ಶೀರ್ಷಿಕೆ, ಫಸ್ಟ್‌ಲುಕ್ ಮೂಲಕ ಗಮನ ಸೆಳೆದಿದ್ದ ‘ಟೋಬಿ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಸಿದ್ಧಮಾದರಿಯ ಹೊರತಾದ ಕಥಾಹಂದರ ಇರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಬೇಸಿಲ್ ಅಲ್ಚಕ್ಕಲ್ ನಿರ್ದೇಶನದ ಸಿನಿಮಾ ಆಗಸ್ಟ್ 25ರಂದು ತೆರೆಕಾಣಲಿದೆ.
ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿನಯದ ‘ಟೋಬಿ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕತೆಗಾರ ಟಿ ಕೆ ದಯಾನಂದ್ ಅವರ ಕತೆಯನ್ನು ಆಧರಿಸಿದ ಚಿತ್ರ. ರಾಜ್ ಬಿ ಶೆಟ್ಟಿ ಅವರೇ ಚಿತ್ರಕಥೆ, ಸಂಭಾಷಣೆ ರಚಿಸಿದ್ದು, ಬೇಸಿಲ್ ಅಲ್ಚಕ್ಕಲ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಟ್ರೈಲರ್ ವಿಶಿಷ್ಟ ಕತೆಯೊಂದರ ಸೂಚನೆ ನೀಡುತ್ತದೆ. ಫಸ್ಟ್‌ಲುಕ್ ಪೋಸ್ಟರ್‌ನಲ್ಲಿ ಟಗರಿನ ಚಿತ್ರವಿತ್ತು. ಆದರೆ ಟ್ರೈಲರ್‌ನಲ್ಲಿ ಟಗರು ಕಾಣಿಸದು. ಟಗರನ್ನು ಉಪಮೆಯಂತೆ ಬಳಕೆ ಮಾಡಿದ್ದಾರೆಯೇ ಎಂದೂ ಅನಿಸುತ್ತದೆ. ಟ್ರೈಲರ್‌ನ ಆರಂಭದಲ್ಲೇ ದೈವನ ನುಡಿ ಕೇಳಿಸಿದ್ದು, ಇಬ್ಬರು ನಾಯಕನಟಿಯರಾದ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಜೆ ಆಚಾರ್ ಅವರ ಪರಿಚಯವೂ ಇದೆ. ‘GGVV’ ಚಿತ್ರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಗಮನಸೆಳೆದಿದ್ದ ಗೋಪಾಲಕೃಷ್ಣ ದೇಶಪಾಂಡೆ ಅವರಿಗಿಲ್ಲಿ ಭಿನ್ನ ಪಾತ್ರವಿದೆ. ಟೋಬಿ ಜೊತೆ ಪುಟ್ಟ ಹುಡುಗಿಯೊಬ್ಬಳಿದ್ದಾಳೆ. ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಕತೆಗೆ ಪೂರಕವಾದ ಮೂಡ್ ಸೃಷ್ಟಿಸಿದೆ. ಹೀಗೆ, ಹಲವು ಆಸಕ್ತಿಕರ ಪಾತ್ರಗಳ ಮೂಲಕ ಟ್ರೈಲರ್ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸುತ್ತದೆ. ಆಗಸ್ಟ್ 25ರಂದು KRG ಸ್ಟುಡಿಯೋಸ್ ಮೂಲಕ ಸಿನಿಮಾ ತೆರೆಕಾಣಲಿದೆ.