ನಿರ್ಮಾಣ, ಹಿನ್ನೆಲೆ ಸಂಗೀತ, ಶೋಭಿತ ಧೂಲಿಪಾಲ ಮತ್ತು ಅರ್ಜುನ್ ಮಾಥುರ್ ಅಭಿನಯ, ಕಬೀರ್ ಮತ್ತು ಜ್ಯಾಸ್ ಪಾತ್ರಧಾರಿಗಳ ಅಭಿನಯ ಎಲ್ಲವೂ ಅತ್ಯುತ್ತಮವಾಗಿದ್ದರೂ ಎಲ್ಲ ಪಾತ್ರಗಳಿಗೂ ಅತಿಯಾದ grey area ಮಾದರಿಯ ಪಾತ್ರಚಿತ್ರಣ ಮಾಡಿರುವುದು ವೀಕ್ಷಕರನ್ನು ಯಾವ ಪಾತ್ರದ ಬಗ್ಗೆಯೂ ಒಂದು ನಿರ್ದಿಷ್ಟ ಅಭಿಪ್ರಾಯಕ್ಕೆ ಬರದಂತೆ ಮಾಡಿದೆ. ಇದು ಈ ಸರಣಿಯ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಎರಡೂ ಎನ್ನಬಹುದು. ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ‘ಮೇಡ್ ಇನ್ ಹೆವನ್ -2’.
ಜೋಯಾ ಅಖ್ತರ್ ಮತ್ತು ಫರ್ಹಾನ್ ಅಖ್ತರ್ ಅವರ ಸಹಯೋಗದಲ್ಲಿ ನಿರ್ಮಾಣವಾದ, ಜೋಯಾ ಅಖ್ತರ್ ನಿರ್ದೇಶನದಲ್ಲಿ 2019ರಲ್ಲಿ ಮೂಡಿಬಂದ ‘ಮೇಡ್ ಇನ್ ಹೆವನ್’ ಸರಣಿ ಬಹಳ ಮೆಚ್ಚುಗೆ ಗಳಿಸಿತ್ತು. ಜನರು ಬಹಳ ಕಾತುರದಿಂದ ಕಾಯುತ್ತಿದ್ದ ಎರಡನೇ ಸೀಸನ್ ಇದೀಗ ಆಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ವೆಡ್ಡಿಂಗ್ ಪ್ಲಾನರ್ಸ್ ಆದ ತಾರಾ ಮತ್ತು ಕರಣ್ ಜೋಡಿ ಈ ಎರಡೂ ಸೀಸನ್‌ಗಳ ಕೇಂದ್ರ ಪಾತ್ರಗಳು. ದೆಹಲಿಯ ಅತ್ಯಾಧುನಿಕ ಮೇಲ್ವರ್ಗದ ಜನರ ಮದುವೆಗಳು, ಆಡಂಬರ, ಅವಾಂತರ ಇವೆಲ್ಲದರ ಮನರಂಜನಾತ್ಮಕ ಚಿತ್ರಣ ಕಟ್ಟಿಕೊಟ್ಟ ಸರಣಿ ಇದು.
ಈ ಸೀಸನ್ನಿನಲ್ಲೂ ಅದೇ ಮುಂದುವರೆದಿದೆಯಾದರೂ ಇದರಲ್ಲಿ ತಾರಾ ಕರಣ್‌ಗಿಂತಲೂ ಗಮನ ಸೆಳೆಯುವ ಪಾತ್ರವೆಂದರೆ ಮೋನಾ ಸಿಂಗ್ ಅವರ ಅಭಿನಯ. ಬುಲ್‌ಬುಲ್ ಪಾತ್ರದಲ್ಲಿ ಕಂಪನಿಯ ಆಡಿಟರ್ ಆಗಿ, ಸಾಲ ಕೊಟ್ಟ ಜೋಹಾರಿಯ ಪತ್ನಿಯ ಪಾತ್ರದಲ್ಲಿ ಪರಿಚಿತವಾಗುವ ಮೋನಾ ಸಿಂಗ್ ಈ ಸೀಸನ್‌ನ ಸ್ಟಾರ್ ಎನ್ನಲಡ್ಡಿಯಿಲ್ಲ. ಸ್ವತಃ ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯಾಗಿ, ಒಬ್ಬ ತಾಯಿಯಾಗಿ ಹೇಗೆ ಮತ್ತೊಂದು ಹೆಣ್ಣಿನ ಸಹಾಯಕ್ಕೆ ನಿಲ್ಲುತ್ತಾಳೆ ಎನ್ನುವುದನ್ನು ಮೋನಾ ಸಿಂಗ್ ಬಹಳ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹದಿಹರೆಯದ ಮಕ್ಕಳ ಕೈಯಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್‌ನಿಂದ ಆಗುವ ಅನಾಹುತಗಳ ಚಿತ್ರಣವೂ ಪರಿಣಾಮಕಾರಿಯಾಗಿದೆ.
ಇನ್ನು ಸಂಚಿಕೆಗಳ ವಿಷಯಕ್ಕೆ ಬರುವುದಾದರೆ ಮೊದಲನೇ ಸೀಸನ್‌ನಂತೆಯೇ ಒಂದೊಂದು ಸಂಚಿಕೆಯಲ್ಲೂ ಒಂದೊಂದು ಕುಟುಂಬದ ಮದುವೆಯ ಚಿತ್ರಣ, ಅಲ್ಲಿ ನಡೆಯುವ ಆಂತರಿಕ ಕಲಹ, ಗೊಂದಲ, ಕೌಟುಂಬಿಕ ಸಮಸ್ಯೆ ಇವೆಲ್ಲದರ ಚಿತ್ರಣ ಕಾಣಬಹುದು. ಮುಸಲ್ಮಾನ ಕುಟುಂಬಗಳಲ್ಲಿ ಚಾಲ್ತಿಯಲ್ಲಿರುವ ಬಹುಪತ್ನಿತ್ವ ಒಂದು ಸಂಚಿಕೆಯಲ್ಲಿ ತೋರಿಸಲ್ಪಟ್ಟರೆ ಮತ್ತೊಂದು ಸಂಚಿಕೆಯಲ್ಲಿ ಎಷ್ಟೇ ಮುಂದುವರೆದ ವರ್ಗವಾದರೂ ತ್ವಚೆಯ ಬಣ್ಣದ ಬಗ್ಗೆ ಇರುವ ಕೀಳರಿಮೆ ಮತ್ತು ಅದರಿಂದಾಗುವ ಮಾನಸಿಕ ಪರಿಣಾಮಗಳು ತೋರಿಸಲ್ಪಟ್ಟಿವೆ. ಇದರ ಜೊತೆಗೆ ಕೌಟುಂಬಿಕ ಹಿಂಸೆ ಮೊದಲಾದ ಅನೇಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿರುವುದು ಪ್ರಶಂಸಾರ್ಹ.
ಆದರೂ ಕಳೆದ ಸೀಸನ್‌ಗೆ ಹೋಲಿಸಿದರೆ ಈ ಸೀಸನ್‌ನಲ್ಲಿ ತಾರಾ ಮತ್ತು ಕರಣ್ ಇಬ್ಬರ ವೈಯಕ್ತಿಕ ಬದುಕಿನ ಚಿತ್ರಣ ಸ್ವಲ್ಪ ಜಾಸ್ತಿಯೇ ಇದೆ ಮತ್ತು ಬಹಳ ಗೋಜಲು ಮಾಡಿಬಿಟ್ಟಿದ್ದಾರೆ ಎನಿಸಿತು. ಆದಿಲ್ ಮತ್ತು ತಾರಾಳ ವಿಚ್ಛೇದನ ಪ್ರಕರಣ ಆಸಕ್ತಿಕರ, ಸ್ವಾರ್ಥಭರಿತ ತಿರುವುಗಳೊಂದಿಗೆ ನಿರೂಪಿಸಲ್ಪಟ್ಟಿದೆ. ದುಡ್ಡಿನ ಮುಂದೆ ಸಂಬಂಧಗಳು ಹೇಗೆ ಹಿನ್ನಲೆಗೆ ಸರಿದುಬಿಡುತ್ತವೆ ಎನ್ನುವ ಕಹಿಸತ್ಯ ಪರಿಣಾಮಕಾರಿಯಾಗಿ ತೋರಿಸಲ್ಪಟ್ಟಿದೆ. ಚೆಫ್ ರಾಘವ್ ಪಾತ್ರ ತಾರಾಳ ಪಾತ್ರದ ಮುಂದೆ ತುಸು ಮಂಕಾದಂತೆ ಅನ್ನಿಸುತ್ತದೆ. ಅಲ್ಲಲ್ಲಿ ‘ಎಮಿಲಿ ಇನ್ ಪ್ಯಾರಿಸ್’ ಸರಣಿಯ ಛಾಯೆಗಳು ತುಸು ಹಾದುಹೋದಂತೆ ಭಾಸವಾಗುತ್ತದೆ.
ಇನ್ನು ಕರಣ್ ಪಾತ್ರಕ್ಕೆ ಬರುವುದಾದರೆ ತಾನು ಸಲಿಂಗಿ ಎಂದು ತಿಳಿದಾಗಲಿನಿಂದ ಮನೆಯಲ್ಲಿ ತನ್ನ ಮತ್ತು ತನ್ನ ತಾಯಿಯ ನಡುವೆ ಇರುವ ಭಿನ್ನಾಭಿಪ್ರಾಯದಿಂದಾಗಿ ಡ್ರಗ್ಸ್ ಚಟಕ್ಕೆ ಬೀಳುವ ಕರಣ್ ಪಾತ್ರವನ್ನು ಅನಗತ್ಯವಾಗಿ ಗೋಜಲುಗೊಳಿಸಿದ್ದಾರೆ ಎನಿಸಿತು. ಸಲಿಂಗರತಿಯ ಅತಿರಂಜಿತ ಹಸಿಬಿಸಿ ದೃಶ್ಯಗಳು ಕೂಡ ಅಗತ್ಯಕ್ಕಿಂತ ಜಾಸ್ತಿ ತುರುಕಲ್ಪಟ್ಟಿವೆ ಎನಿಸಿತು. ಎಲ್‌ಜಿಬಿಟಿ ಸಮುದಾಯವನ್ನು ಪ್ರತಿನಿಧಿಸುವ ಭರದಲ್ಲಿ ಅಗತ್ಯಕ್ಕಿಂತ ಜಾಸ್ತಿಯಾದ ಲೈಂಗಿಕತೆಯನ್ನು ವೀಕ್ಷಕರ ಮೇಲೆ ಹೇರುತ್ತಾ ಆ ಸಮುದಾಯವನ್ನು ಅಷ್ಟಕ್ಕೇ ಮಿತಿಗೊಳಿಸುತ್ತಿದ್ದಾರೆ ಎಂದೂ ಅನ್ನಿಸುತ್ತದೆ.
ಆದರೆ ಈ ಸೀಸನ್‌ನಲ್ಲಿ ತೃತೀಯ ಲಿಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೆಹರ್ ಪಾತ್ರಕ್ಕೆ ನಿಜಜೀವನದಲ್ಲೂ ತೃತೀಯಲಿಂಗಿಯಾಗಿರುವ, ವೃತ್ತಿಯಲ್ಲಿ ವೈದ್ಯೆಯಾಗಿರುವ ಮತ್ತು ತೃತೀಯಲಿಂಗಿಗಳ ಹಕ್ಕುಗಳ ಹೋರಾಟಗಾರ್ತಿಯಾಗಿರುವ ತ್ರಿನೇತ್ರ ಹಲ್ದಾರ್ ಅವರನ್ನು ಆಯ್ಕೆ ಮಾಡಿರುವುದು ವಿಶೇಷ. ಮನರಂಜನೆಯ ಪ್ರಪಂಚದ ಮುಖ್ಯವಾಹಿನಿಯಲ್ಲಿ ತೃತೀಯಲಿಂಗಿಗಳ ಪ್ರಾತಿನಿಧ್ಯಕ್ಕೆ ನಿಜಕ್ಕೂ ಅರ್ಥ ಕೊಟ್ಟಂತಿದೆ ಈ ಆಯ್ಕೆ. ನಿರ್ಮಾಣ, ಹಿನ್ನೆಲೆ ಸಂಗೀತ, ಶೋಭಿತ ಧೂಲಿಪಾಲ ಮತ್ತು ಅರ್ಜುನ್ ಮಾಥುರ್ ಅಭಿನಯ, ಕಬೀರ್ ಮತ್ತು ಜ್ಯಾಸ್ ಪಾತ್ರಧಾರಿಗಳ ಅಭಿನಯ ಎಲ್ಲವೂ ಅತ್ಯುತ್ತಮವಾಗಿದ್ದರೂ ಎಲ್ಲ ಪಾತ್ರಗಳಿಗೂ ಅತಿಯಾದ grey area ಮಾದರಿಯ ಪಾತ್ರಚಿತ್ರಣ ಮಾಡಿರುವುದು ವೀಕ್ಷಕರನ್ನು ಯಾವ ಪಾತ್ರದ ಬಗ್ಗೆಯೂ ಒಂದು ನಿರ್ದಿಷ್ಟ ಅಭಿಪ್ರಾಯಕ್ಕೆ ಬರದಂತೆ ಮಾಡಿದೆ. ಇದು ಈ ಸರಣಿಯ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಎರಡೂ ಎನ್ನಬಹುದು.
ಸಾಮಾನ್ಯವಾಗಿ ನಮ್ಮ ಸಿನಿಮಾ ಸೀರಿಯಲ್ಲುಗಳಲ್ಲಿ ತೃತೀಯ ಲಿಂಗಿಗಳನ್ನು ಅಂದರೆ ಮಂಗಳಮುಖಿಯರನ್ನು ಅವಹೇಳನಕಾರಿಯಾಗಿ ತೋರಿಸಿರುವುದೇ ಜಾಸ್ತಿ. ‘ನಾನು ಅವನಲ್ಲ ಅವಳು’ ಚಿತ್ರ ಬಂದಾಗ ಪದವಿ ಮುಗಿಸಿ ಕೆಲಸಕ್ಕೆ ಸೇರುವ ವಿದ್ಯಾ ಪಾತ್ರದಲ್ಲಿ ಸಂಚಾರಿ ವಿಜಯ್ ಅವರ ಅಭಿನಯ ಇನ್ನೂ ಮನಸ್ಸಲ್ಲಿ ಹಸುರಾಗಿದೆ. ಆದರೂ ಸಾಮಾನ್ಯವಾಗಿ cis gender ನಟರನ್ನೇ transgender ಪಾತ್ರಗಳಿಗೂ ಹಾಕಿಕೊಳ್ಳುವವರೇ ಹೆಚ್ಚು. ಇದೀಗ ಕರ್ನಾಟಕದ ತೃತೀಯಲಿಂಗಿ ಸಮುದಾಯದ ಮೊತ್ತಮೊದಲ ವೈದ್ಯೆಯಾದ, ತೃತೀಯಲಿಂಗಿಗಳ ಸಮುದಾಯದ ಹಕ್ಕುಗಳ ಹೋರಾಟಗಾರ್ತಿ ಕೂಡ ಆಗಿರುವ ತ್ರಿನೇತ್ರ ಹಾಲ್ದಾರ್ ಅವರು ‘ಮೇಡ್ ಇನ್ ಹೆವನ್ ಸೀಸನ್ 2’ನಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವುದು ಪ್ರಶಂಸಾರ್ಹ. ಅದೇ ಗೇ ಸಮುದಾಯವನ್ನು ಪ್ರತಿನಿಧಿಸುವ ಕರಣ್ ಪಾತ್ರದಲ್ಲಿ ಮಾತ್ರ ಮೆಹರ್ ಪಾತ್ರದಲ್ಲಿ ವ್ಯಕ್ತವಾದಷ್ಟು ಸೂಕ್ಷ್ಮತೆ ವ್ಯಕ್ತವಾಗಿರದೆ ಬರೀ ಲೈಂಗಿಕತೆ ಮತ್ತು ದುಶ್ಚಟಗಳನ್ನು ಮಾತ್ರ ಹೈಲೈಟ್ ಮಾಡಿ ತೋರಿಸಿರುವುದು ಸ್ವಲ್ಪ ಕಸಿವಿಸಿಯಾಗುತ್ತದೆ. ಹಾಗೆ ನೋಡಿದರೆ ಕರಣ್ ಪಾತ್ರ ಮೊದಲನೇ ಸೀಸನ್‌ನಲ್ಲಿ ಇನ್ನೂ ಪರಿಣಾಮಕಾರಿಯಾಗಿ ಬಿಂಬಿತವಾಗಿತ್ತು. ಆ ಸೂಕ್ಷ್ಮತೆ ಈ ಸೀಸನ್‌ನಲ್ಲೂ ಮುಂದುವರೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಅನವಶ್ಯಕ ಮತ್ತು ಅತಿಯೆನಿಸುವ ಮಾದಕವಸ್ತುಗಳು ಮತ್ತು ಲೈಂಗಿಕ ದೃಶ್ಯಗಳನ್ನು ಹೊರತುಪಡಿಸಿ ನೋಡಿದರೆ ‘ಮೇಡ್ ಇನ್ ಹೆವನ್’ ಉತ್ತಮವಾದ ಸರಣಿ ಎನ್ನಲು ಅಡ್ಡಿಯಿಲ್ಲ. ಸರಣಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.