ಬಿರಾದಾರ್‌ ಅಭಿನಯದ ’90 ಹೊಡಿ ಮನೀಗ್ ನಡಿ’ ಸಿನಿಮಾದ ಶೀರ್ಷಿಕೆಗೆ ಸೆನ್ಸಾರ್‌ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕುಡಿತಕ್ಕೆ ಪ್ರಚೋದನ ನೀಡುವ ಶೀರ್ಷಿಕೆ ಎನ್ನುವುದು ಅವರ ವಾದ. ಹಾಗಾಗಿ ಚಿತ್ರತಂಡ ಶೀರ್ಷಿಕೆಯಲ್ಲಿ ಕೊಂಚ ಮಾರ್ಪಾಟು ಮಾಡಿಕೊಂಡಿದೆ.

ನಟ ಬಿರಾದಾರ್ ಅಭಿನಯದ ’90 ಹೊಡಿ ಮನೀಗ್ ನಡಿ’ ಚಿತ್ರವು ಸೆನ್ಸಾರ್ ಮೆಟ್ಟಿಲೇರಿದ್ದು, ಟೈಟಲ್ ತಗಾದೆ ಎದುರಿಸಿದೆ. “90 ಹೊಡಿ ಮನೀಗ್ ನಡಿ ಎಂದರೆ, ಜನರನ್ನು ನೇರವಾಗಿ ಕುಡಿತಕ್ಕೆ ಪ್ರಚೋದಿಸಿದಂತಾಗುತ್ತದೆ” ಎಂಬುದು ಮಂಡಳಿಯವರ ಅಭಿಪ್ರಾಯ. ಹಾಗಾಗಿ ಚಿತ್ರದ ಶೀರ್ಷಿಕೆ ಬದಲಾಯಿಸಲು ಸೂಚನೆ ನೀಡಿದೆ. ಈ ಬದಲಾವಣೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಸಿನಿ ತಂಡ, ಶೀರ್ಷಿಕೆಯನ್ನು ’90 ಬಿಡಿ ಮನೀಗ್ ನಡಿ’ ಎಂದು ಬದಲಾಯಿಸಿಕೊಂಡಿದೆ. ‘ಹೊಡಿ’ ಬದಲು ‘ಬಿಡಿ’ ಎಂದಾಗಿದೆ ಅಷ್ಟೆ. ಏನೇ ಆದರೂ ’90’ಯೇ ಸಿನಿಮಾದ ಹೈಲೈಟ್ ಆಗಿರುವುದರಿಂದ ತಮಗೆ ಬೇಸರವಾಗಿಲ್ಲ ಎನ್ನುವ ನಿರ್ಮಾಪಕಿ ರತ್ನಮಾಲಾ ಬಾದರದಿನ್ನಿ, ಟೈಟಲ್ ಬದಲಾಯಿಸಲು ಸೂಚಿಸಿದ ಮಂಡಳಿಯವರು ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಹೆಗ್ಗಳಿಕೆ ಎನ್ನುತ್ತಾರೆ.

ಕಾಮಿಡಿ, ಕ್ರೈಮ್ ಥ್ರಿಲ್ಲರ್ ಕಥೆ ಆಧರಿಸಿದ ಈ ಚಿತ್ರವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ನಿರ್ದೇಶನ ಮಾಡಿದ್ದಾರೆ. ಪ್ರಚಾರ ಕೆಲಸ ಶುರುವಾಗಲಿದ್ದು, ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ. ಉಳಿದಂತೆ ಡಾ.ನಾಗೇಂದ್ರ ಪ್ರಸಾದ್ ಮತ್ತು ಶಿವು ಭೇರಗಿಯವರ ಸಾಹಿತ್ಯಕ್ಕೆ ಕಿರಣ್ ಶಂಕರ್ ಸಂಗೀತ ನೀಡಿದ್ದು, ವೀರ್ ಸಮರ್ಥ್ ಹಿನ್ನೆಲೆ ಸಂಗೀತದಲ್ಲಿ ಸಾಥ್ ನೀಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಟೇಶ್ ಸಂಕಲನ, ರಾಕಿ ರಮೇಶ್ ಸಾಹಸ, ಚುಟು- ಚುಟು ಖ್ಯಾತಿಯ ಭೂಷಣ್ ಕೊರಿಯೋಗ್ರಫಿ ಈ ಚಿತ್ರಕ್ಕಿದೆ. ಬಿರಾದಾರ್ ಜೊತೆ ನೀತಾ ಮೈಂದರ್ಗಿ, ಪ್ರೀತು ಪೂಜಾ, ಹಿರಿಯ ನಟ ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ಆರ್ ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಮುರುಳಿ ಹೊಸಕೋಟೆ ತೆರೆ ಹಂಚಿಕೊಂಡಿದ್ದಾರೆ.

ನಟ ವೈಜನಾಥ ಬಿರಾದಾರ್ ಅವರ ಅಭಿನಯದ ಐನೂರನೇ ಚಿತ್ರ ಆಗಿರುವ ಕಾರಣಕ್ಕೆ ಈ ಸಿನಿಮಾ ಸದ್ದು ಮಾಡತೊಡಗಿದೆ. ಚಿತ್ರದ ಬಹುಭಾಗ ಉತ್ತರ ಕರ್ನಾಟಕದ ಭಾಗಗಳಲ್ಲೇ ಹೆಚ್ಚಾಗಿ ಚಿತ್ರೀಕರಣಗೊಂಡು, ಆ ಭಾಷಾ ಶೈಲಿಯಲ್ಲೇ ಚಿತ್ರ ಮೂಡಿ ಬಂದಿದೆ. ಅಲ್ಲಿಯ ದೇಸೀ ಸೊಗಡನ್ನೇ ಹೊತ್ತು ತಂದಿದ್ದರಿಂದ, ಸಹಜವಾಗಿಯೇ ಆ ಭಾಗದ ಜನರ ನಿರೀಕ್ಷೆ ತುಸು ಹೆಚ್ಚೇ ಇದೆ. “ಒಂದೊಳ್ಳೆ ಪ್ರಯತ್ನವನ್ನಂತೂ ಮಾಡಿದ್ದೇವೆ. ಮಿಕ್ಕಿದ್ದು ಪ್ರೇಕ್ಷಕರ ಸಹಕಾರದಲ್ಲಿದೆ” ಎನ್ನುವ ಚಿತ್ರತಂಡ ಅಂದುಕೊಂಡಂತೆಯೇ ಎಲ್ಲವೂ ಆದರೆ ಮೇ ತಿಂಗಳಿನಲ್ಲಿ ಸಿನಿಮಾವನ್ನು ಥಿಯೇಟರ್‌ಗೆ ತರಲು ಯೋಜಿಸುತ್ತಿದೆ.

LEAVE A REPLY

Connect with

Please enter your comment!
Please enter your name here