ಕ್ಯಾಮೆರಾ ಕಣ್ಣು ಮುಂದೆ ಮುಂದೆ ಬಂದ ಹಾಗೆ ಹಿಂದೆ ಹಿಂದೆ ಸರಿಯುವಂಥ ಸ್ವಭಾವ ಅವರದು. ಅದರಲ್ಲೂ ಫೋಟೊಗೆ ಫೋಸ್ ಅನ್ನುವುದಂತೂ ಅಸಾಧ್ಯದ ಮಾತು. ಗ್ರೂಫ್ ಫೋಟೊ ಅಂದರೆ ಹಿಂದಿನ ಸಾಲಲ್ಲಿ ಅಡಗಿ ನಿಲ್ಲುತ್ತಿದ್ದವರಿಗೆ ಇದೀಗ ಅದೇ ಕ್ಯಾಮೆರಾ ಎದುರು ನಿಲ್ಲುವುದೇ ಬದುಕು. ಹೌದು, ಕ್ಯಾಮೆರಾ ಎದುರು ನಿಲ್ಲಲು ಹಿಂಜರಿಯುತ್ತಿದ್ದ ‘ಮಂಗಳಗೌರಿ ಮದುವೆ’ಯ ‘ಸ್ನೇಹ’ ಯಶಸ್ವಿನಿ ಕೆ ಸ್ವಾಮಿ ಅವರು ನಿಧಾನವಾಗಿ ಕ್ಯಾಮೆರಾಕ್ಕೆ ಹತ್ತಿರವಾಗುತ್ತಾ ಇದೀಗ ಅವರು ತೆರೆಯ ಮೇಲೆ ಮಿಂಚುತ್ತಿದ್ದಾರೆ. ಈ ಮೂಲಕ ಮನೆ ಮಾತಾಗಿದ್ದಾರೆ.

ಹಲವಾರು ಕನ್ನಡ ಧಾರಾವಾಹಿ, ತೆಲುಗು ಧಾರಾವಾಹಿ, ಸಿನಿಮಾ, ಮಾಡೆಲಿಂಗ್, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಯಶಸ್ವಿನಿ ಪ್ರಸ್ತುತ ‘ಭರ್ಜರಿ ಬ್ಯಾಚುಲರ್’ ಮೂಲಕ ವಾರಾಂತ್ಯ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕಿರುತೆರೆಗೆ ಬಂದಿರುವ ಅವರ ಬಣ್ಣದ ಲೋಕದ ಜರ್ನಿಯೇ ಕುತೂಹಲಕಾರಿ. ನಟಿಯಾಗುತ್ತೇನೆ ಎಂದು ಅವರು ಕನಸಿನಲ್ಲೂ ಎಣಿಸಿದವರಲ್ಲ. ಬಾಲ್ಯದಿಂದಲೂ ಓದಿನಲ್ಲಿ ಮುಂದು ಎನ್ನುವ ಇವರು ಸದಾ ಫಸ್ಟ್ ರ‍್ಯಾಂಕ್ ಹಿಂದೆಯೇ ಓಡುತ್ತಿದ್ದವರು. ಆದರೆ ಒಮ್ಮೆ ನೃತ್ಯ ಮಾಡುವಾಗ ಅವರನ್ನು ನೋಡಿದವರು ‘ಯಾಕೆ ನಟಿಸಬಾರದು? ಉತ್ತಮ ಹಾವಭಾವ ಇದೆ’ ಎಂದಾಗ ಅವರ ತಾಯಿ ಸಹ ಸಮ್ಮತಿಸಿದರಂತೆ. ಹಾಗೆ ಎಸ್‌ಎಸ್‌ಎಲ್‌ಸಿ ಮುಗಿದ ಮೇಲೆ ಶುರುವಾಗಿದ್ದು ಕಿರುತೆರೆ ಜರ್ನಿ. ಅವರನ್ನು ಮೊದಲು ಬಣ್ಣದ ಜಗತ್ತಿಗೆ ಪರಿಚಯಿಸಿದ್ದು ‘ಅನುರೂಪ’ ಧಾರಾವಾಹಿ.

ನಂತರ ಸಾಲು ಸಾಲು ಧಾರಾವಾಹಿಗಳು ಅವರನ್ನು ಅರಸಿ ಬಂದವು. ‘ರಾಜಾರಾಣಿ’, ‘ಅವಳು’, ‘ಮಂಗಳಗೌರಿ ಮದುವೆ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಅವಳು’ ಧಾರಾವಾಹಿಯ ಶ್ವೇತಾ ಪಾತ್ರ ಇವರಿಗೆ ಹೆಸರು ತಂದುಕೊಟ್ಟಿದೆ. ಈ ಬಗ್ಗೆ ಅವರೇ ಹೇಳುವಂತೆ ‘ಗರ್ಭಿಣಿ ಪಾತ್ರ ಮಾಡಬೇಕಿತ್ತು. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ಅದನ್ನೆಲ್ಲ ನಾನು ನಿಭಾಯಿಸುತ್ತೇನಾ, ನನ್ನಿಂದ ಸಾಧ್ಯವಾ ಎನ್ನುವ ಅಳುಕು ಇತ್ತು. ಆದರೆ ಆ ಪಾತ್ರವನ್ನು ಸವಾಲಾಗಿ ತೆಗೆದುಕೊಂಡೆ. ಅದರಿಂದ ಕ್ಯಾಮೆರಾ ಎದುರಿಸುವುದು, ಅಭಿನಯ ಎಲ್ಲವನ್ನೂ ಕಲಿತೆ. ಅದೇ ರೀತಿ ಮಂಗಳಗೌರಿ ಮದುವೆ ಧಾರಾವಾಹಿ ಹೆಸರು ತಂದುಕೊಟ್ಟಿತು’ ಎನ್ನುವ ಅವರು ‘ಈ ಧಾರಾವಾಹಿಯಲ್ಲಿ ನಾನು ನಟಿಸಲಿಲ್ಲ. ಬದಲಿಗೆ ಅನುಭವಿಸಿದೆ. ಏಕೆಂದರೆ ನಾನು ಇರೋದೆ ಹೀಗೆ!’ ಎನ್ನುತ್ತಾರೆ.

ಹಠ, ಪ್ರೀತಿ, ಸಾಧಿಸುವ ಛಲ ಅವೆಲ್ಲವೂ ಮಂಗಳಗೌರಿಯ ಸ್ನೇಹ ಪಾತ್ರದಲ್ಲಷ್ಟೇ ಅಲ್ಲ ಯಶಸ್ವಿನಿ ಅವರ ಗುಣವೂ ಕೂಡ. ಹೀಗಾಗಿ ಒಂದಷ್ಟು ಸುಲಭವಾದರೂ ಆ ಪಾತ್ರ ನೆಗೆಟಿವ್‌ಗೆ ಟರ್ನ್ ಆದಾಗ ಮಾತ್ರ ಒಂದಷ್ಟು ಕಷ್ಟಪಟ್ಟರಂತೆ. ನೆಗೆಟಿವ್ ಕಮೆಂಟ್‌ಗಳು ಹೆಚ್ಚೆಚ್ಚು ಬರುತ್ತಿದ್ದವಂತೆ. ಆದರೆ ಜನ ಇವರನ್ನು ಹೆಚ್ಚು ಗುರುತಿಸುತ್ತಿದ್ದರಂತೆ. ಅಭಿಮಾನ, ಕೋಪತಾಪಗಳನ್ನು ತೋರುತ್ತಿದ್ದರಂತೆ. ಆದರೆ ‘ಮನಸ್ಫೂರ್ವಕವಾಗಿ ಮಾಡಿದ ಪಾತ್ರವದು. ಜೀವನಪೂರ್ತಿ ನೆನಪಿನಲ್ಲಿ ಇರುವಂಥದ್ದು’ ಎನ್ನುತ್ತಾರೆ ಯಶಸ್ವಿನಿ.

ತೆಲುಗು ಪ್ರೇಕ್ಷಕರನ್ನು ಕೂಡ ಸೆಳೆದಿರುವ ಇವರು ‘ತೆಲುಗು ಧಾರಾವಾಹಿ ಕೂಡ ವಿಭಿನ್ನ ಅನುಭವ ನೀಡಿದೆ’ ಎನ್ನುತ್ತಾರೆ. ‘ತೆಲುಗು ಭಾಷೆ ಬಗ್ಗೆ ಕೊಂಚ ಗೊತ್ತಿದ್ದುದರಿಂದ ಯಾವುದೇ ತೊಡಕಾಗಲಿಲ್ಲ. ಕನ್ನಡ ಹಾಗೂ ತೆಲುಗು ಎರಡೂ ಧಾರಾವಾಹಿಗಳನ್ನು ಮಾಡುತ್ತಿರುವಾಗಲೇ ಕಾಲೇಜಿಗೂ ಹೋಗುತ್ತಿದ್ದೆ. ಇವೆಲ್ಲವನ್ನು ಮ್ಯಾನೇಜ್ ಮಾಡಲು ಕಷ್ಟವಾಗುತ್ತಿತ್ತು. ನಂತರ ಲಾಕ್‌ಡೌನ್ ಆಯ್ತು’ ಎನ್ನುವ ಅವರು ‘ಅಮ್ಮನ ಸಪೋರ್ಟ್ ಇಲ್ಲದೆ ನಾನು ನಟನೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ’ ಎನ್ನುತ್ತಾರೆ.

ನೆಗೆಟಿವ್ ಕಮೆಂಟ್ ಕಷ್ಟ
ಕಿರುತೆರೆಯಲ್ಲಿ ಯಾವುದೇ ಧಾರಾವಾಹಿಯಾದರೂ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುವ ನಟನಟಿಯರು ಸದಾ ಪ್ರೇಕ್ಷಕರ ಕೋಪಕ್ಕೆ ಗುರಿಯಾಗುತ್ತಾರೆ. ಪ್ರೇಕ್ಷಕರ ಮನದಲ್ಲಿ ಪಾತ್ರ ಯಾವ ಮಟ್ಟಿಗೆ ಇಳಿದಿರುತ್ತದೆ ಎಂದರೆ ರಾಕ್ಷಸ ಪ್ರವೃತ್ತಿಯನ್ನು ತೋರಿಸುವ ಪಾತ್ರದ ಹೊರಗಿನ ನಟನಟಿಯರನ್ನು ನಿಜವಾಗಲೂ ಅಂಥದ್ದೇ ಗುಣ ಇರುವವರು ಎನ್ನುವಷ್ಟು ದ್ವೇಷಿಸುವವರು ಇದ್ದಾರೆ. ಅದರ ಪರಿಣಾಮ ನೆಗೆಟಿವ್ ಕಮೆಂಟ್‌ಗಳು. ಸೋಷಿಯಲ್ ಮೀಡಿಯಾಗಳಲ್ಲಿ ಕೀಳು ಅಭಿರುಚಿಯ ಕಮೆಂಟ್, ಬೈಗುಳ ಎದುರಿಸಬೇಕಾಗುತ್ತದೆ. ಹಲವರು ಇದೇ ವಿಷಯಕ್ಕೆ ಖಿನ್ನತೆಗೆ ಒಳಗಾಗಿದ್ದೂ ಇದೆ. ಯಶಸ್ವಿನಿ ಕೂಡ ‘ಮಂಗಳಗೌರಿ ಮದುವೆ’ಯ ಸ್ನೇಹ ಪಾತ್ರಕ್ಕಾಗಿ ನೆಗೆಟಿವ್ ಕಮೆಂಟ್‌ಗಳಿಂದಾಗಿ ಬೇಸರಗೊಂಡಿದ್ದರಂತೆ. ಅದನ್ನು ಸಹಜವಾಗಿ ತೆಗೆದುಕೊಳ್ಳಲು ಕಷ್ಟವಾಗುತ್ತಿತ್ತಂತೆ. ಹಾಗೆಲ್ಲ ಮಾಡಬಾರದು ಎಂದೆಲ್ಲ ಅಂದುಕೊಳ್ಳುತ್ತಿದ್ದರಂತೆ. ಯೋಚನೆಗೆ ಒಳಗಾಗುತ್ತಿದ್ದರಂತೆ. ‘ಪಾತ್ರ ಅಂತ ಬಂದಾಗ ನೆಗೆಟಿವ್ ಹಾಗೂ ಪಾಸಿಟಿವ್ ಎರಡು ಬಗೆಯ ಕಮೆಂಟ್ ಅನ್ನು ಸಮನಾಗಿ ತಗೋಬೇಕು. ಆದರೆ ಅದು ನನ್ನಿಂದ ಕಷ್ಟ’ ಎನ್ನುತ್ತಾರೆ.

ಜನ ಎದುರಾದಾಗೆಲ್ಲ ಇವರನ್ನು ಪಾತ್ರದ ಮೂಲಕವೇ ಗುರುತಿಸುತ್ತಾರೆ. ಆದರೆ ಸ್ನೇಹ ಪಾತ್ರದ ಬಗ್ಗೆ ಪಾಸಿಟಿವ್ ಅನುಭವ ಕೂಡ ಇವರಿಗೆ ಆಗಿದೆ. ಇವರು ತಮ್ಮ ಚಿಕ್ಕಮ್ಮನ ಮನೆಗೆ ಅಂತ ಆನೇಕಲ್‌ಗೆ ಹೋಗಿದ್ದರಂತೆ. ಆಗ ಇವರನ್ನು ನೋಡಿದವರು ಬಾಗೀನ ಕೊಟ್ಟು ಹರಸಿದರಂತೆ. ಕಾರಣ ಹಿಂದಿನ ದಿನ ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಬಳೆಶಾಸ್ತ್ರದ ಎಪಿಸೋಡ್ ಪ್ರಸಾರವಾಗಿತ್ತು. ಅದನ್ನು ನೋಡಿಕೊಂಡವರು ನಿಜವಾಗಲೂ ಯಶಸ್ವಿನಿ ಮದುವೆಯಾಗುತ್ತಿದ್ದಾರೆ ಎನ್ನುವ ಮಟ್ಟಿಗೆ ಪಾತ್ರವನ್ನು ಜೀವಿಸಿದ್ದರು. ಕಲಾವಿದರು ಮಾತ್ರವಲ್ಲ ಪ್ರೇಕ್ಷಕರು ಕೂಡ ಆಗಾಗ ತಮ್ಮಿಷ್ಟದ ಧಾರಾವಾಹಿಗಳ ಪಾತ್ರವನ್ನು ಜೀವಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆ.

ಸಿನಿ ಜರ್ನಿ
‘ಪಾರ್ಚ್ಯೂನರ್’ ಇವರ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಮೊದಲು ಸಿನಿ ಜರ್ನಿಯ ಅನುಭವ ಸುಂದರವಾಗಿತ್ತು ಎನ್ನುತ್ತಾರೆ. ಸದ್ಯ ‘ತರಂಗಾಂತರಂಗ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅದಿನ್ನೂ ಚಿತ್ರೀಕರಣದ ಹಂತದಲ್ಲಿದೆ. ವೆಬ್‌ಸಿರೀಸ್‌ನಲ್ಲಿ ಕೂಡ ಬರಹಗಾರ್ತಿಯ ಪಾತ್ರವೊಂದರ ಮೂಲಕ ಗಮನ ಸೆಳೆದಿರುವ ಖುಷಿ ಇದೆ ಎನ್ನುತ್ತಾರೆ.

ರಿಯಾಲಿಟಿ ಶೋ ವಿಭಿನ್ನ ಅನುಭವ
‘ಭರ್ಜರಿ ಬ್ಯಾಚುಲರ್’ ಶೋ ಮೂಲಕ ಗಮನ ಸೆಳೆಯುತ್ತಿರುವ ಯಶಸ್ವಿನಿ ಅವರು ‘ಇದರಲ್ಲಿ ನಾನು ನಾನಾಗಿಯೇ ಇರಬೇಕು, ಇದೊಂದು ವಿಭಿನ್ನ ಶೋ. ಸ್ಟೇಜ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಕೂಡ ವಿಭಿನ್ನ ಅನುಭವ ಎನ್ನುವ ಅವರು ಈ ಶೋಗೆ ಜಡ್ಜ್ ಆಗಿರುವ ರವಿಚಂದ್ರನ್ ಅವರು ಹೇಳುವ ಪ್ರೀತಿಯ ಪಾಠ ಆಪ್ತವಾಗಿರುತ್ತದೆ’ ಎನ್ನುತ್ತಾರೆ. ಅದೇ ರೀತಿ ‘ಬಿಗ್‌ಬಾಸ್’ ಮಿನಿ ಸೀಸನ್‌ನಲ್ಲಿ ಕೂಡ ಒಂದು ವಾರ ಪ್ರೇಕ್ಷಕರನ್ನು ರಂಜಿಸಿದವರು ಇವರು. ಇದೊಂದು ಬೇರೆಯದೇ ಆದ ಜರ್ನಿ ಎನ್ನುವ ಅವರು ‘ಬಿಗ್‌ಬಾಸ್ ಚಾಲೆಂಜಿಂಗ್ ಆಗಿತ್ತು. ಅದು ನನಗೆ ಅಲ್ಲವೇ ಅಲ್ಲ ಅನಿಸಿತ್ತು. ಏಕೆಂದರೆ ಕ್ರೀಡೆ ಬಗ್ಗೆ ಆಸಕ್ತಿಯೇ ಇರಲಿಲ್ಲ. ಜನರೊಂದಿಗೆ ಬೆರೆತು ಗೊತ್ತಿರಲಿಲ್ಲ. ಆದರೂ ಅಲ್ಲಿ ಹೋಗಿ ಬಂದ ಅನುಭವ, ಬೇರೆ ಬೇರೆ ವ್ಯಕ್ತಿತ್ವದವರೊಂದಿಗೆ ಬೆರೆತಿದ್ದು ಮರೆಯಲಾಗದ ಅನುಭವ’ ಎನ್ನುತ್ತಾರೆ.

ಉಪ್ಪಿಟ್ಟು ಇಷ್ಟ
ಸ್ನೇಹಿತರೊಂದಿಗೆ ಮೋಜುಮಸ್ತಿ ಮಾಡಲು ಇವರಿಗಿಷ್ಟ. ಪ್ರವಾಸ ಮಾಡುವುದು ಇವರಿಗೆ ಅಭ್ಯಾಸ. ಇವರ ಶಕ್ತಿ ಹಾಗೂ ದೌರ್ಬಲ್ಯ ಎರಡೂ ಕೂಡ ಅಪ್ಪಅಮ್ಮ. ಯಾರಾದರೂ ಸುಳ್ಳು ಹೇಳಿದರೆ ಅಥವಾ ವಿಪರೀತ ಕಟ್ಟುನಿಟ್ಟು ಮಾಡಿದರೆ ಸಿಟ್ಟಾಗುತ್ತಾರಂತೆ. ಅದ್ಭುತವಾಗಿ ಉಪ್ಪಿಟ್ಟು ಮಾಡುವ ಕಲೆ ಇವರಿಗೆ ಕರಗತ. ಮನೆಯಲ್ಲಿ ಉಪ್ಪಿಟ್ಟು ಅಂದಾಗ ಇವರೇ ಮಾಡಬೇಕು ಎನ್ನುವಷ್ಟು ಇವರು ಮಾಡುವ ಉಪ್ಪಿಟ್ಟಿಗೆ ಡಿಮ್ಯಾಂಡ್ ಇದೆಯಂತೆ.

ಕಾಡುವಂಥ ಹುಡುಗ ಬೇಕು!
ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾ, ವೆಬ್‌ಸೀರೀಸ್ ಹೀಗೆ ನಾನಾ ಪ್ರಕಾರಗಳಲ್ಲಿ ಗುರುತಿಸಿಕೊಂಡಿದ್ದರೂ ನಟನೆಯ ಹೊರತಾಗಿ ಅವರಿಗೆ ಓದನ್ನು ಮುಂದುವರಿಸಲು ಹಾಗೂ ನಿಗದಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಇನ್ನೂ ಜೀವಂತವಾಗಿದೆ. ಮದುವೆ ವಿಷಯಕ್ಕೆ ಬಂದರೆ ಮಾತ್ರ ಮಾರುದೂರ ಓಡುತ್ತಾರೆ. ‘ಇನ್ನೂ ನಾಲ್ಕೈದು ವರ್ಷ ಮದುವೆ ಮಾತೇ ಇಲ್ಲ’ ಎನ್ನುತ್ತಾರೆ. ಆದರೆ ಅವರ ಹುಡುಗನ ಬಗ್ಗೆ ಮಾತ್ರ ಸಿಕ್ಕಾಪಟ್ಟೆ ಕನಸು ಇದೆಯಂತೆ. ಇವರಿಗೆ ಕಾಡುವಂಥ ಹುಡುಗ ಬೇಕಂತೆ. ಅವರ ಹಿಂದಿಂದೆ ಬಂದು ಕಾಡಿಬೇಡಿ ಅವರ ಪ್ರೀತಿ ಗಳಿಸಬೇಕಂತೆ! ‘ಸಿಕ್ಕಾಪಟ್ಟೆ ರಾ ಎನಿಸುವಂಥ ವ್ಯಕ್ತಿತ್ವ ಹೊಂದಿರಬೇಕು. ಸದಾ ಪ್ರೀತಿಗಾಗಿ ಕಾಡಬೇಕು. ಎಲ್ಲರೂ ಅವನ ಹಿಂದೆ ಬಂದರೂ ಅವನು ಮಾತ್ರ ನನ್ನ ಪಕ್ಕ ಸೈಲೆಂಟ್ ಆಗಿ ಬಂದು ಕೂತಿರಬೇಕು. ಆ ಮಟ್ಟಿಗೆ ನನ್ನನ್ನು ಇಷ್ಟಪಡುವ, ನನಗಾಗಿ ಬದುಕುವ ಹುಡುಗ ಬೇಕು’ ಎಂದು ತಮ್ಮ ಕನಸಿನ ಲೋಕದಲ್ಲಿ ತೇಲುತ್ತಾರೆ ಯಶಸ್ವಿನಿ.

ಅವರ ಸ್ವಭಾವಕ್ಕೆ ಮ್ಯಾಚ್ ಆಗುವ ಹುಡುಗ ಬೇಕಂತೆ. ಅಂದಹಾಗೆ ಅವರಿಗೆ ತಾಳ್ಮೆ ಸ್ವಲ್ಪ ಕಡಿಮೆ, ಕೋಪ ಬರತ್ತೆ. ಹಠದ ಸ್ವಭಾವವೂ ಇದೆ. ‘ಹಠ ಅಂದರೆ ಸಾಧಿಸುವ ಛಲ. ಏನನ್ನಾದರೂ ಮಾಡಬೇಕು ಅನಿಸಿದರೆ ಮಾಡುತ್ತೇನೆ. ಮಾಡದೆ ಹಾಗೆ ಉಳಿದು ಬಿಟ್ಟೆ ಎಂಬುದು ನನ್ನ ಮನಸ್ಸಿನಲ್ಲಿ ಉಳಿಯಬಾರದು ಎನ್ನುವ ಸಕಾರಣ ಕೂಡ ಇದರ ಹಿಂದಿದೆ’ ಎನ್ನುವ ಅವರಿಗೆ ಭಾವನೆಗಳನ್ನು ಅಡಗಿಸಿಕೊಳ್ಳುವುದು ಕಷ್ಟವಂತೆ. ಅವೆಲ್ಲ ಮಾತುಗಳಾಗಿ ತುಟಿಯಿಂದ ಹೊರ ಬರದಿದ್ದರೂ ಅವೆಲ್ಲವೂ ಮುಖದ ಹಾವಭಾವದಲ್ಲಿ ವ್ಯಕ್ತವಾಗಿ ಬಿಡುತ್ತವೆಯಂತೆ. ಕೋಪವನ್ನಂತೂ ತಡೆದುಕೊಳ್ಳುವುದು ವಿಪರೀತ ಕಷ್ಟ ಎನ್ನುವ ಅವರು ‘ಕೋಪ ಬಂದಾಗ ಕಿರುಚಾಡಿ ಅಥವಾ ಅತ್ತು ಹೊರಹಾಕುತ್ತೇನೆ’ ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here