ಕರಣ್‌ ಜೋಹರ್‌ ನಿರ್ಮಾಣದಲ್ಲಿ ಮಾಧುರಿ ದೀಕ್ಷಿತ್‌ ನಟಿಸುತ್ತಿರುವ ‘ಫೈಂಡಿಂಗ್‌ ಅನಾಮಿಕ’ ವೆಬ್‌ ಸರಣಿ ಶೀರ್ಷಿಕೆ ‘ದಿ ಫೇಮ್‌ ಗೇಮ್‌’ ಎಂದು ಬದಲಾಗಿದೆ. ಸಂಜಯ್‌ ಕಪೂರ್‌ ಪ್ರಮುಖ ಪಾತ್ರದಲ್ಲಿರುವ ಸರಣಿ ಫೆಬ್ರವರಿ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ನಿರ್ಮಾಪಕ ಕರಣ್‌ ಜೋಹರ್‌ ತಮ್ಮ ನಿರ್ಮಾಣದ ವೆಬ್‌ ಸರಣಿಯ ಬದಲಾದ ಶೀರ್ಷಿಕೆಯನ್ನು ನೂತನ ಪೋಸ್ಟರ್‌ನೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್‌ ಡಿಜಿಟಲ್‌ ಡೆಬ್ಯೂ ಮಾಡುತ್ತಿರುವ ವೆಬ್‌ ಸರಣಿಗೆ ಮೊದಲು ‘ಫೈಂಡಿಂಗ್‌ ಅನಾಮಿಕ’ ಎನ್ನುವ ಶೀರ್ಷಿಕೆ ನಿಗದಿಯಾಗಿತ್ತು. ಇದೀಗ ಸರಣಿಯ ಟೈಟಲ್‌ ‘ದಿ ಫೇಮ್‌ ಗೇಮ್‌’ ಎಂದು ಬದಲಾಗಿದೆ. ನೂತನ ಪೋಸ್ಟರ್‌ನಲ್ಲಿ ಮಾಧುರಿ ಇಂಟೆನ್ಸ್‌ ಲುಕ್‌ನಲ್ಲಿದ್ದರೆ ಅವರ ಸುತ್ತ ಸಂಜಯ್‌ ಕಪೂರ್‌, ಮಾನವ್‌ ಕೌಲ್‌, ಲಕ್ಷ್ಯವೀರ್‌ ಶರಣ್‌, ಮಸ್ಕಾನ್‌ ಜಾಫರಿ, ಸುಹಾಸಿನಿ ಮುಲೇ ಇದ್ದಾರೆ. ಈ ಫೋಟೊ ನೋಡಿದರೆ, ಇದು ಕಥಾನಾಯಕಿ ‘ಅನಾಮಿಕ’ಳ ಫ್ಯಾಮಿಲಿ ಇದ್ದಂತಿದೆ.

“ಸ್ಟಾರ್‌ಡಮ್‌ ಮತ್ತು ಖ್ಯಾತಿಯ ಹಿಂದೆ ಸಾಕಷ್ಟು ಗುಟ್ಟುಗಳಿರುತ್ತವೆ. ಬಾಲಿವುಡ್‌ನ ದೊಡ್ಡ ಸ್ಟಾರ್‌ ಅನಾಮಿಕ ಆನಂದ್‌ ಬದುಕಿನಲ್ಲಿ ಅಂತಹ ಏನೆಲ್ಲಾ ರಹಸ್ಯಗಳಿವೆ? ಶೀಘ್ರದಲ್ಲೇ ನೀವು ನೋಡಲಿದ್ದೀರಿ..” ಎನ್ನುವ ಒಕ್ಕಣಿಯೊಂದಿಗೆ ಸರಣಿ ನಿರ್ಮಾಪಕ ಕರಣ್‌ ಜೋಹರ್‌ ಹೊಸ ಪೋಸ್ಟರ್‌ ಅನ್ನು ಹಾಕಿದ್ದಾರೆ. ಈ ವೆಬ್‌ ಸರಣಿ ಮೂಲಕ ಸುಮಾರು ಎರಡು ದಶಕಗಳ ನಂತರ ಮಾಧುರಿ ದೀಕ್ಷಿತ್‌ ಮತ್ತು ಸಂಜಯ್‌ ಕಪೂರ್‌ ಜೊತೆಯಾಗಿ ನಟಿಸುತ್ತಿದ್ದಾರೆ. 1997ರಲ್ಲಿ ಇವರಿಬ್ಬರೂ ‘ಮೊಹಬ್ಬತ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತೊಂಬತ್ತರ ದಶಕದಲ್ಲಿ ಇವರು ಜೋಡಿಯಾಗಿ ನಟಿಸಿದ್ದ ‘ರಾಜ’ ಯಶಸ್ವಿಯಾಗಿತ್ತು. ಬೆಜಾಯ್‌ ನಂಬಿಯಾರ್‌ ಮತ್ತು ಕರಿಶ್ಮಾ ಕೊಹ್ಲಿ ನಿರ್ದೇಶನದ ಸರಣಿ ಫೆಬ್ರವರಿ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here