ಹೊಸ ನಿರ್ದೇಶಕನ ಹೊಸ ಪ್ರಯತ್ನವಾದ ‘ಕಡಸೀಲ ಬಿರಿಯಾನಿ’, ತಮಿಳು ಚಿತ್ರರಂಗದ ಸಿದ್ಧಸೂತ್ರಗಳನ್ನು ಒಡೆದು ಮಾಡಿದ ಸಿನಿಮಾ. ಹಿಂಸೆಯನ್ನು ಆಸ್ವಾದಿಸುವವರು ಕೊನೆಗೆ ಹಿಂಸೆಗೆ ಬಲಿಯಾಗುತ್ತಾರೆ ಎಂಬುದನ್ನು ಬೇರೆಯದೇ ಧಾಟಿಯಲ್ಲಿ ಕಟ್ಟಿಕೊಡಲಾಗಿದೆ. ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿದೆ.

ನಿಶಾಂತ್ ಕಲಿನಿಧಿಯ ಚೊಚ್ಚಲ ನಿರ್ದೇಶನದ ತಮಿಳು‌ ಸಿನಿಮಾ ‘ಕಡಸೀಲ ಬಿರಿಯಾನಿ’ ವಾಣಿಜ್ಯ, ಕಲಾ ಪ್ರಾಕಾರಗಳ ಆಚೆಗೆ ನಿಲ್ಲುವ ಪ್ರಯೋಗ‌. ಒಳ್ಳೆಯ‌ ನಟರಿದ್ದಾರೆ, ಉತ್ತಮ ಅಭಿನಯವಿದೆ. ಆದರೆ ಎಲ್ಲವೂ ದ್ವೇಷ ಕಾರುವ ಪಾತ್ರಗಳಾದ ಕಾರಣ ಕೊನೆಗೆ ಇಷ್ಟವಾಗಿ ಉಳಿಯುವ ಯಾವುದೇ ಪಾತ್ರಗಳಿಲ್ಲ. ಏಕೆಂದರೆ ಇದೊಂದು ಕ್ರೈಂ ಥ್ರಿಲ್ಲರ್.

ಸಿನಿಮಾ ಆರಂಭವಾಗುವುದು ವಿಜಯ್ ಸೇತುಪತಿ ಧ್ವನಿಯಲ್ಲಿ. ಒಂದು ಕ್ರೂರ ಕುಟುಂಬದ ಕತೆ ಹರಿಕಥೆಯಂತೆ ಅನಾವರಣಗೊಳ್ಳುತ್ತದೆ. ಮೂರು ತಲೆಮಾರು ಕ್ರೌರ್ಯವನ್ನೇ ಮಿಂದೆದ್ದ ಕುಟುಂಬ ಅಳಿಯಕಟ್ಟು ಪದ್ಧತಿಯಲ್ಲಿಯಲ್ಲಿರುವಂಥದ್ದು. ಅಂದರೆ ಮದುವೆ ಮಾಡಿ ಹೆಣ್ಣು ಕೊಡುವುದಲ್ಲ, ಮದುವೆ ಮಾಡಿ ಅಳಿಯನನ್ನು ಮನೆಗೆ ತರುವುದು.

ಕ್ರೌರ್ಯಕ್ಕೆ ಬೇಸತ್ತ ಅಪ್ಪ ತನ್ನಿಷ್ಟದ ಕೊನೆಯ ಮಗನನ್ನು ಕರೆದುಕೊಂಡು ಮನೆಬಿಟ್ಟು ದೂರ ಹೋಗಿ ಹೊಸ ಬದುಕು ಕಟ್ಟಿಕೊಳ್ಳುತ್ತಾನೆ. ಆ ಅಪ್ಪನನ್ನು ಅಲ್ಲಿನ ತೋಟದ ಮಾಲೀಕ ಕೊಲ್ಲುತ್ತಾನೆ ಎಂಬುದು ಸೇತುಪತಿ ಧ್ವನಿಯಲ್ಲಿ ಕೇಳಬೇಕಾದ ಕತೆ. ಇಷ್ಟು ಹೇಳಿ ನಾವು ನೋಡಬೇಕಾದ ಕತೆಗೆ ಪ್ರೇಕ್ಷಕನನ್ನು ತಂದು ನಿಲ್ಲಿಸಲಾಗುತ್ತದೆ‌.‌

ತಂದೆಯನ್ನು ಕೊಂದ ಮಾಲೀಕನ ಹತ್ಯೆಗೆ ಪೆರಿಯ ಪಾಂಡಿ (ವಸಂತ ಸೆಲ್ವಂ), ಇಳ ಪಾಂಡಿ (ದಿನೇಶ್ ಮಣಿ) ಮತ್ತು ಚಿಕ್ಕು ಪಾಂಡಿ (ವಿಜಯ್ ರಾಮ್) ಸಂಚು ಹಾಕುತ್ತಾರೆ. ಈ ರಗಳೆಗಳೇ ಬೇಡ ಎಂದು ತಪ್ಪಿಸಿ ಓಡಲು ಚಿಕ್ಕು ಪಾಂಡಿ ಮಾಡುವ ಪ್ರಯತ್ನ ವಿಫಲವಾಗಿ ಅವರ ಜತೆ ಸೇರಲೇಬೇಕಾಗುತ್ತದೆ‌. ಗಂಡ ಇದ್ದಾಗ ಅವಳಿಗೆ ಅವ ಬೇಡದ ಆಸಾಮಿ. ಆದರೆ ಗಂಡ ಸತ್ತ ಮೇಲೆ ಅವಳು ಸೇಡಿನ ಕಿಡಿ. ಹಾಗಾಗಿ ಅಪ್ಪನ ಕೊಲೆಗಾರನನ್ನು ಕೊಂದು ಬನ್ನಿ ಎಂಬುದು ಆಕೆ ಮಕ್ಕಳಿಗೆ ಹೊರಡಿಸಿದ ಫರ್ಮಾನು.

ಕೊಲೆಯ ಸಂಚಿನ ಕಾರ್ಯಕ್ರಮಗಳು ರೋಚಕವಾಗಿವೆ. ರಬ್ಬರ್ ಕಾಡಿನೊಳಗೆ ಪಾತ್ರಧಾರಿ ಓಡುವಾಗ ಅವನ ಹಿಂದೆಯೇ ಓಡುವ ಕ್ಯಾಮರಾ ನಮ್ಮನ್ನೂ ಕರೆದೊಯ್ಯುತ್ತದೆ. ಮಳೆಗಾಲದಲ್ಲಿ ಇರುವ ಕ್ರಿಮಿ ಕೀಟಗಳ ಸದ್ದನ್ನು ವಿನೋದ್ ತಲಿಂಗಸಲಂ ಹಿನ್ನೆಲೆ ಸಂಗೀತದಲ್ಲಿ ಪರಿಣಾಮಕಾರಿಯಾಗಿ ತಂದಿದ್ದಾರೆ. ಈ ಸಿನಿಮಾದ ನಿಜವಾದ ಹೀರೋ ಮತ್ತು ಹೀರೋಯಿನ್ ಕ್ಯಾಮರಾ ಮತ್ತು ಹಿನ್ನೆಲೆ ಸಂಗೀತ. ಉಳಿದವರೆಲ್ಲ ಖಳನಾಯಕರು. ಹಲವು ದೃಶ್ಯಗಳಿಗೆ ಹಿನ್ನೆಲೆ ಸಂಗೀತ ಸ್ಪಷ್ಟವಾದ ಅರ್ಥ ಕೊಡುತ್ತದೆ‌. ಪ್ರಯೋಗಾತ್ಮಕ ಎಡಿಟಿಂಗ್ ಕೂಡ ಅರ್ಥಗರ್ಭಿತ ಅನಿಸುವುದು ಹಿನ್ನೆಲೆ ಸಂಗೀತದಿಂದ.

ಕೊಂದ ಸಂತೋಷದಲ್ಲಿರುವ ಪೆರಿಯ ಪಾಂಡಿ ಮತ್ತು ದಿನೇಶ ಪಾಂಡಿ ಶವಪೆಟ್ಟಿಗೆಯಿಂದ ಎದ್ದು ಕೂತ ವ್ಯಕ್ತಿಯ ನೋಡಿ ಲಾರಿಯಿಂದ ಬೀಳುವುದು, ತನ್ನ ಅಪ್ಪನನ್ನು ಕೊಂದವನ ಕಂಡು ಸಂತೋಷಪಡುವ ಮಗ, ಕೊಲ್ಲಬೇಕಾದವ ಸಿಗಲಿಲ್ಲ, ಹಾಗಾಗಿ ಸಿಕ್ಕವನನ್ನೇ ಕೊಲ್ಲಬೇಕು ಎಂಬ ಒಂದಷ್ಟು ವಿಲಕ್ಷಣ ಪ್ರಸಂಗಗಳು ಸಿನಿಮಾವನ್ನು ಆವರಿಸಿವೆ.

ಸಿನಿಮಾ ತಮಿಳು, ಆದರೆ ಕತೆ ನಡೆಯುವುದು‌ ಕೇರಳದಲ್ಲಿ. ಹಾಗಾಗಿ ಇದನ್ನು ನೋಡುವವರಿಗೆ ತಮಿಳಿನ ಜತೆ ಮಲಯಾಳ ಭಾಷೆಯೂ ಅರ್ಥವಾಗಬೇಕು. ಇದೊಂದು ಡಾರ್ಕ್ ಕಾಮಿಡಿ ಎಂದು ಚಿತ್ರದ ಬಗ್ಗೆ ಒಂದಷ್ಟು ಕಡೆಗಳಲ್ಲಿದೆ. ಸಾವಿನ ಘಳಿಗೆಯಲ್ಲೂ ಬರುವ ಹಾಸ್ಯ ಸನ್ನಿವೇಶವನ್ನು ವಿಕಟಹಾಸ್ಯ ಎನ್ನಬಹುದು. ಆದರೆ ಉಳಿದಂತೆ ಹೂಸು ಬಿಡುವುದನ್ನೇ ಕಾಮಿಡಿ ಎಂದು ತೋರಿಸಲಾಗಿದೆ. ಕನ್ನಡದ ಪ್ರೇಕ್ಷಕ ಹೂಸು‌ ಹಾಸ್ಯದಿಂದ ಎರಡು ದಶಕ ದೂರ ಬಂದ ಕಾರಣ ನಮಗೆ ಆ ಅಪಹಾಸ್ಯ ಹಾಸ್ಯವೆನಿಸದು.

ಕೊಂದು ಸೇಡು ತೀರಿಸಬೇಕು‌ ಎಂದವರು ಕೊಂದ ಮೇಲೆ ತಾವೂ ಸಾಯುತ್ತಾರೆ. ಕೊಲೆಗೆ ಪ್ರತಿಕೊಲೆ ಮಾಡಬೇಕು ಎಂದು ಕಾಯುವ ಎಸ್ಟೇಟ್ ಓನರ್ ಮಗ (ಹಕೀಂ ಶಹಜಹಾನ್) ಕೂಡ ಅಪಮೃತ್ಯುಗೆ ಒಳಗಾಗುತ್ತಾನೆ. ಇದ್ಯಾವುದೂ ಬೇಡ ಎಂದು ಮನಸ್ಸಿಲ್ಲದ ಮನಸ್ಸಿನಲ್ಲಿ ಜತೆಗಿದ್ದ ಚಿಕ್ಕು ಪಾಂಡಿ ಮಾತ್ರ ಕೊನೆಗೆ ಉಳಿಯುತ್ತಾನೆ. ಕಡಸೀಲ ಬಿರಿಯಾನಿ ಎಂದರೆ ಕೊನೆಗೆ ಬಿರಿಯಾನಿ ಎಂಬ ಅರ್ಥ. ಹಾಗಾಗಿ ಆತ ಪಟ್ಟಣ ಸೇರಿ ಬಿರಿಯಾನಿ ತಿನ್ನುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಇದಕ್ಕೆಲ್ಲ ಏನು ಅರ್ಥ ಕಲ್ಪಿಸಿಕೊಳ್ಳಬೇಕು ಎಂಬುದು ನೋಡುಗನಿಗೆ ಬಿಟ್ಟದ್ದು.

ಅಭಿಮಾನಿಗಳಿಗೆ ಏನು ಬೇಕೋ ಅದನ್ನು ಕೊಟ್ಟು ರಂಜಿಸುವುದು ಕಮರ್ಶಿಯಲ್ ಸಿನಿಮಾ. ನಿರ್ದೇಶಕ ತನಗೆ ಏನು ತೋರಿಸಬೇಕು ಎಂದಿದೆಯೋ ಅದನ್ನು ತೋರಿಸುವುದು ಆರ್ಟ್ ಸಿನಿಮಾ. ‘ಕಡಸೀಲ ಬಿರಿಯಾನಿ’ ಎಕ್ಸ್‌ಪರಿಮೆಂಟಲ್ ಸಿನಿಮಾ. ಕೆಲವರಿಗೆ ಇಷ್ಟವಾಗುತ್ತದೆ. ಆಗದವರಿಗೆ ತಾವೇ ಎಕ್ಸ್‌ಪರಿಮೆಂಟಿಗೆ ಒಳಗಾದ ಅನುಭವ. ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿದೆ.

ಸಿನಿಮಾ : ಕಡಸೀಲ ಬಿರಿಯಾನಿ | ಕತೆ – ನಿರ್ದೇಶನ : ನಿಶಾಂತ್ ಕಲಿನಿಧಿ | ಛಾಯಾಗ್ರಹಣ : ಅಜೀ಼ಂ ಮೊಹಮ್ಮದ್, ಜೋಸ್ ಜೋಸೆಫ್ | ಸಂಗೀತ : ಜುಧಾ ಪೌಲ್, ನೀಲ್ ಸೆಬಾಸ್ಟಿಯನ್ | ತಾರಾಗಣ : ವಸಂತ್ ಸೆಲ್ವಂ, ದಿನೇಶ್ ಪಾಂಡಿ, ವಿಜಯ್ ರಾಮ್, ವಿಶಾಲ್ ರಾಮ್, ಹಕೀಂ ಶಹಜಹಾನ್

LEAVE A REPLY

Connect with

Please enter your comment!
Please enter your name here