ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಸಹಯೋಗದಲ್ಲಿ ನವೆಂಬರ್‌ 16ರಂದು ‘ಪುನೀತ್ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಳ್ಳುತ್ತಿದ್ದು, ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಗಲಿದ ನಟನನ್ನು ಸ್ಮರಿಸಲಿದ್ದಾರೆ.

ನಟ ಪುನೀತ್ ಅಕಾಲಿಕ ಅಗಲಿಕೆ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ ತಂದೊಡ್ಡಿದೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ, ಅವರ ಆದರ್ಶ, ಕೆಲಸಗಳನ್ನು ಸ್ಮರಿಸುವ ಸಲುವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕ ಸಂಘ ಜೊತೆಗೂಡಿ ‘ಪುನೀತ್ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು, “ಇದು ಪುನೀತ್‌ರಿಗೆ ಚಿತ್ರರಂಗ ನಮನ ಸಲ್ಲಿಸುವ ಕಾರ್ಯಕ್ರಮ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರನೇಕರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು, ದಕ್ಷಿಣ ಭಾರತ ಚಿತ್ರರಂಗದ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಗಲಿದ ನಟನಿಗೆ ನಮನ ಸಲ್ಲಿಸಲಿದ್ದಾರೆ. ಕೋವಿಡ್‌ ನಿಯಮಗಳೂ ಇರುವುದರಿಂದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ” ಎಂದರು.

ಪುನೀತ್‌ ರಾಜಕುಮಾರ್‌ ಅವರ ಕುರಿತು ಚಿತ್ರಸಾಹಿತಿ ವಿ.ನಾಗೇಂದ್ರಪ್ರಸಾದ್‌ ಗೀತೆಯೊಂದನ್ನು ರಚಿಸುತ್ತಿದ್ದು, ಗುರುಕಿರಣ್ ಈ ಗೀತೆಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಗೀತೆಯನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಇದಲ್ಲದೆ ಪುನೀತ್‌ ಸಿನಿಮಾಗಳ ಹಾಡುಗಳನ್ನು ವಿವಿಧ ಮೇರು ಗಾಯಕರು ಅಂದು ಹಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡುವುದಾಗಿ ಸಾ.ರಾ.ಗೋವಿಂದು ಹೇಳುತ್ತಾರೆ. ಇನ್ನು ಅಪ್ಪು ನೆನಪಿನ ಕಾರ್ಯಕ್ರಮಗಳು ರಾಜ್ಯದ ಹಲವೆಡೆ ನಡೆಯುತ್ತಲೇ ಇವೆ. ಅಭಿಮಾನಿಗಳು ಸ್ವಯಂಪ್ರೇರಿತರಾಗಿ ತಮ್ಮ ನೆಚ್ಚಿನ ನಟನ ನೆನಪಿನಲ್ಲಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿದ್ದಾರೆ.

LEAVE A REPLY

Connect with

Please enter your comment!
Please enter your name here