ತಬಲಾ ನಾಣಿ – ಚೈತ್ರಾ ಕೋಟೂರು ಅಭಿನಯದ ‘ನನಗೂ ಹೆಂಡ್ತಿ ಬೇಕು’ ಸಿನಿಮಾ ಸದ್ದಿಲ್ಲದೆ ಚಿತ್ರೀಕರಣಗೊಳ್ಳುತ್ತಿದೆ. ಕೆ ಶಂಕರ್ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಕಾಮಿಡಿ ಚಿತ್ರವಿದು. ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಇದು ತಮ್ಮ ವೃತ್ತಿಬದುಕಿನ ಮಹತ್ವದ ಸಿನಿಮಾ ಎನ್ನುತ್ತಾರೆ ನಟ ತಬಲಾ ನಾಣಿ.
ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರ – ‘ನನಗೂ ಹೆಂಡ್ತಿ ಬೇಕು’. ಮದುವೆಯಾಗಲು ಹೊರಟು ಹೆಣ್ಣು ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ತಬಲ ನಾಣಿಗೆ ಎದುರು ಬ್ಯಾಂಕ್ ಜನಾರ್ಧನ್ ಮತ್ತು ಬಾಲು ಖಳ ಛಾಯೆಯ ಪಾತ್ರಗಳಲ್ಲಿದ್ದಾರೆ. ‘ಬಿಗ್‌ಬಾಸ್’ ಖ್ಯಾತಿಯ ಚೈತ್ರಾ ಕೋಟೂರು ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದ್ದು, ಅವರಿಲ್ಲಿ ಮೂಗ ಯುವತಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆದಿದ್ದು, ಸದ್ಯ ಸಿನಿಮಾ ಕ್ಲೈಮ್ಯಾಕ್ಸ್ ಹಂತದಲ್ಲಿದೆ.
ಈ ಹಿಂದೆ ದೇಶಪ್ರೇಮ ಸಾರುವ ‘ACT 370’ ಸಿನಿಮಾ ನಿರ್ದೇಶಿಸಿದ್ದ ಕೆ ಶಂಕರ್ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಸಿನಿಮಾ ‘ನನಗೂ ಹೆಂಡ್ತಿ ಬೇಕು’. ಲೈರಾ ಎಂಟರ್‌ಟೇನ್‌ಮೆಂಟ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ ರಮೇಶ್ ಜೊತೆಯಾಗಿ ನಿರ್ಮಿಸುತ್ತಿರುವ ಚಿತ್ರಕ್ಕೆ ಕೆ ಎಂ ಇಂದ್ರ ಸಂಗೀತ ಸಂಯೋಜನೆಯಿದೆ. ಶೃತಿ, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್ ಗಣೇಶ್ ರಾವ್, ದೊಡ್ಡರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ನಟಿ ಚೈತ್ರಾ ಕೋಟೂರು ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. ಕೊನೆಯ ಶೆಡ್ಯೂಲ್ ಚಿತ್ರೀಕರಣದಲ್ಲಿ ಅವರ ಪಾತ್ರಕ್ಕೆ ಹೆಚ್ಚು ಸೀನ್‌ಗಳಿವೆಯಂತೆ. ‘ಮಾತಿಲ್ಲದ ಪಾತ್ರ ಎನ್ನುವುದೇ ಒಂಥರಾ ವಿಶೇಷ. ಮಾತಿನ ಪಾತ್ರವಾದಾಗ, ಡೈಲಾಗ್ ಹೇಳಿ ಮುಗಿಸಿದಾಕ್ಷಣ ಸೀನ್ ಮುಗೀತು ಎನ್ನುವ ಸೂಚನೆ ಇರುತ್ತದೆ. ಇಲ್ಲಿ ಬರೀ ಎಕ್ಸ್‌ಪ್ರೆಷನ್ ಅಷ್ಟೆ. ಪ್ರತೀ ಸೀನ್ ಮುಗಿದಾಗಲೂ ಹೇಗೆ ಬಂದಿರಬಹುದು ಎನ್ನುವ ಕುತೂಹಲವಿರುತ್ತೆ’ ಎನ್ನುತ್ತಾರೆ. ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ನಟಿಸಿರುವ ‘ರಂಗನಾಯಕ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಚೈತ್ರಾ ನಟಿಸಿದ್ದಾರೆ. ಈ ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಕುರಿತಾಗಿ ಅವರು ಎಕ್ಸೈಟ್ ಆಗಿದ್ದಾರೆ. ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿ ಜಗ್ಗೇಶ್ ಮತ್ತು ತಬಲಾ ನಾಣಿ ಇಬ್ಬರೂ ವಿಶೇಷ ಪಾತ್ರಗಳಲ್ಲಿದ್ದರು. ಈಗ ಎರಡು ಪ್ರತ್ಯೇಕ ಸಿನಿಮಾಗಳಲ್ಲಿ ಇಬ್ಬರು ಉತ್ತಮ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿರುವ ಖುಷಿಯಿದೆ’ ಎನ್ನುತ್ತಾರವರು.