ಸಿನಿಮಾದಲ್ಲಿನ ಯುವಕರ ಸಾಹಸಗಳು ವಿನೋದಮಯವಾಗಿದ್ದರೂ ಇದು ಹೆಚ್ಚಾಗಿ ಬಲವಂತವಾಗಿ ಮಾಡಿಸಿದಂತೆ ಇದೆ. ತುಂಬಾ ಸರಳ ಕತೆಯೊಂದನ್ನು ಕಾಂಪ್ಲಿಕೇಟ್ ಅಂತ ತೋರಿಸಲು ಹೋಗಿ ಎಳೆಯಲಾಗಿದೆ. ಇದೊಂದು ಸಾಮಾನ್ಯ ಚಿತ್ರವಾಗಿದ್ದು, ಇನ್ನೂ ಉತ್ತಮವಾಗಿ ಮಾಡುವ ಅವಕಾಶಗಳಿದ್ದವು. ‘ಫ್ರೈಡೇ ನೈಟ್ ಫ್ಲಾನ್’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಹದಿಹರೆಯದವರ ಕಿತಾಪತಿ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿದೆ. ಅಂಥದ್ದೇ ಸರಳ ಕತೆಯ ಸಿನಿಮಾ ‘ಫ್ರೈಡೇ ನೈಟ್ ಫ್ಲಾನ್’. ಹೆಸರೇ ಹೇಳುವಂತೆ ಶುಕ್ರವಾರ ರಾತ್ರಿ ನಡೆಯುವ ಯೋಜನೆ ಅಥವಾ ಸಂತೋಷ ಕೂಟಕ್ಕೆ ಸಂಬಂಧಿಸಿದ ಕಥಾ ಹಂದರವುಳ್ಳ ಚಿತ್ರ ಇದು. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಫ್ರೈಡೇ ನೈಟ್ ಫ್ಲಾನ್’, ಪಾತ್ರಗಳ ನೈಜ ಭಾವನೆಗಳನ್ನು ಹೊರತರುವಲ್ಲಿ ವಿಫಲವಾಗಿದೆ. ವತ್ಸಲ್ ನೀಲಕಂಠನ್ ನಿರ್ದೇಶನದ ‘ಫ್ರೈಡೇ ನೈಟ್ ಪ್ಲಾನ್’, ಸಹೋದರತ್ವ ಮತ್ತು ಸ್ವಯಂ ಅನ್ವೇಷಣೆಯ ಕುರಿತಾದ ಚಿತ್ರವಾಗಿದೆ. ಬಾಬಿಲ್ ಖಾನ್ ಅವರ ಪಾತ್ರವು ಕೆಲವು ಪದರಗಳನ್ನು ಹೊಂದಿತ್ತು, ಆದರೆ ಅದನ್ನು ಸರಿಯಾದ ರೀತಿಯಲ್ಲಿ ತೋರಿಸಲು ನಿರ್ದೇಶಕರು ವಿಫಲವಾಗಿದ್ದಾರೆ.
ಬಾಬಿಲ್ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದರೂ, ಕತೆಯನ್ನು ಮೇಲಕ್ಕೆತ್ತಲು ಸಾಧ್ಯವಾಗಿಲ್ಲ. ಒಂದು ಕುಟುಂಬ, ಮಿಸೆಸ್ ಮೆನನ್ (ಜೂಹಿ ಚಾವ್ಲಾ) ವೃತ್ತಿಯಲ್ಲಿರುವ ಮಹಿಳೆ. ಅವರಿಗಿಬ್ಬರು ಗಂಡು ಮಕ್ಕಳು. ದಿನಾ ಕಿತ್ತಾಡುತ್ತಾ, ಬದ್ಧ ವೈರಿಗಳಂತೆ ಇರುವ ಈ ಸಹೋದರರ ನಡುವೆ ಗಾಢವಾದ ಪ್ರೇಮವಿದೆ. ಹಿರಿಯ ಮಗ ಸಿದ್ (ಬಾಬಿಲ್ ಖಾನ್) ಸಿಂಪಲ್ ಹುಡುಗ, ಜಾಸ್ತಿ ಯಾರೊಂದಿಗೂ ಬೆರೆಯವುದಿಲ್ಲ. ಈತನ ಕಿರಿಯ ಸಹೋದರ ಆದಿ (ಅಮೃತ್ ಜಯನ್) ಇವನ ತದ್ವಿರುದ್ಧ. ಯಾವುದೇ ಸಂದರ್ಭವನ್ನು ಸುಲಭವಾಗಿ ನಿಭಾಯಿಸಬಲ್ಲ ಮಾತ್ರವಲ್ಲದೆ ವಟವಟ ಎಂದು ಮಾತನಾಡುತ್ತಲೇ ಇರುತ್ತಾನೆ.
ಇಂತಿರುವಾಗ ಶಾಲೆಯಲ್ಲಿನ ಫುಟ್‌ಬಾಲ್ ಮ್ಯಾಚ್ ನೋಡಲು, ಅಣ್ಣನನ್ನು ಹುರಿದುಂಬಿಸಲು ನಾನೂ ಬರುತ್ತೇನೆ ಎನ್ನುತ್ತಾನೆ ತಮ್ಮ ಆದಿ. ಆದರೆ ಟೀಂನಲ್ಲಿದ್ದರೂ ಆಡದೇ ಇರುವ ಎಕ್ಸ್‌ಟ್ರಾ ಆಟಗಾರ ತಾನಾಗಿರುವಾಗ ಅದನ್ನು ಚಿಯರ್ ಮಾಡಲು ತಮ್ಮ ಯಾಕೆ ಎಂದು ಸಿದ್ ಬೇಡ ಎನ್ನುತ್ತಾನೆ. ಆದರೆ ಅಮ್ಮನ ಒತ್ತಾಯದ ಮೇರೆಗೆ ಅವನನ್ನೂ ಕರೆದುಕೊಂಡು ಹೋಗುತ್ತಾನೆ. ಎಂದಿನಂತೆ ಟೀಂನಲ್ಲಿದ್ದರೂ ಜಾಗ ಬೆಂಚ್ ಮೇಲೆ. ಪಂದ್ಯ ಆರಂಭವಾಯಿತು, ಒಬ್ಬ ಆಟಗಾರನಿಗೆ ಗಾಯವಾಗಿ ಹೊರಹೋಗಬೇಕಾಗಿ ಬಂದಾಗ ಸಿದ್‌ನನ್ನು ಕಣಕ್ಕೆ ಇಳಿಸುತ್ತಾರೆ ಕೋಚ್. ಇನ್ನೊಂದು ಶಾಲೆಯೊಂದಿಗೆ ಇರುವ ನಿರ್ಣಾಯಕ ಪಂದ್ಯ, ಅದರಲ್ಲಿ ಸಿದ್ ಗೋಲು ಬಾರಿಸುತ್ತಾನೆ. ಆತ ಪ್ರತಿನಿಧಿಸಿದ್ದ ಶಾಲೆ ಗೆಲ್ಲುತ್ತದೆ. ಅಲ್ಲಿಂದ ಸಿದ್ ಶಾಲೆಯಲ್ಲಿ ಹೀರೋ ಆಗುತ್ತಾನೆ.
ಶಾಲೆಯಲ್ಲಿನ ಸಹಪಾಠಿಗಳು ಶುಕ್ರವಾರ ಸಂಜೆ ಪಾರ್ಟಿ ಆಯೋಜಿಸಿದ್ದಾರೆ. ಅಮ್ಮ ಊರಲ್ಲಿ ಇಲ್ಲ. ಹೀಗಿರುವ ಆ ಪಾರ್ಟಿಗೆ ಹೋಗುವ ಸಹೋದರರು ಏನೆಲ್ಲಾ ಮಾಡುತ್ತಾರೆ. ಕಿತಾಪತಿ ಮಾಡಿ ಸಿಕ್ಕಿಬಿದ್ದಾಗ ಅದರಿಂದ ಹೇಗೆ ಬಿಡಿಸಿಕೊಂಡು ಬರುತ್ತಾರೆ ಎಂಬುದನ್ನು ಸಿನಿಮಾದಲ್ಲಿ ಎಳೆದೆಳೆದು ತೋರಿಸಲಾಗಿದೆ. ಆ ರಾತ್ರಿ ಬರೀ ಮಜಾ ಮಾಡಿದ ರಾತ್ರಿಯಲ್ಲ. ಸಿದ್ ತನ್ನ ಸಾಮರ್ಥ್ಯ ಏನಿದೆ ಎಂಬುದನ್ನು ಅರಿತುಗೊಂಡ ರಾತ್ರಿ ಅದಾಗಿತ್ತು. ಆತನ ಕ್ಲಾಸಿನಲ್ಲಿ ಕಲಿಯುವ ಹುಡುಗಿ ಮೇಲೆ ಎಲ್ಲರಿಗೂ ಕಣ್ಣು, ಸಿದ್‌ಗೂ ಆಕೆಯೆಂದರೆ ಇಷ್ಟವೇ. ಆದರೆ ಆಕೆಯಲ್ಲಿ ಮಾತನಾಡಲು ಹಿಂಜರಿಕೆ. ಈತ ಗೋಲು ಹೊಡೆದು ಶಾಲೆಯನ್ನು ಪಂದ್ಯದಲ್ಲಿ ಗೆಲ್ಲಿಸಿದ ನಂತರ ಆಕೆಯೂ ಇವನಲ್ಲಿ ಮಾತನಾಡುತ್ತಾಳೆ.
ಆಕೆಗೊಬ್ಬಳು ತಂಗಿ ಇದ್ದಾಳೆ. ಆಕೆ ಆದಿಯ ಕ್ಲಾಸ್‌ಮೇಟ್. ಇಂತಿರುವಾಗಲೇ ಶುಕ್ರವಾರ ಸಂಜೆ ಪಾರ್ಟಿ ನತಾಶ ಮನೆಯಲ್ಲಿ ಆಯೋಜಿಸಲಾಗಿದೆ. ಅದಕ್ಕಿಂತ ಮುನ್ನ ಹುಡುಗರೆಲ್ಲರೂ ಚಿಕ್ಕ ಪಾರ್ಟಿ ಮಾಡುತ್ತಾರೆ. ಅವರು ಎಣ್ಣೆ ಹೊಡೆಯುತ್ತಿರುವಾಗಲೇ ಇನ್ನೊಂದು ಶಾಲೆಯ ಮಕ್ಕಳು prank ಮಾಡುತ್ತಾರೆ. ಅವರಿಗೆ ತಿರುಗೇಟು ನೀಡಲು ಸಿದ್ ಫ್ರೆಂಡ್ಸ್ ನಿರ್ಧರಿಸುತ್ತಾರೆ. ಸಿದ್, ನತಾಶ ಹೇಳಿದ್ಲು ಅಂತ ಕಾರು ತೆಗೆದುಕೊಂಡು ಬಂದಿರುತ್ತಾನೆ. ಈ ಹುಡುಗರೆಲ್ಲರೂ ಸಿದ್ ಕಾರಿನಲ್ಲಿ ಹೋಗಿ ಇನ್ನೊಂದು ಶಾಲೆಯ ಗುಂಪಿನ ಮೇಲೆ ಮೊಟ್ಟೆ ಎಸೆಯುತ್ತಾರೆ. ಇಂಥಾ ಐಡಿಯಾ ನೀಡಿದ್ದು ಸಿದ್ ತಮ್ಮ ಆದಿ. ಹೀಗೆ ಅಟ್ಟಾಡಿಸಿ ಮೊಟ್ಟೆ ಎಸೆಯುವಾಗ ಮೊಟ್ಟೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೇಲೆ ಬಂದು ಬೀಳುತ್ತದೆ. ಮುಂದೇನಾಗುತ್ತದೆ ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು.
ಚಲನಚಿತ್ರದಲ್ಲಿನ ಯುವಕರ ಸಾಹಸಗಳು ವಿನೋದಮಯವಾಗಿದ್ದರೂ ಇದು ಹೆಚ್ಚಾಗಿ ಬಲವಂತವಾಗಿ ಮಾಡಿಸಿದಂತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ಪಾತ್ರವರ್ಗವು ಹದಿಹರೆಯದ ಶಾಲಾ ಮಕ್ಕಳಂತೆ ಕಾಣುವುದಿಲ್ಲ. ಸಿದ್ ಕೂಡಾ ಹದಿನೆಂಟು ವರ್ಷದವನಂತೆ ಕಾಣುವುದಿಲ್ಲ. ತುಂಬಾ ಸರಳ ಕತೆಯೊಂದನ್ನು ಕಾಂಪ್ಲಿಕೇಟ್ ಅಂತ ತೋರಿಸಲು ಹೋಗಿ ಎಳೆಯಲಾಗಿದೆ. ಇದೊಂದು ಸಾಮಾನ್ಯ ಚಿತ್ರವಾಗಿದ್ದು, ಇನ್ನೂ ಉತ್ತಮವಾಗಿ ಮಾಡುವ ಅವಕಾಶಗಳಿದ್ದವು. ‘ಫ್ರೈಡೇ ನೈಟ್ ಫ್ಲಾನ್’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.