‘ಕಾಟೇರ’ ಕನ್ನಡ ಚಿತ್ರರಂಗದ ಮಹತ್ವದ ಚಿತ್ರವಾಗಿ ದಾಖಲಾಗಿದೆ. ‘ಇದು ಬರಹಗಾರರ ಸಿನಿಮಾ’ ಎಂದೇ ಉದ್ಯಮದವರು ಮಾತನಾಡುತ್ತಿದ್ದಾರೆ. ಈ ಹಿಂದೆ ‘ರಾಜಹಂಸ’, ‘ಜಂಟಲ್‌ಮ್ಯಾನ್’, ‘ಗುರುಶಿಷ್ಯರು’ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಜಡೇಶ್ ಕೆ ಹಂಪಿ ‘ಕಾಟೇರ’ ಬರಹಗಾರರಲ್ಲೊಬ್ಬರು. ದೇಸಿ ಕತೆಗಳನ್ನು ಆಪ್ತವಾಗಿ ನಿರೂಪಿಸುವ ಜಡೇಶ್ ‘ಕಾಟೇರ’ ಚಿತ್ರದ ಮೂಲಕ ಮತ್ತಷ್ಟು ಎತ್ತರಕ್ಕೇರಿದ್ದಾರೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅವರೊಂದಿಗಿನ ಮಾತುಕತೆ ಇಲ್ಲಿದೆ.
ಎರಡು ಭಿನ್ನ ಜಾನರ್ ಸಿನಿಮಾಗಳಾದ ‘ಗುರುಶಿಷ್ಯರು’ ಮತ್ತು ‘ಜಂಟಲ್‌ಮ್ಯಾನ್’ ಸಿನಿಮಾಗಳು ಸಾಕಷ್ಟು ಸುದ್ದಿ ಮಾಡಿದ್ದವು. ಎರಡೂ ‘neat’ ಸಿನಿಮಾಗಳು ಎಂದು ಉದ್ಯಮದವರಷ್ಟೇ ಅಲ್ಲ ಪ್ರೇಕ್ಷಕರೂ ಕೊಂಡಾಡಿದ್ದರು. ಅದರಲ್ಲೂ ‘ಗುರುಶಿಷ್ಯರು’ ಚಿತ್ರಕ್ಕೆ ಒಂದು ಹಿಡಿ ಹೆಚ್ಚು ಮನ್ನಣೆ ಸಿಕ್ಕಿತ್ತು. ದೇಸಿ ಆಟ ಖೋಖೋ ಕುರಿತ ಈ ಕತೆಯನ್ನು ನಿರ್ದೇಶಕರು ಆಪ್ತವಾಗಿ ತೆರೆಗೆ ತಂದಿದ್ದರು. ಇವೆರೆಡೂ ಚಿತ್ರಗಳನ್ನು ನಿರ್ದೇಶಿಸಿದವರು ಜಡೇಶ್ ಕೆ ಹಂಪಿ. ಈ ಎರಡೂ ಚಿತ್ರಗಳಿಗಿಂತ ಮುನ್ನ ಅವರು ‘ರಾಜಹಂಸ’ ನಿರ್ದೇಶಿಸಿದ್ದರು. ಗ್ರಾಮಿನ ಸೊಗಡಿನ ಹಿನ್ನೆಲೆ, ರಂಗಭೂಮಿಯ ಗಾಢ ಪ್ರಸ್ತಾಪವಿದ್ದ ಚಿತ್ರ. ಇದು ಅವರ ಚೊಚ್ಚಲ ಚಿತ್ರವೂ ಹೌದು. ಈ ಮೂರೂ ಸಿನಿಮಾಗಳ ಮೂಲಕ ಅವರು ತಾವೊಬ್ಬ ಅಪ್ಪಟ ದೇಸಿ ಕತೆಗಳ ಬರಹಗಾರ, ನಿರ್ದೇಶಕ ಎನ್ನುವುದನ್ನು ಸಾಬೀತು ಮಾಡಿದ್ದರು ಜಡೇಶ್. ಇದೇ ದೇಸಿತನದ ಬರವಣಿಗೆ ಮೂಲಕ ಜಡೇಶ್ ‘ಕಾಟೇರ’ ಪಾತ್ರವನ್ನು ಪ್ರೇಕ್ಷಕರ ಮನಸ್ಸಿಗೆ ಬಿತ್ತಿದ್ದಾರೆ. ಚಿತ್ರಕ್ಕೆ ಕತೆ ರಚಿಸಿರುವ ಅವರು ನಿರ್ದೇಶಕ ತರುಣ್ ಸುಧೀರ್ ಜೊತೆಗೂಡಿ ಚಿತ್ರಕಥೆ ಹೆಣೆದಿದ್ದಾರೆ. ಜಡೇಶ್‌ರ ಮುತ್ತಜ್ಜಿ ತಾನು ಕಂಡ, ಕೇಳಿದ ಘಟನೆಗಳನ್ನು ಕತೆಗಳಾಗಿ ಹೊಸೆದು ಹೇಳುತ್ತಿದ್ದರಂತೆ. ಅಂಥದ್ದೊಂದು ಕತೆಯೇ ‘ಕಾಟೇರ’ ಚಿತ್ರಕ್ಕೆ ಸ್ಫೂರ್ತಿಯಾಗಿದೆ. ಚಿತ್ರದ ದೊಡ್ಡ ಯಶಸ್ಸಿನ ಹಿನ್ನೆಲೆಯಲ್ಲಿ ಜಡೇಶ್ ಅವರೊಂದಿಗಿನ ಮಾತುಕತೆ ಇಲ್ಲಿದೆ…
‘ಕಾಟೇರ’ ದೊಡ್ಡ ಯಶಸ್ಸಿನ ಹಿನ್ನೆಲೆಯಲ್ಲಿ ಉದ್ಯಮದವರು ಚಿತ್ರದ ಬರವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ…
ಹೌದು, ಕತೆ, ಚಿತ್ರಕಥೆ, ಸಂಭಾಷಣೆಗೆ ತುಂಬಾ ಹೋಂವರ್ಕ್ ಮಾಡಿದ್ದೇವೆ. ಚಿತ್ರದ ಪಾತ್ರಗಳು, ದೃಶ್ಯ, ವಸ್ತು, ಡ್ರಾಮಾ, ಟೆಂಪೋ… ಹೀಗೆ ಬರವಣಿಗೆಯಲ್ಲಿ ತುಂಬಾ layered work ಇದೆ. ಸುಮಾರು ಆರು ತಿಂಗಳು ಬರವಣಿಗೆಗೆ ಮೀಸಲಾಗಿತ್ತು.
‘ಕಾಟೇರ’ ಬರಹಗಾರನಾಗಿ ಚಿತ್ರದಲ್ಲಿನ ನಿಮ್ಮ ಪರ್ಸನಲ್ ಫೇವರೆಟ್ ಸೀನ್‌ಗಳು?
ಕ್ಲೈಮ್ಯಾಕ್ಸ್ ನನ್ನ most ಫೇವರೆಟ್ ಸೀನ್. ಊಟಕ್ಕೆ ಕುಳಿತ ಕಾಟೇರ ಅಕ್ಕನ, ‘ಅವರು ಬದ್ಕಕೆ ಬಿಟ್ಟಾರಾ?’ ಎನ್ನುವ ಪ್ರಶ್ನೆಗೆ ಉತ್ತರಿಸುವ ಸನ್ನಿವೇಶವೊಂದು ತುಂಬಾ ಇಷ್ಟ. ಕಾಟೇರ ತಾನು ಹದ ಮಾಡಿದ ಮಚ್ಚಿನಿಂದ ಸಿಟಿಯ ಸ್ಟೀಲ್ ಕತ್ತಿ ಕತ್ತರಿಸುವುದು ನನ್ನ ಮತ್ತೊಂದು ಫೇವರೆಟ್ ಸೀನ್.
ಸಿನಿಮಾದಲ್ಲಿ ನಾಯಕಿ ಪಾತ್ರದ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಈ ಪಾತ್ರಕ್ಕೆ ಪ್ರೇರಣೆ?
ಬುದ್ಧ, ಬಸವ, ಅಲ್ಲಮ, ಅಂಬೇಡ್ಕರ್ ಮುಂತಾದ ಸಮಾಜ ಸುಧಾರಕರ ಆಶಯ ಸಮಾನತೆಯೇ ಆಗಿದೆ. ನಾಯಕಿ ಪಾತ್ರದ ಮೂಲಕ ಅವರ ಆಶಯಗಳನ್ನು ಹೇಳಿಸುವುದು ಎಂದು ಪಾತ್ರ ಬರೆದೆವು. ಜನರಿಗೆ ಇಷ್ಟವಾಯ್ತು. ವಿಪರ್ಯಾಸ ಎಂದರೆ ಆದರ್ಶಗಳನ್ನು ಪ್ರತಿಪಾದಿಸಿದ ವ್ಯಕ್ತಿಗಳದ್ದು ದುರಂತ ಅಂತ್ಯವೇ ಆಗಿರುತ್ತದೆ. ನಮ್ಮ ಚಿತ್ರದ ನಾಯಕಿಯೂ ಅದೇ ರೀತಿ ಉಸಿರು ಚೆಲ್ಲುತ್ತಾಳೆ.
ಚಿತ್ರದ ಅವಧಿ ಹೆಚ್ಚಾಯ್ತು ಎಂದು ಚಿತ್ರಕ್ಕೆ ಬರೆದಿದ್ದ ಸೀನ್‌ಗಳನ್ನು ಕೈಬಿಟ್ಟದ್ದು ಇದ್ಯಾ?
ಹೌದು ಬರೆದ ಕೆಲವು ಸೀನ್‌ಗಳನ್ನು ಕೈಬಿಟ್ಟಿದ್ದೇವೆ. ಚಿತ್ರೀಕರಣ ಮಾಡಿದ ಕೆಲವು ಸನ್ನಿವೇಶಗಳನ್ನೂ ಕೈಬಿಡಬೇಕಾಯ್ತು.
‘ಕಾಟೇರ’ ಸಿನಿಮಾ ವೀಕ್ಷಿಸಿದ ಸಾಮಾನ್ಯ ಪ್ರೇಕ್ಷಕರಿಂದ ನಿಮಗೆ ಸಿಕ್ಕ ಎರಡು best compliments?
‘ಇಂಡಸ್ಟ್ರಿಗೆ ಹೊಸ ದಾರಿ ಹಾಕಿದ್ದೀರಿ’, ‘ನನ್ lifeನಲ್ಲಿ ಸ್ಕ್ರೀನ್ ಮೇಲೆ ಇಂಥ ಕತೆ ನೋಡ್ತೀನೋ ಇಲ್ವೋ ಅಂದ್ಕೊಂಡಿದ್ದೆ..’ ಎನ್ನುವ ಸಾಮಾನ್ಯ ಪ್ರೇಕ್ಷಕರಿಬ್ಬರ complimentಗಳು ಬರಹಗಾರನಾಗಿ ನನಗೆ ಹೆಮ್ಮೆ ತಂದಿವೆ.
ನಿಮ್ಮ ‘ಗುರು ಶಿಷ್ಯರು’ ಕನ್ನಡದಕ್ಕೆ ಒಂದೊಳ್ಳೆಯ sports – drama ಸಿನಿಮಾ. ಸಾಕಷ್ಟು ಮೆಚ್ಚುಗೆ ಗಳಿಸಿದರೂ ಥಿಯೇಟರ್‌ನಲ್ಲಿ ಸಿನಿಮಾ ಹೆಚ್ಚು ದಿನ ಇರ್ಲಿಲ್ಲ. ಕಾರಣ ಏನಿರಬಹುದು?
ಸಿನಿಮಾಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯ್ತು. ಜನರು ನಿಧಾನಕ್ಕೆ ಥಿಯೇಟರ್‌ಗೆ ಬರತೊಡಗಿದ್ದರು. ನಮ್ಮ ಸಿನಿಮಾ ತೆರೆಕಂಡ ಮರುವಾರವೇ ‘ಕಾಂತಾರ’ ಸಿನಿಮಾ ತೆರೆಕಂಡಿತು. ಬಹುಶಃ ಇದರಿಂದ ನಮ್ಮ ಸಿನಿಮಾಗೆ effect ಆಯ್ತು ಅನ್ನಿಸುತ್ತದೆ…
ನಿಮ್ಮ alltime ಫೇವರೆಟ್ ಮೂರು ಕನ್ನಡ ಸಿನಿಮಾಗಳು?
ಬೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ ಮತ್ತು ನಾಗರಹಾವು. ನಿರ್ದೇಶಕ ಸಿದ್ದಲಿಂಗಯ್ಯನವರು ನನಗೆ ಬಹುದೊಡ್ಡ ಸ್ಫೂರ್ತಿ. ‘ಬೂತಯ್ಯನ ಮಗ ಅಯ್ಯು’ ಶೀರ್ಷಿಕೆಯಲ್ಲಿ ಚಿತ್ರದ ಖಳ ಬೂತಯ್ಯ ಇದ್ದಾನೆ. ಈ ಶೀರ್ಷಿಕೆಯ ಮೂಲಕ ಒಳಿತನ್ನು ರಿಯಲೈಸ್ ಮಾಡೋದು ದೊಡ್ಡ ಎಕ್ಸ್‌ಪೆರಿಮೆಂಟ್ ಅನ್ನೋದು ನನ್ನ ಗ್ರಹಿಕೆ. ಅದೇ ರೀತಿ ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ನಾಯಕ ಕೊನೆಯಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ಹೊರಟು ಹೋಗುತ್ತಾನೆ. ಎಲ್ಲವನ್ನೂ ಗಳಿಸಿಕೊಂಡು ‘ಶುಭಂ’ ಎಂದು ಅಂತ್ಯಗೊಳ್ಳುತ್ತಿದ್ದ ಸಮಯದಲ್ಲಿ ಇದು ನಿಜಕ್ಕೂ ಭಿನ್ನ ಆಲೋಚನೆ. ಪುಟ್ಟಣ್ಣನವರು ‘ನಾಗರಹಾವು’ ಚಿತ್ರದಲ್ಲಿ ಗುರು ಶಿಷ್ಯರ ಬಾಂಧವ್ಯ, ಜಾತಿ ವ್ಯವಸ್ಥೆಯನ್ನು ಪರಿಣಾಮಕಾರಿ ಹೇಳಿದ್ದರು. ಈ ಮೂರೂ ಸಿನಿಮಾಗಳು ನನಗೆ ಬಹು ಅಚ್ಚುಮೆಚ್ಚು.
ನಿರ್ದೇಶನ ಮತ್ತು ಬರವಣಿಗೆ ಮಾಡುತ್ತಿರುವ ಮುಂದಿನ ಸಿನಿಮಾಗಳು?
ನಟರಾದ ದುನಿಯಾ ವಿಜಯ್ ಮತ್ತು ಶರಣ್ ಅವರಿಗೆ ಚಿತ್ರಕಥೆ ರಚಿಸಿ ಸಿನಿಮಾ ನಿರ್ದೇಶಿಸಲಿದ್ದೇನೆ. ಮುಂದಿನ ದಿನಗಳಲ್ಲಿ ಈ ಕುರಿತು ವಿವರವಾಗಿ ಹೇಳುತ್ತೇನೆ.