‘ಹದಿನೇಳೆಂಟು’ ಸಿನಿಮಾ ಜಾತಿ ಸಮಸ್ಯೆ, ವರ್ಗಸಮಸ್ಯೆ, ಲಿಂಗ ತಾರತಮ್ಯ, ಶಿಕ್ಷಣ ವ್ಯಾಪಾರ – ಇತ್ಯಾದಿ ಸಮಕಾಲೀನ ಸಮಸ್ಯೆಗಳ ಕಡೆ ಮುಖ ಮಾಡುತ್ತದೆ. ಕೊನೆಗೆ ನ್ಯಾಯಾಂಗದ ಅಸಹಾಯಕತೆಯನ್ನು ತೆರೆದಿಡುತ್ತದೆ. ಇವೆಲ್ಲವನ್ನು ಹೇಳುತ್ತಲೇ ಅದೆಲ್ಲಕ್ಕಿಂತಲೂ ಮುಖ್ಯವಾದ ಬದುಕಿನ ಬುನಾದಿಯಾದ ಪ್ರೀತಿಯು ಹುಸಿದು ಹೋದರೆ ಜೀವನ ಅದೆಷ್ಟು ಕಹಿಯಾಗುತ್ತದೆ ಮತ್ತು ಅರ್ಥ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸುತ್ತದೆ. ಒಂದೇ ಸಿನಿಮಾದಲ್ಲಿ ಅದೆಷ್ಟು ಸಮಕಾಲೀನ ಸಮಸ್ಯೆಗಳನ್ನು ಪೃಥ್ವಿ ನಿರ್ವಹಿಸಿದ್ದಾರಲ್ಲ ಎಂದು ಅಚ್ಚರಿಯಾಯ್ತು.
ನಿರ್ದೇಶಕ ಪೃಥ್ವಿ ಕೊಣನೂರು ಅವರ ಮೊದಲ ಸಿನಿಮಾ ‘ರೈಲ್ವೇ ಚಿಲ್ಡ್ರನ್’ ತನ್ನ ದಿಟ್ಟ ಅಧ್ಯಯನ, ವಿಷಯದ ಸ್ಪಷ್ಟತೆ ಮತ್ತು ಸಹಜತೆ, ಚಿತ್ರಕತೆಯ ಅಚ್ಚುಕಟ್ಟುತನ, ಕೇಡಿನೆಡೆಗೆ ಧೈರ್ಯದಿಂದ ನೋಡುವ ಗುಣದಿಂದಾಗಿ ತುಂಬಾ ಮುಖ್ಯವೆನಿಸಿತ್ತು. ಈ ಬಾರಿಯೂ ಪೃಥ್ವಿ ಅವೇ ಗುಣಗಳನ್ನು ತುಂಬಾ ಸಹಜವಾಗಿ ಮತ್ತು ಇನ್ನಷ್ಟು ಪ್ರಬುದ್ಧವಾಗಿ ತೆರೆದಿಟ್ಟಿದ್ದಾರೆ. ಅವರ ಬಗ್ಗೆ ವಿಶ್ವಾಸ ಹೆಚ್ಚಿದೆ.
ನ್ಯಾಯಾಂಗ ವ್ಯವಸ್ಥೆ ಯಾವತ್ತೂ ಯುಗ್ಮವಾಗಿಯೇ (binary) ವರ್ತಿಸುತ್ತದೆ. ಇದು ಸರಿ, ಇದು ತಪ್ಪು ಎಂದು ಗೆರೆ ಕೊರೆದು ಹೇಳದೆ ಹೋದರೆ ಅದಕ್ಕೆ ನಿರ್ಣಯ ತೆಗೆದುಕೊಳ್ಳಲು ಬರುವುದಿಲ್ಲ. ಆದರೆ ಬದುಕು ಕಪ್ಪು-ಬಿಳುಪಲ್ಲ. ಸಂದರ್ಭಕ್ಕೆ ತಕ್ಕಂತೆ ಹಲವು ಮಧ್ಯದ ಬಣ್ಣದಲ್ಲಿ ಗೋಚರಿಸುತ್ತದೆ. ಕಾಮನಬಿಲ್ಲಿನಲ್ಲಿ ಏಳೇ ಬಣ್ಣಗಳಿವೆ ಎಂದು ಹೇಳಿದರೆ ನ್ಯಾಯಾಲಯಕ್ಕೆ ನಿರ್ಣಯ ಸುಲಭ. ಆದರೆ ಬದುಕಿನ ಕಾಮನಬಿಲ್ಲಿನಲ್ಲಿ ಸಾವಿರಾರು ಬಣ್ಣಗಳು ಕಾಣುತ್ತವೆ. ನೀರಿನಂತಹ ಬದುಕಿಗೆ ಆಕಾರ ಕೊಡುವ ನ್ಯಾಯಾಂಗದ ಬವಣೆ ಸಂಕೀರ್ಣದ್ದು. ಅಂತಹ ಒಂದು ಇಕ್ಕಟ್ಟಿನ ಸಂದರ್ಭವನ್ನು ‘ಹದಿನೇಳೆಂಟು’ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ.
ಈ ಚಿತ್ರದ ವಿಶೇಷವೇನೆಂದರೆ ತಾನು ಹೇಳಹೊರಟಿರುವ ಮುಖ್ಯ ಸಮಸ್ಯೆಯನ್ನು ಬೇಗನೆ ನಿಮಗೆ ಬಿಟ್ಟು ಕೊಡುವುದಿಲ್ಲ. ಮೊದಲಿಗೆ ಇದು ಡಿಜಿಟಲ್ ಗಾಡ್ಜೆಟ್ಗಳಿಂದಾಗಿ ನಮ್ಮ ಯುವ ಜನಾಂಗ ಹಾಳಾಗಿದೆ ಎನ್ನುವುದನ್ನು ಹೇಳುತ್ತಿದೆಯೇ ಎನ್ನಿಸುತ್ತದೆ. ಈ ಸಿನಿಮಾ ಅಷ್ಟು ಸರಳ ಸಂಗತಿಯ ಕುರಿತು ಅಲ್ಲವೇ ಅಲ್ಲ. ಅದು ನಂತರ ಜಾತಿ ಸಮಸ್ಯೆ, ವರ್ಗಸಮಸ್ಯೆ, ಲಿಂಗ ತಾರತಮ್ಯ, ಶಿಕ್ಷಣ ವ್ಯಾಪಾರ – ಇತ್ಯಾದಿ ಸಮಕಾಲೀನ ಸಮಸ್ಯೆಗಳ ಕಡೆ ಮುಖ ಮಾಡುತ್ತದೆ. ಕೊನೆಗೆ ನ್ಯಾಯಾಂಗದ ಅಸಹಾಯಕತೆಯನ್ನು ತೆರೆದಿಡುತ್ತದೆ. ಇವೆಲ್ಲವನ್ನು ಹೇಳುತ್ತಲೇ ಅದೆಲ್ಲಕ್ಕಿಂತಲೂ ಮುಖ್ಯವಾದ ಬದುಕಿನ ಬುನಾದಿಯಾದ ಪ್ರೀತಿಯು ಹುಸಿದು ಹೋದರೆ ಜೀವನ ಅದೆಷ್ಟು ಕಹಿಯಾಗುತ್ತದೆ ಮತ್ತು ಅರ್ಥ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸುತ್ತದೆ. ಒಂದೇ ಸಿನಿಮಾದಲ್ಲಿ ಅದೆಷ್ಟು ಸಮಕಾಲೀನ ಸಮಸ್ಯೆಗಳನ್ನು ಪೃಥ್ವಿ ನಿರ್ವಹಿಸಿದ್ದಾರಲ್ಲ ಎಂದು ಅಚ್ಚರಿಯಾಯ್ತು.
ಜಾತಿ, ಲಿಂಗ, ವರ್ಗ, ಧರ್ಮದ ಕುರಿತಾದ ಇತ್ತೀಚಿನ ಸಿನಿಮಾಗಳು ಕಪ್ಪು ಬಿಳುಪು ನಿಲುವಿನಲ್ಲಿ ವಿರಮಿಸುತ್ತವೆ. ಪೃಥ್ವಿ ಅದಕ್ಕಿಂತಲೂ ಭಿನ್ನವಾಗಿ ಮತ್ತು ಪ್ರಬುದ್ಧವಾಗಿ ಬದುಕನ್ನು ಕಾಣುತ್ತಾನೆ. ಅದೇ ಈ ಸಿನಿಮಾದ ಯಶಸ್ಸು. ಯಾವ ಪಾತ್ರವೂ ಒಂಟಿ ಕಾಲಲ್ಲಿ ನಿಲ್ಲುವುದಿಲ್ಲ. ಆದರೆ ಒಂದು ಅಸಮಾಧಾನವೂ ನನಗಿದೆ. ಸಿನಿಮಾ ಎನ್ನುವುದು ದೃಶ್ಯ ಮಾಧ್ಯಮವಲ್ಲವೆ? ದೃಶ್ಯಗಳ ಮೂಲಕ ಮಾತಾಡಬೇಕು. ಒಳ್ಳೆಯ ಸಿನಿಮಾಕ್ಕೆ ಗಟ್ಟಿ ಕತೆಯೊಂದು ಮುಖ್ಯ. ಆದರೆ ಗಟ್ಟಿ ಕತೆಯೊಂದೇ ಸಿನಿಮಾಕ್ಕೆ ಸಾಕೆ? ಅದಕ್ಕೆ ಹೆಚ್ಚಿನ ಖರ್ಚಿಲ್ಲದ ಸಾಹಿತ್ಯಲೋಕ ಇದೆಯಲ್ಲವೆ? ಸಿನಿಮಾ ಸಾಧಿಸಬೇಕಾದ್ದು ಬೇರೆಯದಲ್ಲವೆ? ಇಷ್ಟು ಪ್ರಬುದ್ಧವಾಗಿ ಯೋಚಿಸುವವರು ಕನ್ನಡ ಸಿನಿಮಾದಲ್ಲಿ ಇದ್ದಾರೆ ಎನ್ನುವುದೇ ನನಗೆ ಸಮಾಧಾನ ತಂದಿದೆ. ನಾವೆಲ್ಲಾ ಇಂತಹ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು.
ಈ ಸಿನಿಮಾ ನೋಡಿದ ನಂತರ ಬಾಲ್ಯದ ‘ಗಾಳಿಮಾತು’ ಸಿನಿಮಾ ನೆನಪಾಗುತ್ತಿದೆ. ಅಪರಿಚಿತ ವ್ಯಕ್ತಿಯೊಬ್ಬ ಪ್ರೇಮಪತ್ರಗಳನ್ನು ಒಬ್ಬ ಹೆಣ್ಣಿಗೆ ಬರೆದ ಕಾರಣದಿಂದಲೇ ಅವಳು ಸಮಾಜಕ್ಕೆ ಅಂಜಿ ಪ್ರಾಣ ಕಳೆದುಕೊಳ್ಳುತ್ತಾಳೆ. ಭಾರತ ಈಗ ಬದಲಾಗಿದೆ. ಪ್ರೇಮಪತ್ರವೊಂದಕ್ಕೆ ಯಾವ ಹುಡುಗಿಯೂ, ಅವಳ ಅಪ್ಪ-ಅಮ್ಮಂದಿರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಬೆತ್ತಲೆ ವೀಡಿಯೋ ಮಾಡಿ ಇಂಟರ್ನೆಟ್ಗೆ ಹಾಕಿದರೆ ಒದ್ದಾಡುತ್ತಾರೆ. ಬಹುಶಃ ಮುಂದಿನ ದಿನಗಳಲ್ಲಿ ಅಂತಹ ವೀಡಿಯೋಗಳೂ ಹದಿಹರೆಯದ ಒಂದು ಹಸಿಬಿಸಿ ಹುಡುಗಾಟ ಎಂದು ನಿರ್ಲಕ್ಷಿಸುವಂತೆ ಸಮಾಜ ಬದಲಾಗುತ್ತದೇನೋ ಎನ್ನುವುದು ನನ್ನ ಅನುಮಾನ. ಅದು ಪ್ರಬುದ್ಧ ಸಮಾಜವೇ ಸರಿ.