ಕ್ರಿಕೆಟಿಗನಾಗಿ ತನ್ನ ಕೌಶಲ್ಯ ಮತ್ತು ತನ್ನ ರಾಷ್ಟ್ರೀಯತೆಯನ್ನು ತನ್ನ ಜೀವನದ ಪ್ರತಿ ಹಂತದಲ್ಲೂ ಸಾಬೀತುಪಡಿಸುತ್ತಲೇ ಇರಬೇಕಾಗಿತ್ತು ಎಂದು ಮುರಳಿ ಹೇಳುತ್ತಾರೆ. ಅಂಥಹ ಸಂಘರ್ಷಗಳನ್ನು ಸಿನಿಮಾದಲ್ಲಿ ಚೆನ್ನಾಗಿ ಚಿತ್ರಿಸಲಾಗಿದೆ. ಕೆಲವು ನ್ಯೂನತೆಗಳ ಹೊರತಾಗಿಯೂ ‘800’ ಸಿನಿಮಾ ಮುತ್ತಯ್ಯ ಮುರಳೀಧರನ್ ಎಂಬ ಕ್ರಿಕೆಟಿಗ ತಮ್ಮ ರಾಷ್ಟ್ರೀಯತೆಯಿಂದ ಅಲ್ಲ ಕ್ರಿಕೆಟಿಗರಾಗಿ ಗುರುತಿಸಿಕೊಳ್ಳಲು ಬಯಸಿದ್ದರು ಎಂಬುದನ್ನು ಒತ್ತಿ ಹೇಳುತ್ತದೆ. ‘800’ ತಮಿಳು ಸಿನಿಮಾ Jio Cinemaದಲ್ಲಿ ಸ್ಟ್ರೀಮ್ ಆಗುತ್ತಿದೆ.
ಕ್ರೀಡಾಪಟುಗಳ ಬದುಕಿನ ಕತೆಯನ್ನು ತೆರೆಯ ಮೇಲೆ ತರುವುದು ಅಷ್ಟು ಸುಲಭದ ಮಾತಲ್ಲ. ಅವರ ಕ್ರೀಡೆಯ ಬಗ್ಗೆ, ಬದುಕಿನ ಬಗ್ಗೆ ಬರೀ ಕತೆಗಳನ್ನು ಹೇಳಿದರೆ ಅದು ಬೋರ್ ಹೊಡೆಸುತ್ತದೆ. ಅಲ್ಲೊಂದು ಸೆಂಟಿಮೆಂಟ್, ಪ್ರೇಮ, ಪ್ರೇರಣೆಯ ಅಂಶ ಎಲ್ಲವೂ ಇರಬೇಕು. ಆ ಕತೆಗಳನ್ನು ನೋಡುತ್ತಿದ್ದಂತೆ ಪ್ರೇಕ್ಷಕರು ರೋಮಾಂಚಿತರಾಗಬೇಕು. ಕ್ರೀಡಾಪಟುಗಳ ಬದುಕಿನ ಬಗ್ಗೆ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಅಂಥಾ ಸಿನಿಮಾಗಳ ಸಾಲಿಗೆ ಮತ್ತೊಂದು ಸೇರ್ಪಡೆ ‘800’. ಶ್ರೀಲಂಕಾದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬದುಕಿನ ಕತೆ ಹೇಳುವ ಎಂ ಎಸ್ ಶ್ರೀಪತಿ ನಿರ್ದೇಶನದ ಈ ಸಿನಿಮಾ ಎರಡು ತಿಂಗಳ ಹಿಂದೆ ಥಿಯೇಟರ್ಗಳಲ್ಲಿ ಬಂದಿದ್ದರೂ ಈಗ ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ.
ಕ್ರಿಕೆಟ್ ಹೇಗೆ ಹುಟ್ಟಿಕೊಂಡಿತು ಮತ್ತು ದಕ್ಷಿಣ ಭಾರತದ ಜನರು ಚಹಾ ತೋಟದಲ್ಲಿ ಕೆಲಸ ಮಾಡಲು ಶ್ರೀಲಂಕಾಕ್ಕೆ ಹೇಗೆ ವಲಸೆ ಬಂದರು ಎಂಬ ಮಾಹಿತಿಯೊಂದಿಗೆ ‘800’ ಸಿನಿಮಾ ಆರಂಭವಾಗುತ್ತದೆ. ಮುರಳೀಧರನ್ ಅವರು ಭಾರತದಿಂದ ಶ್ರೀಲಂಕಾಕ್ಕೆ ವಲಸೆ ಬಂದ ಅಂತಹ ಕುಟುಂಬಕ್ಕೆ ಸೇರಿದವರು. ಬಾಲ್ಯದಿಂದಲೂ ಮುರಳಿಗೆ ಕ್ರಿಕೆಟ್ನಲ್ಲಿ ಆಸಕ್ತಿ. ಅವರ ತಂದೆ ಮುತ್ತಯ್ಯ ಕ್ಯಾಂಡಿಯಲ್ಲಿ ಬಿಸ್ಕತ್ತು ಕಾರ್ಖಾನೆಯನ್ನು ನಡೆಸುತ್ತಿರುವ ಯಶಸ್ವಿ ಉದ್ಯಮಿ. ಆರನೇ ವಯಸ್ಸಿನಲ್ಲಿ, ಮುರಳಿ ಮೊದಲ ಬಾರಿಗೆ ಕ್ರಿಕೆಟ್ ಆಟದಲ್ಲಿ ಆಸಕ್ತಿ ಹೊಂದುತ್ತಾನೆ. ಅದೇ ಸಮಯದಲ್ಲಿ, ತಮಿಳು ಮತ್ತು ಸಿಂಹಳೀಯರ ನಡುವೆ ದೊಡ್ಡ ಕೋಮು ಗಲಭೆ ಉಂಟಾಗುತ್ತದೆ. ಆಗ ಮುಸ್ಲಿಂ ಕುಟುಂಬವೊಂದು ಅವರನ್ನು ಕಾಪಾಡುತ್ತದೆ. ಬಾಲಕ ಮುರಳಿಯನ್ನು ಸುರಕ್ಷಿತವಾಗಿಡಲು ಕುಟುಂಬದವರು ಹುಡುಗನನ್ನು ಹಾಸ್ಟೆಲ್ಗೆ ಸೇರಿಸುತ್ತದೆ. ಅಲ್ಲಿ ಮುರಳಿ ಬೇರೆ ಆಟಿಕೆಗಳನ್ನು ಬಿಟ್ಟು ಬಾಲನ್ನೇ ಆರಿಸುವುದು ಆತನಲ್ಲಿದ್ದ ಕ್ರಿಕೆಟ್ ಪ್ರೀತಿಯನ್ನು ತೋರಿಸುತ್ತದೆ.
ಸಿಂಹಳೀಯರು – ತಮಿಳರು ಎಂದು ಎರಡು ಗುಂಪುಗಳ ಮಧ್ಯೆ ತಾನು ತಮಿಳ. ಹೀಗಿರುವಾಗ ಆತ ತನ್ನ ಹೆಸರು ಮುರಳಿ ಎಂದೇ ಹೇಳುತ್ತಾನೆ. ನಂತರದ ವರ್ಷಗಳಲ್ಲಿ ಮುರಳಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ನಡೆಯುತ್ತದೆ. ಹಾಗಾಗಿ ಅವನ ಚೊಚ್ಚಲ ಪ್ರವೇಶ ಅಲ್ಲಿ ನಡೆಯುವುದಿಲ್ಲ. ಸಿನಿಮಾದಲ್ಲಿ ಮುರಳಿಯ ಕ್ರಿಕೆಟ್ ಪ್ರೀತಿ, ಅವರು ಶ್ರೀಲಂಕಾ ತಂಡಕ್ಕೆ ಸೇರಲು ಯಾವೆಲ್ಲ ಅಡಚಣೆಗಳನ್ನು ಎದುರಿಸಬೇಕಾಯಿತು ಎಂಬುದನ್ನೇ ಇಲ್ಲಿ ಹೈಲೈಟ್ ಮಾಡಲಾಗಿದೆ. ಮುರಳಿ ಅವರ ವೃತ್ತಿಜೀವನವು ಸಾಮಾನ್ಯ ಕಥೆಯಾಗಿರಲಿಲ್ಲ. ಅವರ ಬದುಕು ಮತ್ತು ವೃತ್ತಿ ಜೀವನದಲ್ಲಿ ಎದುರಾದ ರಾಜಕೀಯದಿಂದಾಗಿ ಅವರು ಯಾವೆಲ್ಲಾ ರೀತಿಯಲ್ಲಿ ತೊಂದರೆ ಅನುಭವಿಸಿದರು, ವಿವಾದಗಳನ್ನು ಹೇಗೆ ಎದುರಿಸಿದರು ಮತ್ತು ತಮ್ಮ ವೃತ್ತಿಜೀವನದಲ್ಲಿ 800 ಟೆಸ್ಟ್ ವಿಕೆಟ್ಗಳನ್ನು ಪಡೆದರು ಎಂಬುದನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.
‘800’ ತಮಿಳಿಗರು ಮತ್ತು ಸಿಂಹಳೀಯರ ನಡುವಿನ ಘರ್ಷಣೆಯೊಂದಿಗೆ ಪ್ರಾರಂಭವಾಗುತ್ತದೆ, ಚಿತ್ರದಲ್ಲಿ ಚಿತ್ರಿಸಲಾದ ರಾಜಕೀಯ ಸಂಘರ್ಷಗಳು ಸಂಪೂರ್ಣವಾಗಿ ನಿಖರವಾಗಿದೆಯೇ ಅಥವಾ ಇಲ್ಲವೇ ಎಂಬುದು ಪ್ರೇಕ್ಷಕರಿಗೆ ತಿಳಿಯುವುದಿಲ್ಲ. ಚಿತ್ರದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ರಾಜಕೀಯದ ಚಿತ್ರಣವನ್ನು ಸ್ವಲ್ಪ ಮಾತ್ರ ತೋರಿಸಲಾಗಿದೆ. ಆದರೆ ಕ್ರಿಕೆಟ್ ಅಂಶಗಳಿಗೆ ಬರುವುದಾದರೆ, ಮುರಳಿ ಅವರ ಬಾಲ್ಯ, ಹದಿಹರೆಯದ ಮತ್ತು ಅವರು 800 ವಿಕೆಟ್ಗಳನ್ನು ಪಡೆಯುವವರೆಗೆ ಅವರ ವೃತ್ತಿ ಜೀವನದ ಮಜಲುಗಳನ್ನು ಸಮರ್ಥವಾಗಿ ತೋರಿಸಲಾಗಿದೆ. ತನಗೆ ಎದುರಾಗುವ ಅಡಚಣೆಗಳ ಆಘಾತವನ್ನು ಹೊತ್ತುಕೊಂಡು ಅವರ ಶಕ್ತಿಯನ್ನು ಕ್ರಿಕೆಟ್ ಕಡೆಗೆ ಹರಿಸುವುದನ್ನು ನೋಡುವುದು ಸ್ಪೂರ್ತಿದಾಯಕವಾಗಿದೆ.
ವೃತ್ತಿಜೀವನದುದ್ದಕ್ಕೂ ಹಲವಾರು ಬಾರಿ, ಮುರಳಿ ಅವರ ಬೌಲಿಂಗ್ ಶೈಲಿಯನ್ನು ಆಸ್ಟ್ರೇಲಿಯನ್ನರು ಸೇರದಂತೆ ಇತರೆ ಕೆಲವು ಕ್ರಿಕೆಟಿಗರು ಪ್ರಶ್ನಿಸುತ್ತಾರೆ. ‘chucker’ ಎಂದು ಅವರನ್ನು ಛೇಡಿಸಲಾಗುತ್ತದೆ. ಆದರೆ ಅಲ್ಲಿಯೂ ಮುರಳಿ ಎದೆಗುಂದುವುದಿಲ್ಲ. ಪರೀಕ್ಷೆಗಳು ಎದುರಾದಾಗಲೆಲ್ಲ ಅವರು ಅದನ್ನು ಸಂಯಮದಿಂದ ಎದುರಿಸುತ್ತಾರೆ. ಅದು ಅವರಿಗೆ ಕ್ರಿಕೆಟ್ ಮೇಲಿರುವ ಅದಮ್ಯ ಪ್ರೀತಿಯನ್ನು ತೋರಿಸುತ್ತದೆ. ಮುರಳಿಗೆ ಎಲ್ಲ ಕಡೆ ಬೆಂಬಲವಾಗಿ ನಿಂತದ್ದು ಕ್ಯಾಪ್ಟನ್ ಅರ್ಜುನ ರಣತುಂಗ. ಕ್ರಿಕೆಟಿಗನಾಗಿ ತನ್ನ ಕೌಶಲ್ಯ ಮತ್ತು ತನ್ನ ರಾಷ್ಟ್ರೀಯತೆಯನ್ನು ತನ್ನ ಜೀವನದ ಪ್ರತಿ ಹಂತದಲ್ಲೂ ಸಾಬೀತುಪಡಿಸುತ್ತಲೇ ಇರಬೇಕಾಗಿತ್ತು ಎಂದು ಮುರಳಿ ಹೇಳುತ್ತಾರೆ. ಅಂಥಹ ಸಂಘರ್ಷಗಳನ್ನು ಸಿನಿಮಾದಲ್ಲಿ ಚೆನ್ನಾಗಿ ಚಿತ್ರಿಸಲಾಗಿದೆ. ಭಾರತದ ವಿರುದ್ಧ ಪಂದ್ಯವಿರುವಾಗ ಮುರಳಿ ತನ್ನ ಅಜ್ಜಿಯಲ್ಲಿ, ‘ನಾನು ಭಾರತದ ವಿರುದ್ಧ ಆಡುತ್ತೇನೆ. ಈಗ ನೀನು ಯಾರಿಗೆ ಸಪೋರ್ಟ್ ಮಾಡ್ತಿ?’ ಎಂದು ಕೇಳುವುದು, ಕಪಿಲ್ ದೇವ್ ಜತೆಗಿನ ಮಾತುಕತೆಯಲ್ಲಿ ಕೂಡಾ ಇಂಡಿಯನ್ ಟಚ್ ಕೊಡಲಾಗಿದೆ.
‘800’ ಸಿನಿಮಾದಲ್ಲಿ ಪಾತ್ರವರ್ಗ ಉತ್ತಮವಾಗಿದೆ. ಮುತ್ತಯ್ಯ ಮುರಳೀಧರನ್ ಆಗಿ ಮಧುರ್ ಮಿತ್ತಲ್ ಬೆಸ್ಟ್ ಆಯ್ಕೆ. ಮುರಳಿಯ ಬೌಲಿಂಗ್ ಶೈಲಿ, ದೊಡ್ಡ ಕಣ್ಣುಗಳು, ಅವರ ಆ್ಯಕ್ಷನ್ ಎಲ್ಲದಕ್ಕೂ ಮಧುರ್ ನ್ಯಾಯ ಒದಗಿಸಿದ್ದಾರೆ. ಅರ್ಜುನ ರಣತುಂಗ ಪಾತ್ರದಲ್ಲಿ ಶ್ರೀಲಂಕಾದ ನಟ ಕಿಂಗ್ ರತ್ನಂ ಅವರ ಅಭಿನಯ ಮೆಚ್ಚಬಹುದು. ಪೋಷಕ ಪಾತ್ರಗಳಲ್ಲಿ ಮಹಿಮಾ ನಂಬಿಯಾರ್, ವಡಿವುಕ್ಕರಸಿ, ನಾಸರ್ ಇತರರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಎಲ್ಟಿಟಿಇ ನಾಯಕನೊಂದಿಗಿನ ಸಭೆ (ನಾಯಕನ ಪಾತ್ರದಲ್ಲಿ ನರೇನ್) ಮತ್ತು ಪಾಕಿಸ್ತಾನದಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯಂತಹ ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲುತ್ತದೆ. ಅತ್ಯುತ್ತಮ ಪ್ರದರ್ಶನಗಳ ಜೊತೆಗೆ, ಸಂಯೋಜಕ ಜಿಬ್ರಾನ್ ಅವರ ಸಂಗೀತವು ಒಟ್ಟಾರೆ ಚಲನಚಿತ್ರ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ. ಆರ್ಡಿ ರಾಜಶೇಖರ್ ಛಾಯಾಗ್ರಹಣ ಮೆಚ್ಚುವಂಥದ್ದು. ಸಿನಿಮಾದಲ್ಲಿ ಮುರಳಿ ತಾನು ಬೇರೇನೂ ಆಗಲು ಬಯಸುವುದಿಲ್ಲ, ಕ್ರಿಕೆಟಿಗನಾಗಬೇಕು, ಶ್ರೀಲಂಕಾ ತಂಡದಲ್ಲಿ ಆಡಬೇಕು ಎಂದು ದೃಢ ನಿರ್ಣಯ ಮಾಡಿಕೊಂಡಾಗ ನಾವು ನಮ್ಮ ಗುರುತನ್ನು ನಿರ್ಧರಿಸಲು ಸಾಧ್ಯವಾದರೆ, ಇಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಆತನ ಅಪ್ಪ ಹೇಳಿದ ಮಾತುಗಳು ಮುರಳಿಯ ಬದುಕಿನಲ್ಲಿ ಅನುರಣಿಸುತ್ತಲೇ ಇರುತ್ತದೆ. ಕೆಲವು ನ್ಯೂನತೆಗಳ ಹೊರತಾಗಿಯೂ ‘800’ ಸಿನಿಮಾ ಮುತ್ತಯ್ಯ ಮುರಳೀಧರನ್ ಎಂಬ ಕ್ರಿಕೆಟಿಗ ತಮ್ಮ ರಾಷ್ಟ್ರೀಯತೆಯಿಂದ ಅಲ್ಲ ಕ್ರಿಕೆಟಿಗರಾಗಿ ಗುರುತಿಸಿಕೊಳ್ಳಲು ಬಯಸಿದ್ದರು ಎಂಬುದನ್ನು ಒತ್ತಿ ಹೇಳುತ್ತದೆ.