IIT ಪರೀಕ್ಷೆಗೆ ಓದುವ ಲಕ್ನೋ ಹುಡುಗನ ಕತೆ ಹೇಳುವ ‘ಆಲ್ ಇಂಡಿಯಾ ರ್ಯಾಂಕ್’ ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ’12th ಫೇಲ್’ ಹಿಂದಿ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅದೇ ಮಾದರಿಯ ಕತೆಯ ಈ ಸಿನಿಮಾ ಬಗ್ಗೆ ಬಾಲಿವುಡ್ನಲ್ಲಿ ನಿರೀಕ್ಷೆಯಿದೆ. ವರುಣ್ ಗ್ರೋವರ್ ನಿರ್ದೇಶನದ ಸಿನಿಮಾ ಇದೇ ಫೆ. 23ರಂದು ತೆರೆಕಾಣುತ್ತಿದೆ.
ವರುಣ್ ಗ್ರೋವರ್ ನಿರ್ದೇಶನದ ‘ಆಲ್ ಇಂಡಿಯಾ ರ್ಯಾಂಕ್’ ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಅನ್ನು ವಿಕ್ಕಿ ಕೌಶಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 17 ವರ್ಷದ ಲಕ್ನೋ ಹುಡುಗ ವಿವೇಕ್ ಸಿಂಗ್, ಕೋಟಾದಲ್ಲಿ IIT ಕೋಚಿಂಗ್ನಲ್ಲಿ ಭಾರತದ ಕಠಿಣ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ತನ್ನ ಪೋಷಕರ ಆಸೆಯಂತೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸೆಣೆಸಾಡುತ್ತಾನೆ. ಚಿತ್ರವು ಕೋಟಾದ ಮಹತ್ವಾಕಾಂಕ್ಷಿ IIT ವಿದ್ಯಾರ್ಥಿಗಳ ಕುರಿತು ಹೇಳಲಿದೆ. 90ರ ದಶಕದಲ್ಲಿ ಭಾರತದಾದ್ಯಂತ ತೀರ್ವ ಪೈಪೋಟಿಯ ನಡುವೆ ನಡೆಸುವ ಹೋರಾಟ ಮತ್ತು ಪರೀಕ್ಷೆಗಾಗಿ ಹಗಲು-ರಾತ್ರಿ ನಡೆಸುವ ತಯಾರಿಯನ್ನು ಟ್ರೇಲರ್ನಲ್ಲಿ ಕಾಣಬಹುದು.
ತಮ್ಮ ಕುಟುಂಬಗಳಿಂದ ದೂರವಿರುವ ಯುವಕರು ದೂರದೂರಿನ ಹಾಸ್ಟೆಲ್ ಮತ್ತು ಕಾಲೇಜುಗಳಿಗೆ ಹೊಂದಿಕೊಂಡು ಹೇಗೆ ತಮ್ಮ ಓದನ್ನು ಪೂರ್ಣಗೊಳಿಸುತ್ತಾರೆ. ಹಾಗೂ ಇದರ ಮಧ್ಯೆ ಸ್ನೇಹಿತರ ಪರಿಚಯ, ಪ್ರೀತಿ-ಪ್ರೇಮ ಇತರ ಅಂಶಗಳನೊಳಗೊಂಡ ವಿದ್ಯಾರ್ಥಿ ಜೀವನದ ಸಂಪೂರ್ಣ ನೋಟವನ್ನು ಟ್ರೇಲರ್ ನೀಡಿದೆ. ಚಲನಚಿತ್ರದಲ್ಲಿ ಬೋಧಿಸತ್ವ ಶರ್ಮಾ, ಸಮತಾ ಸುಧೀಕ್ಷಾ, ಶಶಿಭೂಷಣ್, ಗೀತಾ ಅಗರವಾಲ್, ಶೀಬಾ ಚಡ್ಡಾ, ನೀರಜ್, ಆಯುಷ್ ಪಾಂಡೆ ಮತ್ತು ಸಾದತ್ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾ ಇದೇ ಫೆಬ್ರವರಿ 23ರಂದು ತೆರೆಕಾಣಲಿದೆ. ಚಿತ್ರವನ್ನು ಸಂಜಯ್ ರೌತ್ರಾಯ್ ಮತ್ತು ಸರಿತಾ ಪಾಟೀಲ್ ನಿರ್ಮಿಸಿದ್ದು, ಗಾಯತ್ರಿ M ಸಹನಿರ್ಮಾಣವಿದೆ. ಮಯೂಖ್ – ಮೈನಾಕ್ ಸಂಗೀತ ಸಂಯೋಜಿಸಿದ್ದು, ಸಂಯುಕ್ತಾ ಕಾಜಾ ಸಂಕಲನ ನಿರ್ವಹಿಸಿದ್ದಾರೆ.