ಟೇಕ್ವಾಂಡೋ ಆಧರಿಸಿ ತಯಾರಾಗುತ್ತಿರುವ ‘ಟೇಕ್ವಾಂಡೋ ಗರ್ಲ್’ ಸಿನಿಮಾದ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಋತು ಸ್ಪರ್ಶ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಟೇಕ್ವಾಂಡೋದಲ್ಲಿ ಸಾಧನೆ ಮಾಡುತ್ತಿರುವ 10 ವರ್ಷದ ತಮ್ಮ ಮಗಳು ಋತು ಸ್ಪರ್ಶಳಿಗಾಗಿ ಅವರ ತಾಯಿ ಡಾ ಸುಮಿತಾ ಪ್ರವೀಣ್ ನಿರ್ಮಿಸಿರುವ ಚಿತ್ರವಿದು.
ಕನ್ನಡದಲ್ಲಿ ಕ್ರೀಡೆ ಆಧರಿಸಿದ ಸಿನಿಮಾಗಳು ಕೊಂಚ ಕಡಿಮೆಯೇ ಎಂದು ಹೇಳಬಹುದು. ಕಳೆದ ವರ್ಷ ತೆರೆಕಂಡಿದ್ದ ‘ಗುರು ಶಿಷ್ಯರು’ ಸಿನಿಮಾದಲ್ಲಿ ಖೋ ಖೋ ದೇಸಿ ಕ್ರೀಡೆಯನ್ನು ಸೊಗಸಾಗಿ ಅಳವಡಿಸಿದ್ದರು. ಇದೀಗ ಟೇಕ್ವಾಂಡೋ (Taekwondo) ಕ್ರೀಡೆ ಬಗ್ಗೆ ಕನ್ನಡದಲ್ಲೊಂದು ಸಿನಿಮಾ ಬರುತ್ತಿದೆ. ‘ಟೇಕ್ವಾಂಡೋ ಗರ್ಲ್’ ಸಿನಿಮಾದಲ್ಲಿ ಟೇಕ್ವಾಂಡೋ ಪಟು ಋತು ಸ್ಪರ್ಶ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಟೇಕ್ವಾಂಡೋದಲ್ಲಿ ಸಾಧನೆ ಮಾಡುತ್ತಿರುವ 10 ವರ್ಷದ ತಮ್ಮ ಮಗಳಿಗಾಗಿ ಅವರ ತಾಯಿ ಡಾ ಸುಮಿತಾ ಪ್ರವೀಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ವಾಸಂತಿ ನಲಿದಾಗ’, ‘ಪುಟಾಣಿ ಸಫಾರಿ’, ‘ಮಠ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರವೀಂದ್ರ ವಂಶಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
‘ಇದರಲ್ಲಿ ಮಕ್ಕಳೇ ನಟಿಸಿದ್ದರೂ, ಇದು ಬರೀ ಮಕ್ಕಳ ಸಿನಿಮಾ ಅಲ್ಲ. ದೊಡ್ಡವರು ಕೂಡ ನೋಡಬೇಕಾದ ಸಿನಿಮಾ. ನನಗೆ ಈ ಟೇಕ್ವಾಂಡೋ ಕಲೆಯ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಅದಕ್ಕಾಗಿ ನಾನು ಇದರ ಬಗ್ಗೆ ಸಾಕಷ್ಟು ತಿಳಿದುಕೊಂಡೆ. 25 ದಿನಗಳ ಕಾಲ ನಾನು ಕೂಡ ಟೇಕ್ವಾಂಡೋ ತರಬೇತಿ ಪಡೆದುಕೊಂಡೆ. ಟೇಕ್ವಾಂಡೋ ಸಮರ ಕಲೆಯ ಸುತ್ತವೇ ಈ ಸಿನಿಮಾದ ಕಥೆ ಸಾಗಲಿದೆ’ ಎನ್ನುತ್ತಾರೆ ನಿರ್ದೇಶಕ ರವೀಂದ್ರ ವಂಶಿ. ಚಿತ್ರಕ್ಕೆ ಮೋಹನ್ ಕುಮಾರ್ ಅವರ ಗಾಯನ ಮತ್ತು ಎಂ ಎಸ್ ತ್ಯಾಗರಾಜರ ಸಂಗೀತ ಸಂಯೋಜನೆಯಿದೆ. ಚಿತ್ರತಂಡ ಸಿನಿಮಾದ ‘ಡ್ಯಾನ್ಸ್ ಬೇಬಿ ಡ್ಯಾನ್ಸ್’ ಹಾಡು ಬಿಡುಗಡೆ ಮಾಡಿದೆ. A2 ಮ್ಯೂಸಿಕ್‌ನಲ್ಲಿ ಈ ಹಾಡು ಲಭ್ಯವಿದೆ.