ಬಹುನಿರೀಕ್ಷತ ‘ಇಂಡಿಯನ್‌ 2’ ತಮಿಳು ಸಿನಿಮಾದ ಫಸ್ಟ್‌ glimpses ಬಿಡುಗಡೆಯಾಗಿದೆ. ಎಸ್‌ ಶಂಕರ್‌ ನಿರ್ದೇಶನದಲ್ಲಿ ಕಮಲ ಹಾಸನ್‌ ನಟಿಸಿರುವ ಚಿತ್ರವಿದು. ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಇಂಟ್ರೋ ವೀಡಿಯೋ ಬಿಡುಗಡೆಯಾಗಿದೆ. ನಟ ಸುದೀಪ್‌ ಅವರು ಕನ್ನಡ ಅವತರಣಿಕೆ ವೀಡಿಯೋ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ನಿರ್ದೇಶಕ ಎಸ್‌ ಶಂಕರ್‌ ಮತ್ತು ನಟ ಕಮಲ ಹಾಸನ್‌ ಜೋಡಿಯ ‘ಇಂಡಿಯನ್‌ 2’ ಫಸ್ಟ್‌ Glimpses ಹೊರಬಿದ್ದಿದೆ. ಸರಣಿ ಸಿನಿಮಾದಲ್ಲಿ ಕಮಲ ಹಾಸನ್‌ರ ಅನ್ಯಾಯದ ವಿರುದ್ಧದ ಹೋರಾಟದ ಸೂಚನೆ ಸಿಗುತ್ತದೆ. ‘ಇಂಡಿಯನ್ 2’ ಚಿತ್ರ 1996ರಲ್ಲಿ ಮೂಡಿಬಂದ ‘ಇಂಡಿಯನ್‌’ ಮುಂದುವರಿದ ಭಾಗ. ಚಿತ್ರದಲ್ಲಿ ಕಮಲ್‌, ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರೆದ ಭಾಗವಾಗಿರುವ ‘ಇಂಡಿಯನ್ 2’ ಇಂಟ್ರೋ ವೀಡಿಯೋ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ತಮಿಳಿನಲ್ಲಿ ರಜನಿಕಾಂತ್, ಹಿಂದಿಯಲ್ಲಿ ಅಮೀರ್ ಖಾನ್, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್ ಲಾಲ್ ಇಂಟ್ರೋ ವಿಡಿಯೋ ಅನಾವರಣ ಮಾಡಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್ ನಡಿ ‘ಇಂಡಿಯನ್ 2’ ನಿರ್ಮಾಣವಾಗಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭ್ರಷ್ಟಾಚಾರ – ಅಪರಾಧ ಚಟುವಟಿಕೆಗಳ ವಿರುದ್ಧ ನಿಲ್ಲುವ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್‌ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಅವರ ಕ್ಯಾಮರಾ, ಎ. ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here