ರಾಜ್‌ ಬಿ ಶೆಟ್ಟಿ ‘ಟೋಬಿ’ಯಾಗಿ ತೆರೆಗೆ ಮರಳುತ್ತಿದ್ದಾರೆ. ಕತೆಗಾರ ಟಿ ಕೆ ದಯಾನಂದ್‌ ಅವರು ನೈಜ ಘಟನೆಯೊಂದನ್ನು ಆಧರಿಸಿ ಬರೆದಿರುವ ಕತೆಯಿದು. ರಾಜ್‌ ಬಿ ಶೆಟ್ಟಿ ಅವರು ಚಿತ್ರಕಥೆ, ಸಂಭಾಷಣೆ ರಚಿಸಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಬೇಸಿಲ್‌ ಅಲ್ಚಕ್ಕಲ್‌ ನಿರ್ದೇಶನದ ಸಿನಿಮಾ ಆಗಸ್ಟ್‌ 25ರಂದು ತೆರೆಕಾಣಲಿದೆ.

‘ಇಲ್ಲಿ ಹೀರೋ ಪಾತ್ರದ ಮೇಲೆ ದೊಡ್ಡ ಪ್ರಯೋಗ ಆಗಿದೆ.. ಬೇರೆ ನಟರಿಗೆ ಈ ಕತೆ ಹೇಳಿದ್ದಿದ್ದರೆ ಅವರು ಖಂಡಿತಾ ಒಪ್ಪುತ್ತಾ ಇರ್ಲಿಲ್ಲ. ರಾಜ್‌ ಬಿ ಶೆಟ್ಟಿ ಇದನ್ನು ಸವಾಲಾಗಿ ತೆಗೆದುಕೊಂಡು ಸಿನಿಮಾ ಮಾಡಿದಾರೆ’ ಎನ್ನುತ್ತಾರೆ ಕತೆಗಾರ ಟಿ ಕೆ ದಯಾನಂದ್‌. ಕಾರವಾರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಅವರು ‘ಟೋಬಿ’ ಕತೆ ಮಾಡಿದ್ದರು. ರಾಜ್‌ ಬಿ ಶೆಟ್ಟಿ ಅವರಿಗೆ ಈ ಕತೆ ಇಷ್ಟವಾಗಿದೆ. ಈ ಕತೆಯನ್ನು ಸಿನಿಮ್ಯಾಟಿಕ್‌ ಭಾಷೆಗೆ ಒಗ್ಗಿಸಿಕೊಟ್ಟಿದ್ದಾರೆ ದಯಾನಂದ್‌. ಈ ಕತೆಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿ ನಟಿಸಿದ್ದಾರೆ ರಾಜ್‌ ಬಿ ಶೆಟ್ಟಿ. ನಿರ್ದೇಶನ ಬೇಸಿಲ್‌ ಅಲ್ಚಕ್ಕಲ್‌ ಅವರದ್ದು. ಶೂಟಿಂಗ್‌ ಕೂಡ ಮುಗಿದಿದ್ದು, ಚಿತ್ರದ ಟೈಟಲ್‌ ಮತ್ತು ರಿಲೀಸ್‌ ಡೇಟ್‌ ಟೀಸರ್‌ ಹೊರಬಿದ್ದಿದೆ. ಆಗಸ್ಟ್‌ 25ರಂದು ಸಿನಿಮಾ ತೆರೆಕಾಣಲಿದೆ. ಮಾರಿ.. ‘ಮಾರಿ.. ಮಾರಿಗೆ ದಾರಿ!’ ಎನ್ನುವ ಸಾಲುಗಳೊಂದಿಗೆ ಟೀಸರ್‌ ಹಂಚಿಕೊಂಡಿದ್ದಾರೆ ರಾಜ್‌ ಬಿ ಶೆಟ್ಟಿ.

‘ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು.. ಮಾರಿ ಮಾರಿ …. ಮಾರಿಗೆ ದಾರಿ’, ‘Push a Sheep too far…….You get a BEAST Make way for the Maari’ ಎನ್ನುವ ಸಾಲುಗಳೊಂದಿಗೆ ಅವರು ಚಿತ್ರದ ಸ್ಟಿಲ್‌ವೊಂದನ್ನು ಟ್ವೀಟ್‌ ಮಾಡಿದ್ದಾರೆ. ಫಸ್ಟ್ ಲುಕ್‌ ಪೋಸ್ಟರ್‌ನಲ್ಲಿ ರಕ್ತಸಿಕ್ತ ಟಗರಿನ ಮುಖವಿದೆ. ಅಗಸ್ತ್ಯ ಫಿಲ್ಮ್ಸ್‌ ಸಹಯೋಗದೊಂದಿಗೆ Lighter Buddha Films ಈ ಸಿನಿಮಾ ನಿರ್ಮಿಸಿದೆ. ‘ಒಂದು ಮೊಟ್ಟೆಯ ಕತೆ ಮತ್ತು ಗರುಡ ಗಮನ ವೃಷಭ ವಾಹನ ಚಿತ್ರಗಳಲ್ಲಿ ರಾಜ್‌ ಬಿ ಶೆಟ್ಟಿ ಅವರ ಪಾತ್ರಗಳನ್ನು ನಾನು ತುಂಬಾ ಇಷ್ಟಪಟ್ಟಿದ್ದೆ. ಟೋಬಿ ಪಾತ್ರ ಕೂಡ ಮಲ್ಟಿ ಡೈಮೆನ್ಶನ್‌ ಇರುವಂಥದ್ದು. ಶೆಟ್ಟರಿಗೆ ಈ ಪಾತ್ರ ತುಂಬಾ ಚೆನ್ನಾಗಿ ಒಪ್ಪುತ್ತೆ’ ಎನ್ನುತ್ತಾರೆ ಕತೆಗಾರ ದಯಾನಂದ್‌.

‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೂಲಕ ದೊಡ್ಡ ಸದ್ದು ಮಾಡಿದ್ದ ರಾಜ್‌ ಬಿ ಶೆಟ್ಟಿ ತಮ್ಮ ಸಿನಿಮಾ ಹಾದಿಯನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಮೇಜು ಕಳಚಿ, ಸಿದ್ಧಮಾದರಿಯ ಕತೆಗಳಾಚೆ ಯೋಚಿಸುವ ಅವರ ಶೈಲಿಗೆ ‘ಟೋಬಿ’ ಮತ್ತೊಂದು ಉದಾಹರಣೆಯಾಗಬಹುದು. ಮೋಷನ್‌ ಪೋಸ್ಟರ್‌ ಜೊತೆ ರಾಜ್‌ ಬಿ ಶೆಟ್ಟಿ ಚಿತ್ರದ ಮೇಕಿಂಗ್‌ ಸಂದರ್ಭದ ಒಂದು ವೀಡಿಯೋವೊಂದನ್ನು, ‘Being a director and calling Action can bring happiness to anyone’s face. Look at the child’s face glowing from the sets’ ಎನ್ನುವ ಒಕ್ಕಣಿಯೊಂದಿಗೆ ಟ್ವೀಟ್‌ ಮಾಡಿದ್ದಾರೆ.

Previous articleಟಫ್ ಕೋರ್ಟ್‌ರೂಂ ಡ್ರಾಮ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’
Next article

LEAVE A REPLY

Connect with

Please enter your comment!
Please enter your name here