ಬಿ ಎಂ ಗಿರಿರಾಜ್‌ ನಿರ್ದೇಶನಕ್ಕೆ ಮರಳಿದ್ದಾರೆ. ಗುರು ದೇಶಪಾಂಡೆ ನಿರ್ಮಿಸುತ್ತಿರುವ ಈ ಸಿನಿಮಾಗೆ ‘ರಾಮರಸ’ ಎನ್ನುವ ವಿಶಿಷ್ಟ ಶೀರ್ಷಿಕೆ ನಿಗದಿಯಾಗಿದೆ. ನಿರ್ಮಾಪಕ ಗುರು ದೇಶಪಾಂಡೆ ಈ ಚಿತ್ರದ ಮೂಲಕ ತಮ್ಮ ಜಿ ಅಕಾಡೆಮಿಯ ಹದಿನಾರು ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.

ಹಬ್ಬ – ಹರಿದಿನಗಳಲ್ಲಿ ಹೊಸ ಸಿನಿಮಾಗಳನ್ನ ಲಾಂಚ್‌ ಮಾಡೋದು ಸಹಜ. ಇನ್ನು ಹಬ್ಬಗಳ ಸಮಯದಲ್ಲಿ ಟೈಟಲ್‌, ಸಾಂಗ್‌ ಹಾಗೂ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗುತ್ತದೆ. ಅಂತೆಯೇ ಜಟ್ಟ, ಮೈತ್ರಿಯಂಥ ಪ್ರಯೋಗಾತ್ಮಕ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಬಿ ಎಂ ಗಿರಿರಾಜ್ ರಾಮನವಮಿ ಪ್ರಯುಕ್ತ ಹೊಸ ಸಿನಿಮಾ ಪ್ರಕಟಿಸಿದ್ದಾರೆ. ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಬ್ಯಾನರ್‌ ಅಡಿ ನಿರ್ಮಾಣ ಮಾಡುತ್ತಿರುವ ‘ಪ್ರೊಡಕ್ಷನ್ ನಂ 4’ ಚಿತ್ರದ ಶೀರ್ಷಿಕೆ ಈಗ ಅನಾವರಣವಾಗಿದೆ. ಚಿತ್ರಕ್ಕೆ ‘ರಾಮರಸ’ ಎಂದು ಟೈಟಲ್‌ ಇಡಲಾಗಿದೆ. ಈ ಚಿತ್ರದ ಶೀರ್ಷಿಕೆಯನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿರುವುದು ವಿಶೇಷ.

ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ ಧ್ರುವ ಸರ್ಜಾ, ‘ಶ್ರೀರಾಮನವಮಿಯ ಹಬ್ಬದಂದೇ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ನಡೆಯಬೇಕಿತ್ತು. ಆದರೆ ಕಾರಣಾಂತರದಿಂದ ಮಾರನೇ ದಿನ ಬಿಡುಗಡೆ ಮಾಡಲಾಗಿದೆ. ʼರಾಮರಸʼ ಟೈಟಲ್ ಚೆನ್ನಾಗಿದೆ. ಮೋಷನ್ ಪೋಸ್ಟರ್ ಕೂಡ ಅದ್ಭುತವಾಗಿದೆ. ಗುರು ದೇಶಪಾಂಡೆ ನನ್ನ ಅಣ್ಣನ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ‌. ನನ್ನ ಸ್ನೇಹಿತ ಕೂಡ ಈ ಚಿತ್ರದಲ್ಲಿ ನಟಸುತ್ತಿದ್ದಾನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಹಾರೈಸಿದರು.

‘ಈ ಸಿನಿಮಾ ಹಾರಾರ್ ಕಾಮಿಡಿ ಜಾನರ್ ಹೊಂದಿದೆ. ಜಿ ಅಕಾಡೆಮಿಯ ಹದಿನಾರು ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಗುರು ದೇಶಪಾಂಡೆ ಅವರು ಈ ಹಿಂದೆ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು. ಈಗ ಧ್ರುವ ಸರ್ಜಾ ಅವರಿಂದ ಶೀರ್ಷಿಕೆ ಅನಾವರಣವನ್ನು ಮಾಡಿಸಿದ್ದಾರೆ’ ಎಂದು ನಿರ್ದೇಶಕ ಬಿ.ಎಂ.ಗಿರಿರಾಜ್ ತಿಳಿಸಿದರು.

‘2008ರಲ್ಲಿ ಮೊದಲ ನಿರ್ದೇಶನದೊಂದಿಗೆ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದೆ. ಅಂದಿನಿಂದ ನನ್ನ ಚಿತ್ರಗಳಲ್ಲಿ‌ ಹೆಚ್ಚಾಗಿ ಹೊಸ ಕಲಾವಿದರಿಗೆ ಅವಕಾಶ ಕೊಡುತ್ತಾ ಬಂದಿದ್ದೇನೆ. ಇದು ನಮ್ಮ‌ ಜಿ ಸಿನಿಮಾಸ್ ಲಾಂಛನದಲ್ಲಿ ನಾನು ನಿರ್ಮಾಣ ಮಾಡುತ್ತಿರುವ ನಾಲ್ಕನೇ ಸಿನಿಮಾ.‌ ಈ ಚಿತ್ರದಲ್ಲೂ ಜಿ ಅಕಾಡೆಮಿಯ ಹದಿನಾರು ನೂತನ ಪ್ರತಿಭೆಗಳು ಅಭಿನಯಿಸುತ್ತಿದ್ದಾರೆ. ಅವರಿಗೆ ಅಭಿನಯಕ್ಕೆ ಬೇಕಾದ ವರ್ಕ್‌ಶಾಪ್ ನಡೆಸಲಾಗಿದೆ. ಇವರೊಂದಿಗೆ ಕನ್ನಡದ ಖ್ಯಾತ ನಟರೊಬ್ಬರು ನಟಿಸುತ್ತಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ. ಮೇ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಪುನೀತ್ ಆರ್ಯ ಬರೆದಿರುವ ಹಾಡುಗಳಲ್ಲಿ ಎರಡಕ್ಕೆ ಬಿ ಜೆ ಭರತ್ ಈಗಾಗಲೇ ಸಂಗೀತ ಸಂಯೋಜನೆ ಮಾಡಿದ್ದಾರೆʼ ಎಂದು ನಿರ್ಮಾಪಕ ಗುರು ದೇಶಪಾಂಡೆ ಸಂತಸ ಹಂಚಿಕೊಂಡರು.

LEAVE A REPLY

Connect with

Please enter your comment!
Please enter your name here