1984ರ ಭೋಪಾಲ್ ಅನಿಲ ದುರಂತದ ನೈಜ ಘಟನೆಗಳನ್ನು ಆಧರಿಸಿದ ‘ದಿ ರೈಲ್ವೇ ಮೆನ್’ ವೆಬ್ ಸರಣಿ ಟೀಸರ್ ಬಿಡುಗಡೆಯಾಗಿದೆ. ಆರ್ ಮಾಧವನ್, Kay Kay ಮೆನನ್, ದಿವ್ಯೇಂದು, ಬಾಬಿಲ್ ಖಾನ್ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನವೆಂಬರ್ 18ರಿಂದ ಸರಣಿ Netflixನಲ್ಲಿ ಸ್ಟ್ರೀಮ್ ಆಗಲಿದೆ.
ಆರ್ ಮಾಧವನ್, Kay Kay ಮೆನನ್, ದಿವ್ಯೇಂದು ಮತ್ತು ಬಾಬಿಲ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ದಿ ರೈಲ್ವೇ ಮೆನ್’ ವೆಬ್ ಸರಣಿ ಟೀಸರ್ ಬಿಡುಗಡೆಯಾಗಿದೆ. ಇದು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಮೊದಲ ಸರಣಿ. ಭೋಪಾಲ್ನಲ್ಲಿ ಅನಿಲ ಸೋರಿಕೆಯಿಂದ ಆ ನಗರದ ಜನತೆ ಅನುಭವಿಸಿದ ನರಕದ ನೈಜ ಕಥೆಯನ್ನು ಸರಣಿ ಬಿಚ್ಚಿಡಲಿದೆ. ಟೀಸರ್ನಲ್ಲಿ 1984 ಡಿಸೆಂಬರ್ 2ರ ರಾತ್ರಿ ಭೋಪಾಲ್ನ ಕೆಮಿಕಲ್ ಫ್ಯಾಕ್ಟರಿಯಿಂದ ಅನಿಲ ಸೋರಿಕೆಯಾದಾಗ ಸ್ಥಳೀಯ ಜನತೆ ಸಾವು ಬದುಕಿನ ಮಧ್ಯೆ ಹೋರಾಡುವ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಜನರನ್ನು ಹೇಗೆ ಸ್ಥಳಾಂತರಿಸುತ್ತಾರೆ ಎಂಬ ಚಿತ್ರಣವನ್ನು ತೋರಿಸಿದೆ. ಈ ಸರಣಿಯು ಶಿವ್ ರಾವೈಲ್ ಅವರ ಚೊಚ್ಚಲ ನಿರ್ದೇಶನವಾಗಿದ್ದು, ಆಯುಷ್ ಗುಪ್ತಾ ಕಥೆ ಬರೆದಿದ್ದಾರೆ.
Netflix ತನ್ನ Instagram ಖಾತೆಯಲ್ಲಿ ಈ ಕುರಿತು ‘ಇಡೀ ರಾಷ್ಟ್ರವನ್ನೇ ಕಲಕಿದ ಒಂದು ದುರಂತ ರಾತ್ರಿ ಮತ್ತು ಅಂದು ಹೋರಾಡಿದ ನಾಲ್ವರು ವೀರರ ನೈಜ ಕಥೆಗಳಿಂದ ಪ್ರೇರಿತವಾದ ನಾಲ್ಕು ಸಂಚಿಕೆಗಳ ‘The Railway Men’ ಸರಣಿಯ ಟೀಸರ್ ಇಲ್ಲಿದೆ. ನವೆಂಬರ್ 18ರಿಂದ Netflixನಲ್ಲಿ ಸ್ಟ್ರೀಮ್ ಆಗಲಿದೆ’ ಎಂದು ಕ್ಯಾಪ್ಶನ್ ನೀಡಿದೆ. ಭೋಪಾಲ್ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಲ್ಲಿ 1984ರ ಡಿಸೆಂಬರ್ 2ರ ಮಧ್ಯರಾತ್ರಿಯಲ್ಲಿ ಈ ಘೋರ ದುರಂತ ನಡೆದಿತ್ತು. ‘ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ದುರಂತಗಳಲ್ಲೊಂದು’ ಎಂದು ಕರೆಯಲ್ಪಡುವ ಭೋಪಾಲ್ ಅನಿಲ ದುರಂತದಲ್ಲಿ ಸಿಲುಕಿ ಸಂಕಟಪಟ್ಟವರು 8 ಲಕ್ಷಕ್ಕೂ ಅಧಿಕ ಜನರು.
ಈ ದುರಂತದಲ್ಲಿ ಮೃತಪಟ್ಟವರು 2259 ಜನರು ಎಂದು ಹೇಳಲಾಗಿತ್ತು. ಆದರೆ 2008ರಲ್ಲಿ ಅಂದಿನ ಮಧ್ಯಪ್ರದೇಶ ಸರ್ಕಾರ ಒಟ್ಟು 3787 ಮಂದಿ ಮೃತಪಟ್ಟಿದ್ದಾರೆಂದು ವರದಿ ಮಾಡಿ ಅವರ ಕುಟುಂಬಕ್ಕೆ ಪರಿಹಾರ ನೀಡಿದೆ. ದುರಂತದಲ್ಲಿ ಗಾಯಗೊಂಡ, ಅಸ್ವಸ್ಥರಾದ 5,74,366 ಜನರಿಗೂ ನೆರವು ನೀಡಿತ್ತು. ಅಂದು ಸೋರಿಕೆಯಾದ ಮಿಥೇಲ್ಗೆ ಒಡ್ಡಿಕೊಂಡವರು ಹಲವರು ಕೆಲವೇ ದಿನಗಳಲ್ಲಿ ಮೃತಪಟ್ಟರು. ಒಂದಷ್ಟು ಜನ ರೋಗದಿಂದ ಬಳಲಿ
ಅಸುನೀಗಿದರು. ಸದ್ಯದ ಅಂದಾಜಿನ ಪ್ರಕಾರ ಅಂದಿನ ಭೋಪಾಲ್ ಅನಿಲ ದುರಂತದಲ್ಲಿ ಒಟ್ಟಾರೆ ಸತ್ತವರು 8 ಸಾವಿರಕ್ಕೂ ಹೆಚ್ಚು ಮಂದಿ ಎಂದು ಹೇಳಲಾಗಿದೆ. ಸುಮಾರು 5,68,292 ಜನರಿಗೆ ಗಾಯಗಳು ಮತ್ತು ಜಾನುವಾರುಗಳ ನಷ್ಟ ಮತ್ತು 5,478 ಜನರ ಆಸ್ತಿ ನಷ್ಟಕ್ಕೆ ಈ ದುರಂತ ಕಾರಣವಾಗಿದೆ.
One tragic night that stirred the entire nation and four heroes who fought through it all.
— Netflix India (@NetflixIndia) October 28, 2023
Here’s the teaser for #TheRailwayMen – a four episode series inspired by true stories. Arrives November 18, only on Netflix! pic.twitter.com/jReeGfQIJE