ಗಜಲ್ ಸಾಮ್ರಾಜ್ಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಪಂಕಜ್ ಉಧಾಸ್ ಇನ್ನು ನೆನಪು ಮಾತ್ರ. ನಿನ್ನೆ ಅವರು ಇಹಲೋಕ ತ್ಯಜಿಸಿದ್ದಾರೆ. ಪದ್ಮಶ್ರೀ ಪುರಸ್ಕೃತ ಮೇರು ಗಾಯಕ ಭಾರತೀಯ ಸಿನಿಮಾ ಹಿನ್ನೆಲೆ ಗಾಯಕನಾಗಿಯೂ ಸಿನಿಪ್ರಿಯರ ಮನಗೆದ್ದಿದ್ದರು.
ಗಜಲ್ ಎಂದಾಕ್ಷನ ನೆನಪಾಗುವ ಪ್ರಮುಖರಲ್ಲೊಬ್ಬರು ಪಂಕಜ್ ಉಧಾಸ್. ಅವರ ಅಗಲಿಕೆಯಿಂದ ಗಜಲ್ ಲೋಕದ ಧ್ರುವತಾರೆಯೊಂದು ಕಳಚಿದಂತಾಗಿದೆ. ಗಜಲ್ ಪ್ರಕಾರದ ಜೊತೆಜೊತೆಗೆ ಭಾರತೀಯ ಸಿನಿಮಾರಂಗದ ಹಿನ್ನೆಲೆ ಗಾಯಕರಾಗಿಯೂ ಅವರದ್ದು ದೊಡ್ಡ ಹೆಸರು. ಭಾರತೀಯ ಪಾಪ್ ಸಂಗೀತದಲ್ಲಿಯೂ ಅವರದು ಅಚ್ಚಳಿದ ಛಾಪು. 1980ರಲ್ಲಿ ‘ಆಹತ್’ನೊಂದಿಗೆ ಅವರು ಗಜಲ್ ಸಾಮ್ರಾಜ್ಯದಲ್ಲಿ ಸಂಚಲನ ಮೂಡಿಸಿದರು. ಮುಂದೆ ‘ಮುಕರರ್’, ‘ತರನ್ನಮ್’, ‘ಮೆಹ್ಫಿಲ್’ ‘ನ್ಯಾಯಾಬ್’ ಆಲ್ಬಂಗಳ ಮೂಲಕ ಗಜಲ್ ಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾದ ಋಜು ಹಾಕಿದರು. ಮಹೇಶ್ ಭಟ್ ನಿರ್ದೇಶನದ ‘ನಾಮ್’ ಚಿತ್ರದ ‘ಚಿಟ್ಟಿ ಆಯೀ ಹೈ’ ಹಾಡಿನೊಂದಿಗೆ ಸಿನಿಮಾ ಹಿನ್ನೆಲೆ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ ಅಲ್ಲಿಯೂ ಜನಪ್ರಿಯತೆ ಗಳಿಸಿದರು. ಹಿಂದಿ ಮಾತ್ರವಲ್ಲದೆ ಭಾರತದ ವಿವಿಧ ಭಾಷೆಗಳ ಸಿನಿಮಾಗಳಿಗೆ ಹಾಡಿರುವ ಹೆಗ್ಗಳಿಕೆ ಅವರದು.
2006ರಲ್ಲಿ ಪಂಕಜ್ ಉಧಾಸ್ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಅವರ ಸಹೋದರರಾದ ನಿರ್ಮಲ್ ಉಧಾಸ್ ಮತ್ತು ಮನ್ಹರ್ ಉಧಾಸ್ ಕೂಡ ಗಾಯಕರು. ಮೇರು ಗಾಯಕನ ಅಗಲಿಕೆಗೆ ಭಾರತೀಯ ಸಿನಿಮಾರಂಗ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು, ‘ಪಂಕಜ್ ಉದಾಸ್ ಜಿ ಅವರ ಅಗಲಿಕೆ ನಮಗೆ ದುಃಖ ತಂದಿದೆ. ಅವರ ಗಾಯನವು ಭಾವನೆಗಳನ್ನು ಮೀರಿ ವ್ಯಕ್ತಗೊಂಡಿದೆ. ಅವರ ಗಜಲ್‌ಗಳು ನೇರವಾಗಿ ಮನಸ್ಸಿನೊಂದಿಗೆ ಮಾತನಾಡುತ್ತವೆ. ಅವರು ಭಾರತೀಯ ಸಂಗೀತದ ದಾರಿದೀಪವಾಗಿದ್ದರು. ಅವರ ಮಧುರ ಗೀತೆಗಳು ತಲೆಮಾರುಗಳನ್ನು ತಲುಪಿವೆ. ಅವರ ಅಗಲಿಕೆಯು ಸಂಗೀತ ಜಗತ್ತಿನಲ್ಲಿ ಎಂದಿಗೂ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ’ ಎನ್ನುವ ಒಕ್ಕಣಿಯೊಂದಿಗೆ ಸಂತಾಪ ಸೂಚಿಸಿದ್ದಾರೆ.