‘ಇದ್ದದ್ದು ಇದ್ದಂಗ ಹೇಳಿದ್ರೆ ಎದ್ದುಬಂದು ಎದೆಗೆ ಒದ್ರಂತೆ. ಅಂಥವ್ರು ತುಂಬ ಜನ ಇದ್ದಾರೆ ಈ ಮನೆಯಲ್ಲಿ’ ಎಂದು ತನಿಷಾ ಹೇಳಿದ್ದು ವಿನಯ್ ಅವರನ್ನು ಕೆರಳಿಸಿದೆ. ‘ನಿಂಗೆ ತಾಖತ್ತಿದ್ರೆ ನನ್ನ ಎದೆಗೆ ಒದ್ದು ನೋಡು’ ಎಂದು ಅವರು ಸವಾಲು ಹಾಕಿದ್ದಾರೆ.
ಬಿಗ್‌ಬಾಸ್ ಮನೆ ಕಳೆದೆರೆಡು ವಾರ ಶಾಂತವಾಗಿತ್ತು. ಅದರಲ್ಲಿಯೂ ಕಳೆದ ವಾರ ಮನೆಯವರ ಭೇಟಿ, ಅವರ ಕೈಯಡುಗೆಯನ್ನು ಉಂಡು ಎಲ್ಲರೂ ಎಂಜಾಯ್ ಮಾಡಿದ್ರು. ಈ ವೀಕೆಂಡ್‌ನಲ್ಲಿ ಕಿಚ್ಚ ಎಲ್ಲರಿಗೂ ಬಿಸಿಬಿಸಿ ಕಾಫಿ ಕೊಟ್ಟು ವಾರ್ಮ್ ಅಪ್ ಮಾಡಿದ್ದರು. ಹಾಗೆಯೇ ಅಂತಿಮ ಹಂತಕ್ಕೆ ಕೆಲವೇ ಹೆಜ್ಜೆ ದೂರವಿರುವವರಿಗೆ ಕೆಲವು ಕಿವಿಮಾತನ್ನೂ ಹೇಳಿದ್ದರು. ಅದರ ಪರಿಣಾಮ ಈ ವಾರದ ಆರಂಭದಲ್ಲಿಯೇ ಕಾಣಿಸುತ್ತಿದೆ. ಚಳಿಗಾಲದ ಈ ವಾರದಲ್ಲಿಯೂ ಬಿಗ್‌ಬಾಸ್ ಮನೆಯಲ್ಲಿ ಮಾತಿನ ಕಿಡಿ ಹಾರಿದೆ. ಅದರ ಝಲಕ್ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.
ಬಿಗ್‌ಬಾಸ್ ಒಂದಿಷ್ಟು ಸಂಖ್ಯೆಗಳಿರುವ ಫಲಕಗಳನ್ನು ಮನೆಮಂದಿಗೆ ನೀಡಿದ್ದಾರೆ. ಆ ಫಲಕಗಳಲ್ಲಿರುವ ಮೌಲ್ಯಗಳಲ್ಲಿ ತಮ್ಮ ಮೌಲ್ಯ ಏನು ಎಂಬುದನ್ನು ಸದಸ್ಯರು ಹೇಳಿ, ಉಳಿದವರನ್ನು ಕನ್ವಿನ್ಸ್ ಮಾಡಿ ಆ ಫಲಕವನ್ನು ತಮ್ಮದಾಗಿಸಿಕೊಳ್ಳಬೇಕು. ಇದನ್ನು ನಿರ್ಧರಿಸುವಾಗ ವರ್ತೂರು ಸಂತೋಷ್ ಇಪ್ಪತ್ತೈದು ಸಾವಿರದ ಫಲಕ ಹಿಡಿದರೆ, ಪ್ರತಾಪ್ ಐವತ್ತು ಸಾವಿರದ ಫಲಕ ಹಿಡಿದಿದ್ದಾರೆ. ಆದರೆ ಕಾರ್ತಿಕ್, ತನಿಷಾ, ವಿನಯ್ ಮತ್ತು ಸಂಗೀತಾ ನಡುವೆ ಇಪ್ಪತ್ತು ಲಕ್ಷದ ಫಲಕಕ್ಕಾಗಿ ಮನಸ್ತಾಪ ಉಂಟಾಗಿದೆ.
ಸಂಗೀತಾ, ‘ನನ್ನ ಈ ಜರ್ನಿ ಕಾಂಪ್ಲಿಕೇಟೆಡ್ ಆಗಿ ಶುರುವಾಗಿತ್ತು. ಅಸಮರ್ಥರಾಗಿ’ ಎಂದು ಹೇಳಿದ್ದು ವಿನಯ್ ಅವರನ್ನು ಕೆರಳಿಸಿದೆ. ‘ಅಸಮರ್ಥರು ಎಂದು ಹೇಳಿಕೊಳ್ಳುವುದು ಕಾರ್ಡ್ ಪ್ಲೇ ಮಾಡಿದ ಹಾಗೆಯೇ ನನಗೆ ಅನಿಸುತ್ತಿದೆ’ ಎಂದು ನೇರವಾಗಿ ಹೇಳಿದ್ದಾರೆ. ತನಿಷಾ, ‘ಇದ್ದದ್ದು ಇದ್ದಂಗ ಹೇಳಿದ್ರೆ ಎದ್ದುಬಂದು ಎದೆಗೆ ಒದ್ರಂತೆ. ಅಂಥವ್ರು ತುಂಬ ಜನ ಇದ್ದಾರೆ ಈ ಮನೆಯಲ್ಲಿ’ ಎಂದು ಹೇಳಿದ್ದು ವಿನಯ್ ಅವರನ್ನು ಇನ್ನಷ್ಟು ಕೆರಳಿಸಿದೆ. ‘ನಿಂಗೆ ತಾಖತ್ತಿದ್ರೆ ನನ್ನ ಎದೆಗೆ ಒದ್ದು ನೋಡು’ ಎಂದು ಸವಾಲು ಹಾಕಿದ್ದಾರೆ. ಕಾರ್ತಿಕ್ ಕೂಡ ತನಿಷಾ ಬೆಂಬಲಕ್ಕೆ ನಿಂತು, ‘ನಾನು ನಿಂತ್ಕೊಂಡ್ರೆ ಬುಡಾನೇ ಅಲ್ಲಾಡಿಸ್ತೀನಿ’ ಎಂದು ಜೋರಾಗಿ ಕಿರುಚಿದ್ದಾರೆ. ಹೊಸ ವರ್ಷದ ಹೊಸ ವಾರ ಹೀಗೆ ಶುರುವಾಗಿದೆ. ಹಾಗಾದ್ರೆ ಈ ವಾರವಿಡೀ ಇದರ ಕಿಚ್ಚು ಮುಂದುವರಿಯಲಿದೆಯೇ? ಫೈಟ್ ಅತಿರೇಕಕ್ಕೆ ತಲುಪಲಿದೆಯೇ? ಎನ್ನುವುದನ್ನು ನೋಡಬೇಕು.