ಸುನಿ ನಿರ್ದೇಶನದಲ್ಲಿ ಶರಣ್ ನಟಿಸಿರುವ ‘ಅವತಾರ ಪುರುಷ’ ಸಿನಿಮಾ ಇದೇ ಡಿಸೆಂಬರ್‌ 10ರಂದು ತೆರೆಕಾಣಲಿದೆ. ವೆಬ್ ಸರಣಿ ಮಾಡಬೇಕೆಂದಿದ್ದ ಕತೆಯನ್ನು ನಿರ್ದೇಶಕ ಸುನಿ ಅವರು ಎರಡು ಪಾರ್ಟ್‌ಗಳಲ್ಲಿ ಬೆಳ್ಳಿತೆರೆಗೆ ಅಳವಡಿಸಿದ್ದಾರೆ.

ನಿರ್ದೇಶಕ ಸುನಿ ಅವರು ‘ಅವತಾರ ಪುರುಷ’ ಕತೆ ಮಾಡಿಕೊಂಡಿದ್ದು ವೆಬ್ ಸರಣಿಗೆಂದು. ಈ ಕತೆಯನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಅವರಿಗೆ ಹೇಳಿದ್ದಾರೆ. “ವೆಬ್ ಸರಣಿ ಬೇಡ, ಸಿನಿಮಾ ಮಾಡೋಣ” ಎಂದಿದ್ದಾರೆ ಮಲ್ಲಿಕಾರ್ಜುನ್‌. ಕೊನೆಗೆ ಸುನಿ ಅವರು ಸಿನಿಮಾಗೆ ಚಿತ್ರಕಥೆ ಬರೆದರು. ಎರಡು ಭಾಗಗಳಲ್ಲಿ ಸಿನಿಮಾ ತಯಾರಾಗಲಿದೆ. ಮೊದಲ ಪಾರ್ಟ್‌ ಡಿಸೆಂಬರ್‌ 10ರಂದು ತೆರೆಕಾಣಲಿದೆ. ಇದಾಗಿ ನೂರು ದಿನಕ್ಕೆ ಎರಡನೇ ಪಾರ್ಟ್ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ. ಎರಡನೇ ಭಾಗದ ಚಿತ್ರೀಕರಣವೂ ಬಹುತೇಕ ಮುಗಿದಿದೆಯಂತೆ. “ನಿರ್ದೇಶಕನಿಗೆ ಸಿನಿಮಾ ಬಗ್ಗೆ ತನ್ನದೇ ಆದ ಒಂದು ಇಮ್ಯಾಜಿನೇಷನ್ ಇರುತ್ತದೆ. ಆ ಇಮ್ಯಾಜಿನೇಷನ್‌ಗೂ ಮೀರಿ ‘ಅವತಾರ ಪುರುಷ’ ಚಿತ್ರ ಮೂಡಿಬಂದಿದೆ. ಶರಣ್ – ಆಶಿಕಾ ರಂಗನಾಥ್ ಅವರ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ. ವಿಜಯ್ ಚೆಂಡೂರ್ ನಟನೆಯೊಂದಿಗೆ ಸ್ಕ್ರಿಪ್ಟ್ ವರ್ಕ್‌ನಲ್ಲೂ ನೆರವಾಗಿದ್ದಾರೆ” ಎಂದರು ನಿರ್ದೇಶಕ ಸಿಂಪಲ್ ಸುನಿ.

ವಿಷ್ಣುವರ್ಧನ್ ಅಭಿನಯದ ‘ಆಪ್ತಮಿತ್ರ’ ನಂತರ ಕನ್ನಡದಲ್ಲಿ ಬರುತ್ತಿರುವ ಅದೇ ಜಾನರ್‌ನ ಸಿನಿಮಾ ‘ಅವತಾರ ಪುರುಷ’ ಎನ್ನುತ್ತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್‌. ಸುಮಾರು ಮುನ್ನೂರೈವತ್ತು ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನುತ್ತಾರವರು. ನಟ ಶರಣ್ ಮಾತನಾಡಿ, “ನಾನು ಈವರೆಗೂ ಈ ರೀತಿಯ ಚಿತ್ರ ಮಾಡಿಲ್ಲ. ನನ್ನ ಈವರೆಗಿನ ಸಿನಿಪಯಣದಲ್ಲೇ ದೊಡ್ಡ ಬಜೆಟ್‌ನ‌ ಚಿತ್ರವಿದು. ಇಂತಹ ಅದ್ಧೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರೂ ಸೊಗಸಾಗಿ ಅಭಿನಯಿಸಿದ್ದಾರೆ. ನಾನು ಹತ್ತು ಅವತಾರಗಳಲ್ಲಿ ಕಾಣಿಸಿಕೊಂಡಿದ್ದೇನೆ” ಎಂದರು ನಾಯಕ ಶರಣ್.

“ಎಲ್ಲರೊಡನೆ ಉತ್ತಮ ಬಾಂಧವ್ಯ ಬೆಸೆದ ಸಿನಿಮಾ ‘ಅವತಾರ ಪುರುಷ’. ಶರಣ್ ಹಾಗೂ ಸುನಿ ಅವರ ಕಾಂಬಿನೇಷನ್‌ನಲ್ಲಿ ಈ ಚಿತ್ರ ಹೇಗೆ ಬರಬಹುದು? ಎಂಬ ಕುತೂಹಲ ಇದೆ. ನಾನು ಚಿತ್ರ ನೋಡುವ ಕಾತುರದಲ್ಲಿದ್ದೀನಿ. ನಿರ್ದೇಶಕ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸರಳತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಒಟ್ಟಿನಲ್ಲಿ ಉತ್ತಮ ಸಿನಿಮಾದಲ್ಲಿ ಅಭಿನಯಿಸಿದ ತೃಪ್ತಿಯಿದೆ. ಜನರು ಕೂಡ ಮೆಚ್ಚಿ ಕೊಳ್ಳುತ್ತಾರೆ ಎಂಬ ಭರವಸೆಯಿದೆ” ಎನ್ನುವುದು ಆಶಿಕಾ ರಂಗನಾಥ್ ಮಾತು. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಾಣಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here