ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಾಳೆ (ಫೆ. 9) ತೆರೆಕಾಣುತ್ತಿದೆ. ವಿನಯ್ ರಾಜಕುಮಾರ್, ಸ್ವಾತಿಷ್ಠ ಕಷ್ಣ ಮತ್ತು ಮಲ್ಲಿಕಾ ಸಿಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ವಿನಯ್ ರಾಜಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಾಳೆ (ಫೆಬ್ರವರಿ 9) ಬಿಡುಗಡೆ ಆಗುತ್ತಿದೆ. ಚಿತ್ರತಂಡ ನಿನ್ನೆ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಪತ್ನಿ, ವಿನಯ್ ರಾಜಕುಮಾರ್ ಸಹೋದರ ಯುವ, ಶ್ರೀಮುರಳಿ, ಧಿರೇನ್ ರಾಮ್‌ಕುಮಾರ್ ಸೇರಿದಂತೆ ರಾಜಕುಮಾರ್ ಕುಟುಂಬದ ಹಲವು ಸದಸ್ಯರು ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಟ ಶ್ರೀಮುರಳಿ ಮಾತನಾಡಿ, ‘ಒಂದು ಸರಳ ಪ್ರೇಮಕಥೆ’ಯಲ್ಲಿ ವಿನು ಪಾತ್ರವನ್ನು ಬಹಳ ತೂಕದಿಂದ, ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ ಎಂಬ ನಂಬಿಕೆ ಇದೆ. ಈ ಬಗ್ಗೆ ಹೆಮ್ಮೆ ಇದೆ. ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರಗಳು, ನಟರು ತುಂಬಾ ಅಚ್ಚುಕಟ್ಟಾಗಿ ಕಾಣಿಸಿದ್ರಿ. ಇಬ್ಬರು ನಟಿಯರು ಮುದ್ದಾಗಿ ಕಾಣಿಸ್ತಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.
ವಿನಯ್ ರಾಜಕುಮಾರ್ ತಮ್ಮ ಸಿನಿಮಾ ಬಗ್ಗೆ ಮಾತನಾಡುತ್ತಾ, ‘ಕಳೆದೊಂದು ವಾರದಿಂದ ಸಾಕಷ್ಟು ಪ್ರಚಾರ ಮಾಡಿದ್ದೇವೆ. ತುಂಬಾ ಒಳ್ಳೆ ಪ್ರತಿಕ್ರಿಯೆ, ಸಾಕಷ್ಟು ಪ್ರೀತಿ ಸಿಕ್ಕಿದೆ. ಚಿತ್ರೀಕರಣದ ನಂತರ ಎಲ್ಲರನ್ನೂ ನೋಡುತ್ತಿದ್ದೇನೆ, ಖುಷಿಯಾಗುತ್ತಿದೆ. ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದರೆ ನನಗೆ ತುಂಬಾ ಇಷ್ಟ. ಮನಸ್ಸಿಗೆ ಸಾಕಷ್ಟು ಸಮಾಧಾನ ಕೊಡುತ್ತದೆ. ಖುಷಿ, ತೃಪ್ತಿ ಸಿಗುತ್ತದೆ. ಅತಿಶಯ ಪಾತ್ರ ತುಂಬಾ ಖುಷಿ ಕೊಡ್ತು’ ಎಂದರು. ‘ನಮ್ಮ ಸಿನಿಮಾಗೆ ಹಾರೈಸಲು ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅಶ್ವಿನಿ ಮೇಡಂ ಸಿನಿಮಾ ಸೆಟ್‌ಗೆ ಗೆ ಬಂದಿದ್ರಿ. ಹಾಡು ಬಿಡುಗಡೆ ಮಾಡಿಕೊಟ್ರಿ. ಪ್ರತಿಯೊಂದು ಹೆಜ್ಜೆಯಲ್ಲಿ ನಮ್ಮ ಜೊತೆಯಾಗಿದ್ದಕ್ಕಾಗಿ ಧನ್ಯವಾದ. ನಾನು ಸಹ ನಿರ್ದೇಶಕನಾಗಿದ್ದಾಗ ನೊಂದಾಯಿಸಿದ ಶೀರ್ಷಿಕೆಯಿದು. ನಿಮ್ಮ ಹಾರೈಕೆ ಇರಲಿ’ ಎನ್ನುವುದು ಚಿತ್ರದ ನಿರ್ದೇಶಕ ಸುನಿ ಮಾತು.
ನಾಯಕಿ ಸ್ವಾತಿಷ್ಠ ಕೃಷ್ಣನ್ ಮಾತನಾಡಿ, ‘ಒಂದು ಸರಳ ಪ್ರೇಮ ಕಥೆ ನನ್ನ ಮೊದಲ ಕನ್ನಡ ಸಿನಿಮಾ. ತುಂಬಾ ಖುಷಿಯಾಗುತ್ತಿದೆ. ನಾನು ಪತ್ರಕರ್ತೆ ಪಾತ್ರ ಮಾಡಿದ್ದೇನೆ. ನಾನು ಪತ್ರಿಕೋಧ್ಯಮದ ವಿದ್ಯಾರ್ಥಿನಿಯೂ ಹೌದು. ಇದೊಂದು ಕೌಟುಂಬಿಕ ಮನೋರಂಜನಾ ಸಿನಿಮಾ. ನಿಮ್ಮ ಕುಟುಂಬದ ಜೊತೆ ನೋಡಿ, ನಿಮಗೆ ಇಷ್ಟವಾಗುತ್ತದೆ. ಕನ್ನಡದ ಹುಡುಗಿಯನ್ನು ನೀವು ಬಿಟ್ಟುಕೊಂಡುವುದಿಲ್ಲ ಎಂದು ಭಾವಿಸಿದ್ದೇನೆ’ ಎಂದರು. ಚಿತ್ರದಲ್ಲಿ ‘ರಾಧಾಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಇತರೆ ಪಾತ್ರಧಾರಿಗಳು. ಆದಿ ಅವರ ಸಂಕಲನವಿದ್ದು, ಸಮರ್ಥ್ ಸಂಗೀತ ಸಂಯೋಜನೆ ಹಾಗೂ ಕಾರ್ತಿಕ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. Ram Movies ಬ್ಯಾನರ್ ಅಡಿ ಮೈಸೂರು ರಮೇಶ್ ಚಿತ್ರ ನಿರ್ಮಿಸಿದ್ದಾರೆ.