ಯಶಸ್ವೀ ‘ಆಕ್ಷನ್‌ ಹೀರೋ ಬಿಜು’ ಮಲಯಾಳಂ ಸಿನಿಮಾದ ಸರಣಿ ಘೋಷಣೆಯಾಗಿದೆ. ನಿವಿನ್‌ ಪೌಲಿ ಹೀರೋ ಆಗಿ ನಟಿಸುತ್ತಿರುವ ‘ಆಕ್ಷನ್‌ ಹೀರೋ ಬಿಜು2’ ಚಿತ್ರವನ್ನು ಅಬ್ರಿಡ್‌ ಶೈನ್‌ ನಿರ್ದೇಶಿಸುತ್ತಿದ್ದಾರೆ. ನಾಯಕನಟ ನಿವಿನ್‌ ಅವರೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ನಿವಿನ್ ಪೌಲಿ ‘ಆಕ್ಷನ್‌ ಹೀರೋ ಬಿಜು 2’ ಮಲಯಾಳಂ ಚಿತ್ರವನ್ನು ಘೋಷಿಸಿದ್ದಾರೆ. ಇದು 2016ರಲ್ಲಿ ತೆರೆಕಂಡಿದ್ದ ‘ಆಕ್ಷನ್‌ ಹೀರೋ ಬಿಜು’ ಚಿತ್ರದ ಸೀಕ್ವೆಲ್‌ ಆಗಿದ್ದು, ಅಬ್ರಿಡ್ ಶೈನ್ ಅವರು ನಿರ್ದೇಶಿಸಿದ್ದರು. ತೆರೆಕಂಡ 8 ವರ್ಷಗಳ ನಂತರ ಸರಣಿ ಸಿನಿಮಾ ಘೋಷಣೆಯಾಗಿದ್ದು, ಶೈನ್‌ ಅವರೇ ನಿರ್ದೇಶಿಸಲಿದ್ದಾರೆ. ಈ ಕುರಿತು ನಿವಿನ್‌ ಪೌಲಿ ಅವರು ”ಆಕ್ಷನ್‌ ಹಿರೋ ಬಿಜು’ ತೆರೆಗೆ ಬಂದು ಎಂಟು ವರ್ಷಗಳಾಗಿವೆ. ಅಂದಿನಿಂದ, ಚಿತ್ರದ ಮೇಲಿನ ಪ್ರೀತಿ ಮತ್ತು ಮೆಚ್ಚುಗೆ ಹಾಗೆ ಇದೆ. ಇಂದು ‘AHB’ನ ಬಹುನಿರೀಕ್ಷಿತ ಭಾಗ 2 ಅನಾವರಣಗೊಳಿಸಲು ನಾವು ಕಾತರರಾಗಿದ್ದೇವೆ! ಶೀಘ್ರದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ’ ಎಂದು ತಮ್ಮ X ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರವನ್ನು ನಿವಿನ್‌ ಪೌಲಿ ಅವರೇ ನಿರ್ಮಿಸುತ್ತಿದ್ದು, ಪಿ ಎಸ್ ಶಮ್ನಾಸ್ ಅವರ ಸಹನಿರ್ಮಾಣವಿದೆ. ‘ಆಕ್ಷನ್ ಹೀರೋ ಬಿಜು’, ‘1983’ ಮತ್ತು ‘ಮಹಾವೀರ್ಯರ್’ ನಂತರ ಇದು ನಿವಿನ್ ಮತ್ತು ನಿರ್ದೇಶಕ ಅಬ್ರಿಡ್‌ ಶೈನ್‌ ಅವರ ನಾಲ್ಕನೇ ಸಹಯೋಗವಾಗಿದೆ. ಚಿತ್ರದ ಮೊದಲ ಭಾಗವು ಪೊಲೀಸ್ ಕಾರ್ಯವಿಧಾನದ ಹಾಸ್ಯ ಕಥಾಹಂದರವಾಗಿದ್ದು, ಎಸ್‌ಐ ಬೈಜು ಪೌಲೋಸ್ ಮತ್ತು ಅವನ ಸಹ ಅಧಿಕಾರಿಗಳು ತಮ್ಮ ಪೊಲೀಸ್ ಠಾಣೆಯಲ್ಲಿ ಪ್ರತಿದಿನ ಎದುರಿಸುವ ಸಣ್ಣ-ಪುಟ್ಟ ಮತ್ತು ಇತರ ಪ್ರಮುಖ ಪ್ರಕರಣಗಳ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಅನು ಇಮ್ಯಾನುಯೆಲ್, ಸೈಜು ಕುರುಪ್, ಜೋಜು ಜಾರ್ಜ್ ಮತ್ತು ಅಲೆಕ್ಸಾಂಡರ್ ಪ್ರಶಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here