ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಅಭಿನಯದ ‘ಮ್ಯಾಟ್ನಿ’ ಸಿನಿಮಾದ ಮೊದಲ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದೆ. ಪೂರ್ಣಚಂದ್ರ ತೇಜಸ್ವಿ ಅವರು ರಚಿಸಿ, ಸಂಗೀತ ಸಂಯೋಜಿಸಿರುವ ಹಾಡಿಗೆ ಸಂತು ಕೊರಿಯೋಗ್ರಫಿ ಮಾಡಿದ್ದಾರೆ. ಮನೋಹರ್ ಕಾಂಪಲ್ಲಿ ನಿರ್ದೇಶನದ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಅದಿತಿ ಪ್ರಭುದೇವ ಇದ್ದಾರೆ.
‘ನಾನೊಬ್ಬ ಪ್ರೇಕ್ಷಕನಾಗಿ ನೋಡಿದಾಗ ಈ ಹಾಡು ಬಹಳ ಚೆನ್ನಾಗಿದೆ ಎಂದೆನಿಸುತ್ತದೆ. ನನ್ನ ಕೆರಿಯರ್ನಲ್ಲಿ ಇದು ಬೆಸ್ಟ್ ಸಾಂಗ್. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ ಬಹಳ ತೊಂದರೆ ಕೊಟ್ಟಿದ್ದೇನೆ. ಅವರು ಅಷ್ಟೇ ಚೆನ್ನಾಗಿ ಹಾಡು ಮಾಡಿದ್ದಾರೆ. ಈ ಹಾಡನ್ನು ಮೊದಲು ಅವರೇ ಹಾಡಿದ್ದರು. ಎಲ್ಲರೂ ಇಷ್ಟಪಟ್ಟಿದ್ದರು. ಆದರೂ ಈ ಹಾಡನ್ನು ವಿಜಯಪ್ರಕಾಶ್ ಹಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅದಕ್ಕೆ ಪೂರ್ಣಚಂದ್ರ ಅವರು ಒಪ್ಪಿಕೊಂಡರು. ವಿಜಯಪ್ರಕಾಶ್ ಅವರಿಂದ ಹಾಡಿಸಿದ್ದೇವೆ’ ಎಂದರು ನೀನಾಸಂ ಸತೀಶ್. ಇದು ಅವರ ‘ಮ್ಯಾಟ್ನಿ’ ಸಿನಿಮಾದ ‘ಸಂಜೆ ಮೇಲೆ ಹಂಗೆ ಸುಮ್ನೆ ಫೋನು ಮಾಡ್ಲ ನಿಂಗೆ?’ ಹಾಡು. ಸತೀಶ್ ಮತ್ತು ರಚಿತಾ ರಾಮ್ ಅವರ ಮೇಲೆ ಈ ಹಾಡು ಪಿಕ್ಚರೈಸ್ ಆಗಿದೆ. ಸಂಗೀತ ಸಂಯೋಜಿಸಿರುವ ಪೂರ್ಣಚಂದ್ರ ತೇಜಸ್ವಿ ಅವರದ್ದೇ ರಚನೆಯಿದು. ಪ್ರತಾಪ್ ಆಕರ್ಷಕ ಸೆಟ್ಗಳನ್ನು ಹಾಕಿದ್ದು, ಸಂತು ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ.
ನೀನಾಸಂ ಸತೀಶ್ ಮತ್ತು ರಚಿತಾರಾಮ್ ಅಭಿನಯಿಸಿದ್ದ ‘ಅಯೋಗ್ಯ’ ಚಿತ್ರದ ‘ಏನಮ್ಮಿ ಏನಮ್ಮಿ’ ಹಾಡು ಹಿಟ್ ಆಗಿತ್ತು. ಈಗ ಅವರಿಬ್ಬರ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ ‘ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ’ ಹಾಡು ಕೂಡ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾ ಬಗ್ಗೆ ಮಾತನಾಡುವ ಹೀರೋ ಸತೀಶ್, ‘ನಿರ್ದೇಶಕ ಮನೋಹರ್ ಅವರು ಕಥೆ ಹೇಳಿದಾಕ್ಷಣ ಒಪ್ಪಿಕೊಂಡೆ. ಬಹಳ ಚೆನ್ನಾಗಿ ಕತೆ ಮಾಡಿಕೊಂಡಿದ್ದಾರೆ. ‘ಅಯೋಗ್ಯ’ ನಂತರ ನಾನು ಮತ್ತು ರಚಿತಾ ಒಟ್ಟಿಗೆ ಅಭಿನಯಿಸಿರುವ ಚಿತ್ರವಿದು. ಈ ಚಿತ್ರದ ಕಥೆ ಕೇಳಿದಾಗ, ಈ ಕಥೆಗೆ ರಚಿತಾ ರಾಮ್ ಅವರೇ ಸೂಕ್ತ ಅನಿಸಿತು. ನಂತರ ಮತ್ತೊಬ್ಬ ನಾಯಕಿಯಾಗಿ ಅದಿತಿ ಚಿತ್ರತಂಡ ಸೇರಿದರು. ಈಗಾಗಲೇ ರಚಿತಾ ರಾಮ್ ಅವರು ಈ ಚಿತ್ರದಲ್ಲಿದ್ದಾರೆ. ಅದಿತಿ ಒಪ್ಪುತ್ತಾರಾ ಎಂಬ ಗೊಂದಲವಿತ್ತು. ಅವರು ಒಂದೇ ಮಾತಿಗೆ ಒಪ್ಪಿಕೊಂಡರು. ಇನ್ನು ಚಿತ್ರದಲ್ಲಿ ನಟಿಸಿರುವ ನಾಗಭೂಷಣ್, ಶಿವರಾಜ್ ಕೆ ಆರ್ ಪೇಟೆ, ಪೂರ್ಣ ಎಲ್ಲರೂ ಹಳೆಯ ಸ್ನೇಹಿತರು. ಆನಂದ್ ಆಡಿಯೋದವರು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ನಮ್ಮದು ಹಳೆಯ ನಂಟು. ಅವರ ಸಂಸ್ಥೆಯಿಂದ ಹೊರಬಂದ ನನ್ನ ಸಿನಿಮಾ ಹಾಡುಗಳು ದೊಡ್ಡ ಯಶಸ್ಸು ಕಂಡಿವೆ’ ಎನ್ನುತ್ತಾರೆ.
ಮತ್ತೊಂದು ಸುಂದರ ಹಾಡಿನಲ್ಲಿ ಕಾಣಿಸಿಕೊಂಡ ಖುಷಿ ಹಿರೋಯಿನ್ ರಚಿತಾ ರಾಮ್ ಅವರದ್ದು. ‘ಚಿತ್ರೀಕರಣದಲ್ಲೇ ಹಾಡು ಬಹಳ ಚೆನ್ನಾಗಿ ಮೂಡಿಬರುತ್ತದೆ ಎಂದೆನಿಸಿತ್ತು. ಸಾಹಿತ್ಯ ಬಹಳ ಚೆನ್ನಾಗಿದೆ. ಸಂತು ಬಹಳ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತುಂಬಾ ಎಂಜಾಯ್ ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಪ್ರತಾಪ್ ಅವರು ಅದ್ಭುತ ಸೆಟ್ಗಳನ್ನು ಹಾಕಿದ್ದಾರೆ. ಒಂದು ಸೆಟ್ ಸ್ವಿಟ್ಜರ್ಲ್ಯಾಂಡ್ ನೆನಪಿಸಿತು’ ಎನ್ನುತ್ತಾರೆ ರಚಿತಾ. ‘ಈ ಹಾಡು ಸಿನಿಮಾಗೆ ಒಂದೊಳ್ಳೇ ಇನ್ವಿಟೇಷನ್!’ ಎನ್ನುವುದು ನಟಿ ಅದಿತಾ ಪ್ರಭುದೇವ ಅಭಿಪ್ರಾಯ. ಪಾರ್ವತಿ ಗೌಡ ನಿರ್ಮಾಣದ ಚಿತ್ರವನ್ನು ಮನೋಹರ್ ಕಾಂಪಲ್ಲಿ ನಿರ್ದೇಶಿಸಿದ್ದಾರೆ.