ಲಯ ಕೋಕಿಲ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ತಾಯ್ತ’ ಸಿನಿಮಾದ ‘ಶಿವನೇ ಕಾಪಾಡು’ ಹಾಡು ಬಿಡುಗಡೆಯಾಗಿದೆ. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗುರುಗಳು ಹಾಡು ಬಿಡುಗಡೆ ಮಾಡಿದ್ದು ವಿಶೇಷ. ರಿಯಾನ್ – ಹರ್ಷಿಕಾ ಪೂಣಚ್ಚ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.
ನಟ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಲಯ ಕೋಕಿಲ ಚೊಚ್ಚಲ ನಿರ್ದೇಶನದ ‘ತಾಯ್ತ’ ಚಿತ್ರಕ್ಕಾಗಿ ರಾಮ್ ನಾರಾಯಣ್ ಅವರು ರಚಿಸಿರುವ ‘ಶಿವನೇ ಕಾಪಾಡು’ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳ ಮೂರು ದೇವರ ಕುರಿತಾದ ಈ ಹಾಡನ್ನು ಮೂರೂ ಧರ್ಮದ ಗುರುಗಳು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಾಧುಕೋಕಿಲ , ಉಷಾ ಕೋಕಿಲ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿರಿ ಮ್ಯೂಸಿಕ್ ಮೂಲಕ ಚಿತ್ರದ ಹಾಡು ಬಿಡುಗಡೆಯಾಗಿದೆ. ಅನುರಾಧಾ ಭಟ್ ಈ ಹಾಡಿಗೆ ದನಿಯಾಗಿದ್ದಾರೆ.
‘ನಮ್ಮದು ಸಂಗೀತದ ಕುಟುಂಬ. ಬಹುತೇಕ ಎಲ್ಲರೂ ಸಂಗೀತಕ್ಕೆ ಸಂಬಂಧಿಸಿದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಅಣ್ಣ ಲಯಕೋಕಿಲ ಈಗ ನಿರ್ದೇಶಕ ಆಗಿದ್ದಾನೆ. ಅವನ ನಿರ್ದೇಶನದ ‘ತಾಯ್ತ’ ಚಿತ್ರದ ಹಾಡು ಇಂದು ಬಿಡುಗಡೆಯಾಗಿದೆ. ಅವರೇ ಸಂಗೀತ ನೀಡಿದ್ದಾರೆ. ನಾನೂ ಕೂಡ ಚಿತ್ರದಲ್ಲಿ ಅಭಿನಯಿಸಿದ್ದೇನೆ’ ಎಂದು ಸಾಧುಕೋಕಿಲ ಹಾರೈಸಿದರು. ಅವರ ಹಿರಿಯ ಸಹೋದರ ಲಯ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಹಾರರ್ ಜಾನರ್ ಚಿತ್ರವಾಗಿದ್ದರೂ, ಕಾಮಿಡಿ ಹಾಗೂ ಥ್ರಿಲ್ಲರ್ ಇದೆ ಎನ್ನುತ್ತಾರೆ. ‘ನಿರ್ಮಾಪಕ ಶಾಹಿದ್ ಕತೆ ಬರದಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರದ ನಿರ್ದೇಶನದ ಹೊಣೆಯ ಜೊತೆ ಸಂಗೀತ ಸಂಯೋಜನೆ ಹೊಣೆಯೂ ನನ್ನದೆ. ರಿಯಾನ್ ಈ ಚಿತ್ರದ ನಾಯಕನಾಗಿ, ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಮಗಳು ಭಾನುಪ್ರಿಯ ಕೂಡ ಅಭಿನಯಿಸಿದ್ದಾರೆ. ಕೆಲವರನ್ನು ಬಿಟ್ಟು, ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ಹೊಸ ಕಲಾವಿದರೆ’ ಎಂದರು ಲಯ. ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ.