ನಿರ್ದೇಶಕ ಜೀವಾ ನವೀನ್‌ ಅವರು ಕೋಲಾರದ ದಲಿತ ಸಮುದಾಯದ ನಿತ್ಯ ಬದುಕಿನ ರೂಪವನ್ನು ಅತಿ ನಾಟಕೀಯಗೊಳಿಸದೇ ಸಮರ್ಥವಾಗಿ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ಸಾಕಷ್ಟು ಯಶಸ್ವಿಯೂ ಆಗಿದ್ದಾರೆ.

‘ಪಾಲಾರ್’ ಮೂಲಕ ಜೀವನ್ ನವೀನ್ ಅವರು ಕನ್ನಡದಲ್ಲಿ, ಅತಿ ವಿರಳವಾದ ಪೂರ್ಣ ಪ್ರಮಾಣದ ದಲಿತ ಕಣ್ಣೋಟದ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡ ಸಿನಿಮಾ ಜಗತ್ತಿನಲ್ಲಿ ದಲಿತ ಕಲಾವಿದರಿಗೆ ತಮ್ಮ ಬದುಕಿನ ಅನುಭವ ಕಥನಗಳನ್ನು ಹೇಳುವುದಕ್ಕೆ ಇಂಚು ಅವಕಾಶ ಹಾಗು ಸಹಯೋಗ ಇಲ್ಲದಿರುವ ಸನ್ನಿವೇಶದಲ್ಲಿ, ತೀವ್ರ ಅಸಹಕಾರದ ಒತ್ತಡದಲ್ಲೂ ಒಂದು ಸಿನಿಮಾ ಮಾಡುವ ಧೀಮಂತಿಕೆ ತೋರಿದ್ದಾರೆ.

ಇದು ಬಹಳವೇ ಒತ್ತಡದ ಸ್ಥಿತಿ. ಸೃಜನಶೀಲ ಕಲಿಕೆಗೆ ತೀರಾ ಸೀಮಿತ ಅವಕಾಶಗಳು ಇಲ್ಲದಿರುವುದರ ಜೊತೆಗೆ, ಪೂರ್ಣ ಪ್ರಮಾಣದ ದಲಿತ ಪ್ರತಿರೋಧದ ವಸ್ತುವಿನ ಸಿನಿಮಾಕ್ಕೆ ಬಂಡವಾಳದಾರರೂ ಹಾಗು ನುರಿತ ಕಲಾವಿದರ ಸಹಕಾರ ಇಲ್ಲದಿರುವಿಕೆಯೂ ಜೊತೆಗೂಡಿ ಆತಂಕಿತ ಆಕ್ರೋಶವು ಮಡವುಗಟ್ಟಿ ಬಿಡುತ್ತದೆ. ಸಿಕ್ಕ ಒಂದು ಅವಕಾಶದಲ್ಲಿ ಎಲ್ಲವನ್ನೂ ಪ್ರಕಟಿಸಬೇಕೆಂಬ ಹಂಬಲವೂ ಸಹಜ. ನವೀನ್ ಅವರು ಕೋಲಾರ ಭಾಗದ ದಲಿತ ಸಮುದಾಯ ಅನುಭವಿಸಿರುವ ಜಾತಿ ತಾರತಮ್ಯ, ಭೂಮಾಲಕ ದೌರ್ಜನ್ಯ, ಭೂಮಿ ಹಕ್ಕಿನ ಪ್ರಶ್ನೆ, ಸಾಮಾಜಿಕ ದಬ್ಬಾಳಿಕೆಗಳು, ಹರಿದು ಹಂಚಿದಂತಿರುವ ಪ್ರತಿರೋಧದ ಭಿನ್ನ ಹಾದಿಗಳಲ್ಲಿ ಯಾವುದು ಸರಿ ಎಂಬ ತೊಳಲಾಟ- ಎಲ್ಲವನ್ನೂ ಒಂದೇ ಉಸಿರಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ. ಎಲ್ಲ ಎಳೆಗಳನ್ನೂ ಹ್ಯಾಗಾದರೂ ಹೆಣೆಯುವ ಮಹತ್ವಾಕಾಂಕ್ಷೆಯ ಕಾರಣವಾಗಿ ಚಿತ್ರಕತೆಯಲ್ಲಿ ಗೋಜಲಾದ ಸಡಿಲ ಬಂಧ ಉಂಟಾಗಿದೆ.

ಜಾತಿ ಕೇಂದ್ರಿತವಾದ ಎಲ್ಲಾ ಸಾಮಾಜಿಕ – ರಾಜಕೀಯ ಕ್ರೌರ್ಯಗಳಿಗೆ ಒಳಗಾದ ಒಂದು ಸಂಸಾರದ ಸ್ಥಿತಿಯನ್ನು ಕಟ್ಟಿಕೊಡುವುದು, ಅವುಗಳ ಬೇಗೆಯಲ್ಲಿ ಕಟ್ಟಿಕೊಳ್ಳುವ ಪ್ರತಿರೋಧ ಜಿಗುಟನ್ನು ನಿರೂಪಿಸುವುದು, ಅವುಗಳ ಮೂಲಕ ಹಿಂಸೆಯ ಹಲವು ಬಣ್ಣ ಮತ್ತು ಸ್ಥರಗಳನ್ನು ಕಾಣಿಸುವುದು – ಎರಡು ತಾಸಿನ ಕೃತಿಗೆ ಬಹಳ ದೊಡ್ಡ ಸವಾಲು. ಹಾಗೆ ನಿಭಾಯಿಸುವುದಕ್ಕೆ ಬೇಕಾದ ಅನುಭವ, ಸಂಯಮಗಳು ವ್ಯಕ್ತಿ ವಿಶೇಷವಾಗಿ ಒದಗಿ ಬರುವಂಥವಲ್ಲ. ಸಾಮಾಜಿಕ ಸಹನಶೀಲತೆಯು ರೂಢಿಸಿಕೊಡುವ ಸಾಮಾಜಿಕ ಬಂಡವಾಳ – ನಮ್ಮಲ್ಲಿ ಅದು ಮೇಲ್ಜಾತಿಯ ಕಲಾವಿದರಿಗೆ ಒದಗಿ ಬರುವಷ್ಟು ಕಡೆಗಣಿತ ಸಮುದಾಯಗಳಿಗೆ ಒದಗಿ ಬರುವುದಿಲ್ಲ. ಆದರೂ, ನವೀನ್, ಕೋಲಾರದ ದಲಿತ ಸಮುದಾಯದ ನಿತ್ಯ ಬದುಕಿನ ರೂಪವನ್ನು ಅತಿ ನಾಟಕೀಯಗೊಳಿಸದೇ ಸಮರ್ಥವಾಗಿ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ಸಾಕಷ್ಟು ಯಶಸ್ವಿಯೂ ಆಗಿದ್ದಾರೆ.

ಹಿಂಸೆಯ ನೋವು, ಪ್ರತಿರೋಧದ ಛಲ, ಇವುಗಳೂ ಅಂತಹ ನಿತ್ಯ ಜೀವನದ ಕಡೆತದಲ್ಲೇ ಒಡಮೂಡುವಂತಹವು- ಇದನ್ನು ಗ್ರಹಿಸಿ ಚಿತ್ರ ರೂಪವಾಗಿ ಕಾಣಿಸುವುದು ನವೀನ್ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲ ಬಗೆಯ ಪ್ರತಿರೋಧಗಳೂ ಚೂರು ಚೂರು ಚಿತ್ರಗಳಾಗಿ ಚೆಲ್ಲಿಕೊಂಡು ಬಿಟ್ಟಿವೆ. ಹಾಗಾಗಿ ಮೊದಲರ್ಧದ ಬದುಕಿನ ಚಿತ್ರದ ಸಹಜ ತಾಜಾತನದಲ್ಲಿ ದೃಶ್ಯಕಟ್ಟಿನಲ್ಲಿ ಜೀವದಾಳಿದಂತೆ, ಎರಡನೇ ಅರ್ಧದ ಪ್ರತಿರೋಧಗಳ ದೃಶ್ಯಕಟ್ಟುಗಳಲ್ಲಿ ಕಾಣೆಯಾಗಿದೆ. ನವೀನ್ ಕಲಿಯುತ್ತಾರೆ ಹಾಗೂ ನುರಿತರ ಸಹಕಾರ, ಪ್ರೋತ್ಸಾಹ ಸಿಕ್ಕರೆ, ಸಡಿಲ ಎಳೆಗಳನ್ನು ಎಳೆದು ಗಟ್ಟಿ ಬಂಧದ ಪೂರ್ಣ ದೃಶ್ಯ ಚಿತ್ರ ಕಟ್ಟುತ್ತಾರೆ ಎಂಬ ವಿಶ್ವಾಸವನ್ನಂತೂ ಕೊಡುತ್ತಾರೆ. ಅವರು ಹೆಚ್ಚು ವಿರಾಮದಲ್ಲಿ ಬಿಗಿ ಚಿತ್ರಕತೆ ಕಟ್ಟಿಕೊಳ್ಳುವಂತಾಗಲಿ, ದಲಿತ ಪ್ರತಿರೋಧಗಳ ಬಗೆಯನ್ನು ಹೆಚ್ಚು ಸಂಯಮದಲ್ಲಿ ವಿಶ್ಲೇಷಿಸಿ ತಮ್ಮದೇ ವಿಶಿಷ್ಟತೆ ಪ್ರತಿರೋಧದ ದೃಷ್ಯ ಕಟ್ಟುಗಳನ್ನು ಕಟ್ಟಲಿ ಎಂದು ಹಾರೈಸೋಣ.

LEAVE A REPLY

Connect with

Please enter your comment!
Please enter your name here