ಜನಪ್ರಿಯ ಹಿಂದಿ ಸರಣಿ ‘CID’ ನಟ ದಿನೇಶ್ ಫಡ್ನಿಸ್ ಅಗಲಿದ್ದರೆ. ಈ ಧಾರಾವಾಹಿಯಲ್ಲಿ ಅವರ ‘ಫ್ರೆಡ್ರಿಕ್’ ಪಾತ್ರ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ನಟರಾಗಿ ಮಾತ್ರವಲ್ಲದೆ ಈ ಸರಣಿಯ ಕೆಲ ಸಂಚಿಕೆಗಳಿಗೆ ಅವರು ಬರಹಗಾರರಾಗಿಯೂ ಕೆಲಸ ಮಾಡಿದ್ದರು.
ಹಿಂದಿ ಕಿರುತೆರೆಯ ಖ್ಯಾತ ನಟ ದಿನೇಶ್ ಫಡ್ನಿಸ್ (57) ನಿಧನರಾಗಿದ್ದಾರೆ. ಹಿಂದಿಯ ಜನಪ್ರಿಯ ಧಾರಾವಾಹಿ ‘CID’ಯಲ್ಲಿ ಅವರು ‘ಫ್ರೆಡ್ರಿಕ್ಸ್’ (Fredericks) ಪಾತ್ರ ನಿರ್ವಹಿಸುತ್ತಿದ್ದರು. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 4ರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ‘CID’ ಧಾರಾವಾಹಿ 1998ರಿಂದ 2018ರ ತನಕ ಪ್ರಸಾರವಾಗಿತ್ತು. ಭಾರತೀಯ ಕಿರುತೆರೆಯಲ್ಲಿ ಅತಿ ಹೆಚ್ಚು ಕಾಲ ಪ್ರಸಾರವಾದ ಧಾರಾವಾಹಿಗಳಲ್ಲಿ ಇದು ಕೂಡ ಒಂದು. ಧಾರಾವಾಹಿಯಲ್ಲಿ ದಿನೇಶ್ ಫಡ್ನಿಸ್ ಅವರು ‘ಫ್ರೆಡ್ರಿಕ್ಸ್’ ಪಾತ್ರದಿಂದ ಮನೆ ಮಾತಾಗಿದ್ದರು. ಅವರ ಈ ಹಾಸ್ಯ ಭರಿತ ಪಾತ್ರ ಹೆಚ್ಚು ಜನಪ್ರಿಯವಾಗಿತ್ತು.
ನಟನೆ ಮಾತ್ರವಲ್ಲದೇ ಇದೇ ಧಾರಾವಾಹಿಯ ಕೆಲವು ಸಂಚಿಕೆಗಳಿಗೆ ಬರಹಗಾರನಾಗಿಯೂ ದಿನೇಶ್ ಫಡ್ನಿಸ್ ಕೆಲಸ ಮಾಡಿದ್ದರು. ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ‘ಸೂಪರ್ 30’, ‘ಸರ್ಫರೋಷ್’ ಮುಂತಾದ ಸಿನಿಮಾಗಳಲ್ಲಿಯೂ ದಿನೇಶ್ ನಟಿಸಿದ್ದರು. ದಿನೇಶ್ ನಿಧನಕ್ಕೆ ಅವರ ಅಭಿಮಾನಿಗಳು, ಆಪ್ತರು ಸಂತಾಪ ಸೂಚಿಸಿದ್ದಾರೆ. ಫಡ್ನಿಸ್ ಅವರು ಪತ್ನಿ ನಯನಾ, ಪುತ್ರಿ ತನು ಅವರನ್ನು ಅಗಲಿದ್ದಾರೆ.