ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್‌ ನಟಿಸಿರುವ ‘ಬಾನದಾರಿಯಲ್ಲಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಟ್ರೈಲರ್‌ನಲ್ಲಿ ಆಫ್ರಿಕಾದಲ್ಲಿ ಚಿತ್ರಿಸಿರುವ ಸನ್ನಿವೇಶಗಳೇ ಹೆಚ್ಚಾಗಿವೆ. ಗಣೇಶ್‌ ಮತ್ತು ರುಕ್ಮಿಣಿ ವಸಂತ್‌ ಪಾತ್ರಗಳಿಕಗೆ ಹೆಚ್ಚು ಸ್ಕ್ರೀನ್‌ಸ್ಪೆಸ್‌ ಇದೆ. ತ್ರಿಕೋನ ಪ್ರೇಮಕತೆಯ ಸುಳಿವು ನೀಡುವ ಸಿನಿಮಾ ಸೆಪ್ಟೆಂಬರ್‌ 28ಕ್ಕೆ ತೆರೆಕಾಣಲಿದೆ.

ಗಣೇಶ್‌, ರುಕ್ಮಿಣಿ ವಸಂತ್‌ ಮತ್ತು ರೀಷ್ಮಾ ನಾಣಯ್ಯ ಮುಖ್ಯಭೂಮಿಕೆಯಲ್ಲಿರುವ ‘ಬಾನದಾರಿಯಲ್ಲಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಶೀರ್ಷಿಕೆಯಿಂದಲೇ ಗಮನಸೆಳೆದಿದ್ದ ಸಿನಿಮಾದ ಬಹುಪಾಲು ಚಿತ್ರೀಕರಣ ಆಫ್ರಿಕಾದಲ್ಲಿ ನಡೆದಿರುವಂತಿದೆ. ಟ್ರೈಲರ್‌ನಲ್ಲಿ ಆಫ್ರಿಕಾದ ಸೀನ್‌ಗಳೇ ಹೆಚ್ಚಾಗಿವೆ. ಅಲ್ಲಿನ ಸುಂದರ ಪರಿಸರ, ಸಾಗರ, ಕಾಡುಪ್ರಾಣಿಗಳು, ಜನಜೀವನವನ್ನು ತೋರಿಸಿದ್ದಾರೆ. ಪ್ರೇಮಕತೆಯನ್ನು ದೂರದ ಆಫ್ರಿಕಾದಲ್ಲೇಕೆ ಚಿತ್ರಿಸಿದ್ದಾರೆ ಎನ್ನುವುದಕ್ಕೆ ಸರಿಯಾದ ಕಾರಣ ತಿಳಿಯುವುದಿಲ್ಲ. ಎಂದಿನಂತೆ ಗಣೇಶ್‌ರಿಗೆ ಪ್ರೀತಿಯ ಕುರಿತ ಡೈಲಾಗ್‌ಗಳಿವೆ. ರುಕ್ಮಿಣಿ ವಸಂತ್‌ ಅವರಿಗೆ ಹೆಚ್ಚು ಸ್ಕ್ರಿನ್‌ ಸ್ಪೇಸ್‌ ಇದೆ. ನಟ ರಂಗಾಯಣ ರಘು ಗಂಭೀರ ಪಾತ್ರ ನಿರ್ವಹಿಸಿದ್ದು ನಟಿ ರೀಷ್ಮಾ ನಾಣಯ್ಯ ಪಾತ್ರ ಪರಿಚಯವೂ ಇದೆ.

ಇತ್ತೀಚೆಗಷ್ಟೇ USA, ಡಲ್ಲಾಸ್‌ನಲ್ಲಿ ಸಿನಿಮಾದ ‘ಮಾತೆಲ್ಲಾ ಹಾಗೆ ಇದೆ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿತ್ತು. ಇದೀಗ ಟ್ರೈಲರ್‌ ಹೊರಬಿದ್ದಿದ್ದು ಪ್ರೊಮೋಷನ್‌ ಚಟುವಟಿಕೆಗಳಿಗೆ ಇಂಬು ಸಿಕ್ಕಿದೆ. ‘ನೋಡು ಎಂಥ ಚೆಂದ!’ ಅಡಿಬರಹ ಹೊಂದಿರುವ ಸಿನಿಮಾದ ಚಿತ್ರಕಥೆಯನ್ನು ಜನಪ್ರಿಯ ಛಾಯಾಗ್ರಾಹಕಿ ಪ್ರೀತಾ ಜಯರಾಮನ್ ಬರೆದಿದ್ದಾರೆ. ಚಿತ್ರವನ್ನು Shri Vaare Talkies ನಿರ್ಮಿಸಿದೆ. ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಅಭಿಲಾಷ್ ಕಲಾತಿ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಮಾಸ್ತಿ ಉಪ್ಪಾರಹಳ್ಳಿ ಸಂಭಾಷಣೆ ಸಿನಿಮಾಗಿದೆ. ಸೆಪ್ಟೆಂಬರ್‌ 28ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here