‘ಕಾಲಾ ಪತ್ಥರ್’ ಸಿನಿಮಾ ತಂಡ ಹೊಸತೊಂದು ಪ್ರಯೋಗ ಮಾಡಿದೆ. ಚಿತ್ರದ ಐದು ಹಾಡುಗಳನ್ನು ಸೇರಿಸಿ ‘ಸೌಂಡ್ಸ್ ಆಫ್ ಕಾಲಾಪತ್ಥರ್’ ಶೀರ್ಷಿಕೆಯಡಿ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಹಾಡುಗಳು ಇಲ್ಲಿವೆ.
‘ಕೆಂಡಸಂಪಿಗೆ’, ‘ಕಾಲೇಜು ಕುಮಾರ’ ಸಿನಿಮಾಗಳ ಹೀರೋ ವಿಕ್ಕಿ ವರುಣ್ ‘ಕಾಲಾಪತ್ಥರ್’ ಚಿತ್ರದೊಂದಿಗೆ ಮರಳಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ‘ಸೌಂಡ್ಸ್ ಆಫ್ ಕಾಲಾಪತ್ಥರ್’ ಮೂಲಕ ಅವರು ಪ್ರೊಮೋಷನ್ ಶುರು ಮಾಡಿದ್ದಾರೆ. ಇದೊಂದು ವಿಶಿಷ್ಟ ಪ್ರಯೋಗ. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಐದು ಹಾಡುಗಳನ್ನು ಸೇರಿಸಿ ರೂಪಿಸಿರುವ ‘ಸೌಂಡ್ಸ್ ಆಫ್ ಕಾಲಾಪತ್ಥರ್’ ಹಾಡುಗಳ ವೀಡಿಯೋ ಮೇಕಿಂಗ್‌ನಿಂದಲೂ ಗಮನ ಸೆಳೆಯುತ್ತದೆ. ವಿ ನಾಗೇಂದ್ರ ಪ್ರಸಾದ್ ಮತ್ತು ಪ್ರಮೋದ್ ಮರವಂತೆ ರಚನೆ ಮಾಡಿರುವ ಈ ಹಾಡುಗಳಿಗೆ ವಿಜಯ ಪ್ರಕಾಶ್, ಸಾಯಿ ವಿಘ್ನೇಶ್, ಅಭಿಷೇಕ್, ಐಶ್ವರ್ಯ ರಂಗರಾಜನ್, ಶಿವಾನಿ, ಸಿದ್ದಾರ್ಥ್ ಬೆಳ್ಮಣ್ಣು ದನಿಯಾಗಿದ್ದಾರೆ.
‘ಕಾಲಾಪತ್ಥರ್’ ಎನ್ನುವ ವಿಶಿಷ್ಟ ಶೀರ್ಷಿಕೆಯೊಂದಿಗೆ ವಿಕ್ಕಿ ವರುಣ್ ಸಿನಿಮಾ ಮಾಡಿದ್ದಾರೆ. ಚಿತ್ರನಿರ್ದೇಶಕ ಸೂರಿ ಅವರಲ್ಲಿ ಹಲವು ವರ್ಷ ಸಹಾಯಕರಾಗಿ ಕೆಲಸ ಮಾಡಿರುವ ಅನುಭವ ಅವರದು. ಚಿತ್ರದ ಬಗ್ಗೆ ಮಾತನಾಡುವ ಅವರು, ‘ನಿರ್ದೇಶನ ನನ್ನ ಕನಸು. ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ. ಸೂರಿ ಅವರ ಬಳಿ ಹತ್ತು ವರ್ಷ ಕೆಲಸ ಮಾಡಿರುವ ಅನುಭವದಿಂದ ನಿರ್ದೇಶನ ನನಗೆ ಅಷ್ಟು ಕಷ್ಟವಾಗಲಿಲ್ಲ. ನಿರ್ದೇಶನ ಹಾಗೂ ನಟನೆ ಎರಡು ಒಟ್ಟಿಗೆ ಮಾಡುವುದು ಸ್ವಲ್ಪ ಕಷ್ಟ. ಆದರೆ ನಮ್ಮ ಚಿತ್ರತಂಡದ ಸಹಕಾರದಿಂದ ಸಿನಿಮಾ ನಾವು ಅಂದುಕೊಂಡ ಹಾಗೆ ಮೂಡಿಬಂದಿದೆ. ಏನಾದರೂ ಹೊಸತು ಮಾಡಬೇಕೆಂದು ಆಲೋಚಿಸಿದಾಗ ಹೊಳೆದದ್ದೇ ಸೌಂಡ್ಸ್ ಆಫ್ ಕಾಲಾಪತ್ಥರ್’ ಎನ್ನುತ್ತಾರೆ. ವರನಟ ಡಾ ರಾಜಕುಮಾರ್ ಮೊಮ್ಮಗಳು ಧನ್ಯಾ ರಾಮಕುಮಾರ್ ‘ಕಾಲಾಪತ್ಥರ್’ ಚಿತ್ರದ ನಾಯಕಿ. ‘ನಾನು ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಗಂಗಾ ಹೆಸರಿನ ಶಿಕ್ಷಕಿ ಪಾತ್ರ ನನ್ನದು’ ಎನ್ನುತ್ತಾರವರು. ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಚಿತ್ರ ನಿರ್ಮಿಸಿದ್ದು, ಬಿಡುಗಡೆ ದಿನಾಂಕವಿನ್ನೂ ಹೊರಬೀಳಬೇಕಿದೆ.