ತಮಾಷೆ, ಭಾವುಕತೆ, ಸಾಹಸ ಇವೆಲ್ಲದರ ಹದವಾದ ಮಿಶ್ರಣ ಇರುವ ‘ಮೇರಿ ಲಿಟಲ್ ಬ್ಯಾಟ್‌ಮ್ಯಾನ್‌’ ಈ ಬಾರಿ ಪುಟಾಣಿಗಳ ಅಚ್ಚುಮೆಚ್ಚಿನ ಚಿತ್ರವಾಗುವುದರಲ್ಲಿ ಸಂದೇಹವೇ ಇಲ್ಲ. ಇಂಥದ್ದೇ ಮಾದರಿಯ ಮತ್ತಷ್ಟು ಬ್ಯಾಟ್‌ಮ್ಯಾನ್‌ ಚಿತ್ರಗಳನ್ನು ವೀಕ್ಷಕರು ಎದುರುನೋಡುವಂತೆ ಮಾಡುವ ಆಸಕ್ತಿ ಹುಟ್ಟಿಸುವ ‘ಮೇರಿ ಲಿಟಲ್ ಬ್ಯಾಟ್‌ಮ್ಯಾನ್‌’ ಚಿತ್ರ ಖಂಡಿತ ಕುಟುಂಬಸಮೇತ ನೋಡಿ ಆಸ್ವಾದಿಸಬಲ್ಲ ಚಿತ್ರ. ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ ಸಿನಿಮಾ.

ಬ್ಯಾಟ್‌ಮ್ಯಾನ್‌ ಕತೆ ಯಾರಿಗೆ ತಾನೇ ಗೊತ್ತಿಲ್ಲ? ಅಥವಾ ಯಾರಿಗೆ ತಾನೇ ಆತ ಇಷ್ಟವಿಲ್ಲ? ಚಿಣ್ಣರಿಗಂತೂ ಅಚ್ಚುಮೆಚ್ಚಿನ ಗೆಳೆಯ ಈ ಬಾವಲಿ ಮನುಷ್ಯ ಅರ್ಥಾತ್ ಬ್ಯಾಟ್‌ಮ್ಯಾನ್‌. ಅವನಿಗೂ ವಯಸ್ಸಾಗುತ್ತೆ, ನಿವೃತ್ತಿ ಬೇಕಾಗುತ್ತೆ. ಆದರೂ ಕರೆ ಬಂದಾಗ ಹೊರಡಲೇಬೇಕು. ತನ್ನ ನಿವೃತ್ತ ದಿನಗಳನ್ನು ಆನಂದಿಸುತ್ತಿರುವ ಬ್ಯಾಟ್‌ಮ್ಯಾನ್‌ಗೆ ಕ್ರಿಸ್ಮಸ್ ಈವ್ ದಿವಸ ಒಂದು ಕರೆ ಬರುತ್ತದೆ. ಅವನು ಹೊರಡಲೇ ಬೇಕಾಗುತ್ತದೆ. ಬ್ಯಾಟ್‌ಮ್ಯಾನ್‌ನ ಎಂಟು ವರ್ಷದ ಮಗ ಡೆಮಿಯನ್‌ಗೆ ತಂದೆಯ ಕೆಲಸ ಮಾಡಲು ಬಹಳ ಕಾತುರ ಆದರೆ ಸನ್ನಿವೇಶಗಳು ಅವನಿಗೆ ಬೇರೆಯೇ ಸವಾಲುಗಳನ್ನು ಒಡ್ಡುತ್ತವೆ. ಗೋತಮ್ ಊರಿನ ಕ್ರಿಸ್ಮಸ್ ಸಂಭ್ರಮವನ್ನು ಕದಿಯಲು ಶತ್ರುಗಳ ಆಗಮನವಾಗಿದೆ.

ಇದುವರೆಗೂ ಬ್ಯಾಟ್‌ಮ್ಯಾನ್‌ ಕುರಿತಾಗಿ ಅನೇಕ ಚಿತ್ರಗಳು ಬಂದುಹೋಗಿವೆ. ಮಾಮೂಲು ಚಿತ್ರಗಳು, ಅನಿಮೇಷನ್ ಮಾದರಿಯ ಚಿತ್ರಗಳು ಹೀಗೆ ಲೆಕ್ಕವಿಲ್ಲದಷ್ಟು ಬಂದಿವೆ. ಇವೆಲ್ಲದರ ನಡುವೆ ನಿರ್ದೇಶಕ ಮೈಕ್ ರಾತ್ ಮಾಡಿರುವ ‘ಮೇರಿ ಲಿಟಲ್‌ ಬ್ಯಾಟ್‌ಮ್ಯಾನ್‌’ ಚಿತ್ರ ವಿಶೇಷವಾಗಿ ಕಾಣುತ್ತದೆ. 2017ರ ‘ದ ಲೆಗೋ ಬ್ಯಾಟ್‌ಮ್ಯಾನ್‌’ ಮಾದರಿಯ ಲಘು ನಿರೂಪಣೆ ಎನಿಸಿದರೂ ವಿನ್ಯಾಸ ಮತ್ತು ವಿಷಯ ನಿರೂಪಣೆಯಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ. 90ರ ದಶಕದ ಕಾರ್ಟೂನ್ ನೆಟ್‌ವರ್ಕ್‌ ಮಾದರಿಯ ಸರಣಿಗಳಲ್ಲಿ ಗಮನಿಸಿರಬಹುದು… ಪಾತ್ರಗಳು ಮಾಮೂಲಿಗಿಂತ ವಿಭಿನ್ನವಾಗಿ, ಅಸಾಂಪ್ರದಾಯಿಕವಾಗಿ ನಿರೂಪಿಸಲ್ಪಡುತ್ತಿದ್ದವು. ಹಾಸ್ಯದ ಮಾದರಿಯಲ್ಲಿ ಆಯಾ ವಯಸ್ಸಿಗೆ ಅನುಗುಣವಾಗಿ ವಿನ್ಯಾಸಗಳು ಇರುತ್ತಿದ್ದವು. ಈ ‘ಮೇರಿ ಲಿಟಲ್‌ ಬ್ಯಾಟ್‌ಮ್ಯಾನ್‌’ ಚಿತ್ರದಲ್ಲೂ ಅದೇ ಮಾದರಿಯನ್ನು ನೀವು ಗಮನಿಸಬಹುದಾಗಿದೆ. ಆದರೆ ಒಂದು ತಾಜಾತನ ಮತ್ತು ಹಳೆಯ ನೆನಪುಗಳ ಪುನರ್‌ ನಿರ್ಮಾಣದಂತೆ ಕಾಣುತ್ತದೆ.

ಬ್ಯಾಟ್‌ಮ್ಯಾನ್‌ ಪಾತ್ರದಲ್ಲಿ ಲುಕ್ ವಿಲ್ಸನ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಬ್ಯಾಟ್‌ಮ್ಯಾನ್‌ ತನ್ನ ಮಗನ ಬಗ್ಗೆ ಅತೀವ ಕಾಳಜಿ ತೋರುವ ಒಬ್ಬ ತಂದೆ. ತನಗೆ ಯಾವತ್ತೂ ದಕ್ಕದ ಆರೋಗ್ಯಕರ ಬಾಲ್ಯ ತನ್ನ ಮಗ ಡೆಮಿಯನ್‌ಗೆ ಸಿಗಬೇಕು ಎಂದು ಒದ್ದಾಡುವ ತಂದೆ. ಈ ಬ್ಯಾಟ್‌ಮ್ಯಾನ್‌ ಗೋತಮ್ ನಗರವನ್ನು ಅತ್ಯಂತ ಸುರಕ್ಷಿತ ಸ್ಥಳವನ್ನಾಗಿ ಮಾಡಿದವ. ಸದ್ಯಕ್ಕೆ ನಿವೃತ್ತನಾಗಿ, ಸುಸಂಪನ್ನ ಜೀವನ ನಡೆಸುತ್ತಿರುವ ನೆಮ್ಮದಿಯಾಗಿರುವ ವ್ಯಕ್ತಿ. ಆಲ್ಫರ್ಡ್ ಮತ್ತು ಡೆಮಿಯನ್ ಜೊತೆಗೂಡಿ ಬ್ರೂಸ್ ತನ್ನ ಕುಟುಂಬದ ಸುತ್ತ ಭದ್ರಕೋಟೆ ಕಟ್ಟಿದ್ದಾನೆ. ಆದರೆ ಡೆಮಿಯನ್‌ಗೆ ಈ ಕೋಟೆಯಿಂದ ಹೊರಬಂದು ತನ್ನದೇ ಛಾಪು ಮೂಡಿಸಿ ತಂದೆಯಿಂದ ಭೇಷ್ ಎನಿಸಿಕೊಳ್ಳುವ ಮಹದಾಸೆ. ತನ್ನ ಬಯಕೆ ಈಡೇರಿಸಿಕೊಳ್ಳುವ ಅವಕಾಶ ಡೆಮಿಯನ್‌ಗೆ ಶೀಘ್ರದಲ್ಲೇ ಬರುತ್ತದೆ. ತನ್ನ ಪುಟಾಣಿ ಸಾಹಸಕ್ಕೆ ಡೆಮಿಯನ್ ತನ್ನ ಸುರಕ್ಷಾಕೋಟೆಯನ್ನು ಬಿಟ್ಟು ಹೊರಡುತ್ತಾನೆ. ಹೋಮ್ ಅಲೋನ್ ಮಾದರಿಯ ಸಾಹಸಕ್ಕೆ ಮುಂದಾಗುತ್ತಾನೆ.

ಇಲ್ಲೊಂದಿಷ್ಟು ತಮಾಷೆಯಾದ ಸನ್ನಿವೇಶಗಳು ಕೂಡಾ ಇವೆ. ಚಿತ್ರದ ಕೇಂದ್ರಬಿಂದುವಾದ ಡೆಮಿಯನ್ ಪಾತ್ರದಲ್ಲಿ ಯೋನಸ್ ನಟನೆ ಅದ್ಭುತವಾಗಿ ಮೂಡಿಬಂದಿದೆ. ಕಾಮಿಕ್ಸ್‌ಗೆ ಹೋಲಿಸಿ ನೋಡಿದರೆ ಚಿತ್ರದಲ್ಲಿ ಡೆಮಿಯನ್ ಪಾತ್ರ ಬಹಳ ಉತ್ಸಾಹ ಮತ್ತು ಭಾವನೆಗಳಿಂದ ಕೂಡಿದೆ. ಆತನ ತಂದೆಯಲ್ಲಿ ಇದ್ದ ಏನೇ ಬಂದರೂ ಧೃತಿಗೆಡದ ಧೈರ್ಯಶಾಲಿ ಗುಣ, ಅಪಾಯದ ಸಂದರ್ಭದಲ್ಲಿ ಹೆದರದೇ ಮುನ್ನುಗ್ಗುವ ಗುಣ ಮಗನಲ್ಲೂ ಕಂಡುಬರುತ್ತದೆ. ತನ್ನ ತಂದೆ ತನಗೆ ಕೊಟ್ಟ ಉಡುಗೊರೆಯನ್ನು ಶತ್ರುಗಳು ಕದಿಯಲು ಬಂದಾಗ ಡೆಮಿಯನ್ ತಾನೇ ಅಖಾಡಕ್ಕೆ ಇಳಿದು ಶತ್ರುಗಳನ್ನು ಎದುರಿಸಲು ಮುಂದಾಗುತ್ತಾನೆ. ಈ ದೃಶ್ಯಗಳೆಲ್ಲ ಲಘುವಾಗಿ, ತಮಾಷೆಯಿಂದ ಕೂಡಿವೆ.

ಈ ಚಿತ್ರದಲ್ಲಿ ಬ್ಯಾಟ್‌ಮ್ಯಾನ್‌ ಸರಣಿಗಳಲ್ಲಿ ಇದುವರೆಗೂ ಕಂಡುಬರದ ಖಳನಾಯಕರ ದೊಡ್ಡ ಹಿಂಡೇ ಇದೆ. ಶತ್ರುಗಳ ದೊಡ್ಡ ತಂಡವೊಂದು ಸೇರಿ ಒಂದು ಸಂಚನ್ನು ಯೋಜನೆ ಮಾಡುತ್ತದೆ. ಮಿ ಫ್ರೀಜ್, ಪೆಂಗ್ವಿನ್‌, ಪಾಯ್ಸನ್ ಐವಿ ಮತ್ತು ಬೇನ್ ಒಟ್ಟಾಗಿ ಸೇರಿಕೊಂಡು ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ನಾಶ ಮಾಡಿ ಡೆಮಿಯನ್ ಅನ್ನು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುವ ಹುನ್ನಾರ ಮಾಡುತ್ತಾರೆ. ಆದರೆ ಪುಟ್ಟ ಬ್ಯಾಟ್‌ಮ್ಯಾನ್‌ ಕ್ರಿಸ್ಮಸ್ ಹಬ್ಬದ ನಿಜವಾದ ಸಾರವನ್ನು ತಿಳಿಯುವ ಹಂತದಲ್ಲಿರುತ್ತಾನೆ. ಅವನ ಪಾಲಿನ ಸಂಭ್ರಮವನ್ನು ಕಸಿದುಕೊಳ್ಳಲು ಶತ್ರುಗಳಿಗೆ ಸಾಧ್ಯವಾಗುತ್ತದಾ? ಪುಟ್ಟ ಡೆಮಿಯನ್ ತನ್ನ ತಂದೆ ಹಾಕಿಕೊಟ್ಟ ಪರಂಪರೆಯನ್ನು ಎತ್ತಿಹಿಡಿಯುತ್ತಾನಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರವಿದೆ.

ತಮಾಷೆ, ಭಾವುಕತೆ, ಸಾಹಸ ಇವೆಲ್ಲದರ ಹದವಾದ ಮಿಶ್ರಣ ಇರುವ ‘ಮೇರಿ ಲಿಟಲ್ ಬ್ಯಾಟ್‌ಮ್ಯಾನ್‌’ ಈ ಬಾರಿ ಪುಟಾಣಿಗಳ ಅಚ್ಚುಮೆಚ್ಚಿನ ಚಿತ್ರವಾಗುವುದರಲ್ಲಿ ಸಂದೇಹವೇ ಇಲ್ಲ. ಇಂಥದ್ದೇ ಮಾದರಿಯ ಮತ್ತಷ್ಟು ಬ್ಯಾಟ್‌ಮ್ಯಾನ್‌ ಚಿತ್ರಗಳನ್ನು ವೀಕ್ಷಕರು ಎದುರುನೋಡುವಂತೆ ಮಾಡುವ ಆಸಕ್ತಿ ಹುಟ್ಟಿಸುವ ‘ಮೇರಿ ಲಿಟಲ್ ಬ್ಯಾಟ್‌ಮ್ಯಾನ್‌’ ಚಿತ್ರ ಖಂಡಿತ ಕುಟುಂಬಸಮೇತ ನೋಡಿ ಆಸ್ವಾದಿಸಬಲ್ಲ ಚಿತ್ರ. ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ ಸಿನಿಮಾ.

LEAVE A REPLY

Connect with

Please enter your comment!
Please enter your name here