2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿವೆ. ಚಿತ್ರನಿರ್ದೇಶಕ ಬಿ ಎಸ್ ಲಿಂಗದೇವರು ಅಧ್ಯಕ್ಷತೆಯಲ್ಲಿನ ಆಯ್ಕೆ ಸಲಹಾ ಸಮಿತಿಯ ಪ್ರಶಸ್ತಿ ಪಟ್ಟಿಯಿದು. ಯಾವ ಸಿನಿಮಾಗಳು 2020ರ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿವೆ? ಯಾವ ಕಾರಣಗಳಿಂದಾಗಿ ಈ ಸಿನಿಮಾಗಳು ಗೌರವಕ್ಕೆ ಪಾತ್ರವಾದವು? ಆಯ್ಕೆ ಮಾಡಿದ್ದು ಯಾಕೆ? ನಟರು ಮತ್ತು ತಂತ್ರಜ್ಞರು ತಮ್ಮ ಪ್ರತಿಭೆಯಿಂದ ಹೇಗೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು? ಇವೆಲ್ಲದರ ಕುರಿತು ಆಯ್ಕೆ ಸಮಿತಿ ಅಧ್ಯಕ್ಷ ಬಿ ಎಸ್ ಲಿಂಗದೇವರು ಬರೆದಿರುವ ಟಿಪ್ಪಣಿ ಇಲ್ಲಿದೆ.
ರಾಜ್ಯದಲ್ಲಿ ತಯಾರಾಗುವ ಕನ್ನಡ ಮತ್ತು ಕರ್ನಾಟಕ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲಿ ಸೃಜನಾತ್ಮಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಪ್ರತಿವರ್ಷ ಸೃಜನಶೀಲ ಸಿನೆಮಾ ಹಾಗೂ ಹೊಸ ಪ್ರಯತ್ನಗಳನ್ನು ಗುರುತಿಸಿ ಗೌರವಿಸುತ್ತದೆ. ಈ ಹಿನ್ನಲೆಯಲ್ಲಿ, 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಗೆ ನನ್ನನ್ನು ಅಧ್ಯಕ್ಷನಾಗಿ ನಾಮನಿರ್ದೇಶನ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನನ್ನೊಂದಿಗೆ ಪದ್ಮಾ ಶಿವಮೊಗ್ಗ (ಪತ್ರಕರ್ತೆ), ಉಮೇಶ್ ನಾಯಕ್ (ನಿರ್ದೇಶಕರು), ಡಿ.ಆರ್. ಸಂಪತ್ (ನಿರ್ಮಾಣ ನಿರ್ವಾಹಕರು), ಪದ್ಮಾ ವಾಸಂತಿ (ಹಿರಿಯ ನಟಿ), ಮಂಜುನಾಥ್ ಆರ್ (ಸಿನೆಮಾಟೋಗ್ರಾಫರ್), ಐವಾನ್ ಡಿ ಸಿಲ್ವಾ (ಸಿನೆಮಾ ವಿಶ್ಲೇಷಕರು), ಗುರುರಾಜ್ (ಸಂಗೀತ ನಿರ್ದೇಶಕರು) ಹಾಗೂ ಜಂಟಿ ನಿರ್ದೇಶಕರು ನವೀನ್ ಆರ್ ಸಿ ಈ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು.
ಆಯ್ಕೆ ಪ್ರಕ್ರಿಯೆ | 71 ಸಿನಿಮಾಗಳ ಪೈಕಿ 66 ಚಿತ್ರಗಳನ್ನು ವೀಕ್ಷಿಸಲಾಯಿತು. ತಾಂತ್ರಿಕ ಕಾರಣಗಳಿಂದ ಕೆಲವು ಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ, ಕೇವಲ ಮನೋರಂಜನೆಯಾಗಿಯೇ ಸಿನಿಮಾವನ್ನು ನೋಡದೆ, ಸಿನಿಮಾ ಸಮಾಜದ ಮೇಲೆ ಪ್ರಭಾವ ಬೀರುವ ಪ್ರಭಲ ಮಾಧ್ಯಮ. ಹಾಗೂ ಕಲೆ ಮತ್ತು ಉದ್ಯಮ ಎರಡನ್ನೂ ಪ್ರತಿನಿಧಿಸುವ ಕಲೋದ್ಯಮ ಎಂಬ ನಿಲುವಿನಿಂದ ವಿಮರ್ಶಿಸಲಾಯಿತು. ವಿಭಿನ್ನ ವಸ್ತು, ನೂತನ ನಿರೂಪಣಾ ಶೈಲಿ, ಪಾತ್ರ ಪೋಷಣೆ, ತಂತ್ರಜ್ಞರ ಹೊಸ ಪ್ರಯತ್ನಗಳು, ಕಲಾವಿದರ ನೈಜ ಅಭಿನಯ – ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಅವಲೋಕಿಸಿ ಮತ್ತು ಚರ್ಚಿಸಿದ ನಂತರ ಸರಕಾರಕ್ಕೆ ವಿವಿಧ ವಿಭಾಗಕ್ಕೆ ಪ್ರಶಸ್ತಿಗಳ ಶಿಫಾರಸು ಮಾಡಲಾಗಿದೆ.
ಪ್ರಶಸ್ತಿ ವಿಜೇತ ಚಿತ್ರಗಳ ವಸ್ತು ಮತ್ತು ಇತರೆ ವಿವರಗಳು
- ‘ಪಿಂಕಿ ಎಲ್ಲಿ?’ – ಹಂತ ಹಂತವಾಗಿ ಕಠಿಣ ಸತ್ಯದ ಚಿತ್ರಣ! | ಮೊದಲ ಅತ್ಯುತ್ತಮ ಚಿತ್ರ | ಶೀರ್ಷಿಕೆಯಲ್ಲಿಯೇ ಪ್ರಶ್ನೆ ಎತ್ತುವ ‘ಪಿಂಕಿ ಎಲ್ಲಿ?’ ಸಿನಿಮಾ, ತನ್ನ ಸರಳ ನಿರೂಪಣೆಯ ಮೂಲಕ ಅತ್ಯಂತ ತೀಕ್ಷ್ಣವಾದ ವಾಸ್ತವವನ್ನು ನಮ್ಮೆದುರು ಇಡುತ್ತದೆ. ಇದೊಂದು ಸರಳ ನಿರೂಪಣೆಯಿರುವ, ಹೇಳಬೇಕಾದ್ದನ್ನು ಹೆಚ್ಚು ಸಂಕೀರ್ಣಗೊಳಿಸದೆ ಕಟ್ಟಿರುವ ಸಿನಿಮಾವಾಗಿದೆ. ಎಂಟು ತಿಂಗಳ ಮಗುವೊಂದು ತನ್ನ ಮನೆಯಿಂದ ನಾಪತ್ತೆಯಾಗುವುದರೊಂದಿಗೆ ಆರಂಭವಾಗುವ ಸಿನಿಮಾ, ಮತ್ತೆ ಆ ಮಗು ತನ್ನ ಪೋಷಕರನ್ನು ಸೇರಿತೆ? ಅಥವಾ, ಈ ಹುಡುಕಾಟವು ಬೇರೆ ಯಾವ ವಾಸ್ತವಗಳತ್ತ ಕೊಂಡೊಯ್ಯುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಚಿತ್ರ ಭಾವುಕತೆಯನ್ನೂ, ಸಮಾಜದ ಸುತ್ತಮುತ್ತಲಿರುವ ಕಠಿಣ ಸತ್ಯಗಳನ್ನೂ ಸವಾಲಾಗಿ ಸ್ವೀಕರಿಸುತ್ತದೆ. ಅದನ್ನು ವಾಸ್ತವದ ನೆಲೆಗಟ್ಟಿನಲ್ಲಿ ಮತ್ತು ಅಷ್ಟೇ ಭಾವನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಸಂಪೂರ್ಣ ಚಿತ್ರದಲ್ಲಿ ನೈಜವಾದ ಸ್ಥಳಗಳನ್ನು ಬಳಸಿಕೊಂಡಿದ್ದಾರೆ ಮತ್ತು ಸಿಂಕ್ ಸೌಂಡ್ ಬಳಸಿರುವುದು ವಿಶೇಷ. ಹಾಗಾಗಿ ಸಿನಿಮಾದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಸವಾಲಿನ ಕೆಲಸ ‘ಪಿಂಕಿ ಎಲ್ಲಿ?’ ಸಿನಿಮಾದ್ದು. ಇಡೀ ತಂಡ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದು, ಚಿತ್ರದ ಪ್ರಭಾವವನ್ನು ದ್ವಿಗುಣಗೊಳಿಸಿದೆ. ‘ಪಿಂಕಿ ಎಲ್ಲಿ?’ ಕೇವಲ ಒಂದು ಸಿನಿಮಾ ಅಲ್ಲ, ಇದು ನೋಡುವವರೆಲ್ಲರನ್ನು ಪ್ರಶ್ನಿಸಲು, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಸಿನಿಮಾ.
- ‘ವರ್ಣಪಟಲ’ – ತಾಯಿಯ ಶ್ರಮ, ತ್ಯಾಗ, ಅಚಲ ನಂಬಿಕೆ ಮತ್ತು ಸಂಗೀತದ ಮರ್ಮ! | ದ್ವಿತೀಯ ಅತ್ಯುತ್ತಮ ಚಿತ್ರ | ‘ವರ್ಣಪಟಲ’ ಕೇವಲ ತಾಯಿಯ ಪ್ರೀತಿಯ ಕಥೆಯಲ್ಲ, ಇದು ತ್ಯಾಗ, ನಂಬಿಕೆ, ಮತ್ತು ನಿರೀಕ್ಷೆಗಳ ಹಾದಿಯಲ್ಲಿ ಸಾಗುವ ಭಾವನಾತ್ಮಕ ಪಯಣ. ನಿರ್ದಿಷ್ಟ ಅಗತ್ಯಗಳಿರುವ ವಿಶೇಷ ಚೇತನ ಮಗಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಎಷ್ಟು ಮಹತ್ವದ್ದೋ, ಅದರ ಹೊರೆಯೂ ಅಷ್ಟೇ ತೂಕವಾಗಿರುತ್ತದೆ. ಈ ಕಥೆಯಲ್ಲಿ, ತಾಯಿ ನಿತ್ಯಾ ತನ್ನ ಮಗಳಿಗಾಗಿ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನು ಮಾಡಲು ನಿರ್ಧರಿಸುತ್ತಾಳೆ.
ಸಿನಿಮಾದ ತಳಹದಿ – ನಿತ್ಯಾ ತನ್ನ ಮಗಳಿಗೆ ಅಮ್ಮ ಎಂಬ ಮಾತನ್ನು ವ್ಯಕ್ತಪಡಿಸಲು ಒಂದು ಮಾರ್ಗ ಹುಡುಕುತ್ತಾಳೆ. ಸಂವಹನ ಕಷ್ಟವಾದರೂ, ಸಂಗೀತದ ಮೂಲಕ ತನ್ನ ಅನುಭವಗಳನ್ನು ವ್ಯಕ್ತಪಡಿಸಲು ಈ ಬಾಲಕಿ ಸಾಮರ್ಥ್ಯವಿಟ್ಟಿದ್ದಾಳೆ ಎಂಬುದನ್ನು ತಾಯಿ ಮನಗೊಳ್ಳುತ್ತಾಳೆ. ಈ ಅರಿವು ತಾಯಿಗೆ ಹೊಸ ಆಶಾದೀಪ. ಅದಕ್ಕಾಗಿ ಅವಳು ಎಷ್ಟರ ಮಟ್ಟಿಗೆ ಶ್ರಮಿಸುತ್ತಾಳೆ? ತನ್ನ ಕನಸನ್ನು ಸಾಕಾರಗೊಳಿಸಲು ಏನೆಲ್ಲ ತ್ಯಾಗ ಮಾಡುತ್ತಾಳೆ? ಈ ಪಯಣದಲ್ಲಿ ಎದುರಾಗುವ ಸವಾಲುಗಳೇನು? – ಇವೆಲ್ಲವನ್ನೂ ಈ ಸಿನಿಮಾ ತುಂಬಾ ಸೂಕ್ಷ್ಮತೆಯಿಂದ, ಅತಿರೇಕವಿಲ್ಲದ ನಿರೂಪಣೆಯೊಂದಿಗೆ ಕಟ್ಟಿಕೊಡುತ್ತದೆ.
ವಿಶೇಷ ಚೇತನ ಮಕ್ಕಳನ್ನು ಪಾಲನೆ ಮಾಡುವುದು ಸುಲಭವಲ್ಲ. ಅದು ಭಾವನಾತ್ಮಕ, ಭೌತಿಕ, ಮತ್ತು ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ತಂದೊಡ್ಡಬಹುದು. ಆದರೆ, ಸರಿಯಾದ ಮಾರ್ಗದಲ್ಲಿ ಪ್ರೋತ್ಸಾಹ ನೀಡಿದರೆ ಅವರು ತಮ್ಮದೇ ಆದ ಭಾಷೆ ಕಂಡುಕೊಳ್ಳಬಹುದು. ಈ ಸಿನಿಮಾದಲ್ಲಿ ಸಂಗೀತ ಒಂದು ಮಾಧ್ಯಮವಾಗಿ ನಿಂತು, ವಿಶೇಷ ಚೇತನ ಮಕ್ಕಳಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡಬಹುದೆಂಬುದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ.
ಸಂಬಂಧಗಳ ನಡುವಿನ ಈ ಸೂಕ್ಷ್ಮ ಸಮೀಕರಣವನ್ನು ನಿರ್ದೇಶಕರು ಅತ್ಯಂತ ನೈಜತೆಯಿಂದ, ಯಾವುದಕ್ಕೂ ಅತಿರಂಜನೆ ನೀಡದೆ, ವಾಸ್ತವದ ನೆಲಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕಾರಣದಿಂದ, ‘ವರ್ಣಪಟಲ’ ಕೇವಲ ಒಂದು ತಾಯಿಯ ಕಥೆಯಲ್ಲ, ಅದು ವಿಶೇಷ ಚೇತನ ಮಕ್ಕಳ ಪೋಷಕರ ಸಂಕಷ್ಟಗಳ ಪ್ರಜ್ಞಾವಂತ ಚಿತ್ರಣ ಕೂಡ. ಈ ಚಿತ್ರ ನೇರವಾಗಿ ಹೃದಯಕ್ಕೆ ತಲುಪುವ ಶಕ್ತಿಯನ್ನೂ ಹೊಂದಿದೆ!
- ‘ಹರಿವ ನದಿಗೆ ಮೈಯೆಲ್ಲಾ ಕಾಲು’ – ರೂಪಕಗಳ ಹೊಳಹಿನಲ್ಲಿ ಜೀವನದ ಪಯಣ! | ತೃತೀಯ ಅತ್ಯುತ್ತಮ ಚಿತ್ರ | ಕನ್ನಡ ಸಿನಿಮಾ ಇತಿಹಾಸದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವ ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಎಂಬ ಚಿತ್ರ, ಸಂಭಾಷಣೆಗೆ ಹೆಚ್ಚಿನ ಮಹತ್ವ ಕೊಡುವ ಬದಲಾಗಿ, ದೃಶ್ಯಗಳ ಮೂಲಕವೇ ತನ್ನ ನೋಟವನ್ನು ಪ್ರಬಲಗೊಳಿಸುತ್ತದೆ. ನಿರ್ದಿಷ್ಟ ಸಂಭಾಷಣೆ ಇಲ್ಲದ ಈ ಚಿತ್ರದಲ್ಲಿ, ನದಿ, ಸಾಗರದ ಅಲೆಗಳು, ಹಾಗೂ ಕಾಲದಾರಿಗಳು ರೂಪಕಗಳಾಗಿ ಬಳಕೆಯಾಗಿದ್ದು, ಮಾನವನ ನಿತ್ಯ ಜೀವನದ ಪ್ರವಾಹವನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತವೆ.
ಚಿತ್ರದ ಕೇಂದ್ರದಲ್ಲಿ ಮೂರು ಪ್ರಮುಖ ಪಾತ್ರಗಳಿವೆ. ಈ ಪಾತ್ರಧಾರಿಗಳ ದಿನನಿತ್ಯದ ಅನುಭವಗಳು, ಅವರು ಗಮನಿಸುವ ಸಣ್ಣ ಸಣ್ಣ ಅಂಶಗಳು, ಮತ್ತು ಕನಸು-ವಾಸ್ತವದ ನಡುವೆ ನಡೆಯುವ ಅವರ ಪಯಣವೇ ಕಥೆಗೆ ಜೀವ. ನಿರ್ದೇಶಕರು ಪ್ರಕೃತಿಯ ತಳಹದಿಯ ಮೇಲೆ ಮನುಷ್ಯನ ಆಂತರಿಕ ಭಾವನೆಗಳನ್ನೂ, ಅವನ ಹೊರಗಿನ ಪಯಣವನ್ನೂ ಸೂಕ್ಷ್ಮವಾಗಿ ಹೆಣೆದಿದ್ದಾರೆ. ಈ ಮೂಲಕ, ಅವರು ಮನುಷ್ಯನ ಹೆಜ್ಜೆಗಳಲ್ಲಿ ಸಂವೇದನಾಶೀಲತೆಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.
ನದಿ ಎಂದರೆ ನಿಂತ ನೀರಲ್ಲ, ಅದು ನಿರಂತರವಾಗಿ ಹರಿಯುತ್ತದೆ. ಅದೇ ರೀತಿ, ಬದುಕು ನಿರಂತರ ಚಲನೆಯಲ್ಲಿರಬೇಕು ಎಂಬ ಸಂದೇಶವನ್ನು ನಿರ್ದೇಶಕರು ಚಿತ್ರದ ಕೊನೆಯ ದೃಶ್ಯದಲ್ಲಿ ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಬೆಟ್ಟದ ನಡುವೆ ಸಾಗುವ ಕಾಲದಾರಿಯನ್ನು ರೂಪಕವಾಗಿ ಬಳಸಿಕೊಂಡು, ಜೀವನದ ನಿರಂತರ ಪಯಣವೇ ಅದರ ಅರ್ಥವನ್ನೂ, ಸಾರ್ಥಕತೆಯನ್ನೂ ನಿರ್ಧರಿಸುತ್ತದೆ ಎಂಬ ಮೌಲ್ಯವನ್ನು ತಲುಪಿಸುತ್ತಾರೆ.
ಸಿನಿಮಾದ ತಾಂತ್ರಿಕ ಹಾಗೂ ಕಲಾತ್ಮಕ ಅಂಶಗಳು ಈ ಚಿತ್ರವನ್ನು ವಿಶೇಷಗೊಳಿಸುತ್ತವೆ. ಮೇಕಿಂಗ್, ದೃಶ್ಯಗಳ ಸಂಯೋಜನೆ, ನೈಸರ್ಗಿಕ ಬೆಳಕು ಬಳಕೆ, ಹಿನ್ನೆಲೆ ಧ್ವನಿ, ಮತ್ತು ಪಾತ್ರಧಾರಿಗಳ ಸಹಜ ವರ್ತನೆಯಿಂದ ಈ ಸಿನಿಮಾ ಅಂತರಾಷ್ಟ್ರೀಯ ಗುಣಮಟ್ಟವನ್ನು ತಲುಪಿದೆ. ಈ ಮೂರು ಪಾತ್ರಗಳು ತಮ್ಮ ಜೀವನದ ನಿಶ್ಚಿತ ಚೌಕಟ್ಟಿನಿಂದ ಬಿಡುಗಡೆಯನ್ನು ತಲುಪುವ ಹಾದಿಯಲ್ಲಿ ತಲುಪಿದ ಅರ್ಥಪೂರ್ಣ ತಿರುವು, ಪ್ರೇಕ್ಷಕರಿಗೆ ಗಾಢವಾದ ಭಾವನಾತ್ಮಕ ಅನುಭವ ನೀಡುತ್ತದೆ. ಈ ಚಿತ್ರ ಕೇವಲ ದೃಶ್ಯಮಾಧ್ಯಮವಲ್ಲ, ಇದು ಒಬ್ಬ ಮನುಷ್ಯನ ಆಂತರಿಕ ಮತ್ತು ಬಾಹ್ಯ ಜಗತ್ತಿನ ನಡುವೆ ಸಾಗುವ ಒಡನಾಟದ ಭಾವಚಿತ್ರ!
- ‘ಗಿಣಿಯು ಪಂಜರದೊಳಗಿಲ್ಲ’ – ನಂಬಿಕೆ, ಭ್ರಮೆ, ಮತ್ತು ವಾಸ್ತವದ ನಡುವಿನ ಸಂಧಿ! | ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ | ‘ಗಿಣಿಯು ಪಂಜರದೊಳಗಿಲ್ಲ’ ಕೇವಲ ಒಂದು ಕಥೆ ಮಾತ್ರವಲ್ಲ, ಅದು ನಮ್ಮ ನಂಬಿಕೆಗಳ, ಭಕ್ತಿಯ, ಮತ್ತು ಜೀವನದ ಕಠಿಣ ಸತ್ಯಗಳ ನಡುವೆ ನಡೆಯುವ ಅವಿರತ ಹೋರಾಟದ ಪ್ರಬಲ ಚಿತ್ರಣ. ಇಂದಿಗೂ ಅನೇಕರು ಭವಿಷ್ಯ ನುಡಿಯುವವರ ಮಾತುಗಳಿಗೆ ಮಾರುಹೋಗುತ್ತಾರೆ, ಅದನ್ನು ನಂಬಿ ತಮ್ಮ ಬದುಕಿನ ನಿರ್ಧಾರಗಳನ್ನು ತೀರ್ಮಾನಿಸುತ್ತಾರೆ. ಆದರೆ, ನಂಬಿಕೆಗಳು ಹಣದ ಆಧಾರದ ಮೇಲೆ ಬೆಳೆದು ಬಂದಾಗ, ಅದೇ ಭಕ್ತಿ ಮತ್ತು ಭರವಸೆ ಅನೇಕ ಸಂಕಷ್ಟಗಳಿಗೆ ಕಾರಣವಾಗಬಹುದು. ಈ ವಿಚಾರವನ್ನು ಸಿನಿಮಾ ಅತಿ ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ.
ಸಿನಿಮಾದ ತಳಹದಿಯು ನಂಬಿಕೆಯ ವಾಸ್ತವಿಕತೆಯ ಸುತ್ತ ತಿರುಗುತ್ತದೆ. ಅದೆಷ್ಟೋ ಜನರು ಗಿಳಿ ಶಾಸ್ತ್ರವನ್ನೂ, ಭವಿಷ್ಯ ನುಡಿಯುವವರ ಮಾತುಗಳನ್ನೂ ತಮ್ಮ ಜೀವನದ ನಿರ್ಧಾರಗಳ ತಳಹದಿಯಾಗಿ ಬಳಸಿಕೊಳ್ಳುತ್ತಾರೆ. ಆದರೆ, ಈ ಪುಟ್ಟ ಹಸಿರು ಗಿಣಿಯ ಮೂಲಕ ಹೇಳಲಾಗುವ ಮಾತುಗಳು, ಕೊನೆಗೂ ಕೇವಲ ಒಂದು ಅಂಧನAಬಿಕೆಯ ಪ್ರತಿಬಿಂಬವೇ? ಅಥವಾ ಅದರ ಹಿಂದೆ ತೂಕವಿರುವ ಸತ್ಯವಿದೆಯೇ? ಈ ಪ್ರಶ್ನೆ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುತ್ತದೆ.
ಸಾಮಾನ್ಯ ಜನರಿಗೆ ಭವಿಷ್ಯ ನುಡಿಯುವವರು ದೇವರ ಸಂದೇಶವಾಹಕರಂತೆ ಕಾಣಬಹುದು. ಆದರೆ, ಇವರಿಗೂ ತಮ್ಮದೇ ಆದ ಸಂಕಷ್ಟಗಳಿವೆ – ಆರ್ಥಿಕ ಕಠಿಣತೆ, ಸಮಾಜದ ನಿರೀಕ್ಷೆಗಳು, ಬದುಕು ಕಟ್ಟಿಕೊಳ್ಳುವ ಒತ್ತಡ. ಊರಿನ ಜನರ ಭವಿಷ್ಯ ಹೇಳುವ ಈ ವರ್ಗ ಸ್ವತಃ ತಮ್ಮದೇ ಒದ್ದಾಟ, ನೋವು, ಹಾಗೂ ನಿರ್ಧಾರಗಳ ದಾರಿಯಲ್ಲಿ ತಿರುಗಾಡುತ್ತಿದ್ದಾರೆ. ಹೀಗಾಗಿ, ಈ ಚಿತ್ರವು ದ್ವಂದ್ವಪೂರ್ಣ ಸಂಗತಿಗಳನ್ನು ತೆರೆದಿಡುತ್ತದೆ – ಒಡೆಯಲಾಗದ ನಂಬಿಕೆಗಳು ಮತ್ತು ಮುಂದಿರುವ ವಾಸ್ತವಗಳ ನಡುವಿನ ಸಂಘರ್ಷ.
ಇದು ಕೇವಲ ಗಿಳಿ ಶಾಸ್ತ್ರವನ್ನೋ, ಭವಿಷ್ಯ ನುಡಿಯುವವರ ಬದುಕನ್ನೋ ವಿವರಿಸುವ ಸಿನಿಮಾ ಅಲ್ಲ. ಇದು ಸತ್ಯ ಮತ್ತು ಸುಳ್ಳಿನ ನಡುವಿನ ಶಾಶ್ವತ ಯುದ್ಧವನ್ನು ಎತ್ತಿಹಿಡಿಯುವ ಕಲಾತ್ಮಕ ಪ್ರಯತ್ನ. ಈ ಮೂಲಕ, ನಾವು ನಂಬುವುದು ನಿಜವೇ? ಅಥವಾ ಅದು ಕೇವಲ ಮನಸ್ಸಿನ ಭ್ರಮೆಯೋ? ಎಂಬ ಜಿಜ್ಞಾಸೆಗೂ ಈ ಸಿನಿಮಾ ದಾರಿ ಮಾಡಿಕೊಡುತ್ತದೆ. ನಿರ್ದೇಶಕರು ತಮ್ಮ ಚಿತ್ರಕಥೆ ಮತ್ತು ನಿರೂಪಣೆಯ ಮೂಲಕ, ನಮ್ಮ ನಂಬಿಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತಾರೆ, ನಮ್ಮ ಅನುಮಾನಗಳಿಗೆ ಹೊಸ ಆಯಾಮವನ್ನು ನೀಡುತ್ತಾರೆ. ಈ ಕಾರಣದಿಂದ, ‘ಗಿಣಿಯು ಪಂಜರದೊಳಗಿಲ್ಲ’ ಕೇವಲ ಚಿತ್ರವಲ್ಲ, ಅದು ಸಮಾಜದ ಪ್ರತಿಬಿಂಬ!
- ‘E ಮಣ್ಣು’ – ಆಧುನಿಕ ಒತ್ತಡದಿಂದ ಭೂಮಿಯೊಡನೆ ಹೊಸ ನಂಟು! | ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ | ‘E – ಮಣ್ಣು’ ಮುಂಬರಬಹುದಾದ ಆಳವಾದ ವೈಯಕ್ತಿಕ ಮತ್ತು ಸಾಮಾಜಿಕ ಬದಲಾವಣೆಯ ಚಿತ್ರಣ. ತಂತ್ರಜ್ಞಾನ ಮತ್ತು ಕಾರ್ಪೊರೇಟ್ ಜಗತ್ತಿನ ಒತ್ತಡಗಳಲ್ಲಿ ದಿಕ್ಕು ತಪ್ಪಿದ ವ್ಯಕ್ತಿಯೊಬ್ಬ, ನೆಲ ಮತ್ತು ನಿಜಜೀವನದ ಪರಿಕಲ್ಪನೆಯತ್ತ ಮುನ್ನಡೆಯಲು ನಿರ್ಧರಿಸುತ್ತಾನೆ. ನಿತ್ಯ ಬೆಳಗಿನಿಂದ ರಾತ್ರಿ ತನಕ ಹೋದರೂ ಕೊನೆಗಾಣದ ಆಫೀಸ್ ಕೆಲಸ, ನಿರಂತರ ಗುರಿ ಸಾಧನೆಯ ತವಕ, ಮತ್ತು ವೈಯಕ್ತಿಕ ಸಮತೋಲನದ ಕೊರತೆ ‘E – ಮಣ್ಣು’ ದಾರಿಯನ್ನು ತಲುಪುವಂತೆ ಮಾಡುತ್ತದೆ.
ಈ ಚಿತ್ರದಲ್ಲಿ ನಾಯಕ ಐಟಿ ಉದ್ಯೋಗಿ, ತನ್ನ ಅಸ್ತಿತ್ವದ ಪ್ರಶ್ನೆಗೆ ಉತ್ತರ ಹುಡುಕಲು ಕೃಷಿಯ ಕಡೆಗೆ ಮುಖ ಮಾಡುತ್ತಾನೆ. ಆದರೆ, ಕೃಷಿಯೂ ಸುಲಭದಲ್ಲದ ದುಡಿಯುವ ಕ್ಷೇತ್ರ. ಒಂದೆಡೆಯಿಂದ ಇನ್ನೊಂದು ಜೀವನಶೈಲಿಗೆ ಬದಲಾಗುವ ಈ ಹಾದಿಯಲ್ಲಿ, ಅವನು ಅನೇಕ ಸವಾಲುಗಳನ್ನು ಎದುರಿಸುತ್ತಾನೆ – ನೈಸರ್ಗಿಕ ಸಮಸ್ಯೆಗಳು, ಆರ್ಥಿಕ ನಿರ್ವಹಣೆ, ತಂತ್ರಜ್ಞಾನ ಮತ್ತು ಪಾರದರ್ಶಕತೆಯ ಕೊರತೆ, ಗ್ರಾಮೀಣ ಜೀವನದ ವಾಸ್ತವ, ಮತ್ತು ಇತರ ಕೃಷಿಕರೊಂದಿಗೆ ಹೊಂದಾಣಿಕೆಯ ಸವಾಲುಗಳು. ಕೃಷಿಯ ಕುರಿತು ಹೆಚ್ಚು ತಿಳಿಯದ ಕಿರಿಯ ಪೀಳಿಗೆಯ ಜನರಿಗೆ ಇದು ನೇರವಾಗಿ ಮನವರಿಕೆ ಮಾಡುವ ಚಿತ್ರ. ‘E – ಮಣ್ಣು’ ತಂತ್ರಜ್ಞಾನ ಮತ್ತು ಕೃಷಿ, ನಗರ ಮತ್ತು ಗ್ರಾಮ, ಭೂಮಿಯ ಜೊತೆಗಿನ ನಂಬಿಕೆ ಮತ್ತು ಅದರ ಪ್ರಾಯೋಗಿಕತೆ ಎಂಬ ವಿಷಯಗಳ ನಡುವಿನ ಸಮತೋಲನವನ್ನು ಹುಡುಕುವ ಪ್ರಯತ್ನ.
ಸಿನಿಮಾದ ಹಾಡುಗಳು ಮತ್ತು ಸಂಭಾಷಣೆಗಳು ಪ್ರಮುಖ ಆಕರ್ಷಣೆಗಳಾಗಿದ್ದು, ಕಥೆಯನ್ನು ಮುಂದುವರೆಸುವಲ್ಲಿ ಅವು ಪ್ರೇರಣೆಯ ಮೂಲವಾಗಿವೆ. ಹಾಡುಗಳು ಕೇವಲ ಮನರಂಜನೆಗೆ ಸೀಮಿತವಾಗದಿದ್ದು, ನವ ಜೀವನಶೈಲಿಗೆ ಹೆಜ್ಜೆಹಾಕುವ ನಾಯಕನ ಭಾವನೆಗಳು, ಸಂಕಷ್ಟಗಳು ಮತ್ತು ಭವಿಷ್ಯದ ಕನಸುಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ. ‘E ಮಣ್ಣು’ ಕೇವಲ ಉದ್ಯೋಗವನ್ನು ತೊರೆದ ವ್ಯಕ್ತಿಯ ಕಥೆ ಅಲ್ಲ. ಇದು ಒಬ್ಬ ವ್ಯಕ್ತಿಯ ಆಯ್ಕೆ, ಅದರ ಪರಿಣಾಮಗಳು, ಮತ್ತು ತಾನು ಜೀವಿಸುವ ಭೂಮಿಯೊಡನೆ ಮರುಸಂಬಂಧ ಕಲ್ಪಿಸುವ ಹಾದಿಯ ಅನಾವರಣ. ‘E ಮಣ್ಣು’ ಕನ್ನಡ ಚಿತ್ರರಂಗದಲ್ಲಿ ಅಪರೂಪದ ಸಿನಿಮಾಗಳಲ್ಲೊಂದು ಎನ್ನಬಹುದು!
- ‘ಫೋರ್ ವಾಲ್ಸ್’ – ಪ್ರೀತಿ, ಬಾಂಧವ್ಯ, ಮತ್ತು ಕುಟುಂಬದೊಳಗಿನ ಸಂಬಂಧಗಳ ಗಟ್ಟಿತನ! | ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ | ‘ಫೋರ್ ವಾಲ್ಸ್’ ಎಂಬ ಸಿನಿಮಾ ಆರಂಭದಲ್ಲಿ ಸರಳವಾದ ನಿರೂಪಣೆಯಿದ್ದರೂ, ಅದರ ನಿರ್ಮಾಣ ಶೈಲಿಯು ತನ್ನದೇ ಆದ ವಿಶಿಷ್ಟತೆಯನ್ನು ತರುತ್ತದೆ. ಚಿತ್ರದ ಪ್ರಮುಖ ಆಕರ್ಷಣೆ ಅದರ ಕಥೆಯ ದೃಷ್ಟಿಕೋಣ, ಪಾತ್ರಗಳ ಸಹಜತೆ, ಮತ್ತು ವಿಶಿಷ್ಟವಾದ ಕ್ಲೈಮಾಕ್ಸ್ ಗಮನ ಸೆಳೆಯುತ್ತದೆ ಮತ್ತು ‘ತಾಯಿಯಿಲ್ಲದ ಮಕ್ಕಳಿಗೆ ಅಪ್ಪನೇ ಎಲ್ಲ’ ಎಂಬುದನ್ನು ಪ್ರತಿ ದೃಶ್ಯದಲ್ಲಿ ಅನಾವರಣಗೊಳಿಸುತ್ತದೆ – ಕುಟುಂಬದ ಪ್ರೀತಿ, ಬಾಂಧವ್ಯ, ನಂಬಿಕೆಗಳು, ಹಾಗೂ ಅಪ್ಪನ ಜವಾಬ್ದಾರಿ ಹೊರುವ ಪಾತ್ರದಲ್ಲಿ ಅಚ್ಯುತ್ ಕುಮಾರ್ (ಶಂಕರಣ್ಣ) ತಮ್ಮ ನಟನೆಯ ಮೂಲಕ ಗಮನಸೆಳೆಯುತ್ತಾರೆ, ಅಪ್ಪನ ಪಾತ್ರ ಪೋಷಣೆ ಈ ಸಿನಿಮಾದ ಮಹತ್ವವನ್ನು ಹೆಚ್ಚಿಸಿದೆ.
ಎಷ್ಟೇ ಸಂಕಷ್ಟಗಳು ಎದುರಾದರೂ, ತನ್ನ ಮಕ್ಕಳ ಬೆಳವಣಿಗೆಗಾಗಿ ಹೊರಗಿನ ಒತ್ತಡಗಳನ್ನು, ತನ್ನ ಕನಸುಗಳನ್ನು ಹೇಗೆ ತ್ಯಾಗ ಮಾಡುತ್ತಾನೆ ಎಂಬುದನ್ನು ಅತ್ಯಂತ ಸಹಜವಾಗಿ ಕಟ್ಟಿದ್ದಾರೆ ನಿರ್ದೇಶಕರು. ಅವನು ತನ್ನ ಮಕ್ಕಳಿಗೆ ಬೆನ್ನೆಲುಬಾಗಿ ನಿಂತು, ಬದುಕನ್ನು ಕಟ್ಟುವ ಕ್ರಿಯೆಯಲ್ಲಿ ಮೂರು ಮಕ್ಕಳಿಗೆ ಮದುವೆ ಮಾಡಿಸಲು ಒಪ್ಪದಿರುವುದು ಕುತೂಹಲ ಮೂಡಿಸುತ್ತದೆ. ಈ ನಿರ್ಧಾರದ ಹಿಂದಿರುವ ಕಾರಣಗಳನ್ನು ಚಿತ್ರದಲ್ಲಿ ತಲುಪಲು ಕೊನೆವರೆಗೂ ಕುತೂಹಲವಾಗಿ ಉಳಿಸಿ, ಉತ್ತಮ ಕ್ಲೈಮಾಕ್ಸ್ ನಿರ್ಮಾಣ ಮಾಡಲಾಗಿದೆ. ಇದು ಚಿತ್ರವನ್ನು ಅತ್ಯಂತ ಭಾವನಾತ್ಮಕವಾಗಿ ನಮ್ಮ ಹೃದಯಕ್ಕೆ ಹತ್ತಿರವಾಗುತ್ತದೆ.
ನಟ ನಟಿಯರ ಆಯ್ಕೆ ಚಿತ್ರವನ್ನು ನೈಜಗೊಳಿಸುವಲ್ಲಿ ಯಶಸ್ವಿಯಾಗಿದೆ. ಮೂವರು ಹೆಣ್ಣು ಮಕ್ಕಳ ಪಾತ್ರದಾರಿಗಳ ಪರ್ಫಾರ್ಮೆನ್ಸ್ ಮತ್ತು ಅಚ್ಯುತ್ ಕುಮಾರ್ ಸ್ನೇಹಿತನಾಗಿ ಸುಜಯ್ ಶಾಸ್ತ್ರಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ‘ಫೋರ್ ವಾಲ್ಸ್’ – ಪ್ರತಿಯೊಬ್ಬರ ಬದುಕು ನಾಲ್ಕು ಗೋಡೆಗಳ ಮಧ್ಯೆ ಇರುತ್ತದೆ, ಆ ನಾಲ್ಕು ಗೋಡೆಗಳ ಮಧ್ಯೆ ಇರುವ ಸಂಬಂಧ, ಪ್ರೀತಿ ಮತ್ತು ನಂಬಿಕೆಯ ಅನಾವರಣ.
- ಪದಕ – ಮಕ್ಕಳಿಗೆ ಶೌರ್ಯ, ತ್ಯಾಗ, ಮತ್ತು ಪ್ರೇರಣೆಯ ಕತೆ! | ಅತ್ಯುತ್ತಮ ಮಕ್ಕಳ ಚಿತ್ರ | ಪದಕ ಒಂದು ನೈಜ ಘಟನೆಯಾಧಾರಿತ ಮಕ್ಕಳ ಸಿನಿಮಾ, 1959ರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ ಸುರೇಶ್ ವಿಶ್ವನಾಥ್ ಅವರ ಜೀವನವನ್ನು ಆಧರಿಸಿದೆ. ನೈಜ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವಾಗ, ಅದು ಸಾಕ್ಷ್ಯಚಿತ್ರ ಶೈಲಿಗೆ ಹೋಗುವ ಅಪಾಯವಿತ್ತಾದರೂ, ಈ ಚಿತ್ರ ಇದನ್ನು ತಪ್ಪಿಸಿಕೊಂಡು ಸಾವಯವವಾಗಿ ಬೆಳೆಯುತ್ತದೆ. ದೃಶ್ಯ ಮಾಧ್ಯಮದ ಬಳಕೆಯಲ್ಲಿ ನಿರ್ದೇಶಕರ ಪಾತ್ರ ಗಮನ ಸೆಳೆಯುತ್ತದೆ, ವಿಶೇಷವಾಗಿ ಒಂದು ದೃಶ್ಯದಲ್ಲಿ – ತಾತನನ್ನು ಪತ್ರಕರ್ತೆ ಸಂದರ್ಶನ ಮಾಡುತ್ತಿರುವಾಗ, ಮೊಮ್ಮಕ್ಕಳು ಹಳೆಯ ಟ್ರಂಕಿನಲ್ಲಿಯ ತಾತನ ಫೋಟೋಗಳನ್ನು ನೋಡುವುದು. ನಂತರ, ಅಜ್ಜಿ ತಾತನ ಶೌರ್ಯ ಪ್ರಶಸ್ತಿ ಕುರಿತು ತಿಳಿಸುವ ದೃಶ್ಯದ ಮೂಲಕ ಚಿತ್ರ ಅಭಿವ್ಯಕ್ತಿಯ ಹೊಸ ಮಟ್ಟ ತಲುಪುತ್ತದೆ. ಇಂತಹ ಸೂಕ್ಷ್ಮ ನಿರೂಪಣಾ ಶೈಲಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಸಿನಿಮಾ ಮೂಡಿಬಂದಿದೆ.
- ನೀಲಿ ಹಕ್ಕಿ – ಹೊಸ ಬದುಕಿನ ಸಂವೇದನಾತ್ಮಕ ಕತೆ | ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಸಿನಿಮಾ | ನಿರ್ದೇಶಕನೊಬ್ಬ ತನ್ನ ಭಾವನೆಯನ್ನು ಅತ್ಯಂತ ಪ್ರಾಮಾಣಿಕವಾಗಿ ವ್ಯಕ್ತಪಡಿಸಿರುವ ಸಿನಿಮಾ ನೀಲಿ ಹಕ್ಕಿ. ಬಾಲಕನೊಬ್ಬ ತನ್ನ ಸುಂದರವಾದ ಹಳ್ಳಿಯ ಪರಿಸರವನ್ನು ಬಿಟ್ಟು ತನ್ನ ಕುಟುಂಬದೊಂದಿಗೆ ನಗರಕ್ಕೆ ಸ್ಥಳಾಂತರಗೊಂಡಾಗ ಅವನಲ್ಲಾಗುವ ತುಮುಲ, ಸಂಘರ್ಷಗಳು ಮತ್ತು ಬದುಕಿನ ಕೆಲವು ವಾಸ್ತವಗಳನ್ನು ಬಹಿರಂಗಗೊಳಿಸುವುದನ್ನ ಪರಿಣಾಮಕಾರಿಯಾಗಿ ಹಾಗು ಸಹಜವಾಗಿ ಕಟ್ಟಿದ್ದಾರೆ ನಿರ್ದೇಶಕರು. ಬಾಲಕ ‘ಸಿದ್ದ’ ಮತ್ತು ಅವನ ತಾಯಿ ಪಾತ್ರದಾರಿ ಗಮನಸೆಳೆಯುತ್ತಾರೆ, ಮುಖ್ಯವಾಗಿ ಸಿನಿಮಾಟೋಗ್ರಾಫರ್ ಕೈಚಳಕ ಕಾಡಿನಲ್ಲಿನ ದೃಶ್ಯಗಳ ಫ್ರೇಮಿಂಗ್ ಮತ್ತು ನೈಟ್ ಎಫೆಕ್ಟ್ ದೃಶ್ಯದ ಲೈಟಿಂಗ್ ವಿಶೇಷವಾಗಿ ಗಮನಸೆಳೆಯುತ್ತದೆ.
- ಜೀಟಿಗೆ – ಪರಂಪರೆಯ ಸವಾಲು ಮತ್ತು ನಂಬಿಕೆಯ ಪಯಣ | ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ | ಕೋವಿಡ್ ಸಾಂಕ್ರಾಮಿಕ ರೋಗ ಜಗತ್ತಿಗೆ ಅಪ್ಪಳಿಸಿದಾಗ ನಡೆದ ನೈಜ ಘಟನೆ ಆಧಾರಿತ ಸಿನಿಮಾ ‘ಜೀಟಿಗೆ’. ಕೊರಗಜ್ಜ ದೈವದ ಪಾತ್ರದಾರಿ ಮಗನ ಮದುವೆ ನಿಗಧಿಯಾಗಿರುತ್ತದೆ ಆಗ ಹೊರದೇಶದ ಹಡಗಿನಲ್ಲಿದ್ದ ಮಗನ ಬರುವಿಕೆಗಾಗಿ ಕುತೂಹಲದಿಂದ ಕಾಯುವ ಕೊರಗಜ್ಜನ ಆರಾಧಕ ‘ತನಿಯ’ ತನ್ನ ಸಂಪ್ರದಾಯವನ್ನು ಬಹುತೇಕ ತ್ಯಜಿಸಲು ಸಿದ್ದತೆ ನಡೆಸುತ್ತಿರುತ್ತಾನೆ. ಆದರೆ ತನ್ನ ಮಗನ ಸುರಕ್ಷಿತ ಮರಳುವಿಕೆಗಾಗಿ ಮತ್ತೆ ಕೋಲ ಕಟ್ಟಲು ಮರಳುವುದು ‘ಜೀಟಿಗೆ’ ಸಿನಿಮಾ. ವ್ಯಕ್ತಿಯೊಬ್ಬನ ಅಸ್ಮಿತೆ ತನ್ನ ಸಂಪ್ರದಾಯ, ಭಾಷೆ ಮತ್ತು ಪರಿಸರ ಎನ್ನುವುದನ್ನು ಈ ಸಿನಿಮಾದಲ್ಲಿ ಸರಳವಾಗಿ ಕಟ್ಟಿದ್ದಾರೆ.
ಪ್ರಶಸ್ತಿ ವಿಜೇತರ ನಟ-ನಟಿಯರು: ಪಾತ್ರ ಮತ್ತು ಅಭಿನಯದ ವೈಶಿಷ್ಟ್ಯತೆ
- ಪ್ರಜ್ವಲ್ ದೇವರಾಜ್ | ಜೆಂಟಲ್ ಮೆನ್ | ಅತ್ಯುತ್ತಮ ನಟ | ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು sleeping beauty syndrome ಖಾಯಿಲೆಯಿಂದ ಬಳಲುವ ವ್ಯಕ್ತಿಯ ಪಾತ್ರವನ್ನು ತುಂಬಾ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಈ ಖಾಯಿಲೆಯ ಲಕ್ಷಣಗಳು, ದಿನನಿತ್ಯದ ಬದುಕಿನ ಮೇಲೆ ಬೀರುವ ಪರಿಣಾಮ ಮತ್ತು ಬದುಕಿನ ತಾಳ್ಮೆಯನ್ನು ಮನೋವಿಜ್ಞಾನಾತ್ಮಕವಾಗಿ ತೋರ್ಪಡಿಸುವ ನಟನೆ ಸವಾಲಿನದ್ದಾಗಿತ್ತು. ಪ್ರಜ್ವಲ್ ದೇವರಾಜ್ ಅವರು ಈ ಪಾತ್ರಕ್ಕೆ ಬೇಕಾದ ಶಾರೀರಿಕ ಮತ್ತು ಮಾನಸಿಕ ತಯಾರಿಯನ್ನು ಮಾಡಿಕೊಂಡಿರುವುದು ಮಾತ್ರವಲ್ಲ, ಸಿನಿಮಾದ ದೃಶ್ಯಗಳ ತೀವ್ರತೆಗೆ ಅನುಗುಣವಾಗಿ ತಮ್ಮ ಹಾವಭಾವಗಳನ್ನು ಹೊಂದಿಸಿಕೊಂಡಿದ್ದು, ಪಾತ್ರದ ಗಂಭೀರತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
- ಅಕ್ಷತಾ ಪಾಂಡವಪುರ | ಪಿಂಕಿ ಎಲ್ಲಿ? | ಅತ್ಯುತ್ತಮ ನಟಿ | ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ ಅವರ ಅಭಿನಯ ಸಮಿತಿಯ ಗಮನಸೆಳೆದದ್ದು ಸೂಕ್ತವಾದ ಕಾರಣಗಳಿವೆ. ಈ ಚಿತ್ರವು ತೀವ್ರ ಭಾವನಾತ್ಮಕತೆ ಮತ್ತು ವಾಸ್ತವತೆಯನ್ನು ಹೊಂದಿರುವ ಕಥಾಹಂದರ ಹೊಂದಿದ್ದು, ಈ ಚಿತ್ರದಲ್ಲಿ ನೈಜ ಸ್ಥಳಗಳು ಮತ್ತು ಸಿಂಕ್ ಸೌಂಡ್ ಬಳಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಲಾವಿದರಿಗೆ ಸವಾಲುಗಳಿರುತ್ತವೆ – ಅಭಿನಯವು ಪಾತ್ರದ ನೈಜತೆಯನ್ನು ಪ್ರತಿಬಿಂಬಿಸಬೇಕು, ಆದರೆ ಅದೇ ಸಮಯದಲ್ಲಿ, ಲೈವ್ ಶಬ್ದದ ಸಂಯೋಜನೆಗೂ ಅನುಗುಣವಾಗಿರಬೇಕು, ಹಾಗಾಗಿ ಪಾತ್ರ ನಿರ್ವಹಣೆಯಲ್ಲಿ ನಿಖರತೆ ಅಗತ್ಯ ಇತ್ತು. ಈ ಹಿನ್ನಲೆಯಲ್ಲಿ ಅಕ್ಷತಾ ಪಾಂಡವಪುರ ಅವರು ತಮ್ಮ ಪಾತ್ರಕ್ಕೆ ನೀಡಿದ ಆಳವಾದ ಭಾವನಾತ್ಮಕ ಸ್ಪಂದನೆ, ಸೂಕ್ಷ್ಮ ಸಂವೇದನೆಗಳು ಮತ್ತು ಪ್ರಾಮಾಣಿಕ ನಿರ್ವಹಣೆ ಗಮನಾರ್ಹವಾಗಿದೆ.
- ರಮೇಶ್ ಪಂಡಿತ್ | ತಲೆದಂಡ | ಅತ್ಯುತ್ತಮ ಪೋಷಕ ನಟ | ಚಿತ್ರದಲ್ಲಿ ಕುನ್ನೆಗೌಡನ ತಂದೆ ‘ಜಡೆಮಾದ’ನ ಪಾತ್ರದಾರಿ ರಮೇಶ್ ಪಂಡಿತ್ ತಮ್ಮ ನೈಜ ಅಭಿನಯದಿಂದ ನಮ್ಮ ಗಮನ ಸೆಳೆದಿದ್ದಾರೆ. ಈ ಪಾತ್ರವು ನೈಜವಾದ, ಬದುಕಿನ ವಾಸ್ತವತೆಯನ್ನು ಸಾದರಪಡಿಸಬೇಕಾದ ನಿರೀಕ್ಷೆಯಲ್ಲಿನ ಪಾತ್ರವಾಗಿದ್ದರಿಂದ, ಪಾತ್ರಧಾರಿಯ ಸಹಜತೆ ಅವಶ್ಯಕವಾಗಿತ್ತು. ರಮೇಶ್ ಪಂಡಿತ್ ಅವರು ಪಾತ್ರಕ್ಕೆ ಜೀವ ತುಂಬುವ ರೀತಿಯಲ್ಲಿ ತಮ್ಮ ಹಾವಭಾವಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರ ಸಂಭಾಷಣೆ ಶೈಲಿ, ಆಂಗಿಕ ಶೈಲಿ ಮತ್ತು ಪಾತ್ರದ ಭಾವನಾತ್ಮಕ ಭಾರವನ್ನು ಸಮರ್ಥವಾಗಿ ಹೊತ್ತಿದ್ದಾರೆ. ಚಿತ್ರದಲ್ಲಿ ಅವರು ನೀಡಿದ ನೈಜ ಮತ್ತು ಸ್ವಾಭಾವಿಕ ಅಭಿನಯವು ಸಿನಿಮಾದ ವಾಸ್ತವತೆಯ ತೀವ್ರತೆಯನ್ನು ಹೆಚ್ಚಿಸಿದೆ.
- ಕೆ ಎಸ್ ಮಂಜುಳಮ್ಮ | ದಂತಪುರಾಣ | ಅತ್ಯುತ್ತಮ ಪೋಷಕ ನಟಿ | ಚಿತ್ರದಲ್ಲಿ ಅಜ್ಜಿ ಪಾತ್ರ ಮಾಡಿದ ಕೆ ಎಸ್ ಮಂಜುಳಮ್ಮ ಅವರು ತಮ್ಮ ಅನನ್ಯ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಹಿರಿಯ ಕಲಾವಿದರು ಮಕ್ಕಳೊಂದಿಗೆ ನಟಿಸುವಾಗ, ಅವರ ಪಾತ್ರವು ಸಹಜವಾಗಿರಬೇಕಾದ ಅಗತ್ಯವಿರುತ್ತದೆ. ಅವರ ಅಭಿನಯ ಮಕ್ಕಳೊಂದಿಗೆ ಅವರಿಗೇ ಸಮವಾಗಿ ಸಂವಾದಿಸುತ್ತಾ, ಮಕ್ಕಳ ಜೊತೆ ಮಕ್ಕಳಾಗಿ ತಮ್ಮ ಪಾತ್ರದಲ್ಲಿ ತೊಡಗಿಸಿಕೊಂಡು ಜೀವ ತುಂಬಿದ ರೀತಿಯಲ್ಲಿ ಮೂಡಿಬಂದಿದೆ. ಅವರ ಪಾತ್ರ ನಿರ್ವಹಣೆ ದೃಷ್ಟಿಯಿಂದಲ್ಲದೆ, ಪ್ರೇಕ್ಷಕರಿಗೆ ಹತ್ತಿರವಾಗುವಂತೆ ಆಗಿದೆ. ಇದು ಪಾತ್ರಕ್ಕೆ ವಿಶೇಷವಾದ ಸೂಕ್ಷ್ಮತೆ ಮತ್ತು ಪ್ರಭಾವ ನೀಡುವಂತೆ ಮಾಡಿದೆ.
ಈ ಎಲ್ಲ ನಟ-ನಟಿಯರ ಆಯ್ಕೆ ಪ್ರಕ್ರಿಯೆಯಲ್ಲಿ, ಅಭಿನಯದ ನೈಜತೆ, ಪಾತ್ರದ ಆಳ, ಸನ್ನಿವೇಶಗಳ ಗಂಭೀರತೆ ಹಾಗೂ ಕಲಾತ್ಮಕತೆಯ ಪರಿಶೀಲನೆಯೊಂದಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರಾದ ಈ ಪ್ರತಿಭಾವಂತ ಕಲಾವಿದರಿಗೆ ಹೃತ್ಪೂರ್ವಕ ಅಭಿನಂದನೆಗಳು!
ಪ್ರಶಸ್ತಿ ವಿಜೇತ ತಂತ್ರಜ್ಞರು
- ಅಶೋಕ್ ಕಶ್ಯಪ್ | ತಲೆದಂಡ | ಅತ್ಯುತ್ತಮ ಛಾಯಾಗ್ರಹಣ | ಚಿತ್ರವು ಕೇವಲ ಕಥನದಲ್ಲಿಯೇ ಅಲ್ಲ, ಅದರ ದೃಶ್ಯಸೌಂದರ್ಯದಲ್ಲಿಯೂ ವಿಶಿಷ್ಟವಾಗಿದೆ. ಅರಣ್ಯದ ಪರಿಸರ ಮತ್ತು ಪ್ರಕೃತಿಯ ಜೀವಂತತ್ವ ಎಲ್ಲವೂ ಕಥೆಯೊಂದಿಗೆ ತಾನಾಗಿಯೇ ಸಂವಾದಿಸುವಂತೆ ಮತ್ತು ಆಳವಾದ ಹಾಗೂ ತಲ್ಲೀನತೆಯ ಅನುಭವ ಕಟ್ಟಿಕೊಡಲು ಅಶೋಕ್ ಕಶ್ಯಪ್ ಕೈಚಳಕದಿಂದ ಸಾಧ್ಯವಾಗಿದೆ. ಅಶೋಕ್ ಕಶ್ಯಪ್ ರವರ ಸಿನಿಮಾಟೋಗ್ರಫಿಯ ಸೌಂದರ್ಯ ‘ತಲೆದಂಡ’ ಚಿತ್ರವನ್ನು ಒಂದು ದೃಶ್ಯಕಾವ್ಯವಾಗಿಸಿದೆ ಮತ್ತು ಸಿನಿಮಾ ಪ್ರಭಾವವನ್ನು ಹೆಚ್ಚಿಸುವಂತೆ ಮಾಡಿದೆ.
- ನಾಗೇಂದ್ರ ಉಜ್ಜನಿ | ACT 1978 | ಅತ್ಯುತ್ತಮ ಸಂಕಲನ | ಸಂಕಲನಕಾರ ತನ್ನ ಸಂಕಲನ ಕೌಶಲ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಿರಂತರ ತಳಮಳದಿಂದಿರುವ ಪಾತ್ರಗಳು ಮತ್ತು ಪ್ರೇಕ್ಷಕನಿಗೆ ಥ್ರಿಲ್ ಅನುಭವವನ್ನು ಕಟ್ಟಿಕೊಡುವ ದೃಶ್ಯಗಳ ಜೋಡಣೆಯಲ್ಲಿ ಸಂಕಲನದ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ವಿಶೇಷವಾಗಿ, ಫ್ಲ್ಯಾಶ್‌ಬ್ಯಾಕ್ ಮತ್ತು ಪ್ರಸ್ತುತ ಘಟನೆಯ ನಡುವಿನ ವರ್ಗಾವಣೆಗಳು (ಟ್ರಾನ್ಸೀಶನ್‌ಗಳು) ಹಾಗು ಟೈಮ್ ಲ್ಯಾಪ್ಸ್ ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟಿದ್ದು ನಿರ್ದೇಶಕರ ದೃಷ್ಟಿಕೋನವನ್ನು ಗಾಢಗೊಳಿಸುವಲ್ಲಿ ಸಂಕಲನ ಕೆಲಸ ಪ್ರಮುಖ ಪಾತ್ರ ವಹಿಸಿದೆ.
- ಗುಣ | ಬಿಚ್ಚುಗತ್ತಿ | ಅತ್ಯುತ್ತಮ ಕಲಾ ನಿರ್ದೇಶನ | ‘ಬಿಚ್ಚುಗತ್ತಿ’ ಸಿನಿಮಾದ ಮೂಲಕ ಐತಿಹಾಸಿಕ ಲ್ಯಾಂಡ್ ಸ್ಕೇಪನ್ನು ನೈಜತೆಯೊಂದಿಗೆ ಮರುನಿರ್ಮಾಣಗೊಳಿಸುವಲ್ಲಿ ತನ್ನ ಶ್ರೇಷ್ಠ ಕೌಶಲ್ಯ ತೋರಿದ್ದಾರೆ.
- ಗಗನ್ ಬಡೇರಿಯ | ಮಾಲ್ಗುಡಿ ಡೇಸ್ | ಅತ್ಯುತ್ತಮ ಸಂಗೀತ ನಿರ್ದೇಶಕ | ಮಾಲ್ಗುಡಿ ಡೇಸ್ ಚಿತ್ರದ ಸಂಗೀತವು ಕಥಾನಕದೊಂದಿಗೆ ಹಿತವಾಗಿ ಬೆರೆತು, ನಮ್ಮನ್ನು ಭಾವನಾತ್ಮಕ ಮತ್ತು ಆಳವಾಗಿ ಚಿತ್ರದೊಂದಿಗೆ ಪ್ರಯಾಣ ಮಾಡಲು ಸಹಕಾರಿಯಾಗಿದೆ. ಕಥೆ ಮುಂದುವರಿದಂತೆ, ಈ ಸಂಗೀತ ರಚನೆಯು ಪ್ರಚಲಿತ ಘಟನೆಗಳಿಗೆ ಸೊಗಸಾಗಿ ಹೊಂದಿಕೊಂಡು, ಪ್ರೇಕ್ಷಕರನ್ನು ಪಾತ್ರಗಳ ಜಗತ್ತಿನೊಳಗೆ ಎಳೆಯುತ್ತದೆ.
- ವೀರಪ್ಪ ಮರಳವಾಡಿ | ಹೂವಿನ ಹಾರ | ಅತ್ಯುತ್ತಮ ಸಂಭಾಷಣೆ | ‘ಹೂವಿನ ಹಾರ’ – ಈ ಸಿನಿಮಾದ ಆತ್ಮ ಸಂಭಾಷಣೆ. ‘ಹೂವಿನ ಹಾರ’ ಚಿತ್ರದ ಹೃದಯವೆಂದರೆ ಅದರ ಸಂಭಾಷಣೆ, ಮತ್ತು ಇದನ್ನು ಜೀವಂತಗೊಳಿಸುವ ಪ್ರಮುಖ ವ್ಯಕ್ತಿ ವೀರಪ್ಪ ಮರಳವಾಡಿ. ಅವರ ಸಂಭಾಷಣೆ ಬರಹವು ಕೇವಲ ವಾಕ್ಯಗಳ ಸರಣಿ ಅಲ್ಲ, ಅದು ಪಾತ್ರಗಳ ಭಾವನೆಗಳನ್ನು ಎತ್ತರಕ್ಕೆ ಎತ್ತುವ, ಕಥೆಯ ಹಿನ್ನಲೆಯಲ್ಲಿ ಸಂವೇದನೆಗಳನ್ನು ರೂಪಿಸುವ ಶಕ್ತಿಶಾಲಿ ಕಲೆಯಾಗಿದೆ. ‘ಹೂವಿನ ಹಾರ’ ಚಿತ್ರದ ಪ್ರತಿ ಮಾತು ಪಾತ್ರಗಳ ವ್ಯಕ್ತಿತ್ವವನ್ನು ಕಟ್ಟುವ ಮತ್ತು ಪ್ರೇಕ್ಷಕರ ಹೃದಯವನ್ನು ತಲುಪುವ ರೀತಿಯಲ್ಲಿ ಹೆಣೆಯಲಾಗಿದೆ.
- ಶಶಿಕಾಂತ್ ಗಟ್ಟಿ | ರಾಂಚಿ | ಅತ್ಯುತ್ತಮ ಕತೆ | ರೈಲ್ವೇ ಇಲಾಖೆಯು ಸಾಕ್ಷ್ಯಚಿತ್ರ ತಯಾರಿಸಲು ನಿರ್ದೇಶಕರನ್ನು ಹುಡುಕುತ್ತಿದೆ ಎಂದು ಸುದ್ದಿ ಕೇಳಿದ ಒಬ್ಬ ಸಿನಿಮಾ ನಿರ್ದೇಶಕ ಸಂಬಂಧಪಟ್ಟವರೊಂದಿಗೆ ಸಂಪರ್ಕ ಸಾಧಿಸುತ್ತಾನೆ. ಆದರೆ ತಕ್ಷಣವೇ, ಏನೋ ತಪ್ಪಾಗಿದೆ ಎಂಬ ಅನುಮಾನ ಮೂಡುತ್ತದೆ. ಕೊನೆಯ ಕ್ಷಣದವರೆಗೆ ಪ್ರೇಕ್ಷಕನನ್ನು ಪರದೆಯ ಮೇಲೆ ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬುದಕ್ಕೆ ಉತ್ತಮ ಉದಾಹರಣೆ ‘ರಾಂಚಿ’ ಸಿನಿಮಾ. ನೈಜ ಘಟನೆಯನ್ನು ಸಿನಿಮಾ ವಸ್ತುವಾಗಿ ಮತ್ತು ಅದನ್ನು ಸಿನಿಮಾ ಮಾಧ್ಯಮಕ್ಕೆ ಕಥೆಯಾಗಿ ಅಳವಡಿಸಿಕೊಳ್ಳುವುದು ಹಾಗು ಅದನ್ನು ಒಂದು ಥ್ರಿಲ್ಲರ್ ರೂಪದ ಕಥೆಯಾಗಿಸಿರುವುದು ಶ್ಲಾಘನೀಯವಾಗಿದೆ.
- ರಾಘವೇಂದ್ರ ಕುಮಾರ್ | ಚಾಂದನಿ ಬಾರ್ | ಅತ್ಯುತ್ತಮ ಚಿತ್ರಕಥೆ | ಚಾಂದನಿ ಬಾರ್ ಎಂಬ ಶೀರ್ಷಿಕೆ ನೋಡಿದಾಕ್ಷಣ ಇದು ಕೇವಲ ಬಾರ್‌ನಲ್ಲಿ ನಡೆಯುವ ಕಥೆ ಎಂದು ಭಾಸವಾಗುತ್ತದೆ, ಆದರೆ, ಈ ಚಿತ್ರವು ಬಾರ್‌ನಲ್ಲಿ ಕೆಲಸ ಮಾಡುವವರ ಬದುಕನ್ನು ಆಳವಾಗಿ ಅನಾವರಣಗೊಳಿಸುತ್ತದೆ. ಅವರ ಸಂಕಷ್ಟಗಳು ಆಕಾಂಕ್ಷೆಗಳು ಮತ್ತು ಪರಸ್ಪರ ಬಾಂಧವ್ಯಗಳನ್ನು ದಾಖಲಿಸುತ್ತದೆ. ಸರಳ ಕಥೆಯಾದರೂ ಅದನ್ನು ಚಿತ್ರಕಥೆಯಾಗಿ ಸೌಂದರ್ಯಪೂರ್ಣವಾಗಿ ಅಳವಡಿಸಿರುವುದು ಗಮನಾರ್ಹ.
ಅಲ್ಲದೆ ಅತ್ಯುತ್ತಮ ಗೀತರಚನೆ, ಗಾಯಕಿ ಹಾಗೂ ಗಾಯಕ, ಬಾಲ ಕಲಾವಿದರು, ಮತ್ತು ಇತರ ವಿವಿಧ ವಿಭಾಗಗಳನ್ನು ಗುರುತಿಸಲಾಗಿದೆ. ಈ ಪ್ರಶಸ್ತಿಗಳು ಅವರವರ ಶ್ರೇಷ್ಠ ಕಲೆಗಾಗಿ ನೀಡಲಾಗಿದೆ. ಮುಖ್ಯವಾಗಿ ಸಂಚಾರಿ ವಿಜಯ್ ರವರನ್ನು ‘ತಲೆದಂಡ’ ಚಿತ್ರದ ಅದ್ಭುತ ಅಭಿನಯಕ್ಕಾಗಿ ಜ್ಯೂರಿ ವಿಶೇಷ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ. ಸಂಚಾರಿ ವಿಜಯ್ ರವರಿಗೆ ನೀಡಿದ ಈ ಗೌರವಕ್ಕಾಗಿ ನಾನು ವೈಯಕ್ತಿಕವಾಗಿ ಸಮಿತಿಯ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಈ ಆಯ್ಕೆ ಪ್ರಕ್ರಿಯೆ ಪ್ರೇಕ್ಷಕರಿಗೆ ಹೊಸ ಚಿಂತನೆಗೆ ದಾರಿ ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ. ಪ್ರಶಸ್ತಿ ವಿಜೇತರಾದ ಎಲ್ಲ ಚಿತ್ರ ತಂಡಗಳಿಗೆ ಹಾರ್ದಿಕ ಅಭಿನಂದನೆಗಳು. ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು ಮುಂದುವರಿಯಲಿ, ಹೊಸ ಪರಿಕಲ್ಪನೆಗಳಿಗೆ ಪ್ರೇರಣೆ ಸಿಕ್ಕಲಿ ಎಂಬುದು ನಮ್ಮ ಆಶಯ.