ದೇಶ ಕಂಡ ಅತಿ ದೊಡ್ಡ ಕ್ರಿಮಿನಲ್‌ ವೀರಪ್ಪನ್‌ ಕುರಿತ ‘The hunt for Veerappan’ ತಮಿಳು – ಇಂಗ್ಲಿಷ್‌ ಸರಣಿ Netflixನಲ್ಲಿ ಆಗಸ್ಟ್‌ 4ರಿಂದ ಸ್ಟ್ರೀಮ್‌ ಆಗಲಿದೆ. ಚೂನಾ ಹಿಂದಿ ಸರಣಿ, ಪವನ್‌ ಕುಮಾರ್‌ ನಿರ್ದೇಶನದ ಮಲಯಾಳಂ ಥ್ರಿಲ್ಲರ್‌ ‘ಧೂಮಂ’, ಜೆ ಡಿ ಚಕ್ರವರ್ತಿ ನಟನೆಯ ‘ದಯಾ’ ತೆಲುಗು ಥ್ರಿಲ್ಲರ್‌ ಸರಣಿಗಳು ಈ ವಾರ ವೀಕ್ಷಕರಿಗೆ ಲಭ್ಯವಾಗಲಿವೆ.

ಚೂನಾ | Netflix | ಹಿಂದಿ ಸರಣಿ | ಆಗಸ್ಟ್‌ 3 | ಜಿಮ್ಮಿ ಶೆರ್ಗಿಲ್ ಅಭಿನಯದ heist comedy ಹಿಂದಿ ಸರಣಿ. ಶತ್ರುಗಳ ವಿರುದ್ಧ ಸಂಚುಮಾಡುವ ದರೋಡೆಕೋರರ ಕಥಾನಕ. 600 ಕೋಟಿ ಲೂಟಿ ಮಾಡಲು ಯೋಜನೆ ರೂಪಿಸುತ್ತಿರುವ ಒಂದು ಗುಂಪಿನ ಷಡ್ಯಂತ್ರ ಸರಣಿಯಲ್ಲಿದೆ. ಪುಷ್ಪೇಂದ್ರ ನಾಥ್ ಮಿಶ್ರಾ ಬರೆದು ನಿರ್ದೇಶಿಸಿರುವ ಸರಣಿಯನ್ನು ‘ಫ್ಲೈಯಿಂಗ್ ಸಾಸರ್’ ಸಂಸ್ಥೆ ನಿರ್ಮಿಸಿದೆ. ವಿಕ್ರಮ್ ಕೊಚ್ಚರ್, ಚಂದನ್ ರಾಯ್, ನಮಿತ್ ದಾಸ್, ಜ್ಞಾನೇಂದ್ರ ತ್ರಿಪಾಠಿ, ಅತುಲ್ ಶ್ರೀವಾಸ್ತವ, ಮೋನಿಕಾ ಪನ್ವಾರ್, ನಿಹಾರಿಕಾ ಲೈರಾ ದತ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ದಯಾ | DisneyPlus Hostar | ತೆಲುಗು ಸರಣಿ | ಆಗಸ್ಟ್‌ 4 | ಕಾಣೆಯಾದ ಪತ್ರಕರ್ತೆ ಕವಿತಾ ನಾಯ್ಡು (ರಮ್ಯಾ) ಹುಡುಕಾಟದ ತೆಲುಗು ಸರಣಿ. ಫ್ರೀಜರ್ ವ್ಯಾನ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ದಯಾ (ಜೆ ಡಿ ಚಕ್ರವರ್ತಿ) ವ್ಯಾನಿನಲ್ಲಿ ಕವಿತಾಳ ಮೃತ ದೇಹ ಪತ್ತೆಯಾಗುತ್ತದೆ. ಏನು ಮಾಡಬೇಕೆಂದು ತಿಳಿಯದ ಅವನು ಬೇರೆ ಕಡೆಗೆ ಕವಿತಾಳ ಮೃತ ದೇಹವನ್ನು ಬಚ್ಚಿಡಲು ಪ್ರಯತ್ನಿಸುತ್ತಾನೆ. ಪೊಲೀಸರ ತನಿಖೆಯಿಂದಾಗುವ ಬೆಳವಣಿಗೆಗಳು ಸರಣಿಯ ಕಥಾವಸ್ತು. ನಿರ್ದೇಶಕ, ನಿರ್ಮಾಪಕ, ನಟ ಜೆ ಡಿ ಚಕ್ರವರ್ತಿ ಮತ್ತು ನಟಿ – ಗಾಯಕಿ ರಮ್ಯಾ ನಂಬೀಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪವನ್‌ ಸಾದಿನೇನಿ ನಿರ್ದೇಶನದ ಕ್ರೈಂ ಥ್ರಿಲ್ಲರ್‌ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಬಬ್ಲೂ ಪೃಥ್ವಿರಾಜ್, ವಿಷ್ಣು ಪ್ರಿಯಾ ಭೀಮಿನೇನಿ, ರವಿ ಜೋಶ್, ಕಮಲ್ ಕಾಮರಾಜು, ಮಯಾಂಕ್ ಪರಾಖ್ ನಟಿಸಿದ್ದಾರೆ.

ಫಟಾಫಟಿ | Sony LIV | ಬೆಂಗಾಲಿ ಸಿನಿಮಾ | ಆಗಸ್ಟ್‌ 4 | ಕೊಲ್ಕತ್ತಾದ ಫುಲ್ಲೋರಾ ಭಾದುರಿ ಒಂದು ಸಣ್ಣ ಪಟ್ಟಣದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಅವಳು ಫ್ಯಾಷನ್ ಲೋಕದಲ್ಲಿ ಸಾಧನೆ ಮಾಡುವ ಕನಸುಗಳನ್ನು ಕಾಣುವಾಗ ತನ್ನ ದಢೂತಿ ದೇಹದಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾ ಸಾಧನೆ ಮಾಡುತ್ತಾಳೆ ಎಂಬುದು ಚಿತ್ರದ ಕಥಾಹಂದರ. ತನ್ನ ಸ್ಥೂಲ ದೇಹದ ಬಗ್ಗೆ ಸುತ್ತಲಿನವರು ಗೇಲಿ ಮಾಡಿದಾಗ ಅನುಭವಿಸಿದ ನೋವು ಸಂಕಷ್ಟಗಳು ಮತ್ತು ಈ ರೀತಿಯ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡುವ ಫುಲ್ಲೋರಾದ ಟೈಲರ್‌ ಭಾದುರಿ ಅವರ ಜೀವನದ ಕತೆಯಿದು. ರಿತಾಭರಿ ಚಕ್ರವರ್ತಿ, ಅಬೀರ್ ಚಟರ್ಜಿ ಪ್ರಮುಖ ಪಾತ್ರಗಳಲ್ಲಿರುವ ಚಿತ್ರವನ್ನು ಅರಿತಾ ಮುಖರ್ಜಿ ನಿರ್ದೇಶಿಸಿದ್ದಾರೆ. ಸ್ವಸ್ತಿಕ ದತ್ತಾ, ಸೋಮ ಚಕ್ರವರ್ತಿ, ರಕ್ತಿಂ ಸಮಂತಾ, ಅರಿಜಿತ ಮುಖ್ಯೋಪಾಧ್ಯಾಯ, ದೇಬೋಶ್ರೀ ಗಂಗೂಲಿ, ಸಂಘಶ್ರೀ ಸಿನ್ಹಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ದಿ ಹಂಟ್ ಫಾರ್ ವೀರಪ್ಪನ್ | Netflix | ತಮಿಳು – ಇಂಗ್ಲಿಷ್‌ ಸರಣಿ | ಆಗಸ್ಟ್‌ 4 | Netflix docu-series ‘The Hunt for Veerappan’ ನಾಲ್ಕು ಭಾಗಗಳ ಸರಣಿಯು ವೀರಪ್ಪನ್‌ ರಕ್ತ ಚರಿತ್ರೆ ಹೇಳಲಿದೆ. ಭಾರತ ಕಂಡ ಅತಿ ದೊಡ್ಡ ಕ್ರಿಮಿನಲ್‌ ವೀರಪ್ಪನ್‌ ದಕ್ಷಿಣ ಭಾರತದ ಕಾಡುಗಳಲ್ಲಿ ತನ್ನ ಕಾರ್ಯಾಚರಣೆ ನಡೆಸುತ್ತಿದ್ದವನು. ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ದುಃಸ್ವಪ್ನವಾಗಿದ್ದ ವೀರಪ್ಪನ್‌ ಕುರಿತ ನಾಲ್ಕು ಭಾಗಗಳನ್ನು ಸರಣಿ ಒಳಗೊಂಡಿದೆ. ಸೆಲ್ವಮಣಿ ಸೆಲ್ವರಾಜ್‌ ನಿರ್ದೇಶನ ಸರಣಿ ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಚಿತ್ರಣಗೊಂಡಿದೆ. ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್‌ ಅವತರಣಿಕೆಗಳೂ ಲಭ್ಯವಿವೆ.

ಧೂಮಂ | Netflix | ಮಲಯಾಳಂ ಸಿನಿಮಾ | ಆಗಸ್ಟ್‌ 4 | ಹೊಂಬಾಳೆ ಬ್ಯಾನರ್‌ನಡಿ ಪವನ್‌ ಕುಮಾರ್‌ ನಿರ್ದೇಶಿಸಿರುವ ಮಲಯಾಳಂ ಸಿನಿಮಾ ‘ಧೂಮಂ’. ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ, ರೋಷನ್ ಮ್ಯಾಥ್ಯೂ, ವಿನೀತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಮುಖ ತಂಬಾಕು ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥ ಮತ್ತು ಅವನ ಪತ್ನಿಯನ್ನು ಅನಾಮಿಕನೊಬ್ಬ ಸಂಕಷ್ಟಕ್ಕೆ ಈಡುಮಾಡುತ್ತಾನೆ. ಇದಕ್ಕೆ ಅವರು ಕಂಪನಿಯ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ತೆಗೆದುಕೊಂಡಿದ್ದ ಕೆಲವು ಕ್ರಮಗಳು ಕಾರಣ. ಅವರು ಈ ಬಲೆಯಿಂದ ತಪ್ಪಿಸಿಕೊಳ್ಳುತ್ತಾರೆಯೇ? ಎನ್ನುವುದು ಸಿನಿಮಾದ ಕಥಾಹಂದರ. ಸಿನಿಮಾದ ಕನ್ನಡ ಡಬ್ಬಿಂಗ್‌ ಅವತರಣಿಕೆಯೂ ಸ್ಟ್ರೀಮ್‌ ಆಗಲಿದೆ.

Previous article
Next articleಸಮಾಜವನ್ನು ಮಥಿಸಿ ಹಾಲಾಹಲವನ್ನು ತೆಗೆಯುವ – ಕಾಲ್‌ಕೂಟ್

LEAVE A REPLY

Connect with

Please enter your comment!
Please enter your name here