ಕ್ರೈಂ ಸೀರೀಸ್‌ಗಳು ಅಪರಾಧದ ಹಿಂದಿರುವ ಮನಸ್ಥಿತಿ, ಸಾಮಾಜಿಕ ವ್ಯವಸ್ಥೆ ಮತ್ತು ಸಮಸ್ಯೆಗಳನ್ನೂ ಕೂಡ ಚರ್ಚಿಸಲು ಆರಂಭಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಕೆಲವು ನ್ಯೂನತೆಗಳ ಹೊರತಾಗಿಯೂ, ಸಮಾಜದಲ್ಲಿ ಅಂತರ್ಗತವಾಗಿರುವ ಕಾಲಕೂಟದಂತಹ ಹಲವು ವ್ಯಾದಿಗಳನ್ನು ಮಂಥನ ಮಾಡಿ ತೆಗೆಯುವಲ್ಲಿ ಈ ಸೀರೀಸ್ ಯಶಸ್ವಿಯಾಗುತ್ತದೆ. ‘ಕಾಲ್‌ಕೂಟ್‌’ ಸರಣಿ JioCinemaದಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಇತ್ತೀಚೆಗೆ ಬರುತ್ತಿರುವ ಹಿಂದಿಯ ಪೊಲೀಸ್‌ ತನಿಖಾ ಸೀರೀಸ್‌ಗಳು ಅಪರಾಧ ಮತ್ತು ಅದರ ಪತ್ತೆಯ ಸುತ್ತ ಮಾತ್ರ ಸುತ್ತುತ್ತವೆ. ಅಂತಹ ಒಂದು ಅಪರಾಧದ ಹಿಂದಿರುವ ಮನಸ್ಥಿತಿ, ಸಾಮಾಜಿಕ ವ್ಯವಸ್ಥೆ ಮತ್ತು ಸಮಸ್ಯೆಗಳನ್ನೂ ಕೂಡ ಚರ್ಚಿಸಲು ಆರಂಭಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಇಂತಹ ಕ್ರೈಂ ಸೀರೀಸ್‌ಗಳು ಮಾಡುವ ಅಪರಾಧದ ವೈಭವೀಕರಣ ಮತ್ತು ಸಮಾಜದ ಮೇಲೆ ಅದು ಬೀರುವ ಪ್ರಭಾವಗಳ ಬಗ್ಗೆ ಇರುವ ಆತಂಕವನ್ನು ಇಂತಹ ಪ್ರಯತ್ನಗಳು ಕಡಿಮೆ ಮಾಡುವ ಸಾಧ್ಯತೆ ಇದೆ. ಕೇವಲ ಅಪರಾಧ ಮತ್ತು ಪೊಲೀಸ್ ತನಿಖೆಯ ರೋಚಕತೆಗೆ ಸೀಮಿತಗೊಳ್ಳದೆ, ಪಾತ್ರಗಳ ಹಿನ್ನಲೆ, ಖಾಸಗಿ ಬದುಕು, ಅವರ ಸಮಸ್ಯೆ, ಅವರ ವ್ಯಕ್ತಿತ್ವಗಳ ಅನಾವರಣ ಮತ್ತು ಈ ಪಾತ್ರಗಳ ಬೆಳವಣಿಗೆಯನ್ನು ತೆರೆದಿಡುವ ಮೂಲಕ ಇಂತಹ ಸೀರೀಸ್‌ಗಳು ಸೋಷಿಯಲ್ ಕಮೆಂಟರಿ ರೀತಿಯಲ್ಲಿ ಕೆಲಸ ಮಾಡುತ್ತವೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ದಹಾಡ್, ಕೊಹ್ರಾಗಳ ಸಾಲಿಗೆ ಸೇರುವ ಮತ್ತೊಂದು ಹೊಸ ಸೀರೀಸ್ ಸುಮಿತ್ ಸಕ್ಸೇನಾ ನಿರ್ದೇಶನದ ಕಾಲ್‌ಕೂಟ್.

ಉತ್ತರ ಪ್ರದೇಶದ ಸಣ್ಣ ಪಟ್ಟಣವೊಂದರಲ್ಲಿ ಯುವತಿಯೊಬ್ಬಳ ಮೇಲೆ ನಡೆಯುವ ಅಸಿಡ್ ದಾಳಿಗೆ ಸಂಬಂಧಿಸಿದಂತೆ ನಡೆಯುವ ಪೊಲೀಸ್ ತನಿಖೆ ಈ ಸೀರೀಸ್‌ನ ಮುಖ್ಯ ಕಥಾ ಹಂದರ. ಇದರ ತನಿಖೆಯ ಜವಾಬ್ದಾರಿ ಹೊಸದಾಗಿ ಇಲಾಖೆ ಸೇರಿರುವ, ಆದರೆ ಆಗಲೇ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ, ರವಿ ಶಂಕರ್ ತ್ರಿಪಾಠಿಯ ಹೆಗಲೇರುತ್ತದೆ. ರವಿಯ ಸೂಕ್ಷ್ಮ ವ್ಯಕ್ತಿತ್ವ, ಖಡಕ್ ಪೋಲೀಸ್ ಅಧಿಕಾರಿಯಾಗುವಲ್ಲಿ ತೊಡಕಾಗಿರುತ್ತದೆ. ಇತ್ತೀಚೆಗಷ್ಟೇ ತೀರಿಹೋದ ತನ್ನ ತಂದೆ, ಕವಿ ತ್ರಿಪಾಠಿಯ ಜನಪ್ರಿಯತೆಯ ಛಾಯೆ, ಮತ್ತು ನಿರೀಕ್ಷೆಯ ಭಾರದಿಂದ ಹೆಣಗುತ್ತಿರುವ ರವಿ ಮತ್ತೊಂದೆಡೆ ಮದುವೆಯಾಗು ಎಂದು ಹಿಂದೆ ಬಿದ್ದಿರುವ ತಾಯಿಯ ನಿರಂತರ ಒತ್ತಡವನ್ನೂ ಎದುರಿಸುತ್ತಿರುತ್ತಾನೆ.

ತನ್ನ ಮೇಲಧಿಕಾರಿಯ ಕಟ್ಟಪ್ಪಣ್ಣೆಯಿಂದಾಗಿ ಇಷ್ಟವಿಲ್ಲದೆಯೇ ತನಿಖೆ ಆರಂಭಿಸುತ್ತಾನೆ. ತನಿಖೆಯ ಹಾದಿಯಲ್ಲಿ ಬಂದು ಹೋಗುವ ಹಲವಾರು ಶಂಕಿತರು, ರವಿಯ ವೈಯಕ್ತಿಕ ಬದುಕು, ಆತನ ಆಂತರಿಕ ಯುದ್ದ, ಆತ ಬೆಳೆಯುತ್ತಾ ಹೋಗುವ ರೀತಿಯನ್ನು ಸೀರೀಸ್ ಕಟ್ಟಿಕೊಡುತ್ತದೆ. ಇಲ್ಲಿ ಕೊನೆಯಲ್ಲಿ ಅನಾವರಣಗೊಳ್ಳುವ ಅಪರಾಧಿ ಯಾರು ಎಂಬ ಸಂಗತಿ ಹೆಚ್ಚು ಮುಖ್ಯವಾಗುವುದೇ ಇಲ್ಲ. ತನಿಖೆಯ ಹಾದಿಯಲ್ಲಿ ಬಯಲಾಗುವ ಸತ್ಯಗಳು, ವ್ಯಕ್ತಿತ್ವಗಳು ಮತ್ತು ಅಪರಾಧಿಗಳ ಮನಸ್ಥಿತಿಗೆ ಕಾರಣವಾಗಿರುವ ಸಾಮಾಜಿಕ ಅಂಶಗಳು ಹೆಚ್ಚು ಕಾಡುತ್ತವೆ. ‘ಕಾಲ್‌ಕೂಟ್’ ಕೇಂದ್ರದಲ್ಲಿ ಪುರುಷ ಪ್ರಧಾನ ಸಮಾಜದಲ್ಲಿರುವ ಲಿಂಗ ತಾರತಮ್ಯವನ್ನು ವಸ್ತುವಾಗಿ ಹೊಂದಿದೆ, ಸಮಾಜದಲ್ಲಿರುವ ಮಿಸಾಜನಿಯ ಭಾಗವಾಗಿರುವ ಎಲ್ಲಾ ಅಂಶಗಳ ಕಡೆಗೂ ಬೆಟ್ಟು ಮಾಡುತ್ತದೆ. ಇದನ್ನು ಸಾಧಿಸಲು ಹಲವು ರೀತಿಯ ಪಾತ್ರಗಳನ್ನು ತೆರೆಯ ಮೇಲೆ ತರಲಾಗಿದೆ.

ಆರಂಭದಲ್ಲಿ ನಾಯಕ ಸಾಕಷ್ಟು ಖಡಕ್ ಇಲ್ಲ ಎಂಬುದೇ ಪೋಲೀಸ್ ಠಾಣೆಯಲ್ಲಿ ಹಾಸ್ಯದ ವಿಷಯವಾಗಿರುತ್ತದೆ. ಸರಾಗವಾಗಿ ಏಣಿ ಏರಲಾರದ, ಜೋರಾಗಿ ಮಾತನಾಡಲಾರದ, ಕೆಟ್ಟದಾಗಿ ಬೈಯಲಾರದ, ಬ್ಯಾಡ್‌ಮಿಂಟನ್‌ನಲ್ಲಿ ಗೆಲ್ಲಲಾರದ, ಮೃದು ಹೃದಯದ ರವಿಯ ಒಳ್ಳೆಯತವವನ್ನೇ ಆತನ ದುರ್ಬಲತೆ ಎಂಬಂತೆ ನೋಡಲಾಗುತ್ತದೆ. ಪೋಲೀಸ್ ಠಾಣೆಯಲ್ಲಿ ಮಾತ್ರವಲ್ಲದೆ, ಗಂಡಾಗಿರುವುದು ಹೇಗೆ, ಗಂಡಸ್ತನ ತೋರಿಸುವುದು ಹೇಗೆ ಎಂದು ಮನೆಯಲ್ಲೂ ಆತ ಅಜ್ಜಿಯ ಉಪದೇಶ ಕೇಳಬೇಕಾಗಿರುತ್ತದೆ. ಇದಕ್ಕೆ ವಿರುದ್ಧವೆಂಬಂತೆ, ಅಸಿಡ್ ದಾಳಿಯ ಸಂತ್ರಸ್ತೆ ಪಾರುಲ್ ಸಮಾಜದ ಮಾನದಂಡದಲ್ಲಿ ‘ಒಳ್ಳೆಯ’ ಹುಡುಗಿಯಲ್ಲ. ಅವಳಿಗೆ ಬಾಯ್‌ ಫ್ರೆಂಡ್ ಇದ್ದಾನೆ, ನಿಶ್ಚಿತಾರ್ಥ ಆದ ಹುಡುಗನ ಜೊತೆ ಸಂಬಂಧ ಮುರಿದುಕೊಂಡಿದ್ದಾಳೆ, ಅವರಿಬ್ಬರಿಗೂ ತನ್ನ ಸೆಕ್ಸೀ ಫೋಟೋಗಳನ್ನು ಕಳುಹಿಸಿದ್ದಾಳೆ. ಹೀಗಾಗಿ, ಆಕೆಯ ಬ್ಯಾಗಿನಲ್ಲಿ ಮದ್ಯದ ಬಾಟಲ್ ಸಿಕ್ಕ ಕೂಡಲೇ ಪೊಲೀಸರು ಅವಳನ್ನು ವೇಶ್ಯೆ ಎಂದು ನಿರ್ಧರಿಸಿ ಬಿಡುತ್ತಾರೆ. ಇಂತಹ ಹುಡುಗಿಯರಿಗೇ ಈ ರೀತಿಯೆಲ್ಲಾ ಆಗುವುದು ಎಂದು ಷರಾ ಬರೆದುಬಿಡುತ್ತಾರೆ. ಪಾರುಲ್ ಅಸಿಡ್ ದಾಳಿಗೆ ತುತ್ತಾಗಿ, ಆಸ್ಪತ್ರೆಯಲ್ಲಿ ನರಳುತ್ತಿದ್ದರೂ, ಸಮಾಜ ಬಯಸುವ ಚಾರಿತ್ರ್ಯವನ್ನು ಮನದಲ್ಲಿಟ್ಟುಕೊಂಡ ಪ್ರೇಕ್ಷಕರು ಆಕೆಯನ್ನು ಜಡ್ಜ್ ಮಾಡುವ ಎಲ್ಲಾ ಅವಕಾಶಗಳನ್ನು ನಿರ್ದೇಶಕರು ಕಲ್ಪಿಸುತ್ತಾರೆ.

ಸೀರೀಸ್‌ನ ತುಂಬಾ ಹಲವು ರೀತಿಯ ಆದರೆ ಬಹುತೇಕ ಪುರುಷಾಧಿಪತ್ಯವನ್ನು ಪ್ರತಿನಿಧಿಸುವ ಗಂಡುಗಳಿದ್ದಾರೆ. ಲಿಂಗ ಸೂಕ್ಷ್ಮ ಸಂವೇದನೆ ಕುರಿತು ನಡೆಯುವ ಕಾರ್ಯಾಗಾರದಲ್ಲಿ ಕುಳಿತೇ ಪೋಲೀಸರು ಆಸಿಡ್ ಪ್ರಕರಣದ ಬಗ್ಗೆ ಮಾತು ಬಂದಾಗ ಅದರಲ್ಲಿ ಜೋಕ್ ಕಂಡು ನಗುತ್ತಾರೆ. ಪೋಲೀಸ್ ಇನ್ಸ್‌ಪೆಕ್ಚರ್ ಮತ್ತು ಒಬ್ಬ ಕಾನ್ಸ್‌ಟೇಬಲ್ ತಮ್ಮ ಹೆಂಡತಿಗೆ ಹೊಡೆದ ಕತೆ ಹೇಳಿಕೊಂಡು ಮರುಗುತ್ತಾರೆ. ಇಬ್ಬರೂ ಹೆಣ್ಣುಮಕ್ಕಳೇ ಇರುವ ಕಾರಣ ಪಾರುಲ್ ತಂದೆ ನಾಯಿಯೊಂದನ್ನು ಮಗನಂತೆ ಸಾಕಿರುತ್ತಾನೆ. ಅಸೂಯೆಯಿಂದ ಕುದಿವ ಬಾಯ್‌ಫ್ರೆಂಡ್ ಇದ್ದಾನೆ, ಮದುವೆಯಾಗಲು ಇಷ್ಟವಿಲ್ಲ ಎಂದರೂ ಕೇಳದೆ ಕಾಡುವ ಎಕ್ಸ್‌ ಫಿಯಾನ್ಸಿ ಇದ್ದಾನೆ. ತನ್ನ ತಂಗಿ ಅಬಾರ್ಷನ್ ಮಾಡಿಸಿಕೊಂಡಿದ್ದಕ್ಕಾಗಿ ಅವಳ ಮೇಲೆ ಅಸಿಡ್ ಎರಚಿದ ಅಣ್ಣನಿದ್ದಾನೆ. ಹೀಗೆ, ಇಡೀ ಪುರುಷ ಕುಲವೇ ಬೇರೆ ಬೇರೆ ಹಂತದಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆಯ ಭಾಗವಾಗಿ ಕಾಣುತ್ತಾರೆ.

ವಿಶೇಷವೆಂದರೆ, ಇಡೀ ಚಿತ್ರದಲ್ಲಿ ಸೂಕ್ಷ್ಮತೆಯುಳ್ಳ ಪುರುಷರಾಗಿ ಕಂಡು ಬರುವ ರವಿ ಮತ್ತು ಆತನ ತಂದೆಯನ್ನೂ ಕೂಡ ನಿರ್ದೇಶಕರು ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ತ್ರಿಪಾಠಿಯ ತಾಯಿ ಪ್ರತಿಯೊಂದಕ್ಕೂ ಮಗನ ಸಲಹೆ, ಅನುಮತಿ ಕೇಳುತ್ತಿರುತ್ತಾಳೆ. ಒಮ್ಮೆ ಸಿಟ್ಟಿಗೆದ್ದ ತ್ರಿಪಾಠಿ ಎಲ್ಲದಕ್ಕೂ ನನ್ನನ್ನು ಏಕೆ ಕೇಳುತ್ತಿ ಎಂದು ರೇಗುತ್ತಾನೆ. ‘ನಿನ್ನಪ್ಪ ಇರುವವರೆಗೆ ಅವರನ್ನೇ ಕೇಳಿ ಎಲ್ಲಾ ಮಾಡುತ್ತಿದ್ದೆ, ಈಗ ಯಾರನ್ನು ಕೇಳಲಿ? ನೀನೇ ಈಗ ಈ ಮನೆಗೆ ಗಂಡಸು ಎನ್ನುತ್ತಾಳೆ’. ಪುರುಷಾಧಿಕಾರವು ಪೀಳಿಗೆಯಿಂದ ಪೀಳಿಗೆಗೆ ದಾಟುವ ಸಂಗತಿಯನ್ನು ಇದು ಮನೋಜ್ಞವಾಗಿ ಹಿಡಿದಿಟ್ಟಿದೆ. ಜೊತೆಗೆ, ಸಂವೇದನಾ ಶೀಲ ಕವಿಯಾಗಿದ್ದೂ, ಎಲ್ಲವನ್ನೂ ಗಂಡನನ್ನು ಕೇಳಿಯೇ ಮಾಡಬೇಕು ಎಂಬ ಪ್ರವೃತ್ತಿಯನ್ನು ತ್ರಿಪಾಠಿಯ ತಂದೆ ಪ್ರೋತ್ಸಾಹಿಸಿದ್ದು ಏಕೆ ಅಥವಾ ಆ ಅಭ್ಯಾಸವನ್ನು ತಡೆಯಲಿಲ್ಲ ಏಕೆ ಎಂಬ ಪ್ರಶ್ನೆ ಕಾಡುತ್ತದೆ.

ರವಿಯ ಅಕ್ಕ ತನ್ನ ಕಾಡಿಸಿ, ಕಿರುಕುಳ ನೀಡಿದವನನ್ನೇ ಮದುವೆಯಾಗಿ, ಸಮಾಜದ ಇರಿಯುವ ಕಣ್ಣುಗಳಿಂದ ತಪ್ಪಿಸಿಕೊಂಡಿರುತ್ತಾಳೆ. ಈ ಕಾರಣಕ್ಕಾಗಿ ತನ್ನ ಅಕ್ಕನ ಗಂಡನನ್ನು ಅಪಾರವಾಗಿ ದ್ವೇಷಿಸುವ ರವಿ ಮುಂದೆ ತನ್ನನ್ನು ಮದುವೆಯಾಗಬೇಕಿದ್ದ ಹುಡುಗಿ ಸತ್ಯವೊಂದನ್ನು ಮುಚ್ಚಿಟ್ಟಿದ್ದಳು ಎಂಬ ಕಾರಣಕ್ಕೆ ಮೋಸ ಹೋದ ಭಾವದಲ್ಲಿ ಆಕೆಯನ್ನು ಹೋಟೆಲ್‌ ರೂಮಿಗೆ ಬರುವಂತೆ ಮಾಡುತ್ತಾನೆ. ಆದರೆ, ಪ್ರತೀಕಾರಕ್ಕಾಗಿ ಅಸಿಡ್ ಹಾಕುವವರಿಗೂ ತನಗೂ ದೊಡ್ಡ ವ್ಯತ್ಯಾಸವೇನು ಇಲ್ಲ, ಒಳ್ಳೆಯತನದ ಪರದೆಯ ಹಿಂದೆ ತನ್ನಲ್ಲೂ ಪುರುಷ ಮನಸ್ಥಿತಿಯೇ ಅಡಗಿದೆ ಎಂಬುದನ್ನು ತ್ರಿಪಾಠಿ ಕೊನೆಗೆ ಒಪ್ಪಿಕೊಳ್ಳುವ ಮೂಲಕ ಗೆಲ್ಲುತ್ತಾನೆ.

ಹಾಗಂತ ‘ಕಾಲ್‌ಕೂಟ್’ ಸಂಪೂರ್ಣ ದೋಷರಹಿತವಾಗಿದೆ ಅಂತಲ್ಲ. ತನಿಖೆ ಮುಂದುವರಿದಂತೆ ರವಿಯಲ್ಲಿ ಆಗುವ ಬದಲಾವಣೆಗಳು, ಅತ ಹೆಚ್ಚು ಗಂಡಾಗುತ್ತಾ ಹೋಗುವುದು, ಅಂತಹ ಬದಲಾವಣೆಯಿಂದಲೇ ಆತ ತನ್ನ ಕೆಲಸದಲ್ಲಿ ಯಶಸ್ವಿಯಾಗುವುದು ಸೀರೀಸ್‌ನ ಒಳಗೇ ಇರುವ ವೈರುಧ್ಯದಂತೆ ತೋರುತ್ತದೆ. ಏಕೆಂದರೆ, ಕೊನೆಯ ಎಪಿಸೋಡ್‌ಗಳಲ್ಲಿ ಬಹುತೇಕ ಅವಾಸ್ತವ ಎನಿಸುವ ರೀತಿಯಲ್ಲಿ, ಅಪರಾಧಿಯನ್ನು ಹಿಡಿಯಲು, ರಕ್ತ ಸುರಿಸುತ್ತಾ ರವಿ ಮಾಡುವ ನಂಬಲಸಾಧ್ಯವಾದ ಸಾಹಸಗಳು, ಆತನನ್ನು ಸೂಪರ್ ಮ್ಯಾನ್‌ ಆಗಿಸಿ, ಸೀರೀಸ್‌ನ ಮುಖ್ಯ ಆಶಯಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗಿದಂತೆ ಕಾಣುತ್ತದೆ. ಇದರಿಂದಾಗಿ, ಅದುವರೆಗೂ ವಾಸ್ತವಿಕವಾಗಿದ್ದ ಸೀರೀಸ್ ಒಮ್ಮೆಲೆ ತನ್ನ ಜಗತ್ತನ್ನು ಬದಲಿಸುತ್ತದೆ.

ಈ ದೃಶ್ಯದ ಹಿನ್ನೆಲೆಯಲ್ಲಿ ಬಳಸಲಾಗಿರುವ, ಮಗನಿಗಾಗಿ ರವಿಯ ತಂದೆ ಬರೆದ ಕವನ ಅಕ್ಷರಶಃ ತೆರೆಯ ಮೇಲೆ ದೃಶ್ಯವಾಗಿ ಮೂಡುವುದು (ನಿನ್ನನ್ನು ಇರಿದ ಶೂಲವನ್ನು ಆಯುಧವನ್ನಾಗಿಸಿಕೊಂಡು ಎಂಬಂತಹ ಸಾಲುಗಳು) ಕವಿತೆಯ ಶಕ್ತಿಗುಂದಿಸುತ್ತದೆ. ಜೊತೆಗೆ, ನಿರ್ದೇಶಕರು ಮಹಿಳಾ ಶೋಷಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಈಗಲೇ ಹೇಳಿ ಬಿಡಬೇಕೆಂದು ಪ್ರಯತ್ನಿಸಿದ್ದಾರೆ. ಭ್ರೂಣ ಹತ್ಯೆ, ಮಹಿಳೆಯರ ವಿರುದ್ಧದ ಸೈಬರ್ ಕ್ರೈಂ, ಕೌಟುಂಬಿಕ ಹಿಂಸೆ, ಅಸಿಡ್ ದಾಳಿ, ಕಡ್ಡಾಯ ಬುರ್ಕಾ ಹೀಗೆ ಸಾಲು ಸಾಲು ವಿಷಯಗಳು ಬಂದು ಹೋಗುತ್ತವೆ. ಇದರಿಂದಾಗಿ, ಹಲವಾರು ಪಾತ್ರಗಳು ತೆರೆಯ ಮೇಲೆ ಮೂಡಿ ಮರೆಯಾಗುತ್ತವೆ. ಅಸಿಡ್ ಪ್ರಕರಣಕ್ಕೆ ನೇರವಾಗಿ ಸಂಬಂಧಿಸಿದಂತೆ ಕಾಣದ ಎಷ್ಟೋ ಇತರ ಪ್ರಕರಣಗಳು ನಂತರ ಬಂದು ಮುಖ್ಯ ಕೇಸಿಗೆ ಜೋಡಿಸಿಕೊಳ್ಳುವ ರೀತಿ ಮಾತ್ರ ಆಸಕ್ತಿದಾಯಕವಾಗಿದೆ.

‘ಕಾಲ್‌ಕೂಟ್’ನ ಯಶಸ್ಸಿನಲ್ಲಿ ದೊಡ್ಡ ಪಾತ್ರವಿರುವುದು ವ್ಯಕ್ತಿ ಚಿತ್ರಣ ಮತ್ತು ಅಭಿನಯದಲ್ಲಿ. ಖಳ ಛಾಯೆಯ ಪಾತ್ರಗಳಲ್ಲೇ ನಟಿಸುತ್ತಾ ಏಕತಾನತೆಯ ಹಾದಿ ಹಿಡಿದಿದ್ದ ವಿಜಯ್ ವರ್ಮಾ ಅವರ ಅಮೋಘ ಪ್ರತಿಭೆ ಈ ಸೀರೀಸ್‌ನಲ್ಲಿ ಕಣ್ಣು ಕೋರೈಸುವಂತೆ ಮಿಂಚಿದೆ. ವಿಜಯ್ ವರ್ಮಾ ಅವರ ಸಹಜಾಭಿನಯ, ಮುಖದ ಭಾವಾಭಿವ್ಯಕ್ತಿ, ಬ್ಯಾಕ್‌ಪ್ಯಾಕ್ ಏರಿಸಿಕೊಂಡು ತಿರುಗುವ ರವಿಯ ವ್ಯಕ್ತಿತ್ವವನ್ನು ಸೊಗಸಾಗಿ ಹಿಡಿಟ್ಟಿದೆ. ರವಿ ತ್ರಿಪಾಠಿಯ ತಾಯಿಯ ಪಾತ್ರದಲ್ಲಿ ಸೀಮಾ ಬಿಸ್ವಾಸ್ ಅದ್ಭುತವಾಗಿ ನಟಿಸಿದ್ದಾರೆ. ತಾಯಿ ಮಗನ ನಡುವಣ ದೃಶ್ಯಗಳು ಸೀರೀಸ್‌ನ ಹೈಲೈಟ್‌ಗಳಲ್ಲಿ ಒಂದು. ಜೊತೆಗೆ, ಕಾನ್‌ಸ್ಟೇಬಲ್‌ ಯಾದವ್ ಪಾತ್ರದಲ್ಲಿ ಯಶ್‌ಪಾಲ್ ಶರ್ಮಾ ಈ ಸೀರೀಸ್ ಗೆ ಅಗತ್ಯವಿರುವ ಕಾಮಿಕ್ ರಿಲೀಫ್ ನೀಡಿದ್ದಾರೆ. ಇನ್ಸ್‌ಪೆಕ್ಚರ್ ಪಾತ್ರದಲ್ಲಿರುವ ಗೋಪಾಲ್ ದತ್ತ್ ಹಾಗು ಪಾರುಲ್ ಆಗಿ ಅಭಿನಯಿಸಿರುವ ಶ್ವೇತಾ ತಿವಾರಿ ಗಮನ ಸೆಳೆಯುತ್ತಾರೆ. ಇವರೆಲ್ಲರ ಅಭಿನಯ ಸೀರೀಸ್ ಅನ್ನು ಮತ್ತೊಂದು ಹಂತ ಮೇಲೇರಿಸಿದೆ.

ಹಿನ್ನೆಲೆ ಸಂಗೀತ ಮತ್ತು ಕ್ರೈಂ ಸೀರೀಸ್‌ಗಳಲ್ಲಿ ಅಪರೂಪವೆನಿಸುವ ರೀತಿಯ ಹಾಡುಗಳು ಮತ್ತು ಮನೋಜ್ಞ ಕವನಗಳು ನಿರೂಪಣೆಗೊಂದು ಹೊಸ ಆಳವನ್ನು ನೀಡಿದೆ. ಸಂಕಲನ, ಮತ್ತು ಸಿನಿಮಟೋಗ್ರಫಿಯಲ್ಲೂ ಸೀರೀಸ್ ಗೆಲ್ಲುತ್ತದೆ. ಕೆಲವು ನ್ಯೂನತೆಗಳ ಹೊರತಾಗಿಯೂ, ಸಮಾಜದಲ್ಲಿ ಅಂತರ್ಗತವಾಗಿರುವ ಕಾಲಕೂಟದಂತಹ ಹಲವು ವ್ಯಾದಿಗಳನ್ನು ಮಂಥನ ಮಾಡಿ ತೆಗೆಯುವಲ್ಲಿ ಸೀರೀಸ್ ಯಶಸ್ವಿಯಾಗುತ್ತದೆ.

LEAVE A REPLY

Connect with

Please enter your comment!
Please enter your name here