ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಮಧ್ಯೆಯ ಮನಸ್ತಾಪ ಸರಿಹೋಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಮೊನ್ನೆಯ ಸಮಾರಂಭದಲ್ಲಿ ದರ್ಶನ್, ತಾವಿನ್ನೂ ಸರಿಹೋಗಿಲ್ಲ ಎನ್ನುವ ಸಂದೇಶವನ್ನು ದಾಟಿಸಿದ್ದಾರೆ. ಮತ್ತೊಂದೆಡೆ ನಿರ್ಮಾಪಕ ಉಮಾಪತಿ ಅವರು ದರ್ಶನ್ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
‘ರಾಬರ್ಟ್’ ಚಿತ್ರದ ನಟ ದರ್ಶನ್ ಮತ್ತು ಈ ಸಿನಿಮಾದ ನಿರ್ಮಾಪಕ ಉಮಾಪತಿ ಮಧ್ಯೆಯ ಮನಸ್ತಾಪ ಮತ್ತೆ ತಲೆಎತ್ತಿದೆ. ಕಳೆದೆರೆಡು ವರ್ಷಗಳಲ್ಲಿ ಮೂರ್ನಾಲ್ಕು ಬಾರಿ ಇಬ್ಬರೂ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದರು. ಏಟು, ಎದಿರೇಟು ಎನ್ನುವ ಈ ಮಾತುಗಳಿಂದಾಗಿ ದರ್ಶನ್ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಒಂದು ಹಂತದಲ್ಲಿ ಎಲ್ಲವೂ ಸರಿ ಹೋಯ್ತು ಎನ್ನುವಂತೆ ಇಬ್ಬರೂ ಸುಮ್ಮನಾಗಿದ್ದರು. ಇತ್ತೀಚೆಗಷ್ಟೇ ತೆರೆಕಂಡ ಉಮಾಪತಿ ನಿರ್ಮಾಣದ ‘ಉಪಾಧ್ಯಕ್ಷ’ ಚಿತ್ರದ ಬಗ್ಗೆ ನಟ ದರ್ಶನ್ ಒಳ್ಳೆಯ ಮಾತುಗಳನ್ನಾಡಿದ್ದರು. ನಟ ಚಿಕ್ಕಣ್ಣ ಹೀರೋ ಆಗಿ ನಟಿಸಿದ್ದ ಚಿತ್ರವಿದು. ಚಿಕ್ಕಣ್ಣನ ಮೇಲಿನ ಪ್ರೀತಿಗೆ ನಟ ದರ್ಶನ್ ಆಗಾಗ ‘ಉಪಾಧ್ಯಕ್ಷ’ ಸಿನಿಮಾಗೆ ಪರೋಕ್ಷ ಬೆಂಬಲ ನೀಡಿದ್ದರು. ‘ಕಾಟೇರ’ ಸಿನಿಮಾದ ಸಕ್ಸಸ್ ಹಿನ್ನೆಲೆಯ ಲೇಟ್ ಪಾರ್ಟಿ ದೂರಿಗೆ ಸಂಬಂಧಿಸಿದಂತೆ ಪೊಲೀಸ್ ಸ್ಟೇಷನ್‌ಗೆ ಭೇಟಿ ನೀಡಿದ ವೇಳೆಯಲ್ಲೂ ದರ್ಶನ್ ‘ಉಪಾಧ್ಯಕ್ಷ’ ಪ್ರೊಮೋಟ್ ಮಾಡಿದ್ದರು! ಅಲ್ಲಿಗೆ ದರ್ಶನ್ ಮತ್ತು ಉಮಾಪತಿ ಮಧ್ಯೆಯ ಮನಸ್ತಾಪ ತಣ್ಣಗಾಯ್ತು ಎಂದೇ ಭಾವಿಸಲಾಗಿತ್ತು. ಆದರೆ ಹಾಗಾಗಿಲ್ಲ.
‘ಕಾಟೇರ’ 50ನೇ ದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ದರ್ಶನ್ ಏಕಾಏಕಿ ಚಿತ್ರದ ಶೀರ್ಷಿಕೆ ಬಗ್ಗೆ ಮಾತನಾಡಿದ್ದಾರೆ. ಸಾರ್ವಜನಿಕವಾಗಿ ತಮ್ಮ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ಉಮಾಪತಿ ಅವರನ್ನು ಕೆರಳಿಸಿದೆ. ವಿವಾದಕ್ಕೆ ಸಂಬಂಧಿಸಿದಂತೆ ತಮ್ಮದೇ ವರ್ಷನ್‌ಗಳಲ್ಲಿ ಪ್ರತಿಕ್ರಿಯಿಸಿರುವ ಅವರು ದರ್ಶನ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸು ದಾಖಲಿಸುವ ಸಾಧ್ಯತೆಗಳಿವೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರ ಕಡೆಯಿಂದ ಮತ್ತೆ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ. ಮೊನ್ನೆಯಷ್ಟೇ ಸಿನಿಮಾ ಹೊರತಾಗಿ ಬೇರೆಯ ವಿಚಾರಕ್ಕೆ ಸುದ್ದಿಯಾಗಿದ್ದ ದರ್ಶನ್ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಪ್ರಕರಣದ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ತಂತ್ರಜ್ಞರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ. ತಮ್ಮ ಹೆಸರು ಬಹಿರಂಗವಾಗಕೂಡದು ಎನ್ನುವ ಷರತ್ತಿನೊಂದಿಗೆ ಮಾತನಾಡುವ ಅವರು, ‘ಒಂದು ಸಿನಿಮಾ ಅಂದ ಮೇಲೆ ಸಾಕಷ್ಟು ವಿಚಾರಗಳು ಬಂದುಹೋಗುತ್ತವೆ. ಇವೆಲ್ಲವೂ ನಾಲ್ಕು ಗೋಡೆಗಳ ಮಧ್ಯೆ, ನಾಲ್ಕು ಜನ ಹಿತೈಷಿಗಳ ಮಧ್ಯೆ ಬಗೆಹರಿಯಬೇಕು. ಸಾರ್ವಜನಿಕವಾಗಿ ಪರಸ್ಪರರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಇದರಿಂದ ನಟ – ನಿರ್ಮಾಪಕರ ಮಧ್ಯೆಯ ಸಂಬಂಧ ಹದಗೆಡುತ್ತದೆ’ ಎನ್ನುತ್ತಾರೆ.
ಸೋಷಿಯಲ್ ಮೀಡಿಯಾ | ದರ್ಶನ್ ಮತ್ತು ಉಮಾಪತಿ ವಿವಾದ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರೆ, ಮತ್ತೆ ಕೆಲವರು ನಿರ್ಮಾಪಕ ಉಮಾಪತಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ವಿವಾವದ ಹಿನ್ನೆಲೆಯಲ್ಲಿ ಇವರಿಬ್ಬರ ಹಳೆಯ ವೀಡಿಯೋ ತುಣುಕುಗಳು ಮತ್ತೆ ಮುನ್ನಲೆಗೆ ಬಂದಿವೆ. ಈ ಮಧ್ಯೆ ನಟ ದರ್ಶನ್ ಅವರು ನಿರ್ಮಾಪಕ ಉಮಾಪತಿ ಅವರ ಮೇಲೆ ಪರೋಕ್ಷವಾಗಿ ಬೆದರಿಕೆಯೊಡ್ಡುವಂತಹ ಮಾತುಗಳನ್ನಾಡಿದ್ದಾರೆ ಎನ್ನುವ ದೂರು ಕೂಡ ದಾಖಲಾಗಿದೆ. ಕರ್ನಾಟಕ ಪ್ರಚಾಪರ ವೇದಿಕೆ ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ದರ್ಶನ್ ವಿರುದ್ಧ ದೂರು ಕೊಟ್ಟಿದ್ದಾರೆ. ವಾಣಿಜ್ಯ ಮಂಡಳಿ ಇಲ್ಲವೇ ಚಿತ್ರರಂಗದ ಹಿರಿಯರು ಮಧ್ಯಸ್ಥಿಕೆ ಮೂಲಕ ವಿವಾದ ತಿಳಿಗೊಳಿಸಬೇಕು ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತವೆ. ಪ್ರಕರಣ ಯಾವ ರೀತಿ ತಾರ್ಕಿಕ ಅಂತ್ಯ ಕಾಣಲಿದೆ? ಎನ್ನುವುದನ್ನು ಕಾದುನೋಡಬೇಕಿದೆ.