ಸಂಗೀತ ಸಂಯೋಜಕ ರವಿ ಬಸ್ರೂರು ನಿರ್ದೇಶನದ ‘ಕಡಲ್’ ಸಿನಿಮಾ ನಾಡಿದ್ದು, ಜನವರಿ 19ರಂದು ತೆರೆಕಾಣುತ್ತಿದೆ. ನಿತ್ಯ ಕಡಲೊಂದಿಗೆ ಒಡನಾಡುವ ಮೀನುಗಾರರ ಬದುಕಿನ ಕತೆಯಿದು. ಸೌರಭ್ ಭಂಡಾರಿ, ಸೂಚನ್ ಶೆಟ್ಟಿ, ಚಿರಶ್ರೀ ಅಂಚನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದ ಪ್ರತಿಭಾವಂತ ಸಂಗೀತ ಸಂಯೋಜಕ ರವಿ ಬಸ್ರೂರು ಚಿತ್ರನಿರ್ದೇಶನದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನಿರ್ದೇಶನದ ನೂತನ ಸಿನಿಮಾ ‘ಕಡಲ್’ ನಾಡಿದ್ದು ಜನವರಿ 19ರಂದು ತೆರೆಕಾಣುತ್ತಿದೆ. ಈಗಾಗಲೇ ಹಲವು ಬಾರಿ ಚಿತ್ರದ ಪ್ರೈವೇಟ್ ಸ್ಕ್ರೀನಿಂಗ್ ನಡೆದಿದೆ. ಸಿನಿಮಾ ವೀಕ್ಷಿಸಿದವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಥಿಯೇಟರ್‌ಗೆ ಬಿಡುಗಡೆ ಮಾಡಿ, ಸಿನಿಮಾ ಹೆಚ್ಚು ಜನರಿಗೆ ತಲುಪಲಿ’ ಎನ್ನುವ ಬೇಡಿಕೆಯ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶೀರ್ಷಿಕೆಯೇ ಹೇಳುವಂತೆ ಇದು ಕಡಲ ತೀರದ, ಮೀನುಗಾರರ ಬದುಕು – ಬವಣೆಯ ಕತೆ. ಮೊನ್ನೆ ಸಕ್ರಾಂತಿಯಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ಕರಾವಳಿಯ ನೇಟಿವಿಟಿ ದಟ್ಟವಾಗಿ ಕಾಣಿಸಿದ್ದು ಚಿತ್ರದಲ್ಲಿ ಪ್ರೀತಿಯ ಕತೆಯೂ ಇರುವಂತಿದೆ.
‘ಗರ್ ಗರ್ ಮಂಡ್ಲ’, ‘ಕಟಕ’, ‘ಬಿಲಿಂಡರ್’, ‘ಗಿರ್ಮಿಟ್’ ಚಿತ್ರಗಳ ನಂತರ ರವಿ ಬಸ್ರೂರು ನಿರ್ದೇಶನದ ಐದನೇ ಚಿತ್ರವಿದು. Instagramನಲ್ಲಿ ಟ್ರೇಲರ್ ಹಂಚಿಕೊಂಡಿರುವ ಅವರು, ‘ನಮ್ಮ ತಂಡದ 5ನೇ ಪ್ರಯತ್ನವಿದು. ಖಾಸಗಿ ಪ್ರದರ್ಶನ ಯಶಸ್ವಿ ಆದ ಬಳಿಕ ಇದನ್ನು ಬಿಡುಗಡೆ ಮಾಡಿ ಎಲ್ಲರಿಗೂ ತೋರಿಸಿ ಎಂಬ ಬೇಡಿಕೆ ಬಂತು. ಹಾಗಾಗಿ ಇದೇ 19ರಿಂದ ನಮ್ಮ ಕಡಲ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಈ ಹಿಂದಿನ ಸಿನಿಮಾಗಳಿಗೆ ಬೆಂಬಲ ನೀಡಿದ ರೀತಿಯೇ ಈ ಸಿನಿಮಾಗೂ ನಿಮ್ಮ ಶುಭ ಹಾರೈಕೆ ಇರಲಿ. ಒಂದು ಸಿನಿಮಾದಿಂದ ಎರಡು ಸಾವಿರಕ್ಕೂ ಹೆಚ್ಚು ಜನರ ಬದುಕು ನಡೆಯುತ್ತದೆ. ಆ ಉದ್ದೇಶದಿಂದ ವರ್ಷಕ್ಕೊಂದು ಸಿನಿಮಾ ಮಾಡುವ ಹವ್ಯಾಸ ಇಟ್ಟುಕೊಂಡಿದ್ದೇವೆ. ಇದರಿಂದ ಒಂದಷ್ಟು ತಂತ್ರಜ್ಞರಿಗೆ, ಕಲಾವಿದರಿಗೆ ಬೆಳಕು ಸಿಗುತ್ತದೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ರವಿ ಬಸ್ರೂರು ಮನವಿ ಮಾಡಿದ್ದಾರೆ.
‘ಕಡಲ್’ ಸಿನಿಮಾದ ಮುಖ್ಯಪಾತ್ರಗಳಲ್ಲಿ ಸೌರಭ್ ಭಂಡಾರಿ, ಸೂಚನ್ ಶೆಟ್ಟಿ, ಚಿರಶ್ರೀ ಅಂಚನ್ ಇದ್ದಾರೆ. ನಾಗೇಂದ್ರ ಕೋಟೆ, ಭಾಸ್ಕರ್ ಬಸ್ರೂರು, ವಿಜಯ್ ಬಸ್ರೂರು, ಸುಜಾತಾ ಅಂದ್ರದೆ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಮೀನುಗಾರರ ಕತೆಯ ಜೊತೆ ಪ್ರೀತಿ, ಪ್ರೇಮ, ಸೇಡಿನ ಕತೆಯೂ ಚಿತ್ರದಲ್ಲಿದೆ. ‘ಓಂಕಾರ್ ಮೂವೀಸ್ ಬ್ಯಾನರ್’ ಮೂಲಕ ಈ ಸಿನಿಮಾಗೆ ಎನ್ ಎಸ್ ರಾಜ್ಕುಮಾರ್ ಬಂಡವಾಳ ಹೂಡಿದ್ದಾರೆ. ಸಚಿನ್ ಬಸ್ರೂರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ರವಿ ಬಸ್ರೂರು ಚಿತ್ರದ ನಿರ್ದೇಶನದ ಜೊತೆ ಸಂಗೀತ ಸಂಯೋಜನೆ ಮತ್ತು ಸಂಕಲನದ ಹೊಣೆಯನ್ನೂ ಹೊತ್ತಿದ್ದಾರೆ.