‘ಮಿತ್ರ ಮೈ ಫ್ರೆಂಡ್’ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿ ಗುರುತಿಸಿಕೊಂಡ ಭವತಾರಿಣಿ ಕಡಿಮೆ ಅವಧಿಯಲ್ಲೇ ದೊಡ್ಡ ಹೆಸರು ಮಾಡಿದವರು. ‘ಭಾರತಿ’ ಚಲನಚಿತ್ರದ ‘ಮಾಯಿಲ್ ಪೋಲ ಪೊನ್ನು ಒನ್ನು’ ಹಾಡಿಗೆ ಅತ್ಯುತ್ತಮ ‘ಹಿನ್ನೆಲೆ ಗಾಯಕಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಪ್ರತಿಭಾವಂತೆ. ಭವತಾರಿಣಿ ಅವರ ಅಕಾಲಿಕ ನಿಧನ ಸಿನಿಮಾ ಸಂಗೀತ ಸಂಯೋಜನೆ ಮತ್ತು ಗಾಯನ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ.

ಸಂಗೀತ ದಿಗ್ಗಜ ಇಳಯರಾಜ ಅವರ ಪುತ್ರಿ ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ಭವತಾರಿಣಿ (47 ವರ್ಷ) ಕಳೆದ ವಾರ (ಜನವರಿ 25) ಅಗಲಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಚಿಕ್ಕ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದ ಭವತಾರಣಿ ಅವರ ಅಗಲಿಕೆ ಸಿನಿಪ್ರೇಮಿಗಳಿಗೆ ನೋವುಂಟು ಮಾಡಿತು. ಇಳಯರಾಜ ಅವರು ಪುತ್ರಿಯೊಂದಿಗಿನ ಕಪ್ಪು-ಬಿಳುಪಿನ ಬಾಲ್ಯದ ಚಿತ್ರವೊಂದನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ‘ನನ್ನ ಪ್ರೀತಿಯ ಮಗಳು’ ಎಂದು ಶೀರ್ಷಿಕೆ ನೀಡಿದ್ದರು.

ಭವತಾರಿಣಿ ಅವರು 1984 ರಲ್ಲಿ ಬಿಡುಗಡೆಯಾದ ಮಲಯಾಳಂನ ‘ಮೈ ಡಿಯರ್ ಕುಟಿಚ್ ಸೈತಾನ’ ಚಿತ್ರದ ‘ದಿತ್ತಿದೆ ತಹಲಂ’ ಹಾಡನ್ನು ಹಾಡುವ ಮೂಲಕ ಹಿನ್ನೆಲೆ ಗಾಯಕಿಯಾಗಿ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ನಂತರ ಪ್ರಭುದೇವ ಅಭಿನಯದ ‘ರಾಸಯ್ಯ’ ಚಿತ್ರದಲ್ಲಿ ಅವರು ಹಾಡಿದ್ದ ಹಾಡುಗಳು ದೊಡ್ಡ ಹಿಟ್ ಆದವು. ಅಂದಿನಿಂದ ಅವರು ತಮ್ಮ ತಂದೆ ಮತ್ತು ಸಹೋದರರು ಸಂಯೋಜಿಸಿದ ಆಲ್ಬಂಗಳಲ್ಲಿ ಹಾಡಲು ಆರಂಭಿಸಿದ್ದರು. ದೇವಾ ಮತ್ತು ಸಿರ್ಪಿ ಸಂಯೋಜಿಸಿದ್ದ ಹಾಡುಗಳಿಗೂ ಭವತಾರಿಣಿ ತಮ್ಮ ಧ್ವನಿ ನೀಡಿದ್ದಾರೆ.

ಚೆನ್ನೈನ ರೋಸರಿ ಮೆಟ್ರಿಕ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ನಂತರ ಚೆನ್ನೈನ ಆದರ್ಶ ವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದ್ದರು. ಜಾಹೀರಾತು ಕಾರ್ಯನಿರ್ವಾಹಕ ಆರ್ ಶಬರಿರಾಜ್ ಅವರ ಪುತ್ರ ರಾಮಚಂದ್ರನ್ ಅವರೊಂದಿಗೆ ಭವತಾರಿಣಿ ವಿವಾಹ ನೆರವೇರಿತ್ತು. ಪತ್ರಕರ್ತರಾಗಿ ಕೆಲಸ ಮಾಡಿದ್ದ ರಾಮಚಂದ್ರನ್‌ ಪ್ರಕಾಶನಕ್ಕೆ ಮರಳಿ ‘ಕಣ್ಣನ್’ ಜಾಹೀರಾತುಗಳನ್ನು ಪ್ರಾರಂಭಿಸಿದ್ದರು.

ಶೋಭನಾ ಅಭಿನಯದ ರೇವತಿ ನಿರ್ದೇಶನದ 2002ರ ‘ಮಿತ್ರ ಮೈ ಫ್ರೆಂಡ್’ ಚಿತ್ರದ ಮೂಲಕ ಭವತಾರಿಣಿ ಸಂಗೀತ ನಿರ್ದೇಶಕಿಯಾಗಿ ಗುರುತಿಸಿಕೊಂಡರು. ನಂತರ ಅವರು ‘ಅವೂನಾ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಶಿಲ್ಪಾ ಶೆಟ್ಟಿ, ಅಭಿಷೇಕ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ನಟಿಸಿದ್ದ ರೇವತಿ ನಿರ್ದೇಶನದ ‘ಫಿರ್ ಮಿಲೇಂಗೆ’ ಹಿಂದಿ ಸಿನಿಮಾಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಭವತಾರಿಣಿ ಹೆಚ್ಚಾಗಿ ತಮ್ಮ ತಂದೆ ಮತ್ತು ಸಹೋದರರ ನಿರ್ದೇಶನದಲ್ಲಿ ಹಾಡುಗಳನ್ನು ಹಾಡುತ್ತಿದ್ದರು.

ತಂದೆ ಇಳಯರಾಜ ಅವರು ಸಂಯೋಜಿಸಿದ್ದ ರಾಷ್ಟ್ರಕವಿ ಸುಬ್ರಹ್ಮಣ್ಯ ಭಾರತಿ ಅವರ ಜೀವನಾಧಾರಿತ ‘ಭಾರತಿ’ ಚಲನಚಿತ್ರದ ‘ಮಾಯಿಲ್ ಪೋಲ ಪೊನ್ನು ಒನ್ನು’ ಹಾಡಿಗೆ 2000ರಲ್ಲಿ ಅತ್ಯುತ್ತಮ ‘ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪಡೆದುಕೊಂಡರು. ಸಂಗೀತ ನಿರ್ದೇಶನದಲ್ಲಿ ತಮ್ಮ ಸಹೋದರರಾದ ಯುವನ್ ಶಂಕರ್ ರಾಜಾ ಮತ್ತು ಕಾರ್ತಿಕ್ ರಾಜಾ ಅವರಿಗಿಂತ ಹೆಚ್ಚು ಹೆಸರು ಮಾಡಿದ್ದರು ಭವತಾರಿಣಿ. ಸಂಗೀತ ನಿರ್ದೇಶಕಿಯಾಗಿ ಅವರು ‘ಮಿತ್ರ ಮೈ ಫ್ರೆಂಡ್‌’ (ಹಿಂದಿ), ‘ಅವುನಾ’ (ತೆಲುಗು), ‘ಫಿರ್ ಮಿಲೇಂಗೆ’ (ಹಿಂದಿ), ‘ಗೀಯ ಗೀಯʼ (ಕನ್ನಡ), ‘ಅಮಿರ್ತಂ’, ‘ಇಲಕ್ಕನಂ’, ‘ವೆಲ್ಲಾಚಿ’, ‘ಪೊರಿದ ಪಜಗು’, ‘ಕಲ್ವರ್ಗಲ್’, ‘ಮಾಯಾನದಿ’ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here