ರಾಜಕುಮಾರ್ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರದ ಒಂದು ಹಾಡೊಂದನ್ನು ಖ್ಯಾತ ಸಂಗೀತ ಸಂಯೋಜಕ ಕೀರವಾಣಿ ಹಾಡಿದ್ದಾರೆ. ವಾಗೀಶ್ ಚನ್ನಗಿರಿ ರಚನೆಯ ಈ ಹಾಡಿಗೆ ದೇಸಿ ಮೋಹನ್ ಸಂಗೀತ ಸಂಯೋಜನೆಯಿದೆ. ಹೊಯ್ಸಳ ಕೊಣನೂರು ನಿರ್ಮಾಣದ ಸಿನಿಮಾ 2024ರ ಜನವರಿ 12ರಂದು ತೆರೆಕಾಣಲಿದೆ.
‘ರಂಗಸಮುದ್ರ’ ರೆಟ್ರೋ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಆಸ್ಕರ್ ಪುರಸ್ಕೃತ ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಅವರು ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ ಎನ್ನುವುದು ವಿಶೇಷ. ಚಿತ್ರಕಥೆಯ ಮಹತ್ವದ ಘಟ್ಟದಲ್ಲಿ ಬರುವ ಈ ಹಾಡನ್ನು ಕೀರವಾಣಿ ಅವರಿಂದಲೇ ಹಾಡಿಸಬೇಕೆಂದು ನಿರ್ದೇಶಕ ರಾಜಕುಮಾರ್ ಅಸ್ಕಿ ನಿರ್ಧರಿಸಿದ್ದರು. ಅದರಂತೆ ಕೀರವಾಣಿಯವರು ಹಲವು ದಶಕಗಳ ನಂತರ ಈ ಚಿತ್ರದ ಮೂಲಕ ಕನ್ನಡಕ್ಕೆ ಮರಳಿದಂತಾಗಿದೆ. ಕೀರವಾಣಿ ಹಾಡು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಕೀರವಾಣಿ ಅವರು ಗೀತೆಯನ್ನು ಕನ್ನಡದಲ್ಲೇ ಬರೆದುಕೊಂಡು, ಹಾಡಿ ಕನ್ನಡ ಭಾಷೆ ಮೇಲಿರುವ ಅಭಿಮಾನವನ್ನು ಸಾಬೀತುಪಡಿಸಿದ್ದಾರೆ. ವಾಗೀಶ್ ಚನ್ನಗಿರಿ ರಚನೆಯ ಈ ಹಾಡಿಗೆ ದೇಸಿ ಮೋಹನ್ ಸಂಗೀತ ಸಂಯೋಜಿಸಿದ್ದಾರೆ.
ಈ ಗೀತೆಗೆ ಕೀರವಾಣಿಯವರೇ ದನಿಯಾಗಬೇಕು ಎಂದು ಚಿತ್ರದ ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಬಳಿ ನಿರ್ದೇಶಕರು ಹೇಳಿಕೊಂಡಿದ್ದರಂತೆ. ಚಿತ್ರತಂಡದ ಆಸೆಯಂತೆ ನಿರ್ಮಾಪಕರು ಕೀರವಾಣಿ ಅವರನ್ನು ಸಂಪರ್ಕಿಸಿದಾಗ ಪ್ರೀತಿಯಿಂದ ಹೈದರಾಬಾದ್‌ಗೆ ಆಹ್ವಾನಿಸಿದ್ದಾರೆ. ಸುಮಾರು ಅರ್ಧ ದಿನ ಚಿತ್ರತಂಡದೊಂದಿಗೆ ಮಾತನಾಡುತ್ತ ಕುಳಿತ ಕೀರವಾಣಿಯವರು ಅವರ ಮತ್ತು ಕನ್ನಡ ನಂಟು ಹಾಗೂ ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದದ್ದು, ಚಾಮುಂಡೇಶ್ವರಿ ಸ್ಟುಡಿಯೋದಿಂದ ತಮ್ಮ ಸಿನಿಪಯಣ ಶುರುವಾಗಿದ್ದು, ತಮ್ಮ ಆತ್ಮೀಯ ಗೆಳೆಯ ದೊಡ್ಡಣ್ಣ ಎನ್ನುತ್ತಾ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಾಘವೇಂದ್ರ ರಾಜಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯ ಗೌಡ, ಮಹೇಂದ್ರ, ಸ್ಕಂದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ 4 ಗೀತೆಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ, ದೇಸಿ ಮೋಹನ್ ಹಾಗೂ ಎರಡು ಬಿಟ್‌ಗಳಿಗೆ ನವೀನ್ ಸಜ್ಜು ದನಿಯಾಗಿದ್ದಾರೆ. ರೆಟ್ರೋ ಕಥಾ ಹಂದರದ ಸಿನಿಮಾ ಜನವರಿ 12ರಂದು ತೆರೆಕಾಣಲಿದೆ.