ಯಶವಂತ್‌ ಕಿಶೋರ್‌ ನಿರ್ದೇಶನದ ‘ಕನ್ನಗಿ’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕೀರ್ತಿ ಪಾಂಡಿಯನ್‌, ಅಮ್ಮು ಅಭಿರಾಮಿ, ವಿದ್ಯಾ ಪ್ರದೀಪ್‌, ಶಾಲಿನ್‌ ಜೋಯಾ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಡಿಸೆಂಬರ್‌ 15ರಂದು ತೆರೆಕಾಣಲಿದೆ.

ಕೀರ್ತಿ ಪಾಂಡಿಯನ್, ಅಮ್ಮು ಅಭಿರಾಮಿ, ವಿದ್ಯಾ ಪ್ರದೀಪ್ ಮತ್ತು ಶಾಲಿನ್ ಜೋಯಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಕನ್ನಗಿ’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾವನ್ನು ಯೂಟ್ಯೂಬರ್ ಯಶವಂತ್ ಕಿಶೋರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರವು ನಾಲ್ಕು ಮಹಿಳಾ ಪಾತ್ರಗಳನ್ನು ಒಳಗೊಂಡಿದ್ದು, ಸಮಾಜದಲ್ಲಿ ತುಳಿತಕ್ಕೊಳಗಾದ ಗುಂಪಿನ ಸುತ್ತ ಚಿತ್ರಕಥೆ ಸುತ್ತುತ್ತದೆ. ಈ ಮಹಿಳೆಯರು ತಮ್ಮ ಮೇಲೆ ದಬ್ಬಾಳಿಕೆ ಮಾಡುವವರ ನಡುವೆ ಸಹಜವಾಗಿ ಬದುಕಲು ಪ್ರಯತ್ನಿಸುತ್ತಿರುತ್ತಾರೆ.

ಅಮ್ಮುಳನ್ನು ಮದುವೆಗೆಂದು ನೋಡಲು ಬರುವ ವರಗಳು ಅವಳನ್ನು ತಿರಸ್ಕರಿಸುತ್ತಿರುತ್ತಾರೆ. ವಿದ್ಯಾ ತನಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುವ ಪತಿ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುತ್ತಾಳೆ. ಕೀರ್ತಿ ಅವಿವಾಹಿತ ಮಹಿಳೆಯಾಗಿದ್ದು, ತನ್ನ 20 ವಾರಗಳ ಗರ್ಭವನ್ನು ತೆಗೆಸಲು ಓಡಾಡುತ್ತಿದ್ದಾಳೆ. ಶಾಲಿನ್ ಲೈಂಗಿಕತೆ, ಸ್ತ್ರೀದ್ವೇಷ, ನಿಯಂತ್ರಿಸುವ ಸಮಾಜದ ಕೋಪವನ್ನು ಎದುರಿಸುತ್ತಿರುತ್ತಾಳೆ. ಹೀಗೆ ಅನೇಕ ಸಮಸ್ಯೆಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡು ದಿನನಿತ್ಯ ಸಂಕಷ್ಟದ ಬದುಕನ್ನು ಸಾಗಿಸುವ ಶೋಷಿತ ಮಹಿಳೆಯರ ಜೀವನದ ಅಳಲುಗಳ ಕತೆಯಿದು.

ಸಿನಿಮಾದಲ್ಲಿ ವೆಟ್ರಿ, ಅಧೇಶ್ ಸುಧಾಕರ್, ಮೌನಿಕಾ, ಯಶವಂತ್ ಕಿಶೋರ್ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Skymoon Entertainment ಮತ್ತು E5 Entertainment ಬ್ಯಾನರ್‌ ಅಡಿಯಲ್ಲಿ ಎಂ ಗಣೇಶ್ ಮತ್ತು ಜೆ ಧನುಷ್ ಚಿತ್ರ ನಿರ್ಮಿಸಿದ್ದಾರೆ. ಶಾನ್ ರೆಹಮಾನ್ ಸಂಗೀತ ಸಂಯೋಜನೆ, ರಾಮ್‌ಜಿ ಛಾಯಾಗ್ರಹಣ, ಕೆ ಶರತ್‌ಕುಮಾರ್ ಸಂಕಲನ ಚಿತ್ರಕ್ಕಿದೆ. ಕಾರ್ತಿಕ್ ನೇತಾ ಸಾಹಿತ್ಯ ರಚಿಸಿದ್ದಾರೆ. ಡಿಸೆಂಬರ್‌ 15 ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here