ತಾರೆ. ‘ಹೆಡ್‌ ಸ್ಟ್ಯಾಂಡ್‌ನಲ್ಲಿ ವೇರಿಯೇಷನ್‌ ಎಲ್ಲಮಾಡಬೇಕು ಅಂತ ಅಸೆ ಇದೆ’ ಎನ್ನುತ್ತಾರೆ.

‘ಫಿಟ್‌ನೆಸ್‌ ಎನ್ನುವುದು ಎಲ್ಲರಿಗೂ ಅತ್ಯಗತ್ಯ. ಹೀಗಾಗಿ ನಿಯಮಿತ ವ್ಯಾಯಾಮ, ಡಯಟ್‌ ಕಡೆ ಗಮನ ಹರಿಸಿ. ದೇಹಕ್ಕೆ ತುಂಬ ಒತ್ತಡ ನೀಡಬಾರದು. ನಾನು ಕೂಡ ಕೀಟೋ ಸೇರಿದಂತೆ ಹಲವು ಬಗೆಯ ಡಯಟ್‌ ಮಾಡುತ್ತಿದ್ದೆ. ಆದರೆ ಅದು ತಪ್ಪು ಎಂದು ಅರಿವಾಯ್ತು. ಅವುಗಳನ್ನು ಹೆಚ್ಚು ಸಮಯ ಮಾಡಲಾಗದು. ನಿಗದಿತ ಪ್ರಾಜೆಕ್ಟ್‌ಗೆ ಪೂರಕವಾಗಿ ತೂಕ ಇಳಿಕೆಗೆ ಸಹಕಾರಿಯಾಗಿ ಮಾಡಬಹುದು. ಈಗ ಡಯಟ್‌ ಅಂದರೆ ಮನೆಯಲ್ಲಿ ತಾಜಾ ಏನು ಸಿಗತ್ತೋ ಅದನ್ನೇ ಸೇವಿಸುತ್ತೇನೆ. ಸಕ್ಕರೆ ಬದಲು ಬೆಲ್ಲ ಬಳಸುತ್ತೇನೆ. ನನಗೆ ಸೈಜ್‌ ಝೀರೋ ಆಗಿರುವ ಆಸೆ ಇಲ್ಲ’ ಎನ್ನುತ್ತಾರೆ.

ನಿರ್ಮಾಣದತ್ತ ಆಸಕ್ತಿ
ಲಾಸ್ಯ ಅವರಿಗೂ ಫ್ಯಾಷನ್‌ ಜಗತ್ತಿಗೂ ಅನನ್ಯ ನಂಟು. ಆಗಾಗ ಹಲವು ಬ್ರ್ಯಾಂಡ್‌ಗಳ ಫೋಟೊಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾಗಳಲ್ಲಿ ಗಮನ ಸೆಳೆಯುತ್ತಾರೆ. ಇವರ ಬೋಲ್ಡ್‌ ಲುಕ್‌ ಫೋಟೊಗಳು ಆಗಾಗ ವೈರಲ್‌ ಆಗುತ್ತವೆ. ಸದಾ ಇನ್‌ಸ್ಟಾಂನಲ್ಲಿ ವಿಭಿನ್ನ ಭಂಗಿಗಳನ್ನು ಒಳಗೊಂಡ ಫೋಟೊಶೂಟ್‌ ಮೂಲಕ ಕ್ರಿಯಾಶೀಲವಾಗಿ ಗಮನ ಸೆಳೆಯುತ್ತಾರೆ. ಫ್ಯಾಷನ್‌ ಇವರಿಗೆ ಇಷ್ಟವಷ್ಟೆ ಅಲ್ಲ, ಈ ಉದ್ದಿಮೆಯಲ್ಲೂ ಇವರಿಗೆ ಆಸಕ್ತಿ. ಅಷ್ಟೇ ಅಲ್ಲ ಜಾಹೀರಾತು ನಿರ್ಮಾಣದಲ್ಲೂ ಗುರುತಿಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿಇನ್ನಷ್ಟು ಸಾಧನೆ ಮಾಡುವ ಗುರಿ ಹೊಂದಿದ್ದಾರೆ.

LEAVE A REPLY

Connect with

Please enter your comment!
Please enter your name here