ಅಕ್ಟೋಬರ್ 18ರಿಂದ 21ರವರೆಗೆ ನಡೆಯಲಿರುವ ಯುವ ದಸರಾಗೆ ನಟ ಶಿವರಾಜಕುಮಾರ್ ಚಾಲನೆ ನೀಡಲಿದ್ದಾರೆ. ಪ್ರತಿ ದಿನ ಸಂಜೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ ಸಂಯೋಜಕ ಸಾಧು ಕೋಕಿಲ, ಗಾಯಕ ಸಂಚಿತ್ ಹೆಗಡೆ ಸೇರಿದಂತೆ ಬಾಲಿವುಡ್ ಗಾಯಕರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಈ ಬಾರಿ ‘ಯುವ ದಸರಾ’ ನಾಲ್ಕು ದಿನಗಳ ಕಾಲ ನಡೆಯಲಿದೆ. ಶಿವರಾಜಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ. ಅರಮನೆ ಆಡಳಿತ ಮಂಡಳಿಯ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುವ ದಸರಾ ಅಕ್ಟೋಬರ್ 18ರಿಂದ 21ರವರೆಗೆ ನಡೆಯಲಿದೆ. ನಟ ಶಿವರಾಜ್ ಕುಮಾರ್ ಉದ್ಘಾಟಿಸಲಿದ್ದಾರೆ. ಗಾಯಕರಾದ ಸಂಚಿತ್ ಹೆಗ್ಡೆ ಮತ್ತು ಸಾಧು ಕೋಕಿಲ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಪ್ರತಿಭೆಗಳ ಜೊತೆಗೆ ಬಾಲಿವುಡ್ ಗಾಯಕರು ಸಹ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.
ಈ ನಾಲ್ಕು ದಿನಗಳ ಕಾಲ ಸಂಜೆ 6.30ರಿಂದ 10.30ರವರೆಗೆ ಕಾರ್ಯಕ್ರಮ ನಡೆಯಲಿದೆ. ದಸರಾ ಅಂಗವಾಗಿ 10 ದಿನಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಅಕ್ಟೋಬರ್ 15ರಿಂದ 24ರವರೆಗೆ ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎರಡು ಲಕ್ಷ ಹೂಗಳಿಂದ ಚಂದ್ರಯಾನ ಪರಿಕಲ್ಪನೆಯ ಕಲಾಕೃತಿ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಚಾಮುಂಡೇಶ್ವರಿ ದೇವಿ, ದೇವಸ್ಥಾನದ ಗೋಪುರ, ಅಂಬಾರಿ, ಸುವರ್ಣ ಕರ್ನಾಟಕದ ಶ್ರೀಮಂತ ಪರಂಪರೆ, ಕ್ರೀಡೆ, ಸೇರಿದಂತೆ ಅನೇಕ ಆಕರ್ಷಕ ಫಲ ಪುಷ್ಪ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಅನಾವರಣ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಗಾಯತ್ರಿ ಮಾಹಿತಿ ನೀಡಿದ್ದಾರೆ.