ಡಿಲೀರಿಯಂ ಖಾಯಿಲೆ ಕುರಿತಂತೆ ಕತೆ ಮಾಡಿಕೊಂಡು ಯುವ ತಂತ್ರಜ್ಞರ ತಂಡ ‘ಬಹುಕೃತ ವೇಷಂ’ ಸಿನಿಮಾ ಮಾಡಿದೆ. ಬಿಗ್‌ಬಾಸ್‌ ಖ್ಯಾತಿಯ ವೈಷ್ಣವಿ ಗೌಡ ಚಿತ್ರದ ಹಿರೋಯಿನ್‌. ಟ್ರೈಲರ್‌ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಸಿನಿಮಾ ಥಿಯೇಟರ್‌ಗೆ ಬರಲಿದೆ.

ಈ ಹಿಂದೆ ‘ಗೌಡ್ರು ಸೈಕಲ್’ ಗ್ರಾಮೀಣ ಸೊಗಡಿನ ಚಿತ್ರ ಮಾಡಿದ್ದ ತಂಡದ ಬಹುತೇಕರು ಸೇರಿ ತಯಾರಿಸಿದ ಮತ್ತೊಂದು ಚಿತ್ರ ‘ಬಹುಕೃತ ವೇಷಂ’. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಬಿಗ್‌ ಬಾಸ್ ಖ್ಯಾತಿಯ ನಟಿ ವೈಷ್ಣವಿ ಗೌಡ ಹಾಗೂ ‘ಗೌಡ್ರು ಸೈಕಲ್’ ಹೀರೋ ಶಶಿಕಾಂತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಶಶಿಕಾಂತ್‌ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಾ, “ನನ್ನದು 2 ಶೇಡ್‌ ಇರುವ ಪಾತ್ರ. ಡಿಲೇರಿಯಂ ಫೋಬಿಯಾ ಎನ್ನುವ ಖಾಯಿಲೆ ಕುರಿತು ಮಾಡಿರುವ ಚಿತ್ರವಿದು. ನಾವು ಈ ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೊದಲು ಅವರು ಒಪ್ಪಲಿಲ್ಲ, ನಂತರ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ತಂದು ತೋರಿಸಿದಾಗ ಒಪ್ಪಿದರು” ಎನ್ನುತ್ತಾರೆ. ‘ಗೌಡ್ರು ಸೈಕಲ್’ ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನದ ಈ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದಿರುವ ಅಧ್ಯಾಯ ತೇಜ್ ಮಾತನಾಡಿ, “ನನ್ನ ಸ್ನೇಹಿತನೊಬ್ಬನಿಗೆ ಈ ಥರದ ಖಾಯಿಲೆ ಇತ್ತು. ಪ್ರತಿದಿನ ಅವನ ಮೇಲೆ ಅವನೇ ಫೈಟ್ ಮಾಡ್ತಿರ್ತಾನೆ. ಇದನ್ನು ಸ್ನೇಹಿತ ಶಶಿಕಾಂತ್ ಬಳಿ ಹೇಳಿದೆ. ಆತನೂ ಸಿನಿಮಾ ಮಾಡಲು ಒಪ್ಪಿದ”. ಕಂಟೆಂಟ್ ಸಿನಿಮಾವನ್ನು ಕಮರ್ಷಿಯಲ್ಲಾಗಿ ಮಾಡಿದ್ದೇವೆ” ಎನ್ನುತ್ತಾರೆ. ಚಿತ್ರದಲ್ಲಿ ನಟಿ ವೈಷ್ಣವಿ ಗೌಡ ಅವರಿಗೆ ಉತ್ತಮ ರೋಲ್‌ ಇದೆ. ” ಚಿತ್ರದ ಪ್ರೀ ಕ್ಲೈಮ್ಯಾಕ್ಸ್‌ನಲ್ಲಿ ನಾಲ್ಕೂವರೆ ನಿಮಿಷದ ಒಂದೇ ಶಾಟ್ ಇದೆ. ಅದರಲ್ಲಿ ವೈಷ್ಣವಿಗೌಡ ಅವರು ನಗು, ಅಳು ಸೇರಿಸಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ” ಎಂದು ತಮ್ಮ ಚಿತ್ರದ ನಾಯಕಿ ಬಗ್ಗೆ ನಿರ್ದೇಶಕರು ಮೆಚ್ಚುಗೆಯ ಮಾತುಗಳನ್ನಾಡಿದರು. ಹೆಚ್.ನಂದ ಮತ್ತು ಡಿ.ಕೆ.ರವಿ ನಿರ್ಮಿಸಿರುವ ಚಿತ್ರಕ್ಕೆ ವೈಶಾಖ್ ವಿ.ಭಾರ್ಗವ್ ಸಂಗೀತ ಸಂಯೋಜನೆ, ಕಿರಣ್ ಕೃಷ್ಣಮೂರ್ತಿ ಹಿನ್ನೆಲೆ ಸಂಗೀತ, ಹರ್ಷಕುಮಾರ್‌ ಗೌಡ ಛಾಯಾಗ್ರಹಣವಿದೆ.

LEAVE A REPLY

Connect with

Please enter your comment!
Please enter your name here