ಮಧುಸೂದನ್ ಹವಾಲ್ದಾರ್ ನಿರ್ದೇಶನದ ‘ದಾಸವರೇಣ್ಯ ಶ್ರೀವಿಜಯದಾಸರು’ ಸಿನಿಮಾಗೆ ಮುಹೂರ್ತ ನೆರವೇರಿದೆ. ಶಾಸಕ ಶಿವನಗೌಡ ನಾಯಕ್‌ ಅವರು ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರು. ವಿಜಯದಾಸರ ಪಾತ್ರದಲ್ಲಿ ತ್ರಿವಿಕ್ರಮ ಜೋಷಿ ಅಭಿನಯಿಸುತ್ತಿದ್ದಾರೆ.

ನಿರ್ದೇಶಕ ಮಧುಸೂದನ್ ಹವಾಲ್ದಾರ್‌ ಈ ಹಿಂದೆ ‘ಜಗನ್ನಾಥದಾಸರು’ ಸಿನಿಮಾ ನಿರ್ದೇಶಿಸಿದ್ದರು. ಮತ್ತೊಬ್ಬ ದಾಸವರೇಣ್ಯರಾದ ಪ್ರಸನ್ನವೆಂಕಟದಾಸರ ಕುರಿತ ಅವರ ನಿರ್ದೇಶನದ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದೀಗ ಮಧುಸೂದನ್‌ ವಿಜಯದಾಸರ ಕುರಿತ ‘ದಾಸವರೇಣ್ಯ ಶ್ರೀವಿಜಯದಾಸರು’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. “ನಾನು ಈ ಹಿಂದೆ ಜಗನ್ನಾಥದಾಸರು ಚಲನಚಿತ್ರ ನಿರ್ದೇಶಿಸಿದ್ದೆ.‌ ಮತ್ತೊಬ್ಬ ದಾಸವರೇಣ್ಯರಾದ ಪ್ರಸನ್ನವೆಂಕಟದಾಸರ ಕುರಿತಾದ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಈಗ ವಿಜಯದಾಸರ ಕುರಿತ ಸಿನಿಮಾಗೆ ಅವರ ಆರಾಧನೆಯ ಪೂರ್ವಕಾಲದಲ್ಲೇ ಚಾಲನೆ ದೊರೆಕಿದೆ. ಈ ಚಿತ್ರದ ಚಿತ್ರೀಕರಣ ಕನಕದುರ್ಗ, ಆನೆಗುಂದಿ ಹಾಗೂ ನವಬೃಂದಾವನದ ಸುತ್ತಮುತ್ತ ನಡೆಯಲಿದೆ. ನನ್ನ ಹಿಂದಿನ ಸಿನಿಮಾದಲ್ಲಿದ್ದ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲೂ ಇರುತ್ತಾರೆ. ಸುಮಾರು 250 ವರ್ಷಗಳ ಹಿಂದಿನ ಜೀವನವನ್ನು ತೋರಿಸುವಾಗ ತುಂಬಾ ಜಾಗುರಾಕರಾಗಿರಬೇಕು. ಆ ನಿಟ್ಟಿನಲ್ಲಿ ನಮ್ಮ ತಂಡದ ಎಲ್ಲಾ‌ ಸದಸ್ಯರ ಬೆಂಬಲದೊಂದಿಗೆ ಚಿತ್ರ ಉತ್ತಮವಾಗಿ ಬರುವಲ್ಲಿ ಶ್ರಮ ಪಡುತ್ತೇನೆ” ಎಂದರು ನಿರ್ದೇಶಕ ಮಧುಸೂದನ್ ಹವಾಲ್ದಾರ್.

ಬೆಂಗಳೂರು ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿತು. ಶಾಸಕ ಶಿವನಗೌಡ ನಾಯಕ್ ಹಾಗೂ ಸತ್ಯಧ್ಯಾನಾಚಾರ್ಯ ಕಟ್ಟಿ ಅವರು ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಚಿತ್ರದ ನಿರ್ಮಾಪಕ ಮತ್ತು ನಟ ತ್ರಿವಿಕ್ರಮ ಜೋಷಿ ಅವರು ಮಾತನಾಡಿ, “ನಾನು ಮೂಲತಃ ರಾಯಚೂರಿನವನು. ಹಾಗಾಗಿ ವಿಜಯದಾಸರ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ಇಂದಿನ ಯುವಪೀಳಿಗೆಗೆ ದಾಸರ ಜೀವನದ ಕುರಿತು ತಿಳಿಸುವುದಕ್ಕೆ ಇದು ಉತ್ತಮ ಮಾಧ್ಯಮ. ಎಸ್‌ಪಿಜೆ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ವಿಜಯದಾಸರ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ವಿಜಯದಾಸರ ಆರಾಧನೆ ಸಮಯದಲ್ಲಿ ಈ ಚಿತ್ರ ಆರಂಭವಾಗಿದೆ. ಕನ್ನಡ ಸಾಹಿತ್ಯವನ್ನು ಅನೇಕ ಶತಮಾನದಿಂದ ಹರಿದಾಸರು ಶ್ರೀಮಂತಗೊಳಿಸಿದ್ದಾರೆ. ದಾಸರ ಕೊಡುಗೆಯನ್ನು ಹೊರತುವ ಪ್ರಯತ್ನ. ಇನ್ನೂ ಹೆಚ್ಚು ನಡೆಯಬೇಕು” ಎಂದರು.

ಸೌಂಡ್ ಆಫ್ ಮ್ಯೂಸಿಕ್‌ನ ಗುರುರಾಜ್, ಜೆ.ಎಂ.ಪ್ರಹ್ಲಾದ್, ಗಾಯಕ ಹುಸೇನ್ ಸಾಹೇಬ್ ದಾಸ್, ವಿಷ್ಣು ಹಯಗ್ರೀವ ಹಾಗೂ ಡಾ.ವಾಸುದೇವ ಅಗ್ನಿಹೋತ್ರಿ ಸೇರಿದಂತೆ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಮಧುಸೂದನ್ ಹವಾಲ್ದಾರ್ ಅವರ‌ ಪರಿಕಲ್ಪನೆ ನಿರ್ದೇಶನವಿರುವ ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಬರೆದಿದ್ದಾರೆ. ವಿಜಯಕೃಷ್ಣ ಸಂಗೀತ ನಿರ್ದೇಶನ ಹಾಗೂ ನಾರಾಯಣ್ ಛಾಯಾಗ್ರಹಣ ಚಿತ್ರಕ್ಕಿದೆ. ವಿಜಯದಾಸರ ಪಾತ್ರದಲ್ಲಿ ತ್ರಿವಿಕ್ರಮ ಜೋಷಿ ಅಭಿನಯಿಸುತ್ತಿದ್ದಾರೆ. ಶರತ್ ಜೋಷಿ, ಪ್ರಭಂಜನ ದೇಶಪಾಂಡೆ, ವಿಷ್ಣು ತೀರ್ಥ ಜೋಷಿ, ಪದ್ಮಕಲಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here