ಕನ್ನಡದ ಖ್ಯಾತ ಲೇಖಕ ಎಸ್ ಎಲ್ ಭೈರಪ್ಪ ಅವರ ಜನಪ್ರಿಯ ಕಾದಂಬರಿ ‘ಪರ್ವ’ ಸಿನಿಮಾ ಆಗುತ್ತಿದೆ. ಬಾಲಿವುಡ್ ಚಿತ್ರನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮೂರು ಭಾಗಗಳಲ್ಲಿ ‘ಪರ್ವ’ ತೆರೆಗೆ ಬರಲಿದೆ. ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಚಿತ್ರಕಥೆ ವಿಭಾಗದಲ್ಲಿ ನಿರ್ದಶಕ ವಿವೇಕ್ ಅವರಿಗೆ ಜೊತೆಯಾಗಿದ್ದಾರೆ.
ಕನ್ನಡದ ಖ್ಯಾತ ಲೇಖಕ, ಪದ್ಮಭೂಷಣ ಎಸ್ ಎಲ್ ಭೈರಪ್ಪ ಅವರ ‘ಪರ್ವ’ ಕಾದಂಬರಿ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಹಿಂದಿ ಸಿನಿಮಾಗಳ ಖ್ಯಾತಿಯ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ಪರ್ವ’ ಕೃತಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ. ಇಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನು ಲೇಖಕರು ಕೃತಿಯಲ್ಲಿ ಬರೆದಿದ್ದಾರೆ. ಈ ಮಹತ್ವದ ಕೃತಿಯನ್ನು ಮೂರು ಭಾಗಗಳಲ್ಲಿ ಸಿನಿಮಾ ಮಾಡುತ್ತಿದ್ದೇವೆ’ ಎಂದರು.
BIG ANNOUNCEMENT:
— Vivek Ranjan Agnihotri (@vivekagnihotri) October 21, 2023
Is Mahabharat HISTORY or MYTHOLOGY?
We, at @i_ambuddha are grateful to the almighty to be presenting Padma Bhushan Dr. SL Bhyrappa’s ‘modern classic’:
PARVA – AN EPIC TALE OF DHARMA.
There is a reason why PARVA is called ‘Masterpiece of masterpieces’.
1/2 pic.twitter.com/BiRyClhT5c
ತಮ್ಮ ಕೃತಿ ಸಿನಿಮಾ ಆಗುತ್ತಿರುವುದು ಲೇಖಕ ಭೈರಪ್ಪನವರಿಗೆ ಖುಷಿ ತಂದಿದೆ. ಮಹಾಭಾರತವನ್ನ ಆಯಾ ಪಾತ್ರಗಳ ಮೂಲಕ ಮತ್ತೊಮ್ಮೆ ಹೇಳಿರೋದೇ ಈ ಕಾದಂಬರಿಯ ವಿಶೇಷ. ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲೀಷ್‌ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನು ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ’ ಎಂದು ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ವಿವೇಕ್ ನಿರ್ದೇಶನದ ಪ್ರತೀ ಸಿನಿಮಾಗಳಲ್ಲಿ ಅವರ ಪತ್ನಿ, ನಟಿ ಪಲ್ಲವಿ ಜೋಷಿ ಅವರ ಉಪಸ್ಥಿತಿ ಇದ್ದೇ ಇರುತ್ತದೆ. ‘ಪರ್ವ’ ಚಿತ್ರದ ನಿರ್ಮಾಣದ ಹೊಣೆಯನ್ನೂ ಪಲ್ಲವಿ ಹೊತ್ತಿದ್ದಾರೆ. ತಮ್ಮ ನೂತನ ಪ್ರಾಜೆಕ್ಟ್ ಬಗ್ಗೆ ಮಾತನಾಡುವ ಅವರು, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ’ ಎನ್ನುತ್ತಾರೆ. ನಟ, ಚಿತ್ರನಿರ್ದೇಶಕ ಪ್ರಕಾಶ್ ಬೆಳವಾಡಿ ಈ ಸಿನಿಮಾದ ಬರವಣಿಗೆಯಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ನೆರವಾಗುತ್ತಿದ್ದಾರೆ.