ಸಮರ್ಥ್ ನಾಗರಾಜ್ ನಿರ್ದೇಶನದ ‘ಋತು’ ಕಿರುಚಿತ್ರ ಬಿಡುಗಡೆಯಾಗಿದೆ. ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ 22 ನಿಮಿಷಗಳ ಕಿರುಚಿತ್ರವಿದು. ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನಿಮಾ’ ವಿದ್ಯಾರ್ಥಿ ಸಮರ್ಥ್ ನಾಗರಾಜ್ ಅವರ ಚೊಚ್ಚಲ ಪ್ರಯತ್ನ.
‘ನಾವು ಒಂದು ಕಡೆ ಚಂದ್ರಯಾನಕ್ಕೆ ಸಜ್ಜಾಗಿದ್ದೇವೆ. ಮತ್ತೊಂದು ಕಡೆ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೆಚ್ಚಾಗಿ ಹಳ್ಳಿಗಳಲ್ಲಿ ಇದರ ಬಗ್ಗೆ ಅರಿವು ಕಡಿಮೆ. ಇಂದು ಹಳ್ಳಿಗಳಲ್ಲಿ ಮೂರು ವೈನ್ ಸ್ಟೋರ್‌ಗಳಿರುತ್ತದೆ. ಅಜ್ಜ, ಅಜ್ಜಿಯರ ಕೈಗಳಲ್ಲೂ ಮೊಬೈಲ್ ಇರುತ್ತದೆ. ಆದರೆ ಸರಿಯಾದ ಶೌಚಾಲಯ ಇರುವುದಿಲ್ಲ. ನಾವು ಇನ್ನೂ ಸಾಕಷ್ಟು ಬದಲಾಗಬೇಕಿದೆ’ ಎಂದು ‘ಋತು’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು ಹಿರಿಯ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಅವರ ‘ಟೆಂಟ್ ಸಿನಿಮಾ’ದಲ್ಲಿ ಸಿನಿಮಾ ಕುರಿತು ಶಿಕ್ಷಣ ಪಡೆದಿರುವ ಸಮರ್ಥ್ ನಾಗರಾಜ್ ನಿರ್ದೇಶಿಸಿರುವ 22 ನಿಮಿಷಗಳ ಕಿರುಚಿತ್ರವಿದು.
ತಮ್ಮ ಕಿರುಚಿತ್ರದ ಬಗ್ಗೆ ಮಾತನಾಡಿದ ಸಮರ್ಥ್, ‘ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಸಾಕಷ್ಟು ಕಲಿತಿದ್ದೇನೆ. ಆ ಕಲಿಕೆಯೇ ಈ ಕಿರುಚಿತ್ರ ಮಾಡಲು ಕಾರಣ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕತೆಯಿದು’ ಎಂದು ಕಿರುಚಿತ್ರ ನಿರ್ಮಾಣ ಮಾಡಿದ ತಮ್ಮ ತಂದೆ ನಾಗರಾಜ್ ಹಾಗೂ ತಮ್ಮ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಟಿ ಮಯೂರಿ ಮತ್ತು ಚಿತ್ರನಿರ್ದೇಶಕ ಶೂನ್ಯ ಕಿರುಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಅಪೂರ್ವ, ಸಿಂಚನ ಶಿವಣ್ಣ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಿರುಚಿತ್ರ NRS Productions ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಿದೆ.