ಕನ್ನಡ ಕಿರುತೆರೆಯಲ್ಲಿ ಸ್ಟೈಲಿಶ್‌ ಪಾತ್ರಗಳ ಮೂಲಕ ಗುರುತಿಸಿಕೊಂಡ ನಟಿ ಮಾನಸ ಮನೋಹರ್‌. MBA ಓದುತ್ತಿರುವಾಗಲೇ ‘ಮಿಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಅವರು ಮುಂದೆ ಮಾಡೆಲಿಂಗ್‌, ನಿರೂಪಣೆಯಲ್ಲಿ ತೊಡಗಿಸಿಕೊಂಡರು. ಅವರು ನಟನೆ ಆರಂಭಿಸಿದ್ದು ‘ಸಿನಿಮಾ ಮೈ ಡಾರ್ಲಿಂಗ್’ ಸಿನಿಮಾದೊಂದಿಗೆ. ಮುಂದೆ ಕಿರುತೆರೆ ಧಾರಾವಾಹಿಗಳಲ್ಲಿ ಕನ್ನಡಿಗರಿಗೆ ಚಿರಪರಿಚಿತರಾದರು. ‘ಜೊತೆಜೊತೆಯಲಿ’ ಸೀರಿಯಲ್‌ನ ಮೀರಾ ಪಾತ್ರ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಇದೇ ಕತೆಯ ತೆಲುಗು ಅವತರಣಿಕೆಯಲ್ಲಿ ಅವರು ರಾಜನಂದಿನಿ ಪಾತ್ರ ಮಾಡಿ ತೆಲುಗು ಕಿರುತೆರೆ ವೀಕ್ಷಕರಿಗೂ ಪರಿಚಯವಾದರು. ಮಾನಸ ಮನೋಹರ್‌ ಅವರೊಂದಿಗಿನ ಮಾತುಕತೆ ಇಲ್ಲಿದೆ.

ಅವಳು ಮನೆ ಮಗಳು, ಪ್ರೀತಿಯ ಗೆಳತಿ, ಬಿಸ್ನೆಸ್ ವುಮನ್. ನೇರ, ದಿಟ್ಟ ಮಾತಿನಿಂದಲೋ, ಸ್ಟೈಲಿಶ್‌ ಲುಕ್‌ನಿಂದಲೋ ಗಮನ ಸೆಳೆದಿದ್ದು ಇತ್ತೀಚೆಗಷ್ಟೇ ಪ್ರಸಾರ ಮುಗಿಸಿದ ‘ಜೊತೆಜೊತೆಯಲಿ’ ಧಾರಾವಾಹಿಯ ಪ್ರಮುಖ ಪಾತ್ರ ಮೀರಾ. ಹೌದು, ಮೀರಾ ಅನ್ನುವ ಗತ್ತಿನ ಪಾತ್ರವನ್ನು ಮಾತ್ರ ಜನ ಮರೆಯುವುದೇ ಇಲ್ಲ. ಆ ಮಟ್ಟಿಗೆ ಈ ಧಾರಾವಾಹಿ ಮೂಲಕ ಪ್ರೇಕ್ಷಕ ವರ್ಗವನ್ನು ತಲುಪಿದವರು ಮೀರಾ ಪಾತ್ರಧಾರಿ ಮಾನಸ ಮನೋಹರ್. ಇದೀಗ ‘ಒಲವಿನ ನಿಲ್ದಾಣ’ದಲ್ಲಿ ಕೂಡ ಅಷ್ಟೇ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅವರು ಇಲ್ಲೂ ಕೂಡ ಮಾತು, ನೋಟಗಳಿಂದಲೇ ಮೋಡಿ ಮಾಡುತ್ತಾರೆ.

ಸೌಂದರ್ಯಸ್ಪರ್ಧೆ ಎಂದರೆ ಚಂದದ ಬಟ್ಟೆಯಲ್ಲ | ಮೀರಾ ಎಷ್ಟು ಖಡಕ್ ವ್ಯಕ್ತಿಯೋ ಮಾನಸ ಕೂಡ ಹಾಗೆ. ನೇರ ಮಾತು, ಸ್ಪಷ್ಟ ದೃಷ್ಟಿಕೋನ, ಬದುಕಿನ ಗುರಿಯತ್ತ ಯಾವುದೇ ಅಳುಕಿಲ್ಲದ ದಿಟ್ಟ ನಡೆ ಮಾನಸ ಅವರ ವ್ಯಕ್ತಿತ್ವ. ಎಂಬಿಎ ಓದಿರುವ ಮಾನಸ ಅವರಿಗೆ ಜಾಹೀರಾತು ಅಥವಾ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಕನಸು. ಆದರೆ ಓದುವಾಗ ‘ಮಿಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆಯ ವಿಜೇತರಾದ ಮಾನಸ ರ‍್ಯಾಂಪ್‌ವಾಕ್ ಮಾಡುತ್ತಲೇ ನಿರೂಪಣೆ, ನಟನೆಗೂ ಇಳಿದವರು.

ಚಿಕ್ಕವರಿಂದಲೂ ಕ್ರಿಯೇಟಿವ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಮಾನಸ ಅವರದ್ದು. ಅದಕ್ಕೆ ಪೂರಕವಾಗಿ ಓದುವಾಗ ಫ್ಯಾಷನ್ ಜಗತ್ತು ಅವರನ್ನು ಸೆಳೆಯಿತು. ‘ಮಾಡೆಲಿಂಗ್ ಅಂದರೆ ಕೇವಲ ಚಂದ ಬಟ್ಟೆ ತೊಡುವ ಅಥವಾ ಸುಂದರವಾಗಿರುವುದಲ್ಲ. ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳಬೇಕು ಅಂದರೆ ಅಷ್ಟೇ ಶಿಸ್ತುಬದ್ಧ ಜೀವನಶೈಲಿ ಅನುಸರಿಸಬೇಕು. ಅದಕ್ಕೆ ಪೂರಕ ಆಹಾರ, ವ್ಯಾಯಾಮ, ಉತ್ತಮ ನಿದ್ರೆ, ಧನಾತ್ಮಕ ಯೋಚನೆ ಮೂಲಕ ಆರೋಗ್ಯಪೂರ್ಣ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಸೌಂದರ್ಯ ಸ್ಪರ್ಧೆಗಳು ಸಹಕಾರಿ. ಹೀಗಾಗಿ ಸೌಂದರ್ಯ ಸ್ಪರ್ಧೆ ಅಂದರೆ ಕೇವಲ ಕಿರೀಟ, ಹೆಸರು ಅಲ್ಲ. ಬದುಕಿನ ರೀತಿಯಲ್ಲೊಂದು ಬದಲಾವಣೆಗೆ ನಮ್ಮನ್ನು ಒಡ್ಡಿಕೊಳ್ಳುವುದು’ ಎನ್ನುತ್ತಾರೆ.

ಸ್ಟೈಲಿಶ್‌ ಲುಕ್‌ಗಾಗಿ ತಯಾರಿಯೇನಿಲ್ಲ | ಯಾವುದೇ ಧಾರಾವಾಹಿಯಾದರೂ ತಮ್ಮದೇ ಆದ ಸ್ಟೈಲ್‌ ಮೂಲಕ ಗಮನ ಸೆಳೆಯುತ್ತಾರಾದರೂ ‘ಇದೊಂದು ಫ್ಯಾಷನ್ ಎನ್ನುವುದಕ್ಕಿಂತ ನಮ್ಮನ್ನು ನಾವು ಹೇಗೆ ಕ್ಯಾರಿ ಮಾಡುತ್ತೇವೆ, ಆತ್ಮವಿಶ್ವಾಸದಿಂದ ಹೇಗಿರುತ್ತೇವೆ ಎಂಬುದೇ ಮುಖ್ಯ. ಪಾತ್ರಕ್ಕೆ ಸ್ಟೈಲ್‌ ಎನ್ನುವುದಕ್ಕಿಂತ ನನ್ನೊಳಗಿನ ಅಭಿವ್ಯಕ್ತಿ ಅಷ್ಟೆ. ಅದಕ್ಕಾಗಿ ವಿಶೇಷ ತಯಾರಿ ಮಾಡುವುದಿಲ್ಲ’ ಎಂಬುದು ಅವರ ಅಭಿಪ್ರಾಯ.

ನಟನೆ ಜರ್ನಿ | ನಟನೆ ಅಂದಾಗ ಮನೆಯಲ್ಲಿ ಕೊಂಚ ಹಿಂಜರಿಕೆ ಇತ್ತು. ಕುಟುಂಬದಲ್ಲಿ ಯಾರೂ ಮನರಂಜನಾ ಕ್ಷೇತ್ರದಲ್ಲಿ ಇರಲಿಲ್ಲ. ಓದಿನಲ್ಲೂ ಕೂಡ ಮುಂದಿದ್ದೆ. ಹೀಗಾಗಿ ನನಗೆ ಈ ಬಗ್ಗೆ ಆಸಕ್ತಿ ಇದೆ ಎಂಬುದರ ಪರಿವೆಯೇ ಮನೆಯಲ್ಲಿ ಇರಲಿಲ್ಲ. ಅಲ್ಲದೆ ಈ ಕ್ಷೇತ್ರದಲ್ಲಿ ನಿಯಮಿತ ಸಂಭಾವನೆ ಸಿಗುತ್ತದೆಯೇ? ಇಲ್ಲವಾ? ಎನ್ನುವ ಗೊಂದಲ ಕೂಡ ಇತ್ತು. ಬೇರೆ ಯಾವುದಾದರೂ ಕ್ಷೇತ್ರ ಆಯ್ಕೆ ಮಾಡಬಹುದು ಎನ್ನುವ ಅಭಿಪ್ರಾಯ ಕುಟುಂಬದಲ್ಲಿತ್ತು. ಆದರೆ ಅವರು ನಟನೆಯನ್ನು ಆರಂಭಿಸಿದ್ದು ಗೌರೀಶ್ ಅಕ್ಕಿ ನಿರ್ದೇಶನದ ‘ಸಿನಿಮಾ ಮೈ ಡಾರ್ಲಿಂಗ್’ ಸಿನಿಮಾ ಮೂಲಕ.

‘ಮನೆಯಲ್ಲಿ ಈ ಬಗ್ಗೆ ತಿಳಿದಿರಲಿಲ್ಲ. ಪತ್ರಿಕೆಯಲ್ಲಿ ಬಂದಾಗ ಮನೆಯಲ್ಲಿ ಗೊತ್ತಾಯಿತು. ಅನಂತರ ಈ ಕ್ಷೇತ್ರದ ಮೇಲಿನ ಒಲವಿನ ಬಗ್ಗೆ ಹೇಳಿದಾಗ ಮನೆಯವರ ಸಪೋರ್ಟ್ ಸಿಕ್ತು. ಅಲ್ಲಿಂದ ಬಣ್ಣದ ನಂಟು ಶುರುವಾಯ್ತು’ ಎನ್ನುತ್ತಾರೆ. ‘ಅಶ್ವಿನಿ ನಕ್ಷತ್ರ’, ‘ಶುಭ ವಿವಾಹ’, ‘ಅಮೃತವರ್ಷಿಣಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರೂ ಇವರಿಗೆ ಬ್ರೇಕ್ ಕೊಟ್ಟ ಪಾತ್ರ ‘ಮೀರಾ’. ‘ಜೊತೆಜೊತೆಯಲಿ ಸೀರಿಯಲ್‌ನ ಮೀರಾ ಪಾತ್ರದ ನಂತರ ಒಳ್ಳೊಳ್ಳೆಯ ಪಾತ್ರ ಸಿಗುತ್ತಿರುವುದು ಖುಷಿ’ ಎನ್ನುತ್ತಾರೆ.

ನೆಗೆಟಿವ್ ಶೇಡ್ ಪಾತ್ರ | ನೆಗೆಟಿವ್ ಶೇಡ್ ಪಾತ್ರ ಅಂದರೆ ಪಾತ್ರವನ್ನೇ ಟಾರ್ಗೆಟ್ ಮಾಡುವ ಪ್ರೇಕ್ಷಕರ ಕೆಟ್ಟ ಕಮೆಂಟ್‌ಗಳಿಗೆ ಆ ಪಾತ್ರಗಳನ್ನು ಮಾಡಿದ ನಟಿಯರು ಬೇಸರಿಸುತ್ತಾರೆ. ಆದರೆ ಮಾನಸ ಮಾತ್ರ ಅದನ್ನು ಪಾತ್ರವನ್ನಾಗಷ್ಟೇ ನೋಡಿ ಎನ್ನುತ್ತಾರೆ. ‘ನಾನು ನೆಗೆಟಿವ್ ಶೇಡ್‌ನಲ್ಲಿ ಅಷ್ಟೇನೂ ಗುರುತಿಸಿಕೊಂಡಿಲ್ಲ. ‘ಶುಭ ವಿವಾಹ’ದಲ್ಲಿ ಮಾಡಿದ್ದೆ ಅಷ್ಟೆ. ಹೀಗಾಗಿ ಎಲ್ಲಾ ಬಗೆಯ ಪಾತ್ರ ಮಾಡಿರುವ ನನಗೆ ನೆಗೆಟಿವ್ ಕಮೆಂಟ್‌ಗಳು ಘಾಸಿಗೊಳಿಸಿಲ್ಲ. ನೆಗೆಟಿವ್ ಶೇಡ್ಸ್ ಅನ್ನುವುದು ನನ್ನ ಅಷ್ಟೇನೂ ಕಾಡಲಿಲ್ಲ. ನೆಗೆಟಿವ್ ಶೇಡ್ಸ್ ಮಾಡಬೇಕು, ಬೇಡ ಅನ್ನುವುದಕ್ಕಿಂತ ಧಾರಾವಾಹಿ, ಸಿನಿಮಾ, ವೆಬ್‌ ಸೀರೀಸ್ ಯಾವುದೇ ಇರಲಿ ಪಾತ್ರಕ್ಕೆ ಇರುವ ಪ್ರಾಮುಖ್ಯತೆಗೆ ಗಮನ ನೀಡಬೇಕು. ಪ್ರೇಕ್ಷಕರು ಕೂಡ ಪಾತ್ರವನ್ನು ಪಾತ್ರವಾಗಿಯೇ ನೋಡುತ್ತಾರೆ. ಹೀಗಾಗಿ ಯಾವುದೋ ನೆಗೆಟಿವ್ ಕಮೆಂಟ್‌ಗಳಿಗೆ ತಲೆಕೊಡಬೇಕಿಲ್ಲ. ನಿಮ್ಮ ವೈಯಕ್ತಿಕ ಬದುಕು, ವ್ಯಕ್ತಿತ್ವ ತೋರಿಸಿಕೊಳ್ಳಲು ಬೇಕಾದಷ್ಟು ವೇದಿಕೆಗಳಿವೆ. ಸೋಷಿಯಲ್ ಮೀಡಿಯಾ ಅಂತೂ ಇದ್ದೇ ಇದೆ. ಬೇರೆ ಬೇರೆ ಶೇಡ್‌ಗಳ ಪಾತ್ರಗಳನ್ನು ಮಾಡುವುದು ಕಲಾವಿದರಿಗೆ ಅನಿವಾರ್ಯ. ಹೀಗಾಗಿ ಪಾಸಿಟಿವ್ ಆಗಿರಿ’ ಎನ್ನುತ್ತಾರೆ.

ಧಾರಾವಾಹಿಗಳ ಮೇಕಿಂಗ್‌ಗೆ ಭಾಷೆಯ ಹಂಗಿಲ್ಲ | ‘ಜೊತೆಜೊತೆಯಲಿ’ ಧಾರಾವಾಹಿ ತೆಲುಗಿನಲ್ಲಿ ಪ್ರಸಾರವಾಗುತ್ತಿದ್ದು, ಅದರಲ್ಲಿ ರಾಜನಂದಿನಿ ಪಾತ್ರ ಮಾಡುತ್ತಿದ್ದಾರೆ ಮಾನಸ. ಒಂದೇ ಧಾರಾವಾಹಿ, ಒಂದೇ ಕಥೆ ಆದರೆ ವಿಭಿನ್ನ ಪಾತ್ರ ಮಾಡುತ್ತಿರುವುದು ವಿಶೇಷ. ತೆಲುಗು ಸೀರಿಯಲ್ ಇಂಡಸ್ಟ್ರೀ ಹೇಗಿದೆ? ಎಂದು ಕೇಳಿದರೆ ‘ಭಾಷೆ ಯಾವುದೇ ಆದರೂ ತಾಂತ್ರಿಕವಾಗಿ ಅಷ್ಟೇನೂ ಬೇರೆ ಅನಿಸುವುದಿಲ್ಲ. ಧಾರಾವಾಹಿಗಳ ಮೇಕಿಂಗ್ ಯಾವುದೇ ಭಾಷೆಗೆ ಹೋದರೂ ಹೆಚ್ಚುಕಮ್ಮಿ ಒಂದೇ. ವಿಶೇಷ ಸಂದರ್ಭ, ಲೋಕೇಷನ್‌ಗಳಿಗೆ ತಕ್ಕ ಹಾಗೆ ಬದಲಾಗುವುದು ಎನ್ನುವುದರ ಹೊರತಾಗಿ ಮೇಕಿಂಗ್‌ನಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನತೆ ಗುರುತಿಸುವುದು ಕಷ್ಟ. ಆದರೆ ಅದೇ ಸಿನಿಮಾ, ವೆಬ್‌ಸೀರೀಸ್, ಜಾಹೀರಾತು ಅಂದಾಗ ಖಂಡಿತ ವಿಭಿನ್ನ ಅನುಭವ ಸಿಗುತ್ತದೆ’ ಎನ್ನುತ್ತಾರೆ.

ಪಾತ್ರಕ್ಕೆ ಪ್ರಾಮುಖ್ಯತೆ | ‘ಜೊತೆಜೊತೆಯಲಿ’ ಧಾರಾವಾಹಿ ನಂತರ ನಟನೆಗೆ ಪ್ರಾಧಾನ್ಯವಿರುವ ಒಳ್ಳೊಳ್ಳೆಯ ಅವಕಾಶಗಳು ಮಾನಸ ಅವರನ್ನು ಅರಸಿ ಬರುತ್ತಿವೆಯಂತೆ. ‘ಸದ್ಯಕ್ಕೆ ಧಾರಾವಾಹಿಗಳಲ್ಲಿ ಮಾಡುತ್ತಿದ್ದೇನೆ. ಉತ್ತಮ ಕಥೆಯುಳ್ಳ ಸಿನಿಮಾ ಬಂದರೆ ಮಾಡುತ್ತೇನೆ. ಮೊದಲಿನಂತೆ ಈಗ ಸಿನಿಮಾ, ಧಾರಾವಾಹಿ ಅಂತಲ್ಲ. ಎಲ್ಲಿ ಒಳ್ಳೆ ಕಂಟೆಂಟ್ ಇದೆಯೇ ಎಂದು ಜನ ನೋಡುತ್ತಾರೆ. ಹೀಗಾಗಿ ನಾನು ಕೂಡ ನಿಗದಿತ ಪರಿಧಿಯೊಳಗೆ ಗುರುತಿಸಿಕೊಳ್ಳಲು ಬಯಸುವುದಿಲ್ಲ. ಹಿರಿತೆರೆ, ಕಿರುತೆರೆ, ಓಟಿಟಿಯಾದರೂ ನನ್ನ ಪಾತ್ರ ಚೆನ್ನಾಗಿದೆ, ಪಾತ್ರಕ್ಕೆ ಪ್ರಾಮುಖ್ಯ ಸಿಗುತ್ತದೆ, ಕಥೆ ಇಷ್ಟವಾಯ್ತು ಎಂದರೆ ಖಂಡಿತ ಯಾವುದೇ ಪ್ಲಾಟ್‌ಫಾರ್ಮ್ ಆದರೂ ನಟನೆ ಮಾಡುತ್ತೇನೆ’ ಎನ್ನುತ್ತಾರೆ. ‘ಥಕಧಿಮಿತ’ ಶೋ ಮಾನಸ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಚಿಕ್ಕವಳಿಂದಲೂ ಅವರಿಗೆ ನೃತ್ಯದ ಬಗ್ಗೆ ಒಲವು ಇತ್ತಂತೆ. ಹೀಗಾಗಿ ಈ ಶೋ ಅವರನ್ನು ಅವರು ನೃತ್ಯದಲ್ಲಿ ಕಂಡುಕೊಳ್ಳಲು ಪೂರಕವಾಯ್ತಂತೆ.

ಸಾಕುಪ್ರಾಣಿಗಳಿಷ್ಟ | ಮಾನಸ ಅವರಿಗೆ ಸಾಕು ಪ್ರಾಣಿಗಳು ಅಂದರೆ ಬಲು ಇಷ್ಟ. ನಾಯಿ, ಬೆಕ್ಕುಗಳು ಇವರ ಮನೆಯಲ್ಲಿ ಇವೆ. ಅವುಗಳಿಲ್ಲದ ದಿನಗಳೇ ಇಲ್ಲವಂತೆ. ಅವುಗಳ ಜತೆ ಹೆಚ್ಚು ಸಮಯ ಕಳೆಯುತ್ತಾರಂತೆ. ‘ಯಾವುದೇ ಪ್ರಾಣಿಯಾದರೂ ಅವುಗಳಲ್ಲೊಂದು ಪಾಸಿಟಿವಿಟಿ ಎದ್ದು ಕಾಣುತ್ತದೆ’ ಎನ್ನುತ್ತಾರೆ.

ಅಭಿಮಾನ ಬಳಗಕ್ಕೆ ಅಭಿನಂದನೆ | ಧಾರಾವಾಹಿಗಳಲ್ಲಿ ಕೆಲವು ಪಾತ್ರಗಳು ಎಷ್ಟೆಲ್ಲಾ ಹಿಟ್ ಆಗುತ್ತವೆ ಅಂದರೆ ಪಾತ್ರಗಳ ಹಾವಭಾವ ಅನುಸರಿಸುವ, ಅವರ ಡ್ರೆಸ್‌ಸೆನ್ಸ್, ಮೇಕಪ್ ಫಾಲೋ ಮಾಡುವವರು ಇರುತ್ತಾರೆ. ಎದುರಿಗೆ ಸಿಕ್ಕಿದಾಗೆಲ್ಲಾ ಅಭಿಮಾನದಿಂದ ಮಾತನಾಡಿಸುತ್ತಾರೆ. ಮೀರಾ ಪಾತ್ರವೂ ಸ್ಟೈಲಿಶ್‌ ಆಗಿಯೇ ಗುರುತಿಸಿಕೊಂಡಿದ್ದು. ಅವರ ಮೇಕಪ್, ಡ್ರೆಸ್‌ಗಳಿಗೆ ಮರುಳಾದವರು ಹಲವರು. ಅವರಂಥದ್ದೇ ಡ್ರೆಸ್ ಖರೀದಿಗಾಗಿ ಹಾತೊರೆದವರಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಇದ್ದಾರೆ. ಸೋಷಿಯಲ್ ಮೀಡಿಯಾ ಫ್ಯಾನ್ಸ್ ಪೇಜ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ‘ಇತ್ತೀಚೆಗೆ ಎಲ್ಲ ಧಾರಾವಾಹಿ ಹಾಗೂ ಪಾತ್ರಗಳಿಗೆ ಫ್ಯಾನ್ ಪೇಜ್‌ಗಳು ಹೆಚ್ಚುತ್ತಿವೆ. ಅವರು ನಮ್ಮ ಪಾತ್ರ ಹಾಗೂ ನಮ್ಮ ವೈಯಕ್ತಿಕ ಬದುಕಿನ ಅಪ್‌ಡೇಟ್‌ಗಳನ್ನು ಚೂರು ಬಿಡದೆ ಶೇರ್ ಮಾಡುತ್ತಾರೆ. ಹುಟ್ಟುಹಬ್ಬವನ್ನಂತೂ ವಿಶೇಷವಾಗಿ ಆಚರಿಸುತ್ತಾರೆ. ಅವರ ಶ್ರದ್ಧೆ ಮೆಚ್ಚಬೇಕು’ ಎನ್ನುವ ಮಾನಸ ‘ನಮ್ಮ ಬಗ್ಗೆ ಪ್ರತಿಯೊಂದನ್ನು ಅಪ್‌ಡೇಟ್ ಮಾಡೋದು ನಿಜಕ್ಕೂ ಖುಷಿ ಆಗುತ್ತದೆ’ ಎನ್ನುತ್ತಾರೆ.

ಜೀವನಪೂರ್ತಿ ಮರೆಯದ ಸ್ನೇಹ | ಮಾನಸ ಹಾಗೂ ಮೀರಾ ವ್ಯಕ್ತಿತ್ವಕ್ಕೆ ಕೊಂಚ ಸಾಮ್ಯತೆ ಇದೆ. ತೆರೆಯ ಮೇಲೂ ಅವರು ಆತ್ಮವಿಶ್ವಾಸದ ಪ್ರತೀಕದಂತಿದ್ದರು. ನಿಜ ಜೀವನದಲ್ಲಿ ಕೂಡ ಆತ್ಮವಿಶ್ವಾಸವೇ ಇವರ ಶಕ್ತಿ. ಆದರೆ ಕೆಲವೊಮ್ಮೆ ಯಾವುದೇ ಬಗೆಯ ವಿಷಯಕ್ಕೆ ಭಾವುಕರಾಗುವುದು ಇವರ ವೀಕ್ನೆಸ್. ವಿನಾಕಾರಣ ಸಿಟ್ಟಾಗುವುದಿಲ್ಲ. ಆದರೆ ಯಾವುದೇ ವ್ಯಕ್ತಿ, ಯಾವುದೇ ವೃತ್ತಿಗೆ ಗೌರವ ನೀಡದಿದ್ದರೆ ಸಿಟ್ಟು ಬರುತ್ತದೆಯಂತೆ. ಬಾಲ್ಯದಲ್ಲಿ ತುಂಬಾ ಮಾತನಾಡುತ್ತಿದ್ದವರು ಒಂದು ವಯಸ್ಸು ದಾಟಿದ ಮೇಲೆ ವಿಪರೀತ ಗಂಭೀರ ಸ್ವಭಾವ ಅವರನ್ನು ಆವರಿಸಿತಂತೆ. ಅಂದರೆ ಮಾತು ಕಡಿಮೆ ಎನ್ನುವ ಮಾನಸ ಆಗಾಗ ಮೂಡಿ ಎಂಬುದು ಸತ್ಯ. ಅವರಿಗೆ ವಿಪರೀತ ಎನ್ನುವಷ್ಟು ಸ್ನೇಹಿತರಿಲ್ಲ. ಸ್ನೇಹಿತರ ಬಳಗ ಚಿಕ್ಕದು. ಯಾರನ್ನೂ ವಿನಾಕಾರಣ ತೀರ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಆದರೆ ಯಾರನ್ನಾದರೂ ಹಚ್ಚಿಕೊಂಡರೆ ಜೀವನಪೂರ್ತಿ ಅವರನ್ನು ಮರೆಯುವುದಿಲ್ಲವಂತೆ. ಆ ಮಟ್ಟಿಗೆ ಪ್ರೀತಿ, ವಿಶ್ವಾಸವನ್ನು ಇನ್ನೊಬ್ಬರ ಮೇಲೆ ತೋರಿಸುತ್ತಾರೆ ಮಾನಸ.

Previous articleJukeboxನಲ್ಲಿ ‘ಅಮೃತಧಾರೆ’ ಸೀರಿಯಲ್‌ ಸಾಂಗ್ಸ್‌ | ಕನ್ನಡ ಕಿರುತೆರೆಯ ಮೊದಲ ಪ್ರಯೋಗ
Next articleOTTಯಲ್ಲಿ ಈ ವಾರ | ಚೂನಾ, ದಯಾ, ಫಟಾಫಟಿ, ಧೂಮಂ

LEAVE A REPLY

Connect with

Please enter your comment!
Please enter your name here