ನಾಗೇಂದ್ರ ಗಾಣಿಗ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ‘ಅಭಿರಾಮಚಂದ್ರ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬಾಲ್ಯದ ಸ್ನೇಹ, ಪ್ರೀತಿ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಇರುವ ಚಿತ್ರ ಅಕ್ಟೋಬರ್‌ 6ರಂದು ತೆರೆಕಾಣಲಿದೆ.

‘ಕಿರಿಕ್‌ ಪಾರ್ಟಿ’ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ ಸ್ವತಂತ್ರ್ಯ ನಿರ್ದೇಶನದ ಚೊಚ್ಚಲ ಸಿನಿಮಾ ‘ಅಭಿರಾಮಚಂದ್ರ’. ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮಕಥಾಹಂದರ ಒಳಗೊಂಡಿರುವ ಚಿತ್ರದ ಟ್ರೈಲರ್‌ ರಿಲೀಸ್ ಆಗಿದೆ. ನಟರಾದ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ ಟ್ರೈಲರ್‌ ರಿಲೀಸ್ ಮಾಡಿ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಗಾಣಿಗ ತಮ್ಮ ಸಿನಿಮಾ ಬಗ್ಗೆ ಮಾತನಾಡಿ, ‘ಈ ಚಿತ್ರವಾಗಲೂ‌ ಮೊದಲ ಕಾರಣ ನನ್ನ ಅಕ್ಕ, ಮನೆಯವರು. ನಂತರ ಕಿರಣ್. ಅವರ ತಂದೆ. ಅವರೇ ಸ್ವತಃ ಪ್ರೊಡಕ್ಷನ್ ಶುರು ಮಾಡಿ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಇಡೀ ತಂಡ ನನಗೆ ತುಂಬಾ ಸಪೋರ್ಟ್ ಮಾಡಿದೆ. ಬಾಂಧವ್ಯ ಪ್ರೀತಿಗೋಸ್ಕರ ಸಿನಿಮಾ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಬಂದಿದೆ. ಅದ್ಭುತ ಅಲ್ಲದೇ‌ ಹೋದರು ನೋಡಿದವರು ಚೆನ್ನಾಗಿಲ್ಲ ಅನ್ನೋಲ್ಲ’ ಎನ್ನುತ್ತಾರೆ.

ಚಿತ್ರದಲ್ಲಿ ಕುಂದಾಪುರ ಕನ್ನಡ ಸಂಭಾಷಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಪ್ರಮೋದ್‌ ಶೆಟ್ಟಿ, ‘ಸಿನಿಮಾದಲ್ಲಿ ನನಗೆ ಇಷ್ಟವಾದ ಪಾರ್ಟ್ ಯಾವುದು ಅಂದರೆ ಕುಂದಾಪುರ ಕನ್ನಡವನ್ನು ಬಳಕೆ ಮಾಡಿರುವುದು. ಈ ಭಾಷೆ ಬಳಸಲು ಮೀಟರ್ ಬೇಕು. ಏಕೆಂದರೆ ತುಂಬಾ ಜನರಿಗೆ ಆ ಭಾಷೆ ಅರ್ಥವಾಗಲ್ಲ. ತುಂಬಾ ವೇಗವಾಗಿ ಮಾತನಾಡುವುದರಿಂದ ಅದು ಬೇಗ ಅರ್ಥವಾಗುವುದಿಲ್ಲ. ಈ ಟ್ರೈಲರ್‌ನಲ್ಲಿ ಆ ಭಾಷೆ ಪ್ರಾಮಿಸಿಂಗ್ ಆಗಿದೆ’ ಎಂದು ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಚಿತ್ರದ ನಟ ರಥ ಕಿರಣ್‌ ಮಾತನಾಡಿ, ‘ನನ್ನ ಇಂಡಸ್ಟ್ರೀಗೆ ಲಾಂಚ್ ಮಾಡಿದ್ದು ಅಪ್ಪು ಸರ್. ಆ ನಂತರ ಸುನಿ ಸರ್ ಅವರ ಬೆಂಬಲ ಇರಲಿಲ್ಲ ಎಂದರೆ ಸಿನಿಮಾ ಆಗುತ್ತಿರಲಿಲ್ಲ. ಈ ಚಿತ್ರದ ಆರಂಭದಿಂದ ಇಲ್ಲಿವರೆಗೂ ಬೆನ್ನೆಲುಬಾಗಿ‌ ನಿಂತವರು ರವಿ ಬಸ್ರೂರ್. ಅವರು ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಸಂಗೀತ ಒದಗಿಸಿದ್ದಾರೆ. ನಾನು ಅಭಿ ಎಂಬ ಪಾತ್ರ ಮಾಡಿದ್ದೇನೆ. ನನ್ನ ಬಾಲ್ಯದ ಪಾತ್ರವನ್ನು ರವಿ ಬಸ್ರೂರ್ ಮಗ ಮಾಡಿದ್ದಾರೆ’ ಎನ್ನುತ್ತಾರೆ.

ನಟ ಸಿದ್ದು ಮೂಲಿಮನಿ ಅವರು ಚಿತ್ರದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದಾರೆ. ಚಂದ್ರ ಪಾತ್ರ ನಿರ್ವಹಿಸಿರುವ ನಾಟ್ಯರಂಗ, ‘ನಾಗೇಂದ್ರ ನಮ್ಮದೂ ಬಹುವರ್ಷಗಳ ಗೆಳೆತನ. ತುಂಬಾ ಹತ್ತಿರದಿಂದ ನೋಡಿರುವುದರಿಂದ ನನ್ನ ಗುಣಲಕ್ಷಣಗಳ ಪಾತ್ರವನ್ನು ನೀಡಿದ್ದಾರೆ. ಮಜವಾದ ಕ್ಯಾರೆಕ್ಟರ್’ ಎನ್ನುತ್ತಾರೆ. ಚಿತ್ರದ ನಾಯಕಿಯಾಗಿ ಶಿವಾನಿ ರೈ ಇದ್ದಾರೆ. ವೀಣಾ ಸುಂದರ್‌, ಸುಂದರ್‌, ಎಸ್‌ ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು, ಪವನ್‌ ಚಿತ್ರದ ಇತರೆ ಪ್ರಮುಖ ಕಲಾವಿದರು. ಎಜಿಎಸ್ ಎಂಟರ್‌ಟೇನ್‌ಮೆಂಟ್‌ ಹಾಗೂ ರವಿ ಬಸ್ರೂರು ಮ್ಯೂಸಿಕ್‌ ಮತ್ತು ಮೂವೀಸ್‌ ಬ್ಯಾನರ್‌ನಡಿ ಎ ಜಿ ಸುರೇಶ್‌ ಹಾಗೂ ಮಲ್ಲೇಶ್‌ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ 6ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here