ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸೀ ಕಾರಣಕ್ಕೆ ಕಾರ್ತೀಕ್ ಮತ್ತು ಸಂಗೀತಾ ಅವರ ಮಧ್ಯೆ ಬಿರುಕು ಮೂಡಿದೆ. ಸಂಗೀತಾ, ‘ನಾನು ಲೀಡರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದಿದ್ದರು. ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್, ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದಿದ್ದಾರೆ. ಇದು ಸಂಗೀತಾರನ್ನು ಕೆರಳಿಸಿದೆ.
ದಸರಾ ಆಚರಣೆ ಮಾಡಿ ಸಂಭ್ರಮದಲ್ಲಿದ್ದ ಬಿಗ್‌ಬಾಸ್ ಮನೆಯ ಸದಸ್ಯರ ಮಧ್ಯೆ ಮತ್ತೆ ಕೋಪ, ತಾಪ ಶುರುವಾಗಿದೆ. ಫೈರ್ ಕ್ಯಾಂಪ್‌ನಲ್ಲಿ ತಮ್ಮ ನೋವುಗಳನ್ನು ತೋಡಿಕೊಂಡು ಸ್ಪರ್ಧಿಗಳು ಪರಸ್ಪರರನ್ನು ಸಂತೈಸಿದ್ದರು. ಈಗ ಸ್ಪರ್ಧಿಗಳ ಮಧ್ಯೆ ಮತ್ತೆ ಕಿಡಿ ಹೊತ್ತಿಕೊಂಡಿದೆ. ಮನೆಯ ಕ್ಯಾಪ್ಟನ್ ಆಗಲು ಅರ್ಹರಾದ ಇಬ್ಬರು ಸದಸ್ಯರನ್ನು ಮನೆಯ ಎಲ್ಲ ಸದಸ್ಯರೂ ಆರಿಸಬೇಕು ಎಂದು ಬಿಗ್‌ಬಾಸ್ ಆದೇಶ ನೀಡಿದ್ದಾರೆ. ಸಂಗೀತಾ, ‘ನಾನು ಲೀಡರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಘೋಷಿಸಿದರು. ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್, ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದು ಹೇಳಿ ಸೂಚಿಸಿದರು. ಇದು ಸಂಗೀತಾ ಅವರನ್ನು ಕೆರಳಿಸಿದೆ. ಮನಸಲ್ಲಿದ್ದುದನ್ನು ನೇರವಾಗಿ ಹೇಳಿಬಿಡುವ ಸಂಗೀತಾ ಈ ವಿಷಯವನ್ನೂ ಕಾರ್ತಿಕ್ ಬಳಿ ನೇರವಾಗಿಯೇ ಕೇಳಿದ್ದಾರೆ.
ಕಾರ್ತಿಕ್ ಮತ್ತು ಸಂಗೀತಾ ಮಧ್ಯೆ ಕಿಡಿ ಹೊತ್ತಿಕೊಂಡ ದೃಶ್ಯವು JioCinema ಬಿಡುಗಡೆ ಮಾಡಿರುವ ಫ್ರೋಮೊದಲ್ಲಿ ಸೆರೆಯಾಗಿದೆ. ಆಯ್ಕೆ ಸೂಚನಾ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ, ‘ನೀನ್ಯಾಕೆ ನನ್ನನ್ನು ಆಯ್ಕೆ ಮಾಡಿಕೊಂಡಿಲ್ಲ’ ಎಂದು ಕಾರ್ತಿಕ್ ಅವರ ಬಳಿ ಕೇಳಿದ್ದಾರೆ. ಹಾಗೆಯೇ, ‘ಯಾಕೆ ನಮ್ರತಾ?’ ಎಂದೂ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ನೇರವಾಗಿ ಉತ್ತರಿಸದೆ, ‘ಕೋಪ ಯಾಕೆ ಮಾಡ್ಕೋತಿಯಾ?’ ಎಂದು ಅನುನಯಿಸಲು ಹೋಗಿದ್ದಾರೆ. ‘ನಾನು ಯಾರ ಮೇಲೂ ಡಿಫೆಂಡ್ ಆಗಿ ಬಂದಿಲ್ಲ ಇಲ್ಲಿ. ಜೊತೆಗಿದ್ದೋರೇ ಚುಚ್ಚುವುದು’ ಎಂದೆಲ್ಲ ಜರಿದಿದ್ದಾರೆ. ಕೊನೆಗೆ ‘ಯು ಆರ್ ಫೇಕ್’ ಎಂಬ ಮಾತು ಸಂಗೀತಾ ಬಾಯಲ್ಲಿ ಹೊರಬೀಳುತ್ತಿದ್ದಂತೆಯೇ ಕಾರ್ತಿಕ್ ಅಲ್ಲಿಂದ ಎದ್ದು ಹೊರಟುಹೋಗಿದ್ದಾರೆ. ಬಿಗ್‌ಬಾಸ್ ಮನೆಯ ಬೆಸ್ಟ್ ಜೋಡಿ ಅಂತಲೇ ಗುರುತಿಸಿಕೊಂಡಿದ್ದ, ಸದಾ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ಈ ಕಾರಣಕ್ಕಾಗಿಯೇ ಹಲವು ಸಲ ಉಳಿದವರ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ಆದರೆ ಈಗ ಕ್ಯಾಪ್ಟನ್ಸೀ ಕಾರಣಕ್ಕೆ ಕಾರ್ತಿಕ್ ಮತ್ತು ಸಂಗೀತ ಮಧ್ಯೆ ಒಡಕು ಮೂಡಿದೆ.