ಡೇವಿಡ್ ಫಿಂಚರ್‌ನ ‘ದಿ ಕಿಲ್ಲರ್’ ಮತ್ತು ಜೀನ್ ಪಿಯರೆ ಮೆಲ್ವಿಲೆಯ ‘ಲಾ ಸಮುರಾಯ್’ ಒಂದೇ ರೀತಿಯ ಕಥಾವಸ್ತು ಹೊಂದಿವೆ. ಈ ಎರಡೂ ಸಿನಿಮಾಗಳನ್ನು ವೀಕ್ಷಿಸಿದಾಗ ಸಿನಿಮಾ ಕಲೆಯಾಗುವುದಕ್ಕೂ, ಮುದ ನೀಡುವ ಸರಕಾಗುವುದಕ್ಕೂ ಇರುವ ವ್ಯತ್ಯಾಸ ಕಾಣಿಸುತ್ತದೆ! Netflixನಲ್ಲಿ ಸ್ಟ್ರೀಮ್ ಆಗುತ್ತಿದೆ ‘ದಿ ಕಿಲ್ಲರ್’.
ಹಾಲಿವುಡ್‌ನ ಎಲ್ಲಾ ಕುಶಲತೆ ಇರುವ, ಒಬ್ಬ ನಿಯೋಜಿತ ವೃತ್ತಿಪರ ಹಂತಕನ ಬದುಕಿನ ಪಯಣವನ್ನು ತಣ್ಣಗಿನ ದನಿಯಲ್ಲಿ ಹೇಳುವ ಈ ಸಿನಿಮಾ ಖುಷಿಯಿಂದ ನೋಡಿಸಿಕೊಳ್ಳುತ್ತದೆ. ಆದರೆ, ಅರೆ ಕ್ಷಣವೂ ನಿಮ್ಮನ್ನು ಕಲುಕುವುದಿಲ್ಲ. ಯಾಕೆ? ಎಂದು ಯೋಚಿಸುತ್ತಾ, ಅದೇ ವಸ್ತವುಳ್ಳ ಜೀನ್ ಪಿಯರೆ ಮೆಲ್ವಿಲೆಯ ಹಳೆಯ ಸಿನಿಮಾ ‘ಲಾ ಸಮುರಾಯ್’ ನೋಡಿದೆ. ಸಿನಿಮಾ ಕಲೆಯಾಗುವುದಕ್ಕೂ, ಮುದ ನೀಡುವ ಸರಕಾಗುವುದಕ್ಕೂ ಇರುವ ವ್ಯತ್ಯಾಸ ಕಂಡಿತು!
ಮೆಲ್ವಿಲೆಯ ಸಿನಿಮಾವೂ ನಿರುದ್ವಿಗ್ನವಾಗಿ, ಯಾವ ಅತಿ ನಾಟಕೀಯತೆ ಇಲ್ಲದೆ, ಬಾಡಿಗೆ ಹಂತಕನ, ಅಸ್ತಿತ್ವದ ಭಾರವನ್ನು ಯಾರ ಜೊತೆಗೂ ಹಂಚಿಕೊಳ್ಳಲಾಗದ ಏಕಾಂಗಿತನದ ಒತ್ತಿಟ್ಟ ಭಾವದ ದುರಂತವನ್ನು ಆರಂಭದಿಂದಲೂ ದೃಷ್ಯ ದೃಷ್ಯಗಳಲ್ಲಿ, ದೃಷ್ಯಾಂತರ ಸರಣಿಗಳಲ್ಲಿ ಹೇಳುತ್ತದೆ. ಒಂದೊಂದು ದೃಷ್ಯ ಕಟ್ಟನ್ನು ಮೆಲ್ವಿಲೆ ಎಷ್ಟು ಜತನದಿಂದ ಕಟ್ಟುತ್ತಾನೆ ಎಂದರೆ, ಅರೆ ಕ್ಷಣವೂ ನೋಡುಗರಲ್ಲಿ ಕಸಿವಿಸಿ ಹುಟ್ಟಿಸುವ ವಿಷಾದ ಭಾವವು ತೆಳುವಾಗದ ಹಾಗೆ, ಸಡಿಲಗೊಳ್ಳದ ಹಾಗೆ ಕಟ್ಟುತ್ತಾನೆ. ಮಾತುಗಳು ಮಿತವಾಗಿರುವ ‘ಲಾ ಸಮುರಾಯ್’ನಲ್ಲಿ ಕ್ಯಾಮೆರಾ ಮಾತಾಡುತ್ತದೆ.
ಎರಡರಲ್ಲೂ ಪಾತ್ರ ಚಿತ್ರಣವೇ ಸಿನಿಮಾದ ಜೀವಾಳ. ಆದರೆ, ‘ದಿ ಕಿಲ್ಲರ್’ ಕಾಣಲು ಹಿಂಜರಿಯುವ, ಸಾಮಾಜಿಕ ಕರುಳಬಳ್ಳಿ ‘ಲಾ ಸಮುರಾಯ್’ನಲ್ಲಿ ದೃಷ್ಯಿಕೆಗಳ ರಚನೆಯಲ್ಲಿ ಛಾಪಾಗಿ ಕಾಲ – ದೇಶದ ದುರಂತ ಕಥನವಾಗಿಬಿಡುತ್ತದೆ. ಮೆಲ್ವಿಲೆಯನ್ನು ಫ್ರೆಂಚ್ ಹೊಸ ಅಲೆ ಸಿನಿಮಾದ ಆಧ್ಯಾತ್ಮ ಗುರು ಎನ್ನುವುದು ಯಾಕೆ ಎನ್ನುವುದೂ, ಅಂತಹ ಒಂದು ಆಧ್ಯಾತ್ಮವಿಲ್ಲದೆ ಹೋದರೆ, ಎಂಥಾ ವಸ್ತುವಿಷಯವೂ ಮಾರಾಟದ ಸರಕಾಗಿ ಬಿಡುವುದು ಸಾಧ್ಯ ಎನ್ನುವುದೂ ಅರಿವಿಗೆ ಬಂದಾಗ, ಕಲೆಗಾರಿಕೆ ಯಾಕೆ ಮುಖ್ಯ ಎನ್ನುವುದು ಮತ್ತೊಮ್ಮೆ ಮನದಟ್ಟಾಗುತ್ತದೆ.